ಅಭಿವೃದ್ಧಿ ನೆಪದಲ್ಲಿ ಅಸ್ಮಿತೆಯ ಅಳಿಸಲು ಹುನ್ನಾರ

ಬಾನುಗೊಂದಿ ಲಿಂಗರಾಜು

ಶಿಲ್ಪಕಲೆಗೆ ಹೆಸರಾದಂತೆ ಹಾಸನ ತಂಪಾದ ವಾತಾವರಣಕ್ಕೂ ಪ್ರಸಿದ್ಧ. ಬಡವರ ಊಟಿ ಎಂದೇ ಕರೆಸಿಕೊಳ್ಳುವ ಹಾಸನ ಜಿಲ್ಲೆಯಲ್ಲಿ ಅವೈಜ್ಞಾನಿಕವಾಗಿ, ಮನಬಂದಂತೆ ಕಾಮಗಾರಿಗಳನ್ನು ನಡೆಸುತ್ತಿರುವುದು ಹೊಸದೇನಲ್ಲ. ಜನರ ವಿರೋಧವಿದ್ದರೂ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕಾಂಕ್ರೀಟೀಕರಣ ಮಾಡುವುದನ್ನು ಆಳುವವರು ಪರಿಗಣಿಸುತ್ತಿಲ್ಲ.

ಇಲ್ಲಿನ ಚನ್ನಪಟ್ಟಣ ಕೆರೆ ಒಡೆದು ಬಸ್ ನಿಲ್ದಾಣ ಕಟ್ಟಲಾಯಿತು. ಬ್ರಿಟಿಷರ ಕಾಲದಲ್ಲಿ ಹಾಸನ ಸುತ್ತಮುತ್ತ ಶ್ರೀಗಂಧ ಕಿತ್ತು ಸಂಗ್ರಹಿಸುತ್ತಿದ್ದ ಗಂಧದ ಕೋಠಿಯನ್ನು ತೆಗೆದು ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಈ ಎರಡೂ ಕಾಮಗಾರಿಗೆ ಜನರ ವಿರೋಧವನ್ನು ಅಂದಿನ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಪರಿಗಣಿಸಲಿಲ್ಲ. ಈಗ ಇಂದಿನ ಶಾಸಕ ಬಿಜೆಪಿಯ ಪ್ರೀತಂ ಜೆ.ಗೌಡ ಕೂಡ ಹಾಸನ ನಗರದ ಶ್ವಾಸಕೋಶ ಎಂದೇ ಹೆಸರಾದ ಮಹಾರಾಜ ಪಾರ್ಕ್‌ ಅನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಕಾಂಕ್ರೀಟ್ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.

