– ಸಂಧ್ಯಾ ಸೊರಬ
ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಂದಾಗಿರುವ ಆರ್ಥಿಕ ನಷ್ಟವನ್ನು ಭರಿಸಲು ಭೂಮಿ ನಗದೀಕರಣದಂತಹ ಯೋಜನೆ ಸೇರಿದಂತೆ ತನ್ನ ರಾಜಸ್ವ ಭರ್ತಿಗೆ ಜನರ ಮೇಲೆ ತೆರಿಗೆ ಹೊರೆಯಾಗುವಂತಹ ಕ್ರಮಗಳಿಗೆ ಮುಂದಾಗುತ್ತಿದೆ ಎನ್ನುವುದಕ್ಕೆ ಆರ್ಥಿಕ ತಜ್ಞರು, ರೈತಾಪಿ ವರ್ಗ ಸೇರಿದಂತೆ ವಿವಿಧ ಕ್ಷೇತ್ರದಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸರ್ಕಾರ ತನ್ನ ರಾಜಸ್ವ ಭರ್ತಿಗಾಗಿ ಜನಸಾಮಾನ್ಯರ ಮೇಲೆ ತೆರಿಗೆ ಹೊರಿಸುವುದನ್ನು ಬಿಟ್ಟು ತೆರಿಗೆಯೇತರ ಸಂಪನ್ಮೂಲಗಳ ಕ್ರೋಢೀಕರಣ ಮುಂದಾಗಲೀ ಎಂಬ ಸಲಹೆ ಕೇಳಿಬಂದಿದೆ. ಗ್ಯಾರೆಂಟಿಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಸರ್ಕಾರ ಬರೀ ಬಾಯಿ ಮಾತಿನಲ್ಲಿ ಹೇಳದೇ ಅದರ ಅಂಕಿಅಂಶಗಳನ್ನು ಬಿಡುಗಡೆ ಮಾಡಬೇಕು ಎನ್ನುವ ಆಗ್ರಹವೂ ಇದೆ.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಸಾರ್ವಜನಿಕರಿಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಬೇಕು. 65 ಸಾವಿರ ಕೋಟಿ ರೂ.ಗಳು ಉಚಿತ ಗ್ಯಾರೆಂಟಿಗಳಿಗೆ ಬೇಕು ಎಂದು ಹಿಂದೆ ಹೇಳಿತ್ತು. ಈ ಬಾರಿ 85 ಸಾವಿರ ಕೋಟಿ. ರೂ.ಗಳನ್ನು ಹೊಸ ಸಾಲವನ್ನೆತ್ತುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂಬುದನ್ನು ಹೇಳಲಾಗುತ್ತಿದೆ. ಉಚಿತ ಕೊಡುಗೆಗಳ ಪ್ರಶ್ನೆ ಬಗ್ಗೆ ಮಾತನಾಡಿದಾಗ ಸಾಮಾಜಿಕ ನ್ಯಾಯದ ಪ್ರಶ್ನೆ ಬರುತ್ತದೆ ಅದು ಸಹಜ ಕೂಡ. ಸಮಾಜದಲ್ಲಿ ನಗದು ಬಂದಷ್ಟು ಹಣಕಾಸಿನ ವಹಿವಾಟ ಹೆಚ್ಚಾಗಿ ಸರ್ಕಾರಕ್ಕೆ ಟರ್ನ್‌ಓವರ್ ಹೆಚ್ಚುತ್ತದೆ ಮತ್ತು ಜನರ ಕೈಯಲ್ಲಿ ಹಣ ಓಡಾಡುತ್ತದೆ.
ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ – ಲಕ್ಷ್ಮೀ ಹೆಬ್ಬಾಳಕರ್
ಸರ್ಕಾರದ ಯಾವುದಾದರೂ ಹಣವನ್ನು ಖರ್ಚು ಮಾಡುತ್ತದೆ ಎಂದಾದರೆ ಉತ್ಪಾದಕತೆಯನ್ನು ಹೆಚ್ಚಿಸಲು ಅದು ನೆರವಾಗಬೇಕು. ನೋಟ್ ಬ್ಯಾನ್ ಹಿಂದೆ ಆದಾಗ ಸಮಾಜದಲ್ಲಿ ಕ್ಯಾಷ್ ಟರ್ನ್ ಓವರ್ ಕಡಿಮೆಯಾಯಿತು ಎನ್ನುವ ಕಾರಣಕ್ಕೆ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿತ್ತು. ಎಲ್ಲಾ ದೇಶಗಳಲ್ಲಿಯೂ ಬಹಳ ಮಂದಿ ತೆರಿಗೆ ತಪ್ಪಿಸುವುದು ಉಳಿಸುವುದಕ್ಕೆ ಯೋಜನೆ ರೂಪಿಸುವುದು ಇದ್ದೇಇದೆ. ಮಧ್ಯಮ ವರ್ಗದವರು ಸ್ಯಾಲರೀಡ್ ಪರ್ಸನ್ಸ್ ಹಣ ಉಳಿಸುವ ಬಗ್ಗೆ ಯೋಚಿಸುವುದ ಸಹಜವೇ ಆಗಿದೆ.
ಕುಟುಂಬದ ಕಾಸ್ಟ್ ಆಫ್ ಲೀವಿಂಗ್ ಮೇಲೆ ದೊಡ್ಡ ಹೊಡೆತ ಆಗದಂತೆ ನೋಡಿಕೊಳ್ಳುವುದು ಸರ್ಕಾರ ಕರ್ತವ್ಯ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಸ ಸಂಪನ್ಮೂಲಗಳನ್ನು ತೆರಿಗೇತರ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು. ಜನರ ಮೇಲೆ ತೆರಿಗೆ ಹಾಕುವುದಲ್ಲ.ತೆರಿಗೆಯೇತರ ಸಂಪನ್ಮೂಲಗಳು ಯಾವುವು ಎಂಬುದನ್ನು ಸರ್ಕಾರ ಯೋಚಿಸಿ ಮುಂದಾಗಬೇಕು. ಆದಷ್ಟು ಸರ್ಕಾರದ ಆಡಳಿತ ವೆಚ್ಚ ಕಡಿಮೆಯಾಗಬೇಕು. ಶೇ.50 ಕ್ಕಿಂತ ಹೆಚ್ಚಿನದೇ ಆಡಳಿತವೆಚ್ಚವಾದಾಗ ಇಂತಹ ಸಮಸ್ಯೆಗಳು ಹುಟ್ಟುವುದು ಸಹಜ. ನಿವೃತ್ತ ಅಧಿಕಾರಿಗಳನ್ನು ಆಡಳಿತಕ್ಕೆ ಇನ್ನಿಲ್ಲದ ಹೆಸರಿನಲ್ಲಿ ನೇಮಿಸಿಕೊಳ್ಳುವುದು ಸೇರಿದಂತೆ ಇತರೆಗಳಿಗಾಗಿ ಆಡಳಿತ ವೆಚ್ಚವೇ ಹೆಚ್ಚಾಗಿದೆ. ಹೊಸಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು.ಐಟಿ ಹಬ್ ಮಾಡಿದ್ದರಿಂದ ಒಂದು ವರ್ಗಕ್ಕೆ ಗಾರ್ಮೆಂಟ್ ಉದ್ಯೋಗ, ಇನ್ನೊಂದು ವರ್ಗಕ್ಕೆ ಐಟಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆ ಹೆಚ್ಚಾಯಿತು. ಖಾಸಗಿ ಬಂಡವಾಳದತ್ತ ಗಮನ ಕೊಡಬೇಕು. ಕೃಷಿಯಾಧಾರಿತ ಕಸುಬುಗಳು ಹೆಚ್ಚಾಗಬೇಕು, ಬೆಳೆಗೆ ಸ್ಥಿರವಾದ ಬೆಲೆ ಬರಬೇಕು.
