ಬೆಂಗಳೂರು: ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಕಠಿಣ ಕ್ರಮಕ್ಕೆ ಹಾಗೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಗೃಹಸಚಿವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನೆಯ ಕಿಚ್ಚಿಗೆ ಹೈರಾಣಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದು, ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಮನೆ ಬಳಿ ಬೆಳಿಗ್ಗೆಯಿಂದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೃಹ ಸಚಿವರ ಮನೆ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆಯಲು ಮುಂದಾಗುತ್ತಿದ್ದಂತೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ 40 ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಬಿವಿಪಿ ಕಾರ್ಯಕರ್ತರು ಪೊಲೀಸರನ್ನು ಲೆಕ್ಕಿಸದೇ ಗೃಹ ಸಚಿವರ ಮನೆಯ ಗೇಟ್ ಗಳನ್ನು ತಳ್ಳಿ ಒಳನುಗ್ಗಿದ್ದು, ಗೃಹ ಸಚಿವರ ಮನೆಯ ಬಾಗಿಲನ್ನು ತೆಗೆಯಲು ಯತ್ನಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಪರಿಸ್ಥಿತಿ ಇದ್ದುದರಿಂದ ಪ್ರಸ್ತುತ 40 ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕಮಿಷ್ನರ್ ಜತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪೊಲೀಸರ ಲಾಠಿಚಾರ್ಜ್ ವೇಳೆ ವಿದ್ಯಾರ್ಥಿನಿ ತಲೆಗೆ ಗಾಯ : ಪೊಲೀಸರ ಲಾಠಿಚಾರ್ಜ್ ವೇಳೆ ವಿದ್ಯಾರ್ಥಿನಿ ಹೇಮಶ್ರೀ ತಲೆಗೆ ಗಂಭೀರ ಗಾಯವಾಗಿದೆ. ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಧರಣಿ ನಡೆಸುತ್ತಿರುವ ವೇಳೆ ಗಂಭೀರ ಗಾಯವಾಗಿದ್ದು, ತಲೆಗೆ ಸ್ಟಿಚ್ಚಿಂಗ್ ಹಾಕಲಾಗಿದೆ. ಕಳೆದ 2 ವರ್ಷದಿಂದ ಎಬಿವಿಪಿ ವಿದ್ಯಾರ್ಥಿ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೇಮಾಶ್ರೀ ಗಾಯಗೊಂಡಿದ್ದಾರೆ.