ಮಹಾರಾಜ ಪಾರ್ಕಿಗಿದೆ ಐತಿಹಾಸಿಕ ಮಹತ್ವ

ಮಹಾರಾಜ ಪಾರ್ಕ್ ಎಂದರೆ, ಮೈಸೂರು ರಾಜ್ಯದಲ್ಲಿ ಅಭಿವೃದ್ಧಿಪರ್ವಕ್ಕೆ ಕಾರಣವಾದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಸನ ನಗರಕ್ಕೆ ಭೇಟಿ ನೀಡಿದ್ದರು. 1920ರ ಸುಮಾರಿಗೆ ಹಾಸನಕ್ಕೆ ಆಗಮಿಸಿದ್ದ ಅವರು ಅಂದಿನ ಹಾಸನದ ಹೊರವಲಯದಲ್ಲಿ 15 ಎಕರೆಯಷ್ಟು ಜಾಗವನ್ನು ಉದ್ಯಾನವನಕ್ಕೆ ಮೀಸಲಿಟ್ಟು ಅಭಿವೃದ್ಧಿಗಾಗಿ 1000 ರೂ. ನೀಡಿದ್ದರು. ನಾಲ್ವಡಿ ಅವರ ರಾಜ್ಯಭಾರದ ಕೊನೆಯಲ್ಲಿ ಅಂದರೆ, 1938ರಲ್ಲಿ ಈ ಉದ್ಯಾನವನವನ್ನು ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಇನ್ನಷ್ಟು ಅಭಿವೃದ್ಧಿಗೊಳಿಸಿ ಹಾಸನ ನಗರಕ್ಕೆ ಸಮರ್ಪಿಸಿದ್ದರು. ಅಂದು ಎರಡು ಸಾವಿರಕ್ಕೂ ಕಡಿಮೆಯಿದ್ದ ಹಾಸನ ಜನತೆಗೆ 15 ಎಕರೆಯಷ್ಟು ಉದ್ಯಾನವನ್ನು ನೀಡಿದ್ದ ಮಹಾರಾಜರ ನೆನಪಿಗಾಗಿ ಅವರ ಹೆಸರನ್ನೇ ಇಡಬೇಕು ಎಂಬುದು ಜನತೆಯ ಅಪೇಕ್ಷೆಯಾಗಿತ್ತು. ಆದರೆ ತೀವ್ರವಾಗಿದ್ದ ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದ ಗಾಂಧಿವಾದಗಳ ಒತ್ತಾಯಕ್ಕೆ ಮಹಾರಾಜ ಪಾರ್ಕ್ ಎಂದು ಹೆಸರಿಡಲಾಯಿತು.

ಸ್ವಾತಂತ್ರ್ಯದ ನಂತರ ಹಾಸನ ಪುರಸಭೆಯು ನಿರ್ವಹಣೆ ಹೊಣೆ ಹೊತ್ತಿತು. ನಂತರ ನಗರಸಭೆಯ ಸ್ವಾಧೀನಕ್ಕೆ ಬಂದಿತು. ನಿರ್ವಹಣೆಯ ಹೊಣೆ ಹೊತ್ತ ಆರಂಭದಲ್ಲಿ ನೀರಿನ ಕಾರಂಜಿ, ಆಸನಗಳು, ಕಲ್ಲಿನ ಬ್ಯಾಂಡ್‌ಸ್ಟಾಂಡ್‌ಗಳು, ವಾಕಿಂಗ್ ಪಾತ್ ಅನ್ನು ನಿರ್ಮಿಸಲಾಗಿತ್ತು. ನಂತರ ಅಲ್ಲಿಗೆ ಮಕ್ಕಳು ಆಟವಾಡುವ ಸಾಮಗ್ರಿಗಳನ್ನು ಅಳವಡಿಸಲಾಯಿತು. ಜಿಂಕೆ ಮತ್ತಿತರ ಪ್ರಾಣಿಗಳನ್ನು ಪಾರ್ಕಿಗೆ ಕರೆತರಲಾಯಿತಾದರೂ ಕಾನೂನಿನ ಕಾರಣಕ್ಕಾಗಿ ಹಾಸನದ ಹೊರವಲಯದ ಗೆಂಡೇಕಟ್ಟೆ ಅರಣ್ಯಕ್ಕೆ ಬಿಡಲಾಯಿತು.

ನಗರಸಭೆಯು ಕಾಲಕಾಲಕ್ಕೆ ಜನರ ಬೇಡಿಕೆಯಂತೆ ಕೆಲ ಕಾಮಗಾರಿಗಳನ್ನು ಮಾಡಿದೆ. ವಾಯುವಿಹಾರಕ್ಕೆ ಕಿರುದಾರಿ, ಹೂ ಗಿಡಗಳನ್ನು ಬೆಳೆಸಿ ಕಾರಂಜಿಯನ್ನು ದುರಸ್ತಿ ಮಾಡಲಾಗುತ್ತಿತ್ತು.

ಖಾಸಗೀಕರಣದ ಹುನ್ನಾರ

ಸದ್ಯ ಪಾರ್ಕಿನಲ್ಲಿ ಯೋಗ ಕೇಂದ್ರ, ಪುರಾತತ್ವ ಇಲಾಖೆಯ ಮ್ಯೂಸಿಯಂ, ಈಜುಕೊಳ, ಮತ್ಸ್ಯಾಲಯ ಮತ್ತು ಎರಡು ಕ್ರೀಡಾಂಕಣಗಳಿವೆ. ಈಗ ಅವುಗಳ ಜೊತೆಗೆ ಮಹಿಳೆಯರ ಈಜುಕೊಳ ಮತ್ತು ಬಟ್ಟೆ ಬದಲಿಸುವ ಕೊಠಡಿ, ವಾಲಿಬಾಲ್ ಮತ್ತು ಷಟಲ್ ಬಾಲ್‌ಬ್ಯಾಡ್ಮಿಂಟನ್ ತಲಾ ಎರಡು ಕ್ರೀಡಾಂಕಣಗಳು, ಜಿಮ್‌ಗಳು, 6 ಗಜೀಬೋ (ಮೊಗಸಾಲೆಗಳು)ಗಳನ್ನು ಸುಮಾರು 14 ಕೋಟಿ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಜನವಿರೋಧ ವ್ಯಕ್ತವಾಗಿದೆ.

ಉದ್ಯಾನವನ್ನು ಯಥಾಸ್ಥಿತಿಯಲ್ಲಿಯೇ ಉಳಿಯಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಜನವಿರೋಧವನ್ನು ಶಾಸಕರು ನಿರ್ಲಕ್ಷಿಸಿದ್ದರಿಂದ ನಾಗರಿಕರು ಎಲ್ಲಾ ವಿಭಾಗದ ಜನರನ್ನೊಳಗೊಂಡ ವಿಶಾಲವಾದ ವೇದಿಕೆಯನ್ನು ‘ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿ’ ಹೆಸರಿನಲ್ಲಿ ಸಂಘಟಿತರಾಗಿ ಹೋರಾಟವನ್ನು ಆಂದೋಲನ ಮಾದರಿಯಲ್ಲಿ ರೂಪಿಸುತ್ತಿದ್ದಾರೆ. ಉದ್ಯಾನವನದಲ್ಲಿ ಯಾವುದೇ ರೀತಿಯ ಕಟ್ಟಡದ ಕಾಮಗಾರಿಗಳನ್ನು ನಡೆಸಕೂಡದು ಎಂದು ಒತ್ತಾಯಿಸಿರುವ ಸಮಿತಿಯು, ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸದಿದ್ದರೆ ಕಾನೂನಾತ್ಮವಾಗಿ ಮತ್ತು ಪ್ರಜಾಸತ್ತಾತ್ಮಕವಾದ ಹೋರಾಟಗಳ ಮುಖಾಂತರ ತಡೆಯಲು ಸಮಿತಿಯು ಮುಂದಾಗಿದೆ.

ಹಾಸನದ ಮಹಾರಾಜ ಪಾರ್ಕ್ ಮೈಸೂರು ಮಹಾರಾಜರ ಕಾಲದಿಂದ ಇರುವ ಏಕೈಕ ದೊಡ್ಡ ಉದ್ಯಾನವನವಾಗಿದೆ. ನಗರದ ಮಧ್ಯಭಾಗದಲ್ಲಿ ಇರುವ ಇದು, ನಿತ್ಯ ಹಸುರಿನ ಸಸ್ಯ ವೈವಿಧ್ಯತೆ ಹೊಂದಿರುವ ಅತ್ಯಂತ ಹಳೆಯ ಉದ್ಯಾನವನ. ಜನರು ದಣಿವಾರಿಸಿಕೊಳ್ಳುವ, ವಿಶ್ರಾಂತಿ ಪಡೆಯುವ, ಮಕ್ಕಳ ಆಟಗಳಿಗೆ ಮತ್ತು ದೊಡ್ಡವರ ವಾಯು ವಿಹಾರ, ನಡಿಗೆ ವ್ಯಾಯಾಮಗಳಿಗೆ ನೆಚ್ಚಿನ ಅತ್ಯಂತ ಸ್ಥಳವಾಗಿದೆ. ಮಹಾರಾಜ ಉದ್ಯಾನವನ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವ ಪಡೆದಿದೆ. ಇಂತಹ ಹಲವು ಮಹತ್ವಗಳನ್ನು ಹೊಂದಿರುವ ಉದ್ಯಾನವನವನ್ನು ಹಸಿರೀಕಣ ಮಾಡಿ ಹಾಸನ ನಗರಸಭೆಯು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂಬುದು ಸಮಿತಿಯ ಬೇಡಿಕೆ.

