ನವದೆಹಲಿ: ಭ್ರಷ್ಟಾಚಾರ ನಿಗ್ರಹ ಉದ್ದೇಶದಿಂದ ದೆಹಲಿ ಸರ್ಕಾರ ಸ್ಥಾಪಿಸಿರುವ ‘ಫೀಡ್‌ಬ್ಯಾಕ್ ಯುನಿಟ್’ ಅನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಮೇಲೆ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇತರ ಐವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಸೋಡಿಯಾ ಸದ್ಯ ಜೈಲಿನಲ್ಲಿದ್ದಾರೆ.
‘ಸಿಸೋಡಿಯಾ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಧಿಕಾರ ಹಾಗೂ ರಾಜಕೀಯ ಉದ್ದೇಶದಿಂದ ಬೇಹುಗಾರಿಕೆ ನಡೆಸುವ ಸಲುವಾಗಿ ಫೀಡ್‌ಬ್ಯಾಕ್ ಯುನಿಟ್ ಅನ್ನು ದುರುಪಯೋಗಪಡಿಸಿಕೊಂಡ ಆರೋಪ ಇದೆ. ಅವರು ಹಾಗೂ ಇತರ ಐವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗೃತ ದಳದ ಮಾಜಿ ಕಾರ್ಯದರ್ಶಿ ಸುಖೇಶಕುಮಾರ್ ಜೈನ್, ಸಿಐಎಸ್‌ಎಫ್‌ನ ನಿವೃತ್ತ ಡಿಐಜಿ ರಾಕೇಶಕುಮಾರ್ ಸಿನ್ಹಾ, ಐಬಿಯ ನಿವೃತ್ತ ಜಂಟಿ ಉಪನಿರ್ದೇಶಕ ಪ್ರದೀಪಕುಮಾರ್ ಪುಂಜ್, ಸಿಐಎಸ್‌ಎಫ್‌ನ ನಿವೃತ್ತ ಸಹಾಯಕ ಕಮಾಂಡಂಟ್ ಸತೀಶ್ ಖೇತ್ರಪಾಲ್, ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಲಹೆಗಾರ ಗೋಪಾಲ ಮೋಹನ್ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ಈ ಪೈಕಿ ರಾಕೇಶಕುಮಾರ್ ಸಿನ್ಹಾ ಅವರು ಫೀಡ್‌ಬ್ಯಾಕ್ ಯುನಿಟ್‌ನ ಜಂಟಿ ನಿರ್ದೇಶಕ ಹಾಗೂ ಕೇಜ್ರಿವಾಲ್ ಅವರಿಗೆ ವಿಶೇಷ ಸಲಹೆಗಾರರಾಗಿದ್ದರು.
‘ಕೆಲ ರಹಸ್ಯ ಕಾರ್ಯಸೂಚಿ ಉದ್ದೇಶದೊಂದಿಗೆ ಫೀಡ್‌ಬ್ಯಾಕ್ ಯುನಿಟ್ ಕಾರ್ಯನಿರ್ವಹಿಸುತ್ತಿತ್ತು. ದೆಹಲಿ ಆಡಳಿತಕ್ಕಿಂತ ಆಮ್ ಆದ್ಮಿ ಪಕ್ಷ ಹಾಗೂ ಮನೀಷ್ ಸಿಸೋಡಿಯಾ ಅವರ ಹಿತಾಸಕ್ತಿಯಿಂದಾಗಿಯೇ ಈ ಘಟಕವನ್ನು ಸ್ಥಾಪಿಸಲಾಗಿದೆ’ ಎಂದು ಸಿಬಿಐ ಹೇಳಿದೆ.
‘ಫೀಡ್‌ಬ್ಯಾಕ್ ಯುನಿಟ್ ಸಲ್ಲಿಸಿರುವ ವರದಿಗಳ ಆಧಾರದ ಮೇಲೆ ಯಾವುದೇ ನೌಕರ ಅಥವಾ ಇಲಾಖೆ ವಿರುದ್ಧ ಔಪಚಾರಿಕವಾಗಿಯೂ ಕ್ರಮ ಜರುಗಿಸಿಲ್ಲ’ ಎಂದೂ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ದೆಹಲಿ ಸರ್ಕಾರದ ಅಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿನ ಭ್ರಷ್ಟಾಚಾರವನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳುವ ಉದ್ದೇಶದಿಂದ 2016ರಲ್ಲಿ ‘ಫೀಡ್ ಬ್ಯಾಕ್ ಯುನಿಟ್’ ಸ್ಥಾಪಿಸಲಾಗಿದೆ.
ಇದನ್ನೂ ಓದಿ : ಜಾರಿ ನಿರ್ದೇಶನಾಲಯದಿಂದ ಇಂದು ಮನೀಶ್ ಸಿಸೋಡಿಯಾ ವಿಚಾರಣೆ
ಟೀಕೆ: ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕೇಜ್ರಿವಾಲ್, ‘ಮನೀಷ್ ಸಿಸೋಡಿಯಾ ವಿರುದ್ಧ ಪ್ರಧಾನಿ ಮೋದಿ ಅವರು ಹಲವಾರು ಸುಳ್ಳು ಪ್ರಕರಣಗಳನ್ನು ದಾಖಲಿಸಲು ಯೋಜಿಸಿದ್ದಾರೆ. ಸಿಸೋಡಿಯಾ ಅವರನ್ನು ದೀರ್ಘಕಾಲದ ವರೆಗೆ ಕಸ್ಟಡಿಯಲ್ಲಿ ಇರುವಂತೆ ಮಾಡುವುದೇ ಅವರ ಉದ್ದೇಶವಾಗಿದ್ದು, ಇದು ದೇಶಕ್ಕೆ ಒಳ್ಳೆಯದಲ್ಲ’ ಎಂದಿದ್ದಾರೆ.