ಇರುವ ಆಸ್ತಿಯ ಮೇಲೆ ಸಾಲ ಮಾಡುವುದಾಗಲೀ, ಅಡ ಇಡುವುದಾಗಲೀ ಅದು ತಪ್ಪು. ಇದಕ್ಕೆ ಹೊರತಾದ ಕ್ರಮಗಳತ್ತ ಸರ್ಕಾರ ಹೆಜ್ಜೆಇಡಬೇಕು. ಹೆಂಡತಿಯ ಒಡವೆಯನ್ನು ದಿನನಿತ್ಯದ ಖರ್ಚಿಗೆ ಅಡ ಇಡುವುದು ಎಷ್ಟು ಸರಿಯಲ್ಲವೋ ಅದೇ ರೀತಿ ಸರ್ಕಾರದ ಈ ಕ್ರಮವೂ ಸರಿಯಲ್ಲ. ಇದು ಗುಡ್ ಎಕಾನಮಿಯ ಸೈನ್ ಅಲ್ಲ, ಆರೋಗ್ಯವಂತ ಆರ್ಥಿಕತೆಯ ಲಕ್ಷಣ ಅಲ್ಲ.
ತೆರಿಗೆಯೇತರ ಸಂಪನ್ಮೂಲ ಕೇವಲ ಬೆಂಗಳೂರಿನಿಂದ ಮಾತ್ರವಲ್ಲ, ಇಡೀ ರಾಜ್ಯದಿಂದ ಹರಿದುಬರುವಂತಾಗಬೇಕು. ಬಜೆಟ್‌ನಲ್ಲಿ ತೋರಿಸುವ ಆಯ-ವ್ಯಯ ವರ್ಷದ ಕೊನೆಗೆ ಇಷ್ಟು ಉಳಿತು ಎಂದು ಲೆಕ್ಕಕ್ಕೆ ತೋರಿಸುವುದಕ್ಕಿಂತ ರಾಜ್ಯ ಸರ್ಕಾರದ ಸಾಲ ಎಷ್ಟಿದೆ? ಎಷ್ಟು ಬಡ್ಡಿ ಕಟ್ಟಲಾಗುತ್ತಿದೆ? ಎನ್ನುವುದನ್ನು ಯಾವುದೇ ಸರ್ಕಾರಗಳು ಬರಲೀ ಅದನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿಡಬೇಕು ಎಂದಿದ್ದಾರೆ.
ಇನ್ನು ಗ್ಯಾರೆಂಟಿ ಯೋಜನೆಗಳಿಗೆ ವಿರೋಧವಿಲ್ಲ ಎಂದು ಹೇಳುವ ಹೆಸರುಹೇಳಲು ಇಚ್ಛಿಸದ ಕೆಲವು ಮಂದಿ ಯೋಜನೆಗಳು ಎಲ್ಲವೂ ಅರ್ಹರಿಗೆ ಬಳಕೆಯಾಗುತ್ತಿದೆಯಾ? ಉಚಿತ ಶಕ್ತಿ ಯೋಜನೆಯಾಗಲೀ, ಗೃಹ ಜ್ಯೋತಿ, ಗೃಹ ಲಕ್ಷ್ಮೀ ಎಷ್ಟರ ಮಟ್ಟಿಗೆ ಅರ್ಹರಿಗೆ ಬಳಕೆಯಾಗುತ್ತಿದೆ. ಅಗತ್ಯ ಇರುವವರಿಗಷ್ಟೇ ಇದು ಬಳಕೆಯಾಗುತ್ತಿದೆಯಾ? ಚುನಾವಣೆಯ ಸಂದರ್ಭದಲ್ಲಿ ಇದನ್ನು ಪಕ್ಷದವರು ಘೋಷಿಸಿದರೆ ಹೊರತು ಇದರಿಂದಾಗಬಹುದಾದ ಸೈಡ್ ಎಫೆಕ್ಟ್ ಬಗ್ಗೆ ಯಾರೂ ಯೋಚಿಸೇ ಇಲ್ಲ ಎಂದಿದ್ದಾರೆ.
ಇನ್ನು ಸರ್ಕಾರ ತನ್ನ ಖಜಾನೆಗಾಗಿ ವರಮಾನ ಸಂಗ್ರಹ ಹೆಚ್ಚಳಕ್ಕಾಗಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಕನಿಷ್ಠ 25 ಸಾವಿರ ಎಕರೆ ಜಮೀನನ್ನು ನಗದೀಕರಿಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಯತ್ನವು ಅಪಾಯಕಾರಿ ಹಾಗೂ ಗಂಭೀರ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದೆ.
ವಿಲಾಸಿ ಹಾಗೂ ಐಷಾರಾಮಿ ವಸ್ತು ಮತ್ತು ಸೇವೆಗಳ ಮೇಲೆ ತೆರಿಗೆ ಹೆಚ್ಚಳ, ತೆರಿಗೆ ಸಂಗ್ರಹದಲ್ಲಿ ಸೋರಿಕೆ ತಡೆ, ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ನ್ಯಾಯಯುತ ಪಾಲನ್ನು ಪಡೆಯುವುದು, ರಾಜ್ಯದ ಅಂತರಿಕ ಉತ್ಪಾದನೆಯಯಲ್ಲಿ ಉನ್ನತಿ ಸಾಧಿಸುವಂತಹ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ದಕ್ಷತೆ ಹೆಚ್ಚಿಸುವುದು ಮುಂತಾದ ಕ್ರಮಗಳ ಮೂಲಕ ರಾಜಸ್ವ ಸ್ವೀಕೃತಿ ಹೆಚ್ಚಳವನ್ನು ಗಣನೀಯವಾಗಿ ಸಾಧಿಸಲು ಸಾಧ್ಯ. ಇಂತಹ ಕ್ರಮಗಳನ್ನು ಬಿಟ್ಟು ಲಂಗು ಲಗಾಮಿಲ್ಲದ ರಿಯಲ್ ಎಸ್ಟೇಟ್ ಗೆ ಅವಕಾಶ ನೀಡುವ ಹಾಗೂ ರಾಜ್ಯದ ಕೃಷಿ ಮತ್ತು ರೈತರನ್ನು ದಿವಾಳಿ ಮಾಡುವ ಭೂಮಿ ನಗದೀಕರಣದ ಪ್ರಯತ್ನ ಆತಂಕಕಾರಿ ಹಾಗೂ ದುರದೃಷ್ಟಕರ ಎಂದಿದೆ.
ರಾಜ್ಯ ಸರಕಾರ ತನ್ನ ಆರ್ಥಿಕ ಸ್ಥಿತಿಗತಿಯ ಸಮತೋಲನಕ್ಕೆ ಸರಕಾರಿ ಭೂಮಿಯನ್ನು ನಗದೀಕರಿಸಲು ಯೋಚಿಸುತ್ತಿರುವುದು ಸರ್ವಥಾ ಸಮರ್ಥನೀಯವಲ್ಲ. ಸರಕಾರದ ಆಸ್ತಿಯನ್ನು ಪರಭಾರೆ ಮಾಡಿ ಅಥವಾ ಒತ್ತೆ ಇಟ್ಟು ಸಂಪನ್ಮೂಲ ರೂಢಿಸುವಂತಹ ಆರ್ಥಿಕ ದುಃಸ್ಥಿತಿ ಸರಕಾರಕ್ಕೆ.
ರಾಜ್ಯ ಸರಕಾರ ತನ್ನ ಆರ್ಥಿಕ ಸ್ಥಿತಿಗತಿಯ ಸಮತೋಲನಕ್ಕೆ ಸರಕಾರಿ ಭೂಮಿಯನ್ನು ನಗದೀಕರಿಸಲು ಯೋಚಿಸುತ್ತಿರುವುದು ಸರ್ವಥಾ ಸಮರ್ಥನೀಯವಲ್ಲ. ಸರಕಾರದ ಆಸ್ತಿಯನ್ನು ಪರಭಾರೆ ಮಾಡಿ ಅಥವಾ ಒತ್ತೆ ಇಟ್ಟು ಸಂಪನ್ಮೂಲ ರೂಢಿಸುವಂತಹ ಆರ್ಥಿಕ ದುಃಸ್ಥಿತಿ ಸರಕಾರಕ್ಕೆ ಬಂದಿದೆಯೆ?ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ನೋಡಿ: ಮೇಘನಾ ಕುಂದಾಪುರ ಗಾಯನದಲ್ಲಿ ರಂಗಗೀತೆಗಳು Janashakthi Media