ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳ ಬೃಹತ್ ದಾಳಿ ನಡೆದಿದ್ದು, ಎಸಿಬಿ ಅಧಿಕಾರಿಗಳು ಬಿಡಿಎ ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಎಸಿಬಿಯ ಐವರು ಡಿವೈಎಸ್ ಪಿ, 12 ಇನ್ಸ್ ಪೆಕ್ಟರ್ ಮತ್ತು 60 ಸಿಬ್ಬಂದಿಗಳ ನಾಲ್ಕು ತಂಡಗಳು 13 ವಾಹನಗಳ ಮೂಲಕ ಆಗಮಿಸಿ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ನಿನ್ನೆ ಸಂಜೆ ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನಗರದಲ್ಲಿನ ಬಿಡಿಎ ಮುಖ್ಯ ಕಚೇರಿಯಲ್ಲಿನ ಅವ್ಯವಹಾರ ಒಂದಾ ಎರಡಾ.. ಸೈಟ್ ಕೊಡಿಸೋದಾಗಿ, ಪರಿಹಾರ ಕೊಡಿಸೋದಾಗಿ ನಂಬಿಸಿ, ಅನೇಕ ಸಾರ್ವಜನಿಕರಿಗೆ ವಂಚನೆಯು ಮಾಮೂಲಿಯಾಗಿದೆ. ಇದಲ್ಲದೇ ಸಾರ್ವಜನಿಕರಿಂದ ಹಣ ವಸೂಲಿ ಕೂಡ ಮಾಡಲಾಗುತ್ತಿದೆ ಎನ್ನುವ ದೂರು ಕೂಡ ಕೇಳಿ ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಎಸಿಬಿ ಅಧಿಕಾರಿಗಳುನಡೆಸಿದ ರೈಡ್ ಗೆ ಬಿಡಿಎ ನೌಕರರು ಶಾಕ್ ಗೆ ಒಳಗಾಗಿದ್ದರು. ದಾಳಿ ನಡೆಸಿದ ಬೆನ್ನಲ್ಲೇ ಬಿಡಿಎ ಅಧಿಕಾರಿಗಳ, ಸಿಬ್ಬಂದಿ ಬಳಿಯಿದ್ದ ಮೊಬೈಲ್ ಮತ್ತು ವ್ಯಾಲೆಟ್ ಗಳನ್ನು ಎಸಿಬಿ ವಶಪಡಿಸಿಕೊಂಡಿತು. ನಂತರ ಆ ಮೊಬೈಲ್ ಗಳನ್ನು ಸ್ವಿಚ್ ಅಫ್ ಮಾಡಿಸಿದರು. ಬಳಿಕ ಕಚೇರಿಯ ಒಳಗಿದ್ದ ಎಲ್ಲಾ ಕಡತಗಳನ್ನ ಒಂದು ಕಡೆ ಇಟ್ಟು ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಬಿಡಿಎ ವಿರುದ್ಧ ವ್ಯಾಪಕ ದೂರು : ಫಲಾನುಭವಿಗಳಿಗೆ ಸೈಟ್ ಹಂಚಿಕೆ, ಕಾರ್ನರ್ ಸೈಟ್ ಹಂಚಿಕೆ, ಅಲಾಟ್ ಆದ ಸೈಟ್ ದಾಖಲೆ ನೀಡದೆ ಲಂಚಕ್ಕಾಗಿ ಬೇಡಿಕೆ, ನಿವೇಶನ, ಫ್ಲ್ಯಾಟ್ ಹಂಚಿಕೆಯಲ್ಲೂ ಅವ್ಯವಹಾರ ಆರೋಪ, ಬ್ರೋಕರ್ಗಳ ಮೂಲಕ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಸೇರಿ ಒಸಿ, ಅನುಮತಿ ಪತ್ರ, ಇ-ಸಿಡಿ, ಸರ್ಟಿಫಿಕೆಟ್ಗಾಗಿ ಲಂಚ ನೀಡದಿದ್ದರೆ ಕೆಲಸ ಮಾಡಿಕೊಡದೆ ಅಲೆಸುತ್ತಿದ್ದರು ಎಂದು ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಭೂಸ್ವಾಧೀನ ವಿಭಾಗದ ಡಿಎಸ್, ಎಸಿಗಳ ಕಚೇರಿ, ಡಿಎಸ್ 1, 2, 3, 4 ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ.
ಎಸಿಬಿಯ ಐವರು ಡಿವೈಎಸ್ಪಿ, 12 ಇನ್ಸ್ಪೆಕ್ಟರ್ ಸೇರಿ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಕಡತ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ. ಬಿಡಿಎ ಡಿಎಸ್ ನವೀನ್ ಜೋಸೆಫ್ ಕಚೇರಿಯಲ್ಲಿ ಹಣ ಜಪ್ತಿ ಮಾಡಲಾಗಿದೆ. ಬಿಡಿಎ ಕಚೇರಿಯ 50ಕ್ಕೂ ಹೆಚ್ಚು ಕೊಠಡಿಗಳಲ್ಲಿ ಪರಿಶೀಲನೆ ಮುಂದುವರೆದಿದೆ. ಬಿಡಿಎ ಏಜೆಂಟ್ಸ್ ಬ್ಯಾಗ್, ಬ್ರೀಫ್ಕೇಸ್ ಸೇರಿದಂತೆ ಬಿಡಿಎ ಕಚೇರಿಯ ಇಂಚಿಂಚೂ ಕೂಡ ಅಧಿಕಾರಿಗಳು ಶೋಧಿಸ್ತಿದ್ದಾರೆ.