60 ಕಡೆ ಎಸಿಬಿ ದಾಳಿ: ನೀರಿನ ಪೈಪ್‌ನಲ್ಲಿತ್ತು ಲಕ್ಷ ಲಕ್ಷ ಹಣ, ಮತ್ತೊಬ್ಬ ಅಧಿಕಾರಿ ಮನೆಯಲ್ಲಿ ಪತ್ತೆಯಾಯ್ತು 7 ಕೆಜಿ ಚಿನ್ನಾಭರಣ

  • ರಾಜ್ಯದ 60 ಕಡೆ ಏಕಕಾಲದಲ್ಲಿ 300ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ದಾಳಿ
  • 15 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳ ತಲಾಶ್‌
  • ಶೋಧ ವೇಳೆ ಕೋಟಿ, ಕೋಟಿ ಹಣ, ಚಿನ್ನಾಭರಣ ಪತ್ತೆ

ಬೆಂಗಳೂರು :  ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ನಡೆದ ಮಹಾಬೇಟೆಯಲ್ಲಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಗಳಿಕೆ ಬೆಳಕಿಗೆ ಬರುತ್ತಿದೆ. ಬೆಳಗ್ಗೆ ಆರಂಭವಾದ ದಾಳಿ ಮಧ್ಯಾಹ್ನವಾದರೂ ಮುಂದುವರಿದಿದ್ದು, ಝಣ ಝಣ ಕಾಂಚಾಣ ಅಧಿಕಾರಿಗಳ ಮನೆಯಲ್ಲಿ ಕುಣಿಯುತ್ತಿದೆ.

ಒಟ್ಟು 60 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮ ಆಸ್ತಿ ಸಂಪಾದನೆ ಪರಿಶೀಲನೆ ಮಾಡುತ್ತಿದ್ದಾರೆ. ಬುಧವಾರ ಬೆಳ್ಳಂಬೆಳಗ್ಗೆ 8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯ ತಂಡದಿಂದ 15 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿದೆ.

1 ಇಂಜಿನಿಯರ್​ ಮನೆಯ ಬಕೆಟ್​ನಲ್ಲೂ ದುಡ್ದು, ನೀರಿನ ಪೈಪ್​ನಲ್ಲೂ ಹರಿಯುತ್ತಿದೆ ಕಂತೆ ಕಂತೆ ನೋಟು : ನೀರಿನ ಪೈಪ್​ನಲ್ಲಿ ನೀರಿನ ಬದಲು ಕಂತೆ ಕಂತೆ ಹಣ ಹರಿಯುತ್ತಿರುವುದನ್ನು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್​ ಆಗಿದ್ದಾರೆ. ಕಲಬುರಗಿಯ ಪಿಡಬ್ಲೂಡಿ ಇಂಜಿನಿಯರ್​ (ಜೆಇ) ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯಲ್ಲಿ 25 ಲಕ್ಷ ಕ್ಕೂ ಅಧಿಕ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಶಾಂತಗೌಡ ಬಿರಾದರ್​ ಮನೆಯಲ್ಲಿ ಅಧಿಕಾರಿಗಳು ನಗದು ಎಣಿಕೆ ಮಾಡುತ್ತಿದ್ದಾರೆ.

ಮುಂಜಾನೆ ಮನೆ ಬಾಗಿಲು ತರೆಯಲು ಸತಾಯಿಸಿದ ಶಾಂತಗೌಡ ಅವರ ಮನೆ ಹೊರಗೆ ಎಸಿಬಿ ಸಿಬ್ಬಂದಿ ಹದಿನೈದು ನಿಮಿಷಕ್ಕೂ ಹೆಚ್ಚು ಕಾದರು. ಬಾಗಿಲು ತೆರೆಯುವಂತೆ ಹೇಳಿದ್ರು ಬಾಗಿಲು ತೆರೆಯದೇ ಶಾಂತಗೌಡರ ಕುಟುಂಬ ಸತಾಯಿಸಿರುವ ಆರೋಪ ಕೇಳಿಬಂದಿದೆ.

