ಬೆಂಗಳೂರು: ಬಜೆಟ್ ಅಧಿವೇಶನ ಕೇವಲ ಆಯವ್ಯಯದ ಮಂಡನೆಗೆ ಮಾತ್ರ ಸೀಮಿತವಾಗದೆ, ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನು ರದ್ದುಗೊಳಿಸಿ, ಜನಪರ ನೀತಿಗಳನ್ನು ರೂಪಿಸಬೇಕು ಎಂದು ಸಂಯುಕ್ತ ಹೋರಾಟ ಆಗ್ರಹಿಸಿದೆ.
ಪಿ
ಶನಿವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡುತ್ತಾ, ಬಿಜೆಪಿ ಸರಕಾರ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು. ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟಿನ ಕರಡನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ರೈತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ಕೃಷಿ ಬೆಳೆ ಆಯೋಗಕ್ಕೆ ಹೊಸ ಮಾರ್ಗಸೂಚಿ ನೀಡಬೇಕು. ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು ಎಂದು ಆಗ್ರಹಿಸಿದರು.
ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಶಾಸನ ರೂಪಿಸಬೇಕು. ಅಸಂಘಟಿತ ಕಾರ್ಮಿಕರ ಮಂಡಳಿಗಳಿಗೆ ಅಗತ್ಯ ಅನುದಾನ ಮೀಸಲಿಡಬೇಕು. ಕಾರ್ಮಿಕ ಸಮ್ಮೇಳನ ಏರ್ಪಡಿಸಿ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ವೇತನ ಶ್ರಮಿಕ ನೀತಿ ರೂಪಿಸುವ ಪರಿಪಾಠವನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕು. ಕನಿಷ್ಟ ವೇತನ ಪರಿಷ್ಕರಿಸಿ ಮಾಸಿಕ 36 ಸಾವಿರ ರೂ. ಮಾಡಬೇಕು ಮತ್ತು ಎಲ್ಲ ವಲಯಗಳಲ್ಲಿನ ಕೂಲಿದರ ಒಮ್ಮೆಗೆ ಘೋಷಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾಕಾರ್ಯಕರ್ತೆಯರು ಮುಂತಾದ ಕ್ಷೇತ್ರಗಳ ದುಡಿಯುವ ಜನರಿಗೆ ವೇತ ಹೆಚ್ಚಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಯಾದಗಿರಿ| ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಸತ್ಯಗಳನ್ನು ಪೊಲೀಸರು ತಪ್ಪಾಗಿ ನಿರೂಪಿಸಿದ್ದಾರೆ – ಕೆ. ನೀಲಾ
ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಮಾತನಾಡಿ ಬಗರ್ ಹುಕುಂ ರೈತರ ಭೂಮಿಗಳನ್ನು ಕೂಡಲೇ ಮಂಜೂರು ಮಾಡಬೇಕು. ಕಾನೂನಿನ ತೊಡಕನ್ನು ಕಾರಣವಾಗಿ ನೀಡಿ, ಬಡರೈತರ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು. ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರ ಕುರಿತ ನಾಲ್ಕು ಕೋಡ್ ಗಳನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಅಂತಾರಾಷ್ಟ್ರೀಯ ಶ್ರಮ ಒಡಂಬಡಿಕೆಗೆ ವಿರುದ್ಧವಾಗಿ ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಿರುವ ಕಾರ್ಮಿಕ ವಿರೋಧಿ ತಿದ್ದುಪಡಿ ರದ್ದುಗೊಳಿಸಬೇಕು ಎಂದರು.
ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಬೇಕು. ಉದ್ಯೋಗ ಸೃಷ್ಟಿಗೆ ಮತ್ತು ಉದ್ಯೋಗ ಖಾತ್ರಿಗೆ ವಿಶೇಷ ಆಯೋಗ ರಚಿಸಿ, ಸಮಗ್ರ ನೀತಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಬೇಕು. ಜಿಎಸ್ಟಿ ಪದ್ದತಿ ರದ್ದುಗೊಳಿಸುಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ರಾಜ್ಯದ ನ್ಯಾಯಸಮ್ಮತ ಪಾಲನ್ನು ನೀಡುವಂತೆ ಬಲವಾಗಿ ಆಗ್ರಹಿಸಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು. ಎಂದು ಒತ್ತಾಯಿಸಿದರು.
ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ಎಸ್ಸಿಪಿ/ಟಿಎಸ್ಪಿ ನಿಧಿಯ ದುರುಪಯೋಗ ತಡೆಯಬೇಕು. ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದ್ದ ಮೀಸಲು ಹಣವನ್ನು ಮತ್ತೆ ಈ ನಿಧಿಗೆ ಮರು ಭರ್ತಿ ಮಾಡಬೇಕು. ಎಲ್ಲ ಹಣ ಸೂಚಿತ ಉದ್ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಸಮುದಾಯದ ಯುವಜನರ ಉದ್ಯೋಗ ಸೃಷ್ಟಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಮೀಸಲಾಗಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಪ್ಪ ಹೊಸ್ಕಾರ್, ಸುನಂದಾ, ದೇವಿ, ಗೋಪಾಲ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಫೆಬ್ರವರಿ 28| ರಾಷ್ಟ್ರೀಯ ವಿಜ್ಞಾನ ದಿನಾಚರಣೆ |ಸರ್ ಸಿ.ವಿ.ರಾಮನ್Janashakthi Media