ಕೇರಳ: ಕೊಚ್ಚಿಯ ಮಾಲ್‌ನ ಮಹಿಳಾ ಶೌಚಾಲಯದಲ್ಲಿ ಮಹಿಳೆಯಂತೆ ವೇಷ ಧರಿಸಿ ಗುಟ್ಟಾಗಿ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಕಲಮಸ್ಸೆರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಶಂಕಿತ ಆರೋಪಿಯನ್ನು ಕಣ್ಣೂರಿನ ಕರಿವೆಲ್ಲೂರಿನ ಅಭಿಮನ್ಯು ಎಂದು ಗುರುತಿಸಲಾಗಿದ್ದು, ಕೊಚ್ಚಿ ಇನ್ಫೋಪಾರ್ಕ್‌ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ವರದಿಯಾಗಿದೆ.
ಆರೋಪಿಯು ಮಹಿಳಾ ಶೌಚಾಲಯದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. “ಅಭಿಮನ್ಯು ಮಂಗಳವಾರ ಕೊಚ್ಚಿಯ ಲುಲು ಮಾಲ್‌ಗೆ ಪ್ರವೇಶಿಸಿ ನಂತರ ಮಾಲ್ ಒಳಗೆ ಬುರ್ಖಾ ಧರಿಸಿದ್ದನು. ತರುವಾಯ ಮಹಿಳೆಯರ ಶೌಚಾಲಯ ಕೋಣೆಗೆ ಪ್ರವೇಶಿಸಿ ಪೆಟ್ಟಿಗೆಯೊಳಗೆ ಕ್ಯಾಮೆರಾ ಹೊಂದಿದ ಮೊಬೈಲ್ ಫೋನ್ ಅನ್ನು ಇರಿಸಿ, ಕ್ಯಾಮೆರಾದ ಲೆನ್ಸ್‌ಗಾಗಿ ಪೆಟ್ಟಿಗೆಯಲ್ಲಿ ರಂಧ್ರವನ್ನು ಮಾಡಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಬಿಜೆಪಿ ಪ್ರಚಾರದಲ್ಲಿ ನಿರತವಾಗಿದೆ:ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಆರೋಪ
ಆರೋಪಿ ಬಾತ್ ರೂಮ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿದ್ದು, ಮಾಲ್‌ನ ಸೆಕ್ಯೂರಿಟಿ ಗಾರ್ಡ್‌ಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾಗಿ ಪೊಲೀಸರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ವಿಡಿಯೋ ರೆಕಾರ್ಡರ್ ಸ್ವಿಚ್ ಆನ್ ಮಾಡಿ ಕ್ಯಾಮೆರಾವನ್ನು ಅಡಗಿಸಿಟ್ಟಿರುವುದು ಕಂಡುಬಂದಿದೆ. ಪೊಲೀಸರು ಆತನನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಹಲವು ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಂಧನಕ್ಕೊಳಗಾದ ನಂತರ ಅಭಿಮನ್ಯು ತಾನು ಲೆಸ್ಬಿಯನ್ ಎಂದು ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊದಲ್ಲಿ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದಿಟ್ಟಿರುವುದು ದಾಖಲಾಗಿದೆ.
ವಿಡಿಯೊ ನೋಡಿ: ಮೂರು ದಶಕಗಳಲ್ಲಿ ಧರ್ಮಸ್ಥಳ, ಬೆಳ್ತಂಗಡಿಯಲ್ಲಿ ನಡೆದ ಅಸಹಜ ಸಾವುಗಳ ತನಿಖೆಗೆ ಖಾವಂದರು ಒತ್ತಾಯಿಸುತ್ತಿಲ್ಲವೇಕೆ?