‘ಅಭಿವೃದ್ಧಿ’ ಹೆಸರಿನಲ್ಲಿ ಮಹಾರಾಜ ಪಾರ್ಕಿನಲ್ಲಿ ಆಳವಾದ ಗುಂಡಿಗಳನ್ನು ತೆಗೆದು ದೊಡ್ಡ ದೊಡ್ಡ ತಳಪಾಯಗಳನ್ನು ಹಾಕಿ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿಲ್ಲಿಸಲಾಗಿದೆ. ಸಾರ್ವಜನಿಕ ಉದ್ಯಾನವನಗಳಲ್ಲಿ ಈ ರೀತಿಯ ಯಾವುದೇ ಕಾಮಗಾರಿಗಳನ್ನು ಮಾಡುವುದು 1975ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇಲ್ಲಿನ ಕಾಮಗಾರಿಗಳಿಗೆ ಸರ್ಕಾರದ ಮತ್ತು ಇಲಾಖೆಗಳ ಯಾವುದೇ ರೀತಿಯ ಸ್ಪಷ್ಟವಾದ ಆದೇಶ, ಕ್ರಿಯಾ ಯೋಜನೆ ಮತ್ತು ಕಾರ್ಯಾದೇಶಗಳನ್ನು ಇದುವರೆಗೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಈ ಕಾಮಗಾರಿಗಳ ಸಂಬಂಧ ಸರ್ಕಾರದ ಯಾವುದೇ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ. ಈ ಕಾಮಗಾರಿಗಳು ಸಂಪೂರ್ಣವಾಗಿ ಹಾಸನದ ವಿಧಾನಸಭಾ ಕ್ಷೇತ್ರದ ಶಾಸಕರ ಆದೇಶದಂತೆ ನಡೆಯುತ್ತಿದೆ ಎಂಬುದು ಸಮಿತಿಯ ಗೌರವಾಧ್ಯಕ್ಷ, ಅಂತರರರಾಷ್ಟ್ರೀಯ ಖ್ಯಾತಿ ಪಡೆದ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಆರೋಪ.

`ಅಭಿವೃದ್ಧಿ’ ಎಂಬ ಕಟ್ಟುಕತೆಗಳಿಗೆ ಮರುಳಾಗಿ ಹಾಸನದ ನಾಗರಿಕರು ಈಗಾಗಲೇ ಚನ್ನಪಟ್ಟಣ ಕೆರೆ, ಹೈಸ್ಕೂಲ್ ದೊಡ್ಡ ಮೈದಾನ ಮತ್ತು ಐತಿಹಾಸಿಕ ಗಂಧದಕೋಠಿಯನ್ನು ಕಳೆದುಕೊಂಡಾಗಿದೆ. ಆ ಸಂದರ್ಭದಲ್ಲಿ ಉಂಟಾದ ಸಾರ್ವಜನಿಕ ಪ್ರತಿರೋಧ ಮತ್ತು ಸಂಘಟನೆಗಳ ಹೋರಾಟಗಳನ್ನೂ ಲೆಕ್ಕಿಸದೆ ಅಂದಿನ ಸರ್ಕಾರ ಮತ್ತು ಜನ ಪ್ರತಿನಿಧಿಗಳು ʻಅಭಿವೃದ್ಧಿ’ಯ ಹೆಸರಿನಲ್ಲಿ ಕೈಗೊಂಡ ಕಾಮಗಾರಿಗಳ ಪರಿಣಾಮ ನಗರದ ಜನರು ಈಗಲೂ ಅನುಭವಿಸುತ್ತಿದ್ದಾರೆ. ಈಗ ನಗರದ ದೊಡ್ಡ ಉದ್ಯಾನವನವನ್ನೇ ಈಗಿನ ಶಾಸಕರು ನಾಶಪಡಿಸಲು ಹೊರಟಿದ್ದಾರೆ ಎಂಬುದು ಸಮಿತಿಯ ಕಾರ್ಯಾಧ್ಯಕ್ಷ ಧರ್ಮೇಶ್ ಅವರ ಆರೋಪ.

