ಆಯುಷ್ಮಾನ್
ನವದೆಹಲಿ: ಈಗಾಗಲೆ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ 3,446 ಜನರಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಒಟ್ಟು 6.97 ಕೋಟಿ ರೂ.ಗಳನ್ನು ಆಯುಷ್ಮಾನ್ ಭಾರತ-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಪಡೆಯಲಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ನೀಡಿರುವ ವರದಿಯಲ್ಲಿ ಹೇಳಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಬುಧವಾರ ವರದಿ ಮಾಡಿದೆ.
2018 ರಲ್ಲಿ ಪ್ರಾರಂಭವಾದ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಥವಾ PMJAY ಬಡ ಜನರ ಆರೋಗ್ಯ ವಿಮೆಗಾಗಿ ಇರುವ ಒಕ್ಕೂಟ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಇದು ಪ್ರತಿ ಕುಟುಂಬಗಳಿಗೆ ರೂ 5 ಲಕ್ಷದವರೆಗೆ ಆರೋಗ್ಯ ವಿಮಾ ರಕ್ಷಣೆಯನ್ನು ನೀಡುತ್ತದೆ. ಈಗಾಗಲೆ ಮೃತಪಟ್ಟ 3,446 ಜನರ ಹೆಸರಿನಲ್ಲಿ 3,903 ಕ್ಲೈಮ್‌ಗಳನ್ನು ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಇದನ್ನೂ ಓದಿ: ಕೊನೆಗೂ ಹೋರಾಟಕ್ಕೆ ಸಜ್ಜಾದ ಬಿಜೆಪಿ; ದಿಕ್ಕು ತಪ್ಪಿಸುವ ಕುತಂತ್ರವೆಂದ ಸೌಜನ್ಯ ಪರ ಹೋರಾಟಗಾರರು!
ಯೋಜನೆಯ ವಹಿವಾಟು ನಿರ್ವಹಣಾ ವ್ಯವಸ್ಥೆಯಲ್ಲಿ ಈ ಹಿಂದೆಯೆ “ಮರಣ ಹೊಂದಿದ್ದಾರೆ” ಎಂದು ತೋರಿಸಲಾದ ರೋಗಿಗಳು ಕೂಡಾ ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ಪಡೆಯಲಾಗಿದೆ ಎಂದು ಯೋಜನೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಯಲ್ಲಿ ಸಿಎಜಿ ವರದಿ ಹೇಳಿದೆ. PMJAY ಅಡಿಯಲ್ಲಿ ಸುಮಾರು 7.5 ಲಕ್ಷ ಫಲಾನುಭವಿಗಳು ಒಂದೇ ಮೊಬೈಲ್ ಸಂಖ್ಯೆ 9999999999 ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು ಕಳೆದ ವಾರ ಹೇಳಿತ್ತು.
ಕೇರಳದಲ್ಲಿ ಅತೀ ಹೆಚ್ಚು -966 ಜನರ ಹೆಸರಿನಲ್ಲಿ- ಪಡೆಯಲಾಗಿದ್ದು, ಅವರ ಚಿಕಿತ್ಸೆಗೆ ಎಂದು 2.60 ಕೋಟಿ ರೂ. ಪಡೆಯಲಾಗಿದೆ. ಇದರ ನಂತರ ಮಧ್ಯಪ್ರದೇಶದಲ್ಲಿ 403 ರೋಗಿಗಳಿಗೆ 1.12 ಕೋಟಿ ರೂ. ಪಡೆಯಲಾಗಿದ್ದು, ಛತ್ತೀಸ್‌ಗಢದಲ್ಲಿ 365 ರೋಗಿಗಳಿಗೆ 33.70 ಲಕ್ಷ ರೂ. ಪಡೆಯಲಾಗಿದೆ ಎಂದು ವರದಿ ಹೇಳಿದೆ.
ಆಯುಷ್ಮಾನ್ ನಿಯಮಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದ ನಂತರ ಮತ್ತು ಡಿಸ್ಚಾರ್ಜ್ ಮಾಡುವ ಮೊದಲು ರೋಗಿಯು ಮರಣ ಹೊಂದಿದರೆ, ಲೆಕ್ಕಪರಿಶೋಧನೆಯ ನಂತರ ಆಸ್ಪತ್ರೆಯ ಬಿಲ್‌ಗಳನ್ನು ಪಾವತಿಸಲಾಗುತ್ತದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ದೇಶ ಸ್ವತಂತ್ರಗೊಂಡು 76 ವರ್ಷ; ರಾಜ್ಯದಲ್ಲಿದ್ದಾರೆ 7,449 ಮಲ ಹೊರುವರು!
ಈಗಾಗಲೆ ಮೃತಪಟ್ಟವರೂ ಈ ಯೋಜನೆಗೆ ನೋಂದಣಿ ಮಾಡಬಹುದು ಎಂಬ ದೋಷವನ್ನು ಸಿಎಜಿ ಮೊದಲ ಬಾರಿಗೆ 2020ರಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸೂಚಿಸಿತ್ತು. ಇದರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದರೂ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಯೋಜನೆಯಡಿ ಹಣ ಪಡೆಯುವ ವ್ಯವಸ್ಥೆಯು ಹಾಗೆ ಉಳಿದುಕೊಂಡಿದೆ ಎಂದು ಸಿಎಜಿ ಹೇಳಿದೆ.
ಆಯುಷ್ಮಾನ್ ಭಾರತ್ ಯೋಜನೆ ಯೋಜನೆ ಅಲ್ಲದೆ, ಸಿಎಜಿಯ ವರದಿಯು ಕೇಂದ್ರದ ಹಲವಾರು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದೆ. ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ವರದಿಯು ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಸೇರಿದಂತೆ ಸರ್ಕಾರದ ಉಪಕ್ರಮಗಳಲ್ಲಿ ಭ್ರಷ್ಟಾಚಾರ ನಡೆದಿದೆ ಹೇಳಿದೆ.
ವಿಡಿಯೊ ನೋಡಿ: ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು, ಅವಮಾನಿಸಬಾರದು Janashakthi Media