ಇನ್ನು ಶಾಂತಾಗೌಡರ ಮನೆಯ ನೀರಿನ ಪೈಪ್​ನಲ್ಲಿ ನೀರಿನಂತೆ ಕಂತೆ ಕಂತೆ ನೋಟು ಹರಿಯುತ್ತಿದೆ. ಅಧಿಕಾರಿಗಳು ಪೈಪ್ ಕಟ್ ಮಾಡಿ ಹಣವನ್ನು ಹೊರ ತೆಗೆಯುತ್ತಿದ್ದಾರೆ. 40 ಲಕ್ಷಕ್ಕೂ ಅಧಿಕ ನಗದು ಮನೆಯಲ್ಲಿ ಪತ್ತೆಯಾಗಿದೆ. ಚಿನ್ನಾಭರಣ ಕೂಡ ಸಿಕ್ಕಿದೆ.

ಎಸಿಬಿ ದಾಳಿಯ ಹತ್ತು ನಿಮಿಷ ಮುಂಚೆ ಶಾಂತಗೌಡ ಹಣದ ಕಂತೆಯನ್ನು ನೀರಿನ ಪೈಪ್​ನಲ್ಲಿ ಬಿಸಾಡಿದ್ದಾರೆನ್ನಲಾಗಿದೆ. ಬಾಗಿಲು ತೆರೆಯೋದಕ್ಕೆ ಸತಾಯಿಸುವ ವೇಳೆ ಈ ಕೆಲಸ ಮಾಡಿದ್ದಾರೆನ್ನಲಾಗಿದೆ. ಬಳಿಕ ಫ್ಲಂಬರ್​ನನ್ನು ಕರೆಯಿಸಿ ಪೈಪ್ ಕಟ್ ಮಾಡಿಸಿ ಅಧಿಕಾರಿಗಳು ಹಣ ಹುಡುಕಿದ್ದಾರೆ. ಇನ್ನೂ ಎರಡು ಲಾಕರ್ ಕೀ ನಿಡದೆ ಶಾಂತಗೌಡ ಸತಾಯಿಸುತ್ತಿದ್ದಾರೆ. ಎಸಿಬಿ ಅಧಿಕಾರಿಗಳ ದಾಳಿ ಸಂದರ್ಭದಿಂದ ಇಲ್ಲಿಯವರೆಗೆ ಶಾಂತಾಗೌಡ ತುಂಬಾ ಸತಾಯಿಸುತ್ತಿರುವ ಆರೋಪ ಕೇಳಿಬಂದಿದೆ.

 

 

2 ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮನೆಯಲ್ಲಿ 7 ಕೆಜಿ ಚಿನ್ನ ಪತ್ತೆ : ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, 3.5 ಕೋಟಿ ರೂ. ಮೌಲ್ಯದ 7 ಕೆಜಿ ಚಿನ್ನ ಮತ್ತು 15 ಲಕ್ಷ ರೂ. ನಗದನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 15 ಸರಕಾರಿ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ಮಾಡಿದ್ದರು.

3 ದೊಡ್ಡಬಳ್ಳಾಪುರ ಕಂದಾಯ ಅಧೀಕ್ಷಕನ ಮನೆ ಮೇಲೆ ದಾಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿರುವ ಕಂದಾಯ ಅಧೀಕ್ಷಕ ಲಕ್ಷ್ಮೀ ನರಸಿಂಹಯ್ಯ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಈವರೆಗೆ 2.5 ಕೆಜಿ ಬೆಳ್ಳಿ, 750 ಗ್ರಾಂ ಚಿನ್ನ, ಒಂದು ಲಕ್ಷಕ್ಕೂ ಅಧಿಕ ನಗದು, ಒಂದು ಸೈಟ್, ಎರಡು ಮನೆ ಸೇರಿದಂತೆ ಜಮೀನು ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಮನೆಯಲ್ಲಿ ಸಿಕ್ಕ ವಸ್ತುಗಳು ದಾಖಲೆಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ಎಸಿಬಿ ಅಧಿಕಾರಿಗಳು ಸಿಬ್ಬಂದಿಯಿಂದ ಎಳನೀರು ಮತ್ತು ಊಟ ತರಿಸಿಕೊಂಡಿದ್ದಾರೆ. ಸಂಜೆವರೆಗೂ ದಾಳಿ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ : ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ; ಕೆಜಿಗಟ್ಟಲೆ ಚಿನ್ನಾಭರಣ, 10 ಲಕ್ಷ ರೂ. ಪತ್ತೆ

