ಅಹಮದಾಬಾದ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಪದಾಧಿಕಾರಿಗಳು ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಬೇಕೆಂದು ಒತ್ತಡ ಹಾಕಿರುವ ಘಟನೆ ನಡೆದಿದೆ. ಈ ಘಟನೆಯು ಅಹಮದಾಬಾದ್‍ನ ಗುಜರಾತ್ ಲಾ ಸೊಸೈಟಿ ವಿಶ್ವವಿದ್ಯಾಲಯ ವ್ಯಾಪ್ತಿಯ ಎಚ್‍ಎ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯು ಕೆಲವು ದಿನಗಳ ಹಿಂದೆ ಜರುಗಿದ್ದು, ತರಗತಿ ನಡೆಯುತ್ತಿದ್ದ ವೇಳೆ ಕೆಲವು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸಿದ್ದರು. ತರಗತಿಗೆ ಅಡ್ಡಿಪಡಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಉಪನ್ಯಾಸಕರು ಬಳಿಕ ಅವರನ್ನು ಕಾಲೇಜಿನ ಪ್ರಾಂಶುಪಾಲ ಸಂಜಯ್ ವಕೀಲ್ ಅವರ ಬಳಿ ಕರೆದೊಯ್ದಿದ್ದರು. ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡ ಸಂಜಯ್ ವಕೀಲ್, ಅವರಿಂದ ಕ್ಷಮಾಪಣೆ ಪತ್ರ ಬರೆಸಿದ್ದರು. ಬಳಿಕ ವಿಶ್ವವಿದ್ಯಾಲಯದ ಮುಖ್ಯಸ್ಥ ಬಾಲಚಂದ್ರ ಜೋಶಿ ಬಳಿಯೂ ಕರೆದೊಯ್ದಿದ್ದರು. ಅವರು ಕೂಡ ವಿದ್ಯಾರ್ಥಿಗಳಿಗೆ ಗಂಭೀರ ಸೂಚನೆಗಳನ್ನು ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಕ್ರಮಕೈಗೊಂಡಿದ್ದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಅಂಗಸಂಸ್ಥೆ ಎಬಿವಿಪಿ ಕಾರ್ಯಕರ್ತರು ಮುಖ್ಯ ಶಿಕ್ಷಕರನ್ನು ಎದುರಿಸಿದ ಎಬಿವಿಪಿ ಕಾರ್ಯಕರ್ತರು ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ತರಗತಿಯಲ್ಲಿ ತೊಂದರೆ ಸೃಷ್ಟಿಸಿದ ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳುವಂತೆಯೂ ಒತ್ತಾಯಿಸಿದರು.
ಪ್ರಾಂಶುಪಾಲರಿಗೂ ಸಹ ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಡ ಹಾಕಿದ್ದಾರೆ. ಈ ಘಟನೆಯ ಕುರಿತಾಗಿ ಪ್ರಾಂಶುಪಾಲರು ಕ್ಷಮೆ ಕೇಳಿ ನಾನು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದಾರೆ. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಬೈದಿದ್ದ ಕ್ರಮಕ್ಕಾಗಿ ಅವರ ಬಳಿ ಕ್ಷಮೆ ಕೋರುವಂತೆ ಕೂಡ ಎಬಿವಿಪಿ ಕಾರ್ಯಕರ್ತರು ಒತ್ತಡ ಹಾಕಿದ್ದಾರೆ ಎಂದು ವರದಿಯಾಗಿದೆ.