ಬೆಂಗಳೂರು: ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ಬಿಜೆಪಿ ಬೆಂಬಲಿತ ಉದ್ಯಮಿಗಳಾದ ಪೋಲಾ ಪ್ರವೀಣ, ಮಾಲೀಕ ವೆಂಕಟೇಶ ಬಾಬು ಎಂಬ ಮೂವರನ್ನು ಗುರುವಾರ ಬಳ್ಳಾರಿ ಎಸ್ಪಿ ಸೈದುಲು ಅದಾವತ್ ಬಂಧಿಸಿದ್ದಾರೆ.
ರಾಜಕೀಯ ಹಿನ್ನೆಲೆ ಹೊಂದಿರುವ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುವ ಆಡಳಿತ ಪಕ್ಷದವರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ತನಿಖೆಯೂ ಹಳ್ಳ ಹಿಡಿಯದಂತೆ ಮತ್ತು ಅತ್ಯಂತ ಶೀಘ್ರದಲ್ಲಿ ತನಿಖೆಯನ್ನು ಕೈಗೊಂಡು ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣವಾಗಿ ಶಿಕ್ಷೆಯನ್ನು ವಿಧಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸಂಘಟನೆಯು ಆಗ್ರಹಿಸಿದೆ.
ಬಂಧಿತ ಆರೋಪಿಗಳು ಮೂರು ಸಾವಿರ ಮುಖಬೆಲೆಯ ಒಂದು ರೆಮ್‌ಡಿಸಿವಿರ್ ಔಷಧಿಯ ಬಾಟಲಿಯನ್ನು 30 ರಿಂದ 35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಈ ಅಕ್ರಮ ದಂಧೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಬೆಂಬಲಿತ ಎಬಿವಿಪಿ ಮತ್ತು ವಿಶ್ವಹಿಂದೂ ಪರಿಷತ್ ಮುಖಂಡರು ಭಾಗಿಯಾಗಿರುವುದು ಬಯಲಾಗಿದೆ. ಇವರ ಹಿಂದೆ ಬಿಜೆಪಿ ರಾಜಕೀಯ ನಾಯಕರ ಕೈವಾಡವಿದೆ.
ಈ ಸಂಬಂಧ ಪೋಲಿಸರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಆರೋಪಿಗಳ ನ್ಯಾಯಾಂಗ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ, ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಉಳಿದವರನ್ನು ಸಹ ಕೂಡಲೇ ಬಂಧಿಸಬೇಕು. ಕೋವಿಡ್‌ನಂತಹ ಜೀವನೋಪಾಯದ ಸಂಕಷ್ಟದ ಕಾಲದಲ್ಲೂ ದುಡ್ಡು ಮಾಡಲು ಹೊರಟಿರುವ ಮುಖಗಳ ಅನಾವರಣವಾಗಬೇಕೆಂದು ಎಸ್ಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮತ್ತು ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ರವರು ಆಗ್ರಹಿಸಿದ್ದಾರೆ.