ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಗೆ ತನಿಖೆ ನಡೆಸಬೇಕೆನ್ನುವ ವಿಧಾನವೇ ಗೊತ್ತಿಲ್ಲ. ತನಿಖೆಯ ಆರಂಭದಲ್ಲಿಯೇ ಸಾಕಷ್ಟು ಲೋಪದೋಷಗಳಿವೆ ಎಂದು ಹೈಕೋರ್ಟ್ ಎಸಿಬಿಗೆ ಮತ್ತೊಮ್ಮೆ ಚಾಟಿ ಬೀಸಿದೆ. ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಸಿಬಿ ಕೈಗೊಳ್ಳುತ್ತಿರುವ ತನಿಖೆಯಲ್ಲಿ ಕಾನೂನುಗಳೇ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇಂತಹ ತಪ್ಪುಗಳನ್ನು ನೋಡಿಕೊಂಡು ನ್ಯಾಯಾಲಯ ಸುಮ್ಮನೆ ಕೂರಲಾಗದು ಎಂದು ತರಾಟೆಗೆ ತಗೆದುಕೊಂಡಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ನಡೆಸದೇ ಮೊಕದ್ದಮೆ ದಾಖಲಿಸಿದ್ದರ ವಿರುದ್ಧ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಕಾರ‍್ಯಕಾರಿ ಎಂಜಿನಿಯರ್ ಕೆ.ಆರ್.ಕುಮಾರ್ ನಾಯ್ಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಎಸಿಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಎಸಿಬಿ ಈ ಪ್ರಕರಣದಲ್ಲಿ ಕಾನೂನು ದುರ್ಬಳಕೆ ಮಾಡಿಕೊಂಡಿದೆ. ಇಂತಹ ತಪ್ಪು ನೋಡಿಯೂ ನ್ಯಾಯಾಲಯ ಸುಮ್ಮನಿರಲು ಸಾಧ್ಯವಿಲ್ಲವೆಂದಿದೆ.
ಅರ್ಜಿದಾರರ ಪರ ವಕೀಲ ಕೆ.ಸತೀಶ್, ಎಫ್‌ಐಆರ್‌ಗೂ ಮೊದಲು ಎಸಿಬಿ ಪ್ರಾಥಮಿಕ ತನಿಖೆ ನಡೆಸಿಲ್ಲ, ಮೂಲ ವರದಿಯನ್ನೂ ತಯಾರಿಸಿಲ್ಲ. ಆದರೂ ಎಸಿಬಿ ದಾಳಿ ನಡೆಸಿ ಅರ್ಜಿದಾರರಿಗೆ ಮಾನಸಿಕ ಹಿಂಸೆ ನೀಡಿದೆ ಎಂದು ವಾದಿಸಿದರು.
ತನಿಖೆಯಲ್ಲಿಎಸಿಬಿಯ ಲೋಪಗಳನ್ನು ಗುರುತಿಸಿರುವ ನ್ಯಾಯಪೀಠವು ಕುಮಾರ್ ನಾಯ್ಕ್ ವಿರುದ್ಧದ ಆದಾಯ ಮೀರಿ ಆಸ್ತಿ ಪ್ರಕರಣವನ್ನು ರದ್ದುಪಡಿಸಿದ್ದು, ತನಿಖಾ ವೈಖರಿಯನ್ನು ಕಟುವಾಗಿ ಟೀಕಿಸಿದೆ. ”ತರಾತುರಿಯಲ್ಲಿ ಮೂಲ ವರದಿ ತಯಾರಿಸಲಾಗಿದೆ. ಒಂದೇ ದಿನ ಅಂದರೆ, 2022ರ ಮಾರ್ಚ್ 16ರಂದು 24 ಗಂಟೆಗಳಲ್ಲೇ ಮೂಲ ವರದಿ ಹಾಗೂ ಎಫ್‌ಐಆರ್ ಸಿದ್ಧಪಡಿಸಲಾಗಿದೆ. ಅಧಿಕಾರಿಯ ಸೇವಾವಧಿ ವಿವರ ನಮೂದಿಸಿಲ್ಲ. ಎಫ್‌ಐಆರ್‌ಗೂ ಮುನ್ನ ವಾರ್ಷಿಕ ಸಂಬಳವನ್ನೂ ಪರಿಶೀಲಿಸಿಲ್ಲ. ಆಸ್ತಿಯ ವಾರ್ಷಿಕ ವರದಿಯನ್ನೂ ಪರಾಮರ್ಶಿಸಿಲ್ಲ. ಕಾನೂನಿನ ಪ್ರಕ್ರಿಯೆ ದುರುಪಯೋಗಪಡಿಸಿಕೊಳ್ಳಲಾಗಿದೆ’ʼ ಎಂದು ಉಲ್ಲೇಖಿಸಿದೆ.
ಪ್ರಕರಣದ ವಿವರ
ಎಸಿಬಿಯಲ್ಲಿ 2022ರ ಮಾರ್ಚ್ 15ರಂದು ಆರ್‌ಟಿಒ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ದೂರು ದಾಖಲಾಗಿತ್ತು. ಅದೇ ವೇಳೆ ಮುನಾವರ್ ಪಾಷಾ ಎಂಬುವರ ಮನೆ ಶೋಧಿಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಕೆ.ಆರ್.ಕುಮಾರ್ ನಾಯ್ಕ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಮಾರ್ಚ್ 16ರಂದು ದಾಖಲಿಸಲಾಗಿತ್ತು. ಎಸಿಬಿ ಕ್ರಮ ಕಾನೂನುಬಾಹಿರ ಕುಮಾರ್ ನಾಯ್ಕ್ ಹೈಕೋರ್ಟ್ ಮೊರೆ ಹೋಗಿದ್ದರು.