4 ಶ್ರೀನಿವಾಸ್ ಕೆ, ಕಾರ್ಯಪಾಲಕ ಇಂಜಿನಿಯರ್‌, ಎಚ್‌ಎಲ್‌ಸಿ -3 , ಕೆಆರ್ ಪೇಟೆ ಉಪ ವಿಭಾಗ, ಮಂಡ್ಯ
ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ಉಪ ವಿಭಾಗದ ಎಚ್‌ಎಲ್‌ಸಿ-3ರಲ್ಲಿ ಕಾರ್ಯಪಾಕ ಇಂಜಿನಿಯರ್‌ ಆಗಿರುವ ಶ್ರೀನಿವಾಸ್‌ ಕೆ. ಅವರಿಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಮೈಸೂರು ದಕ್ಷಿಣ ವಲಯದ ಎಸಿಬಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಒಟ್ಟು 38 ಅಧಿಕಾರಿ ಹಾಗೂ ಸಿಬ್ಬಂದಿ 6 ತಂಡಗಳಾಗಿ ಶೋಧ ಕಾರ್ಯ ನಡೆಸಿದ್ದಾರೆ.

5 ಕೆಎಸ್ ಅಂಗೇಗೌಡ , ಕಾರ್ಯಪಾಲಕ ಇಂಜಿನಿಯರ್‌, ಸ್ಮಾರ್ಟ್ ಸಿಟಿ , ಮಂಗಳೂರು ಪಾಲಿಕೆ
ಮಂಗಳೂರು ನಗರ ಪಾಲಿಕೆಯ ಸ್ಮಾರ್ಟ್‌ ಸಿಟಿ ಕಾರ್ಯಪಾಲಕ ಇಂಜಿನಿಯರ್‌ ಕೆಎಸ್‌ ಅಂಗೇಗೌಡ ಅವರಿಗೆ ಸೇರಿದ 4 ಸ್ಥಳಗಳಲ್ಲಿ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರು ದಕ್ಷಿಣ ವಲಯದ ಎಸಿಬಿ ಪೊಲೀಸ್‌ ಅಧೀಕ್ಷಕರ ನೇತೃತ್ವದಲ್ಲಿ ಒಟ್ಟು 36 ಅಧಿಕಾರಿ ಹಾಗೂ ಸಿಬ್ಬಂದಿಯ 4 ತಂಡಗಳೊಂದಿಗೆ ಶೋಧನಾ ಕಾರ್ಯ ಮುಂದುವರೆದಿದೆ.

6. ಜಿವಿ ಗಿರಿ, ಗ್ರೂಪ್ – ಡಿ ನೌಕರ, ಚಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್‌, ಮಾರಪ್ಪನಪಾಳ್ಯ , ಯಶವಂತಪುರ
ಬೆಂಗಳೂರಿನ ಮಾರಪ್ಪನಪಾಳ್ಯದ ಚಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್‌ನಲ್ಲಿ ಡಿ ಗ್ರೂಪ್‌ ನೌಕರ ಆಗಿದ್ದ ಜಿವಿ ಗಿರಿ ಅವರಿಗೆ ಸೇರಿದ 3 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ. ಬೆಂಗಳೂರು ನಗರ ವಿಭಾಗದ ಎಸಿಬಿ ಪೊಲೀಸ್‌ ಅಧೀಕ್ಷಕರ ನೇತೃತ್ವದಲ್ಲಿ ಒಟ್ಟು 21 ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡಗಳೊಂದಿಗೆ ಶೋಧನಾ ಕಾರ್ಯ ಮುಂದುವರೆದಿದೆ.

7 ಬಿ ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನ
ನಂದಿನಿ ಹಾಲು ಉತ್ಪನ್ನದ ಪ್ರಧಾನ ವ್ಯವಸ್ಥಾಪಕ ಬಿ ಕೃಷ್ಣಾರೆಡ್ಡಿ ಅವರಿಗೆ ಸೇರಿಸ 5 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಕೇಂದ್ರ ವಲಯ ಎಸಿಬಿಯ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಒಟ್ಟು 37 ಅಧಿಕಾರಿ ಹಾಗೂ ಸಿಬ್ಬಂದಿಗಳ 5 ತಂಡಗಳೊಂದಿಗೆ ಶೋಧನಾ ಕಾರ್ಯ ನಡೆಸಲಾಗುತ್ತಿದೆ.

ಒಟ್ಟು 60 ಕ್ಕೂ ಹೆಚ್ಚು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಇನಷ್ಟು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *