ನವದೆಹಲಿ: ಪಕ್ಷದ ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆಯು “ಕ್ಷುಲ್ಲಕ ಆಧಾರದ ಮೇಲೆ” ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಚುನಾವಣಾ ವರ್ಷವಾದ 2018-19ಕ್ಕೆ 210 ಕೋಟಿ ರೂ. ಆದಾಯ ತೆರಿಗೆ ಬೇಡಿಕೆಯ ಮೇರೆಗೆ ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಇತರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಹೇಳಿದ್ದಾರೆ.ಪ್ರಜಾಪ್ರಭುತ್ವ
ಪಕ್ಷವು ಕೆಲವು ದಿನಗಳಷ್ಟು ತಡವಾಗಿ ಈ ಸಂಬಂಧಿಸಿದ ವರ್ಷಕ್ಕೆ ತನ್ನ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿದೆ ಎಂದು ಅಜಯ್ ಮಾಕನ್ ಹೇಳಿದ್ದು, “ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಕೊನೆಗೊಂಡಿದೆ. ದೇಶದ ಪ್ರಮುಖ ವಿರೋಧ ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು | ಪೌರ ಕಾರ್ಮಿಕರ 90 ಕೋಟಿ ರೂ. ಬಾಕಿ ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ
ಪಕ್ಷ ನೀಡಿದ ಚೆಕ್ಗಳನ್ನು ಬ್ಯಾಂಕ್ಗಳು ಪಾವತಿ ಮಾಡುತ್ತಿಲ್ಲ ಎಂದು ಗುರುವಾರ ಪಕ್ಷಕ್ಕೆ ತಿಳಿಸಲಾಗಿದೆ ಎಂದು ಅಜಯ್ ಮಾಕನ್ ಹೇಳಿದ್ದು, “ಈ ಬಗ್ಗೆ ನಾವು ಪರಿಶೀಲಿಸಿದಾಗ ಯೂತ್ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ಯೂತ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷವು 210 ಕೋಟಿ ರೂ. ಆದಾಯ ತೆರಿಗೆ ನೀಡಬೇಕು ಎಂದು ಕೇಳಲಾಗಿದೆ. ನಮ್ಮ ಖಾತೆಗಳಲ್ಲಿನ ಕ್ರೌಡ್ ಫಂಡಿಂಗ್ ಹಣವನ್ನು ಸ್ಥಗಿತಗೊಳಿಸಲಾಗಿದೆ. ಚುನಾವಣೆಗೆ ಕೇವಲ 2 ವಾರಗಳ ಮೊದಲು ಪ್ರತಿಪಕ್ಷಗಳ ಖಾತೆಗಳನ್ನು ಸ್ಥಗಿತಗೊಳಿಸಿದರೆ ಅದು ಪ್ರಜಾಪ್ರಭುತ್ವವನ್ನು ಫ್ರೀಜ್ ಮಾಡುವುದಕ್ಕೆ ಸಮಾನವಾಗಿದೆ…” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಪಕ್ಷವು ತನ್ನ ಉದ್ಯೋಗಿಗಳಿಗೆ ಖರ್ಚು ಮಾಡಲು, ಬಿಲ್ಗಳನ್ನು ಹೊಂದಿಸಲು ಅಥವಾ ಸಂಬಳವನ್ನು ಪಾವತಿಸಲು ಹಣದ ಕೊರತೆ ಎದುರಿಸುತ್ತಿದೆ ಎಂದು ಪಕ್ಷವು ಹೇಳಿದೆ. “ಸದ್ಯ ನಮ್ಮ ಬಳಿ ಖರ್ಚು ಮಾಡಲು, ವಿದ್ಯುತ್ ಬಿಲ್ ಪಾವತಿಸಲು, ನಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಯಾವುದೇ ಹಣವಿಲ್ಲ. ನ್ಯಾಯ ಯಾತ್ರೆ ಮಾತ್ರವಲ್ಲದೆ, ಎಲ್ಲಾ ರಾಜಕೀಯ ಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರುತ್ತದೆ…” ಎಂದು ಮಾಕನ್ ಹೇಳಿದ್ದಾರೆ.
ಇದನ್ನೂ ಓದಿ:ತಮಿಳುನಾಡು | ಲೋಕಸಭೆಯಲ್ಲಿ ಸಿಪಿಐ(ಎಂ) ಕ್ಷೇತ್ರದ ಮೇಲೆ ಕಣ್ಣಿಟ್ಟ ನಟ ಕಮಲ್ ಹಾಸನ್!
