ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆಯ ವೈದ್ಯಕೀಯ ವೆಚ್ಚ ಸರ್ಕಾರ ಭರಿಸುತ್ತದೆ: ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ಯುವಕನೊಬ್ಬ 24 ವರ್ಷದ ಯುವತಿಯ ಮೇಲೆ ಆಸಿಡ್ ಎರಚಿ ಹಲ್ಲೆ ಮಾಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ  ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಭರವಸೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಸುಂಕದಕಟ್ಟೆ ಬಳಿ ಕೆಲಸಕ್ಕೆ ಹೊರಟಿದ್ದ ಯುವತಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ನಾಗೇಶ್ ಯುವತಿ ಮೇಲೆ ಏಕಾಏಕಿ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯು ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯುವತಿಯ ಆರೋಗ್ಯ ವಿಚಾರಿಸಲು ಇಂದು ಆರೋಗ್ಯ ಸಚಿವ ಡಾ ಸುಧಾಕರ್ ಭೇಟಿ ನೀಡಿದ್ದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತೆಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ವೈಯಕ್ತಿಕವಾಗಿ ನಾನು 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ. ಸಂತ್ರಸ್ತ ಯುವತಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.

ಯುವತಿಯ ಚಿಕಿತ್ಸೆ ಅಷ್ಟೇ ಅಲ್ಲದೆ ಆಕೆಯ ಮುಂದಿನ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. 21ನೇ ಶತಮಾನದ ನಾಗರಿಕ ಸಮಾಜದಲ್ಲಿ ಈ ರೀತಿಯ ಹೃದಯ ಕಲಕುವಂತಹ ಘಟನೆ ನಡೆದಿರುವುದು ತಲೆ ತಗ್ಗಿಸುವ ವಿಚಾರ. ಇದು ರಾಕ್ಷಸಿ ಮನೋಭಾವ, ಯುವತಿಗೆ ಬಿಎಂಸಿಯಿಂದ ಚರ್ಮ ಕಸಿ ಮಾಡಲು ಹೇಳಿದ್ದೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಶೀಘ್ರವೇ ಬಂಧಿಸಿ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರ ಜೊತೆ ಚರ್ಚಿಸಿ ವಿಶೇಷವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಮಾಡಿ ತ್ವರಿತವಾಗಿ ಶಿಕ್ಷೆಯಾಗುವಂತೆ ಒತ್ತಾಯಿಸುತ್ತೇನೆ, ಇಂತಹ ಕ್ರೌರ್ಯಕ್ಕೆ ತಕ್ಕ ಶಾಸ್ತಿಯಾಗಿ ಸಮಾಜಕ್ಕೆ, ಜನರಿಗೆ ಇದೊಂದು ಪಾಠವಾಗಬೇಕು ಎಂದರು.

Donate Janashakthi Media

Leave a Reply

Your email address will not be published. Required fields are marked *