ಶಾಸಕರು ಸಮಿತಿಯ ಅಭಿಪ್ರಾಯಗಳನ್ನು ಪರಿಗಣಿಸುತ್ತಿಲ್ಲ. ಹಾಸನ ನಗರದ ʻಅಭಿವೃದ್ಧಿ’ಯ ಹೆಸರಿನಲ್ಲಿ ಹಿಂದಿನವರು ನಡೆದುಕೊಂಡದ್ದಕ್ಕಿಂತಲೂ ತೀವ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ಮಹಾರಾಜ ಪಾರ್ಕಿನಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಅಲ್ಲಿ ಜನರು ಕೂರಲು ಗಜೀಬೊ’ (ಮೊಗಸಾಲೆ) ಮತ್ತು ಆಟದ ಅಂಕಣಗಳನ್ನು ಮಾತ್ರ ಮಾಡಲಾಗುತ್ತಿದೆ ಎಂದು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ʻಮಹಾರಾಜ ಪಾರ್ಕ್ ಉಳಿಸಿ’ ಎನ್ನುತ್ತಿರುವವರನ್ನು ಅಭಿವೃದ್ಧಿ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಹೋರಾಟದ ವಿರುದ್ಧವಾಗಿ ಪ್ರತಿ ಹೋರಾಟ ನಡೆಸುವಂತೆ ನೋಡಿಕೊಳ್ಳುತ್ತಿದ್ದಾರೆ.

ಆದರೆ ಮಹಾರಾಜ ಪಾರ್ಕ್‌ ಉಳಿಸಿ ಸಮಿತಿಯು ಈಗ ಮಾಡುತ್ತಿರುವ ʻಅಭಿವೃದ್ಧಿ’ ಹೆಸರಿನ ಕಾಂಕ್ರೀಟೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಾರ್ವಜನಿಕ ಉದ್ಯಾನವನಗಳಲ್ಲಿ ಹಸಿರೀಕರಣ ಹೆಚ್ಚಿಸಿ ಸಸ್ಯ ವೈವಿಧ್ಯತೆಗೆ ಹೆಚ್ಚಿನ ಅವಕಾಶ ನೀಡಿ ಉದ್ಯಾನವನಗಳ ಸೌಂದರ್ಯವನ್ನು ಹೆಚ್ಚಿಸಿ ಜನರು ವಿರಮಿಸಲು ಮತ್ತು ವಿಹಾರ ನಡೆಸಲು ಬೇಕಾದ ಅನುಕೂಲಗಳನ್ನು ಒದಗಿಸುವುದನ್ನು ಮಾತ್ರ ಅಭಿವೃದ್ಧಿ ಎನ್ನಲಾಗುತ್ತದೆ. ಮಹಾರಾಜ ಪಾರ್ಕಿನಲ್ಲಿ ಇರುವ ಮರಗಳನ್ನು ಕಡಿದು ಮಾಡುತ್ತಿರುವ ಹತ್ತಾರು ʻಗಜೀಬೊ’ಗಳು ವಾಲಿಬಾಲ್‌, ಶೆಟಲ್‌, ಟೆನಿಸ್ ಕೋರ್ಟುಗಳು  ಮತ್ತು ಜಿಮ್‌ಗಳು ಹೆಸರಿನಲ್ಲಿ ನಡೆಸುತ್ತಿರುವ ಕಟ್ಟಡ ಕಾಮಗಾರಿಗಳನ್ನು ಅಭಿವೃದ್ಧಿ ಎನ್ನಲಾಗುವುದಿಲ್ಲ ಮತ್ತು ಖಂಡಿತವಾಗಿಯೂ ಈ ಮಾದರಿಯ ಅಭಿವೃದ್ಧಿ’ಗೆ ನಮ್ಮ ವಿರೋಧವಿದೆ ಎಂಬುದು ಸಮಿತಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಅವರ ಸ್ಪಷ್ಟ ನುಡಿ.

