ಬೆಂಗಳೂರು : ನಟ, ಹೋರಾಟಗಾರ ಚೇತನ್ ಅಹಿಂಸಾ ಸೋಮವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದು, ಜನಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು.
ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ ಆರೋಪದಲ್ಲಿ ಚೇತನ್ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಶುಕ್ರವಾರವೇ ಇವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ಆದೇಶ ಪ್ರತಿ ಲಭ್ಯವಾಗುವುದು ತಡವಾದ ಹಿನ್ನೆಲೆಯಲ್ಲಿ ಅವರು ಸೋಮವಾರ ಬಿಡುಗಡೆಯಾಗಿದ್ದಾರೆ.
ಚೇತನ್ ಅವರ ಬಿಡುಗಡೆಗಾಗಿ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿತ್ತು. ವಕೀಲರಾದ ಬಾಲನ್ ಚೇತನ್ ಜಾಮೀನಿಗಾಗಿ ಹೋರಾಟ ನಡೆಸಿದ್ದರು. ಚೇತನ್ ಅವರ ಬಿಡುಗಡೆ ಹಿನ್ನೆಲೆ ಅವರ ಅಭಿಮಾನಿಗಳು, ಚಳುವಳಿ ಸ್ನೇಹಿತರು ಬಹಳ ಅದ್ದೂರಿಯಾಗಿ ಅವರನ್ನು ಸ್ವಾಗತಿಸಿಗೊಂಡಿದ್ದಾರೆ.
ಹೋರಾಟ ಮುಂದುವರೆಯುತ್ತೆ : ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಯಲಿದೆ. ಟ್ವೀಟ್ ಮಾಡುವುದನ್ನು ನಿಲ್ಲಿಸುವುದಿಲ್ಲ. ಪ್ರಶ್ನೆ ಮಾಡುವುದು ನನ್ನ ಹಕ್ಕು ಮತ್ತು ಕರ್ತವ್ಯ ಎಂದು ಚೇತನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಒಂದು ಟ್ವೀಟ್ ಮಾಡಿದ್ದಕ್ಕೆ ಸುಮೋಟೋ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಪಬ್ಲಿಕ್ ಸರ್ವೆಂಟ್ ಅಂದ್ರೆ ಸಾರ್ವಜನಿಕರ ತೆರಿಗೆಯಿಂದ ವೇತನ ಪಡೆಯೋರು. ಸಿಎಂ, ಎಂಎಲ್‌ಎ, ಜಡ್ಜ್ ಯಾರೇ ಆಗಲೀ ಪ್ರಶ್ನಾತೀತರಲ್ಲ ಎಂದರು.
ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರ ಅಲ್ಲ, ನಮ್ಮ ಜವಾಬ್ದಾರಿ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರ ಸಮಾನ ನಮ್ಮ ಭವಿಷ್ಯ. ಅದನ್ನು ಜಗತ್ತಿಗೆ ಸಾರುವ ಕೆಲಸ ಕರ್ನಾಟಕದಿಂದ ಶುರುವಾಗಿದೆ. ಪೊಲೀಸರ ಕ್ರಮ ಅಸಂವಿಧಾನಿಕವಾದದ್ದು. ನನ್ನ ಟ್ವೀಟ್ ಅವಹೇಳನಕಾರಿ ಇಲ್ಲ, ನಾನು ಯಾವುದೇ ಪ್ರಚೋದನಕಾರಿ ರೀತಿಯಲ್ಲಿ ಟ್ವೀಟ್ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.