ಉದ್ಯೋಗ ಹಕ್ಕಿಗೆ ಮರಣಶಾಸನ? VB-GRAM G ಬಿಲ್‌ ವಿರುದ್ಧ ದೇಶಾದ್ಯಾಂತ ಸಾರ್ವಜನಿಕ ಆಕ್ರೋಶ

ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯನ್ನು ರಕ್ಷಿಸುವ ಹೋರಾಟದ ಭಾಗವಾಗಿ ‘ಮನರೇಗಾ ರಕ್ಷಣಾ ಒಕ್ಕೂಟ–ಕರ್ನಾಟಕ’ವು ಫೆಬ್ರವರಿ 2ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾರೀ ಮಹಾ ಪಂಚಾಯತ್‌ ಅನ್ನು ಆಯೋಜಿಸಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಗ್ರಾಮೀಣ ಕೂಲಿಕಾರರು, ಸಣ್ಣ ಮತ್ತು ಅತಿಸಣ್ಣ ರೈತರು, ಮಹಿಳಾ ಕಾರ್ಮಿಕರು, ದಲಿತ–ಆದಿವಾಸಿ ಸಂಘಟನೆಗಳು ಹಾಗೂ ಜನಪರ ಚಳವಳಿಗಳ ಪ್ರತಿನಿಧಿಗಳು ಈ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಿ, ಮನರೇಗಾ ಯೋಜನೆಯ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ವ್ಯವಸ್ಥಿತ ದಾಳಿಯ ವಿರುದ್ಧ ಗಟ್ಟಿಯಾದ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಉದ್ಯೋಗ

ಕಳೆದ ಎರಡು ದಶಕಗಳಿಂದ ಮನರೇಗಾ ಗ್ರಾಮೀಣ ಭಾರತದ ಬದುಕಿಗೆ ಜೀವಾಳವಾಗಿದ್ದು, ಉದ್ಯೋಗವನ್ನು ದಾನವಲ್ಲ, ಹಕ್ಕು ಎಂದು ಸ್ಥಾಪಿಸಿದ ಐತಿಹಾಸಿಕ ಕಾನೂನಾಗಿದೆ. ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಕೆಲಸವನ್ನು ಕಾನೂನಾತ್ಮಕವಾಗಿ ಖಾತ್ರಿ ನೀಡುವ ಮೂಲಕ ವಲಸೆ, ಹಸಿವು, ನಿರುದ್ಯೋಗ ಮತ್ತು ಸಾಲದ ಉರುಳಿನಿಂದ ಗ್ರಾಮೀಣ ದುಡಿಯುವ ಜನರನ್ನು ರಕ್ಷಿಸಿದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆ ಇದಾಗಿದೆ. ವಿಶೇಷವಾಗಿ ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಸಣ್ಣ ರೈತರಿಗೆ ಮನರೇಗಾ ಕೇವಲ ಕೆಲಸವಲ್ಲ; ಅದು ಆತ್ಮಗೌರವ, ಆಹಾರ ಭದ್ರತೆ ಮತ್ತು ಬದುಕಿನ ಕನಿಷ್ಠ ಭದ್ರತೆಯ ಸಂಕೇತವಾಗಿದೆ ಎಂದು ಮಹಾ ಪಂಚಾಯತ್‌ನಲ್ಲಿ ಒತ್ತಿ ಹೇಳಲಾಯಿತು. ಉದ್ಯೋಗ

ಇದನ್ನೂ ಓದಿ : ತುಮಕೂರು | ಕಾರ್ಮಿಕ ಹಕ್ಕು ರಕ್ಷಣೆಗೆ ಹೋರಾಟ: ಸಂಹಿತೆ ರದ್ದುಪಡಿಸುವಂತೆ ಬಂದ್‌ಗೆ ಕರೆ

ಆದರೆ ಕೇಂದ್ರದ ಒಕ್ಕೂಟ ಸರ್ಕಾರವು ಈ ಕಾನೂನನ್ನು ನೇರವಾಗಿ ರದ್ದುಗೊಳಿಸದೆ, ಅನುದಾನ ಕಡಿತ, ಕೆಲಸದ ದಿನಗಳ ಕಡಿತ, ಪಾವತಿಗಳ ವಿಳಂಬ ಮತ್ತು ತಾಂತ್ರಿಕ ಅಡೆತಡೆಗಳ ಮೂಲಕ ಕ್ರಮೇಣ ದುರ್ಬಲಗೊಳಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಈಗ ‘ವಿಕಸಿತ ಭಾರತ– ಗ್ಯಾರಂಟಿ ಫಾರ್‌ ರೋಜ್‌ಗಾರ್‌ ಆ್ಯಂಡ್‌ ಆಜೀವಿಕಾ ಮಿಷನ್ (ಗ್ರಾಮೀಣ)’ – ವಿಬಿ-ಜಿ ರಾಮ್ ಜಿ ಎಂಬ ಹೊಸ ಕಾನೂನನ್ನು ಮುಂದಿಟ್ಟು, ಮನರೇಗಾ ಎಂಬ ಹಕ್ಕಿನ ಕಾನೂನನ್ನು ಮಿಷನ್‌ ಮತ್ತು ಯೋಜನೆಗಳ ಹೆಸರಿನಲ್ಲಿ ಸಂಪೂರ್ಣವಾಗಿ ಕಿತ್ತು ಹಾಕಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಹೊಸ ಕಾನೂನು ಗ್ರಾಮೀಣ ಭಾಗದ ದುಡಿಯುವ ಜನರಿಗೆ ಉದ್ಯೋಗದ ಖಾತರಿಯನ್ನು ಕಸಿದುಕೊಳ್ಳುವ ಮರಣ ಶಾಸನವಾಗಲಿದೆ ಎಂದು ಸಭೆಯಲ್ಲಿ ತೀವ್ರ ಎಚ್ಚರಿಕೆ ನೀಡಲಾಯಿತು.

ಉದ್ಯೋಗ ಹಕ್ಕಿಗೆ ಮರಣಶಾಸನ? VB-G RAM G ಬಿಲ್‌ ವಿರುದ್ಧ ದೇಶಾದ್ಯಾಂತ ಸಾರ್ವಜನಿಕ ಆಕ್ರೋಶ

ಮಹಾ ಪಂಚಾಯತ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದ ಪ್ರತಿಭಟನಾಕಾರರು, ವಿಬಿ-ಜಿ ರಾಮ್ ಜಿ ಕಾನೂನನ್ನು ತಕ್ಷಣವೇ ಹಿಂಪಡೆಯಬೇಕು, ಮನರೇಗಾ ಕಾಯ್ದೆಯನ್ನು ಅದರ ಮೂಲ ಆತ್ಮ ಮತ್ತು ಅಕ್ಷರಶಃ ಸಂಪೂರ್ಣವಾಗಿ ಜಾರಿಗೊಳಿಸಬೇಕು, ವರ್ಷಕ್ಕೆ ಕನಿಷ್ಠ 200 ದಿನಗಳ ಉದ್ಯೋಗ ಹಾಗೂ ಯೋಗ್ಯ ಕೂಲಿ ಖಾತರಿ ನೀಡಬೇಕು ಮತ್ತು ಗ್ರಾಮೀಣ ಕಾರ್ಮಿಕರ ಬದುಕಿನ ಹಕ್ಕನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಈ ಮಹಾ ಪಂಚಾಯತ್‌ನಲ್ಲಿ ಪ್ರೊ. ರಾಜೇಂದ್ರನ್‌, ಶಾರದಾ ಗೋಪಾಲ್‌, ಆಭಯ್‌, ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ರಾಜ್ಯಾಧ್ಯಕ್ಷ ಪುಟ್ಟಮಾಧು, ಜನವಾದಿ ಮಹಿಳಾ ಸಂಘಟನೆಯ ದೇವಿ, ದಲಿತ ನಾಯಕ ಮಾವಳ್ಳಿ ಶಂಕರ್‌, ಕಾರ್ಮಿಕ ನಾಯಕರಾದ ಕೆ.ವಿ. ಭಟ್‌, ನೂರ್‌ ಶ್ರೀಧರ್‌, ವಿ. ಗಾಯತ್ರಿ, ಮಹಂತೇಶ್‌, ಸಪ್ನ ಕ್ಲಿಪ್ಟ್‌ನ್‌ ಸೇರಿದಂತೆ ಅನೇಕ ಚಳವಳಿ ನಾಯಕರು ಮಾತನಾಡಿ, ಮನರೇಗಾ ರಕ್ಷಣೆಗೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದರು. ಗ್ರಾಮೀಣ ಭಾರತದ ದುಡಿಯುವ ಜನರ ಹಕ್ಕುಗಳಿಗಾಗಿ ಈ ಹೋರಾಟ ನಿಲ್ಲದು ಎಂದು ಮಹಾ ಪಂಚಾಯತ್‌ ಸ್ಪಷ್ಟವಾಗಿ ಘೋಷಿಸಿತು.

ಇದನ್ನೂ ನೋಡಿ : ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media

Donate Janashakthi Media

Leave a Reply

Your email address will not be published. Required fields are marked *