ಆದಾಗ್ಯೂ, ಮಾಕೆನ್ ಅವರ ಪತ್ರಿಕಾಗೋಷ್ಠಿಯ ಒಂದು ಗಂಟೆಯ ನಂತರ, ಕಾಂಗ್ರೆಸ್ ರಾಜ್ಯಸಭಾ ಸಂಸದ ವಿವೇಕ್ ಟಂಖಾ ಅವರು ಈ ವಿಷಯದ ಬಗ್ಗೆ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರವನ್ನು (ಐಟಿಎಟಿ) ಸಂಪರ್ಕಿಸಿದ್ದು, ಅದು ಮಧ್ಯಂತರ ಪರಿಹಾರವನ್ನು ನೀಡಿದೆ ಎಂದು ಹೇಳಿದ್ದಾರೆ. ಮುಂದಿನ ಬುಧವಾರದಂದು ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಪ್ರಜಾಪ್ರಭುತ್ವದ ಮೇಲೆ ಆಳವಾದ ದಾಳಿ: ಮಲ್ಲಿಕಾರ್ಜುನ ಖರ್ಗೆ
ಲೋಕಸಭೆ ಚುನಾವಣೆಗೂ ಮುನ್ನ ದೇಶದ ಅತಿ ದೊಡ್ಡ ವಿರೋಧ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿರುವ ಕ್ರಮ ಭಾರತದ ಪ್ರಜಾಪ್ರಭುತ್ವದ ಮೇಲಿನ ತೀವ್ರವಾದ ದಾಳಿಯಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ಅಧಿಕಾರದ ಅಮಲಿನಲ್ಲಿರುವ ಮೋದಿ ಸರ್ಕಾರವು ಲೋಕಸಭೆ ಚುನಾವಣೆಗೆ ಮುಂಚೆಯೇ ದೇಶದ ಅತಿದೊಡ್ಡ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ಭಾರತದ ಪ್ರಜಾಪ್ರಭುತ್ವದ ಮೇಲೆ ತೀವ್ರ ಆಕ್ರಮಣ!” ಎಂದು ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ. ಈ ನಿರಂಕುಶ ಪ್ರಭುತ್ವದ ವಿರುದ್ಧ ನಾವು ಬೀದಿಗಿಳಿದು ಪ್ರಭಲವಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕ ಬಜೆಟ್ 2024 LIVE: ವಿಪಕ್ಷಗಳ ಗದ್ದಲದ ನಡುವೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ಬಿಜೆಪಿ ಸಂಗ್ರಹಿಸಿದ “ಅಸಾಂವಿಧಾನಿಕ” ಹಣವನ್ನು ಅವರು ಚುನಾವಣೆಗೆ ಬಳಸುತ್ತಾರೆ, ಆದರೆ ಕಾಂಗ್ರೆಸ್ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ. “ಇದಕ್ಕಾಗಿಯೇ, ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ಇರುವುದಿಲ್ಲ ಎಂದು ನಾನು ಹೇಳಿದ್ದೇನೆ. ಈ ದೇಶದಲ್ಲಿ ಬಹುಪಕ್ಷೀಯ ವ್ಯವಸ್ಥೆಯನ್ನು ಉಳಿಸಲು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ನ್ಯಾಯಾಂಗಕ್ಕೆ ಮನವಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಹಣಕ್ಕಾಗಿ ಅಲ್ಲ, ಜನರಿಗಾಗಿ: ರಾಹುಲ್ ಗಾಂಧಿ
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಐಟಿ ಇಲಾಖೆಯ ಕ್ರಮದ ಹಿಂದೆ ನರೇಂದ್ರ ಮೋದಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಮೋದಿ ಅವರೆ ಭಯಪಡಬೇಡಿ, ಕಾಂಗ್ರೆಸ್ಗೆ ಹಣದ ಬಲವಲ್ಲ, ಜನರ ಬಲ. ಸರ್ವಾಧಿಕಾರದ ಮುಂದೆ ನಾವು ಎಂದೂ ತಲೆಬಾಗಿಲ್ಲ, ತಲೆಬಾಗುವುದೂ ಇಲ್ಲ. ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಹೋರಾಡುತ್ತಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಡಿಯೊ ನೋಡಿ: ಗಾಜಾ ಹತ್ಯಾಕಾಂಡ | ಇಸ್ರೇಲ್ ವಿರುದ್ಧ ಜನಾಕ್ರೋಶ – ಪ್ಯಾಲೆಸ್ಟೈನ್ ಪರ ಮಿಡಿದ ಜಗತ್ತು.