ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆ ವಿರುದ್ಧ ಪ್ರಾಂತ ರೈತ ಸಂಘ ಪ್ರತಿಭಟನೆ

ತುಮಕೂರು: ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ಖಂಡಿಸಿ ಹಾಗೂ ಬಗರ್ ಹುಕಂ ಸಾಗುವಳಿದಾರರ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ 36 ಗಂಟೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಹತ್ತಾರು ವರ್ಷಗಳಿಂದ ಮೂರು -ನಾಲ್ಕು ತಲೆಮಾರುಗಳಿಂದ ಬಗರ್ ಹುಕಂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗಂಗಯ್ಯನಪಾಳ್ಯ ಹಾಗೂ ಸುತ್ತಮುತ್ತಲಿನ ರೈತರನ್ನು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸಿತು.

ಕೋವಿಡ್  ನಂತರ ರೈತರು ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಸಂಘಟಿತರಾಗಿ ತಮ್ಮ ಭೂಮಿ ಪಡೆಯುವ ಹೋರಾಟದಲ್ಲಿ ತೊಡುಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ರೈತರ ಭೂಮಿಗೆ ಬೇಲಿ ಹಾಕಿ ರೈತರಲ್ಲಿ  ಭಯ ಹುಟ್ಟಿಸಲು ನಡೆಸಿದ ಪ್ರಯತ್ನಕ್ಕೆ ರೈತರು ವಿರೋಧ ವ್ಯಕ್ತಪಡಿಸಿದರು ಮತ್ತು ಜೆಸಿಬಿಗೆ ಅಡ್ಡವಾಗಿ ನಿಂತು  ಸತತ 36 ಗಂಟೆಗಳ ಹಗಲು ರಾತ್ರಿ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಸಿಬಿ ತಂದು ಪೊಲೀಸ್ ರಕ್ಷಣೆಯಲ್ಲಿ ರೈತರ ಫಸಲು ಧ್ವಂಸ ಮಾಡುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಠೇಂಕಾರವನ್ನು ರೈತರ ಒಗ್ಗಟ್ಟು ಪ್ರದರ್ಶಿಸಿ ಇಲಾಖೆಯ ಕ್ರಮಕ್ಕೆ ತಡೆಯೊಡ್ಡಿದ್ದಾರೆ.

ಈ ಕೂಡಲೇ ಜಿಲ್ಲಾಧಿಕಾರಿಗಳು ಬಗರ್ ಹುಕಂ ಸಾಗುವಳಿ ಸಕ್ರಮಕ್ಕೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ರೈತರ ಭೂಮಿ ಹಕ್ಕನ್ನು ರಕ್ಷಿಸಬೇಕು. ಅರಣ್ಯ ಅಧಿಕಾರಿಗಳ ಕಿರುಕುಳ ನಿಲ್ಲಿಸಬೇಕು ಇಲ್ಲವಾದರೆ ರೈತರ ಆಕ್ರೋಶ ಸ್ಪೋಟಗೊಳ್ಳಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಿಳಿಸಿದೆ.

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಆರ್ ಎಸ್ ಚನ್ನಬಸವಣ್ಣ, ಜಿಲ್ಲಾ ಕಾರ್ಯದರ್ಶಿ ಸಿ ಅಜ್ಜಪ್ಪ, ಸಿಐಟಿಯು ಜಿಲ್ಲಾ ಮುಖಂಡ ಸುಬ್ರಹ್ಮಣ್ಯ, ಮುಖಂಡರಾದ ದೊಡ್ಡನಂಜಯ್ಯ, ನರಸಿಂಹಮೂರ್ತಿ, ಬಸವರಾಜು ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *