ಶಿವಮೊಗ್ಗ : ಯುವತಿಯರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ತಾಲೂಕು ಘಟಕದ ಅಧ್ಯಕ್ಷ ಪ್ರತೀಕ್ ಗೌಡನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಲು, ಸ್ವತಃ ಪ್ರತಿಕ್‌ಗೌಡನೇ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಆ ವಿಡಿಯೋಗಳು ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಎನ್ಎಸ್ಯುಐ ಸಂಘಟನೆ ತೀರ್ಥಹಳ್ಳಿ ಡಿವೈಎಸ್ಪಿಯವರಿಗೆ ಮನವಿಯನ್ನು ಸಹ ಸಲ್ಲಿಸಿತ್ತು. ಅಲ್ಲದೇ ಆರೋಪಿಯ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ‘ನೈಜ ಹೋರಾಟಗಾರರ ವೇದಿಕೆ’ ಶಿವಮೊಗ್ಗ ಎಸ್ಪಿಗೆ ಮನವಿ ಸಲ್ಲಿಸಿತ್ತು.
ಆರೋಪಿ ಬಂಧನದ ಬಳಿಕ, ತನ್ನ ಉದ್ದೇಶವನ್ನು ಪೊಲೀಸರಿಗೆ ತಿಳಿಸಿದಾಗ ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಪ್ರತೀಕ್‌ಗೌಡ್, ‘ಸಂಘಟನೆಯ ಸದಸ್ಯತ್ವನೀಡುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಅಮಿಷ ಒಡ್ಡಿ ನಗ್ನ ಚಿತ್ರಗಳು ಚಿತ್ರೀಕರಿಸಿಕೊಳ್ಳುತ್ತಿದ್ದ. ನಂತರ ಬೆದರಿಕೆ, ಬ್ಲಾಕ್‌ಮೇಲ್ ಮಾಡಲು ವಿಡಿಯೊ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ಒಪ್ಪದಿದ್ದಾಗ, ಅಶ್ಲೀಲ ವಿಡಿಯೊಗಳನ್ನು ಪ್ರತೀಕ್ ವಾಟ್ಸ್‌ಅಪ್‌ನಲ್ಲಿ ಹರಿಬಿಟ್ಟಿದ್ದ’ ಎಂದು ಹೇಳಲಾಗಿದೆ.
ಆ ದೃಶ್ಯಗಳಲ್ಲಿ, ಹೆಣ್ಣುಮಕ್ಕಳಿಗೆ ಆಮಿಷವೊಡ್ಡಿ ಅವರನ್ನು ಬಳಸಿಕೊಂಡು ಆ ಕೃತ್ಯಗಳ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಪೊಲೀಸರ ಪ್ರಕಾರ, ಎಬಿವಿಪಿಯ ಪ್ರತೀಕ್ ಗೌಡ ಕೆಲವು ಕಾಲೇಜಿಗೆ ಹೋಗುವ ಹುಡುಗಿಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ಪೊಲೀಸರು ಯುವಕನನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಬಂಧನದ ಬಳಿಕ ವಿಡಿಯೋ ವೈರಲ್ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ. ಅಶ್ಲೀಲ ಫೋಟೊ, ವಿಡಿಯೋಗಳನ್ನು ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿರುವುದು ಗೊತ್ತಾಗಿದೆ. ಈ ರೀತಿ ಷೇರ್ ಮಾಡುವುದು ಮತ್ತು ಸ್ಟೋರ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 67 (E) ಅಡಿ ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆ 5 ವರ್ಷದವರೆಗೆ ಜೈಲು ಮತ್ತು ದಂಡ ವಿಧಿಸಲಾಗುತ್ತದೆ. ಈ ಕುರಿತು ಗ್ರೂಪ್ ಅಡ್ಮಿನ್‌ಗಳು ಕೂಡ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
ಆರೋಪಿ ತನ್ನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಕಠೋರ ಹಿಂದೂ, ಗಾಂಚಾಲಿ, ಧರ್ಮೋ ರಕ್ಷತಿ ರಕ್ಷಿತಃ, ಒಕ್ಕಲಿಗ ಹಾಗೂ ಎಬಿವಿಪಿಯನ್ ಎಂದು ಬರೆದುಕೊಂಡಿರುವುದು ಕಂಡುಬಂದಿದೆ. ಇನ್ನು ಈ ಘಟನೆ ವಿಕೋಪಕ್ಕೆ ಹೋಗುತ್ತಿರುವುದು ಶಿವಮೊಗ್ಗ ಪೊಲೀಸರ ಗಮನಕ್ಕೂ ಬಂದಿತ್ತು. ತಕ್ಷಣ ಅಲರ್ಟ್ ಆಗಿ ಆರೋಪಿ ಬಂಧಿಸಲಾಗಿದೆ. ವಿಚಾರಣೆಯನ್ನ ನಡೆಸುತ್ತಿರುವ ಪೊಲೀಸರು, ಇನ್ನಷ್ಟು ಸತ್ಯಗಳನ್ನ ಹೊರತೆಗೆಯುವ ಸಾಧ್ಯತೆ ಇದೆ. ಹಾಗೇ ಈ ಪ್ರಕರಣದ ಹಿನ್ನೆಲೆ ಪೊಲೀಸರು ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದಾರೆ. ಮತ್ತೊಂದ್ಕಡೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಅವನು ಯಾವ ಸಂಘಟನೆ ಮುಖಂಡನೋ, ಅವನೊಬ್ಬ ಕೊಳಕು ಮನುಷ್ಯ. ನಾನು ಈ ಬಗ್ಗೆ ಪೊಲೀಸ್ ಅಧಿಕಾರಿ ಜೊತೆ ಮಾತನಾಡ್ತೇನೆ.ಅವನ ಬಗ್ಗೆ ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಗಾಂಜಾ, ಅಫೀಮು ಆರಂಭವಾಗಿದೆ. ಇದನ್ನು ಮಟ್ಟ ಹಾಕಲು ಪೋಷಕರು ಗಮನ ಹರಿಸಬೇಕು. 3-4 ದಿನದಲ್ಲಿ ಶಾಲಾ ಕಾಲೇಜು ಮುಖ್ಯಸ್ಥರು ಪೊಲೀಸರ ಸಭೆ ಕರೆದು ಚರ್ಚೆ ಮಾಡ್ತೇನೆ. ಕೇವಲ ತೀರ್ಥಹಳ್ಳಿ ಅಲ್ಲ, ರಾಜ್ಯದ ಎಲ್ಲಾ ಕಡೆ ಇದು ಇದೆ ಎಂದರು.
ಕಾಲೇಜು ವಿದ್ಯಾರ್ಥಿನಿಯರ ಬೆತ್ತಲೆ ವಿಡಿಯೋ ವೈರಲ್ ಆಗಿ ಆರೋಪಿ ಬಂಧನವಾಗುತ್ತಿದ್ದಂತೆ, ಇತ್ತ ಎಬಿವಿಪಿ ಶಿವಮೊಗ್ಗ ಜಿಲ್ಲಾ ಸಮಿತಿ ಪ್ರತಿಕ್ರಿಯೆ ನೀಡಿದೆ. ಪ್ರತೀಕ್ ಗೌಡ ನಮ್ಮ ಸಂಘಟನೆಯಲ್ಲೇ ಇಲ್ಲ. ಈತನಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಈ ಮೂಲಕ ಎಬಿವಿಪಿ ಸುಳ್ಳುಹೇಳುವ ಮೂಲಕ ಪ್ರಕರಣದ ದಿಕ್ಕನ್ನೂ ತಪ್ಪಿಸುವ ಪ್ರಯತ್ನಕ್ಕೆ ಮುಂದಾಗುತ್ತಿದೆ.
ಪ್ರತೀಕ್ ಗೌಡ ಎಬಿವಿಪಿ ತಾಲ್ಲೂಕು ಮುಖ್ಯಸ್ಥ ಎನ್ನುವುದು ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲೇ ದಾಖಲಾಗಿದೆ. ಅಷ್ಟೇ ಅಲ್ಲದ ಸಂಘಟನೆಯ ವಿದ್ಯಾರ್ಥಿಗಳು ಕೂಡ ಆತ ಎಬಿವಿಪಿ ತಾಲೂಕು ಅಧ್ಯಕ್ಷ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಕೇವಲ ಎರಡು ತಿಂಗಳ ಹಿಂದೆ ನಡೆದ ಎಬಿವಿಪಿ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನೇ ಹಂಚಿಕೊಂಡ ಫೋಟೋಗಳೇ ಈತ ಆ ಸಂಘಟನೆ ಪದಾಧಿಕಾರಿ ಎಂಬುದಕ್ಕೆ ಸಾಕ್ಷ್ಯಯಾಗಿದೆ. ಆದರೆ ಎಬಿವಿಪಿ ತೀರ್ಥಹಳ್ಳಿ ತಾಲೂಕು ಘಟಕವು ಪ್ರತೀಕ್‌ನನ್ನು ಜನವರಿಯಲ್ಲೇ ಅಧ್ಯಕ್ಷ ಸ್ಥಾನದಿಂದ ವಜಾಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದೆ.
ಪ್ರತೀಕ್ ಮೇಲೆ ಇಂತಹ ಆರೋಪ ಇದೇ ಮೊದಲೇನಲ್ಲ ಈ ಹಿಂದೆಯೂ ಸಹ ಎಬಿವಿಪಿ ವಿದ್ಯಾರ್ಥಿನಿಯರನ್ನೇ ಮರಳು ಮಾಡಿ ಈ ರೀತಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ವಿಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡಿ ಹಲವರಿಂದ ಹಣ ಸಹ ವಸೂಲಿ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿವೆ. ಜ್ಞಾನ, ಶೀಲ, ಏಕತೆ ಎಂದೆಲ್ಲ ಬೊಬ್ಬೆ ಹೊಡೆಯುವ ಎಬಿವಿಪಿ ಜ್ಞಾನ, ಶೀಲತೆ, ಎಂತದ್ದು ಎಂದು ಸಾಬೀತಾಗಿದೆ. ಹೆಣ್ಣಿಗೆ ಅವರು ಗೌರವ ಕೊಡುವ ಬದಲಾಗಿ ಭೋಗದ ವಸ್ತುವಾಗಿಯೇ ನೋಡುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣಕ್ಕಿಂತ ಬೇರೇನು ಸಾಕ್ಷಿ ಬೇಕು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.