ಶಾಸಕರ ಹಠವೇಕೆ

ಮಹಾರಾಜ ಪಾರ್ಕಿನಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಇಡೀ ಹಾಸನದ ಜನತೆಯ ಶೇ.95ಕ್ಕೂ ಜನರ ವಿರೋಧದ ನಡುವೆಯೂ ಪಾರ್ಕಿನಲ್ಲಿ ‘ಅಭಿವೃದ್ಧಿ’ ಮಾಡಲು ಹಠ ಹಿಡಿದಿರುವುದೇಕೆ…..

ಚನ್ನಪಟ್ಟಣ ಕೆರೆ ಅಭಿವೃದ್ಧಿಗೆಂದು ಬಂದ 144 ಕೋಟಿ ರೂಪಾಯಿ ಹಣವನ್ನು ಹಾಸನ ನಗರದ ಉದ್ಯಾನವನಗಳ ಅಭಿವೃದ್ದಿಗೆಂದು ವಿಭಾಗಿಸಿದ್ದು, ಅದರಲ್ಲಿ ಮಹಾರಾಜ ಪಾರ್ಕಿಗೆ 14.40 ಕೋಟಿ ರೂ. ಗಳನ್ನು  ಕಾವೇರಿ ನೀರಾವರಿ ನಿಗಮ ನಿಯಮಿತದ ಮೂಲಕ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಗುತ್ತಿಗೆ ಕಂಪನಿಯೊಂದು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಶಾಸಕರು ತಮ್ಮ ಪರಮಾಪ್ತರೊಬ್ಬರಿಗೆ ಉಪಗುತ್ತಿಗೆ ಕೊಡಿಸಿದ್ದಾರೆ. ಹೀಗಾಗಿ ಪರಮಾಪ್ತರಿಗೋಸ್ಕರ ಹಠ ಸಾಧಿಸುತ್ತಿದ್ದಾರೆ ಎಂಬುದು ಹಾಸನದ ತುಂಬಾ ಹರಿದಾಡುತ್ತಿರುವ ಮಾಹಿತಿ.

ಶಾಸಕ ಪ್ರೀತಮ್ ಗೌಡ ಜನಾಭಿಪ್ರಾಯಕ್ಕೆ ವಿರುದ್ದವಾಗಿ ಉದ್ಯಾನವನ್ನು ಕಾಂಕ್ರೀಟಿಕರಣ ಮಾಡಲು ಹೊರಟಿರುವುದು ಮತ್ತು ಅದನ್ನು ಹಠಕ್ಕೆ ಬಿದ್ದು ಸಮರ್ಥಿಸಿ ಯಾರೂ ಬಂದರೂ ನಿಲ್ಲಿಸುವುದಿಲ್ಲ ಎಂದು ಉಡಾಫೆಯಿಂದ ಮಾತನಾಡುವುದು ಒಬ್ಬ ಜನಪ್ರತಿನಿಧಿಯ ಲಕ್ಷಣವಲ್ಲ. ಜನರ ಭಾವನೆಗಳಿಗೆ ಬೆಲೆ ಕೊಡಿ… ಜನ ವಿರೋಧಿ ಆಗಬೇಡಿ…. ಎಂದು ಜನ ಸಲಹೆ ನೀಡುತ್ತಿದ್ದಾರೆ. ಆದರೆ ಜನರ ಸಲಹೆಗೆ ಕುರುಡಾಗಿರುವ ಶಾಸಕರ ಧಿಮಾಕಿನ ವರ್ತನೆಗೆ ಜನರು ಕಾನೂನಿನ ಮೂಲಕ ಉತ್ತರ ನೀಡಲು ಸಿದ್ಧತೆ ನಡೆಸಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾಯ್ದುನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *