ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಅವರು ಆಗಸ್ಟ್ 9 ರಂದು ಶಿವಮೊಗ್ಗದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಅಥಣಿ ಮೂಲದ ವಕೀಲ ಮತ್ತು ಆರ್‌ಟಿಐ ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರನ್ನು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕುವಂತೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಈಶ್ವರಪ್ಪ ಅವರ ಹೇಳಿಕೆಗಳಿಗೆ ಭೀಮನಗೌಡ ವಿರೋಧ ವ್ಯಕ್ತಪಡಿಸಿದ್ದು ಪಕ್ಷದ ಬಹಿರಂಗ ಕಾರ್ಯಕ್ರಮದಲ್ಲಿ “ ಒಂದಕ್ಕೆ ಎರಡು ತೆಗೆದು ಬಿಡುವಷ್ಟು” ನಾವು ಬೆಳದಿದ್ದೇವೆ” ಎಂದು ದ್ವೇಷ ಭಾಷಣವನ್ನು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಯಾರಾದರು ಮುಟ್ಟಿದರೆ, ವಿರುದ್ಧವಾಗಿ ಮಾತನಾಡಿದರೆ ಅಂತವರ ಮೇಲೆ ಹಲ್ಲೆ ಮಾಡಿ ಎಂದು ಬಹಿರಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದು ಆಘಾತಕಾರಿ ಮತ್ತು ಅಪಾಯವನ್ನು ತಂದೊಡ್ಡುವ ಸೂಚನೆಯನ್ನು ನೀಡುತ್ತದೆ. ರಾಜ್ಯದ ಸಚಿವರೊಬ್ಬರು ಈ ರೀತಿ ಬಹಿರಂಗವಾಗಿ ಹಲ್ಲೆ ನಡೆಸಿ ಎಂದು ಕರೆ ನೀಡಿರುವುದು ಗಲಭೆಗೆ ಕಾರಣವಾಗಲಿದೆ ಎಂದು ಭೀಮನಗೌಡ ಆರೋಪಿಸಿದ್ದಾರೆ.
ದೂರಿನಲ್ಲಿ ಹಲವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದು, ಜನಪ್ರತಿನಿಧಿಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಮತ್ತು ಸಾಮಾನ್ಯವಾಗಿ ದ್ವೇಷಪೂರಿತ ಭಾಷಣಗಳನ್ನು ಮಾಡಬಾರದು ಎಂದು ಹೇಳಿದೆ. ಏಕೆಂದರೆ ಅದು ಅಂತಹ ಹೇಳಿಕೆಗಳನ್ನು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ, ಸಚಿವರ ಹೇಳಿಕೆಗಳು ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿದೆ. ಈಶ್ವರಪ್ಪ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ ಈ ಹಿಂದೆಯೂ ಹಲವು ಬಾರಿ ಮಾತನಾಡಿದ್ದಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿದೆ. ದೂರಿನ ಪ್ರತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಸಲ್ಲಿಸಿದ್ದಾರೆ.
ಏನದು ವಿವಾದಿತ ಭಾಷಣ : ಹಿಂದೆ ನಮ್ಮ ಕಾರ್ಯಕರ್ತರಿಗೆ ಯಾರಾದರೂ ಹೊಡೆದರೆ ವಾಪಸ್ ಹೊಡೆಯೋದಕ್ಕೆ ನಮಗೆ ಶಕ್ತಿ ಇರಲಿಲ್ಲ. ಈಗ ಯಾರಾದರೂ ಮೈ ಮುಟ್ಟಿದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು, ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಬೆಳೆದಿದೆ’ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು.
‘ಲಕ್ಷ ಲಕ್ಷ ಜನರು ಬಿಜೆಪಿ ಪರವಾಗಿ ಇದ್ದಾರೆ. ಹಿಂದುತ್ವದ ಮೆರವಣಿಗೆ ಎಂದರೆ ಕಲ್ಪನೆ ಮಾಡದಷ್ಟು ಜನರು ಸೇರುತ್ತಿದ್ದಾರೆ’ ಎಂದರು. ‘ಆಗ ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡಿದರೆ ನಮ್ಮ ಹಿರಿಯರು ಬಿ ಕಾಮ್ ಅಟ್ ಆಲ್ ಕಾಸ್ಟ್ ಎಂದು ಹೇಳುತ್ತಿದ್ದರು’, ಎಂತಹ ಸಂದರ್ಭ ಬಂದರೂ ಶಾಂತವಾಗಿರಿ ಎನ್ನುತ್ತಿದ್ದರು. ಏಕೆಂದರೆ ಆಗ ನಮ್ಮ ಬಳಿ ಶಕ್ತಿ ಇರಲಿಲ್ಲ. ಇವತ್ತು ಇಡೀ ಪ್ರಪಂಚದಲ್ಲಿ ಬಿಜೆಪಿ ಹೇಗೆ ಬೆಳೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ನಮ್ಮ ಕಾರ್ಯಕರ್ತನ ಮೈ ಮುಟ್ಟಿದರೆ ಫೇಸ್ ವಿತ್ ದಿ ಸೇಮ್ ಸ್ಟಿಕ್ ಅಂದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುತ್ತಿದ್ದಾರೆ. ಹೀಗಾಗಿ, ಈಗ ನಮ್ಮ ಸುದ್ದಿಗೆ ಯಾರೂ ಬರೋದಿಲ್ಲ ಎಂದು ವಿವಾದಾತ್ಮಕ ಭಾಷಣ ಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.