ತುಮಕೂರು : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ಅಣ್ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಪೊಲೀಸರ ವಾಹನವನ್ನೇ ಓಡಿಸಿಕೊಂಡು ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಸಹೋದರಿಬ್ಬರ ನಡುವೆ ತಡರಾತ್ರಿಯಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಆರೋಪಿ ಸಹೋದರ 112 ಕ್ಕೆ ಕರೆ ಮಾಡಿದ್ದಾನೆ. ಜಗಳ ಬಿಡಿಸಲು ಗ್ರಾಮಕ್ಕೆ 112 ವಾಹನದಲ್ಲಿ ಪೊಲೀಸರು ಬಂದಿದ್ದರು. ಈ ವೇಳೆ ಆರೋಪಿ ಮುನಿಯ ವಾಹನದ ಹಿಂಬದಿಯ ಗಾಜು ಒಡೆದಿದ್ದಾನೆ. ಗಾಜು ಒಡೆದಿದ್ದಕ್ಕೆ ಕಾರು ನಿಲ್ಲಿಸಿ ಹಿಂಬದಿ ಗಾಜು ನೋಡಲು ಪೊಲೀಸರು ಹೋಗಿದ್ದಾರೆ. ಈ ವೇಳೆ ಕಾರಿನೊಳಗೆ ಕುಳಿತು ವೇಗವಾಗಿ ಕಾರು ಓಡಿಸಿಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ. ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಕೊನೆಗೂ 112 ವಾಹನವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿ ತುಮಕೂರು ತಾಲೂಕಿನ ಹೆಬ್ಬೂರು ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದನು.
ಇದನ್ನೂ ಓದಿ : ಫ್ಯಾಕ್ಟ್ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ
ಸದ್ಯ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿರುವ ಪೊಲೀಸರು, ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಘಟನೆ ನೋಡಿದಾಗ ಇಲ್ಲಿ ಪೊಲೀಸರ ನಿರ್ಲಕ್ಷ್ಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಆರೋಪಿಯೊಬ್ಬ ಪೊಲೀಸರ ವಾಹನವನ್ನೇ ಓಡಿಸಿಕೊಂಡು ಹೋಗಿ ತಪ್ಪಿಸಿಕೊಳ್ಳುತ್ತಾನೆಂದರೆ ಇನ್ನು ಪೊಲೀಸ್ ಇಲಾಖೆ ಎಷ್ಟು ಚುರುಕಾಗಿದೆ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ.
ವಿಡಿಯೋ ನೋಡಿ: ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