ಬೆಂಗಳೂರು: ಸಿಬಿಐ ವಿಶೇಷ ನ್ಯಾಯಾಲಯವು, ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ತನಿಖೆಯಲ್ಲಿ ನಡೆದ ದೋಷಗಳ ಕುರಿತು, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿಷಯವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ಈಗಾಗಲೇ ನಿರ್ದೇಶನ ನೀಡಿತ್ತು.
ಈ ನಿರ್ದೇಶನಗಳನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಸಿಬಿಐ ಚೆನ್ನೈನ ವಿಶೇಷ ತನಿಖಾ ದಳಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯ 16.6.2023ರಂದು ನೀಡಿದ ತೀರ್ಪಿನ ನಿರ್ದೇಶನವನ್ನು ಅನುಷ್ಠಾನಗೊಳಿಸಲು ಸಿಬಿಐಗೆ ಸೂಚಿಸುವಂತೆ ಕೇಳಿ, ಸೌಜನ್ಯ ತಾಯಿ ಕುಸುಮವತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠವು ವಿಚಾರಣೆ ಮಾಡಿದೆ.
ಇದನ್ನೂ ಓದಿ: ಭಾರತ-ಯುಎಸ್ ವ್ಯಾಪಾರ ಒಪ್ಪಂದ ಒಂದು ‘ಸಂಪೂರ್ಣ ಶರಣಾಗತಿ’ ಸಂಯುಕ್ತ ಕಿಸಾನ್ ಮೋರ್ಚಾ ಖಂಡನೆ
ಪ್ರಕರಣದಲ್ಲಿನ ಆರೋಪಿ ಸಂತೋಷ ರಾವ್ನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಇದಲ್ಲದೇ 11 ವರ್ಷಗಳಿಂದ ಜೈಲಿನಲ್ಲಿದ್ದ ಸಂತೋಷ್ಗೆ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಈ ಕೇಸ್ನಲ್ಲಿ ದೋಷಪೂರಿತ, ಕಳಪೆ ತನಿಖೆ ನಡೆಸಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ವಿಶೇಷ ಕೋರ್ಟ್ ನಿರ್ದೇಶಿಸಿತ್ತು.
ಅರ್ಜಿದಾರರ ಪರ ವಕೀಲ ಎಂ.ಆರ್. ಬಾಲಕೃಷ್ಣ ಅವರು, ಸಿಬಿಐಯಲ್ಲಿ ಖುಲಾಸೆ ಸಮಿತಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠವು ಗೃಹ ಇಲಾಖೆ, ಪೊಲೀಸ್ ಮಹಾನಿರ್ದೇಶಕ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಬಿಐ ದೆಹಲಿ ಹಾಗೂ ಚೆನ್ನೈ ವಿಭಾಗದ ವಿಶೇಷ ತನಿಖಾ ದಳಗಳಿಗೆ ನೋಟಿಸ್ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ನಿಗದಿಪಡಿಸಿದೆ.
ಪ್ರಕರಣದ ಹಿನ್ನೆಲೆ:
ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್ 9ರಂದು ನಾಪತ್ತೆಯಾಗಿದ್ದರು. ಮರು ದಿನ ಮೃತ ವಿದ್ಯಾರ್ಥಿನಿಯ ದೇಹವು ಮಣ್ಣಸಂಕ ಬಳಿ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಮೊದಲಿಗೆ ಆಕೆಯ ತಂದೆ ಚಂದ್ರಪ್ಪ ಗೌಡ ಅವರು ತನ್ನ ಎರಡನೇ ಪುತ್ರಿ ಸೌಜನ್ಯ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು.
2013ರಲ್ಲಿ ಪ್ರಕರಣವು ಸಿಬಿಐಗೆ ವರ್ಗಾವಣೆಗೊಂಡಿದ್ದು, 2015ರಲ್ಲಿ ಪ್ರಕರಣವು ಮಂಗಳೂರಿನಿಂದ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಬಿ ಸಂತೋಷ್ ಅವರು ಪ್ರಕರಣದಲ್ಲಿನ ಆರೋಪಿ ಸಂತೋಷ ರಾವ್ ಅವರನ್ನು ಅತ್ಯಾಚಾರ (ಐಪಿಸಿ ಸೆಕ್ಷನ್ 376) ಮತ್ತು ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿತ್ತು. ಅಲ್ಲದೇ, 11 ವರ್ಷಗಳಿಂದ ಜೈಲಿನಲ್ಲಿದ್ದ ಸಂತೋಷ್ ರಾವ್ನನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು.
ಅಲ್ಲದೇ, ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿರುವ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ನಿರ್ದೇಶಿಸಿತಲ್ಲದೇ ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷಿಯು ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ವಿಚಾರಣಾಧೀನ ನ್ಯಾಯಾಲಯ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಇದನ್ನೂ ನೋಡಿ: ಸಿದ್ದಿ, ಕುಣಬಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆಯ ನೃತ್ಯ Janashakthi Media
