ವಿಚಾರವಾದಿ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

ನವದೆಹಲಿ: 2013ರಲ್ಲಿ ನಡೆದಿದ್ದ ಬುದ್ಧಿಜೀವಿ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದಲ್ಲಿ ಪುಣೆ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಆಗಸ್ಟ್ 20, 2013 ರಂದು, ಸಾಮಾಜಿಕ ಕಾರ್ಯಕರ್ತ ಮತ್ತು ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನಾ ಸಮಿತಿಯ ಮುಖ್ಯಸ್ಥ ನರೇಂದ್ರ ದಾಭೋಲ್ಕರ್‌ರನ್ನು ಪುಣೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ಆರೋಪಿಗಳಾದ ಸಚಿನ್ ಅಂದುರೆ ಮತ್ತು ಸರದ್ ಕಲಾಸ್ಕರ್ ಅವರಿಗೆ ಪುಣೆಯ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ, ಮೂವರು ಆರೋಪಿಗಳಾದ ಡಾ. ವೀರೇಂದ್ರ ಸಿಂಗ್ ತಾವಡೆ, ವಕೀಲ ಸಂಜೀವ್ ಪುನಾಲೇಜಾರ್ ಮತ್ತು ವಿಕ್ರಮ್ ಭಾವೆ ಅವರನ್ನು ಖುಲಾಸೆಗೊಳಿಸಲಾಗಿದೆ.

ಇದನ್ನೂ ಓದಿ:  ಪ್ಯಾಲಸ್ತೀನ್ ಪರ ಬರಹ: ಮುಂಬೈನ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲೆ ವಜಾ!

2013ರ ಕೊಲೆ ಪ್ರಕರಣದ ವಿಚಾರಣೆ 2021ರಲ್ಲಿ ಆರಂಭವಾಗಿತ್ತು. ಕಳೆದ ತಿಂಗಳು ಪುಣೆ ಸೆಷನ್ಸ್ ನ್ಯಾಯಾಧೀಶ ಪಿಪಿ ಜಾಧವ್ ಪ್ರಕರಣದ ತೀರ್ಪನ್ನುಕಾಯ್ದಿರಿಸಿದ್ದರು.

ಸಾಲು ಸಾಲು ಹತ್ಯೆಗಳು

ಐವರನ್ನು ಬಂಧಿಸಿದ್ದ ಸಿಬಿಐ, ಅವರ ವಿರುದ್ಧ ಐಪಿಸಿಯ 302, 120ಬಿ, 34 ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳ ಅಡಿ ಪ್ರಕರಣಗಳನ್ನು ದಾಖಲಿಸಿತ್ತು. 2021ರ ಸೆ 15ರಂದು ಎಲ್ಲ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿಪಡಿಸಲಾಗಿತ್ತು. ತವಾಡೆ, ಅಂಡುರೆ ಮತ್ತು ಕಲಾಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದರೆ, ಜಾಮೀನಿನ ಮೇಲೆ ಪುಣಲೇಕರ್ ಹಾಗೂ ವಿಕ್ರಮ್ ಭಾವೆ  ಹೊರಗಿದ್ದರು.

ದಾಭೋಲ್ಕರ್ ಹತ್ಯೆ ಬಳಿಕ, ಪುಣೆಯಲ್ಲಿ ಮತ್ತಷ್ಟು ವಿಚಾರವಾದಿಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಕೊಲೆಗಳು ನಡೆದಿದ್ದವು. 2015ರ ಫೆಬ್ರವರಿಯಲ್ಲಿ ಗೋವಿಂದ್ ಪನ್ಸಾರೆ, ಅದೇ ವರ್ಷದ ಆಗಸ್ಟ್‌ನಲ್ಲಿ ಕರ್ನಾಟಕದ ಸಂಶೋಧಕ ಎಂಎಂ ಕಲಬುರ್ಗಿ ಹಾಗೂ 2017ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಮನೆಯ ಹೊರಗೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಿಗೆ ಸಾಮ್ಯತೆ ಇದ್ದು, ಒಂದೇ ಸಂಘಟನೆಯವರ ಕೈವಾಡ ಇವುಗಳಲ್ಲಿ ಇವೆ ಎಂದು ಆರೋಪಿಸಲಾಗಿದೆ.

ಇಎನ್‌ಟಿ ಸರ್ಜನ್ ಮಾಸ್ಟರ್ ಮೈಂಡ್

ದಾಭೋಲ್ಕರ್ ಹತ್ಯೆ ಪ್ರಕರಣವನ್ನು ಆರಂಭದಲ್ಲಿ ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದರು.ಆದರೆ ಬಾಂಬೆ ಹೈಕೋರ್ಟ್ ಆದೇಶದ ಬಳಿಕ 2014ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. 2016ರ ಜೂನ್‌ನಲ್ಲಿ ಅದು ಹಿಂದೂ ಬಲ ಪಂಥೀಯ ಸಂಘಟನೆ ಸನಾತನ ಸಂಸ್ಥಾ ಜತೆ ನಂಟು ಹೊಂದಿರುವ ಇಎನ್‌ಟಿ ಸರ್ಜನ್ ಡಾ ವೀರೇಂದ್ರಸಿಂಹ ತವಾಡೆಯನ್ನು ಬಂಧಿಸಿತ್ತು.

ತವಾಡೆ ಕೂಡ ದಾಭೋಲ್ಕರ್ ಹತ್ಯೆಯ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ತವಾಡೆ ಮತ್ತು ಇತರೆ ಆರೋಪಿಗಳು ನಂಟು ಹೊಂದಿರುವ ಸನಾತನ ಸಂಸ್ಥೆಯು ದಾಭೋಲ್ಕರ್ ವಿಚಾರಗಳನ್ನು, ಅವರ ಚಟುವಟಿಕೆಗಳನ್ನು ವಿರೋಧಿಸುತ್ತಿತ್ತು ಎಂದು ಅದು ತಿಳಿಸಿತ್ತು.

ಇದನ್ನೂ ನೋಡಿ: ಮತದಾನ ಮುಕ್ತ ಚುನಾವಣೆ- ಗುಜರಾತ್ ಮಾದರಿ ವಕೀಲ ವಿನಯ್ ಶ್ರೀನಿವಾಸ್ ಜೊತೆ ಕೆ.ಎಸ್. ವಿಮಲಾ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *