ಬೆಂಗಳೂರು: ರೈಲ್ವೆ ಪೊಲೀಸ್ ಎಡಿಜಿಪಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.
ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಎಎಪಿ ಕಚೇರಿಯಲ್ಲಿ ಇಂದು ಆಪ್ ನಾಯಕ ಹಾಗೂ ದೆಹಲಿಯ ಮುಖ್ಯಮಂತ್ರಿಯೂ ಆಗಿರುವ ಅರವಿಂದ ಕೇಜ್ರಿವಾಲ್ ಅವರಿಂದ ಸದಸ್ಯತ್ವ ಸ್ವೀಕರಿಸಿದ್ದಾರೆ.
ರೈಲ್ವೆ ಪೊಲೀಸ್ ಎಡಿಜಿಪಿ ಹುದ್ದೆಗೆ ಸ್ವಯಂ ನಿವೃತ್ತಿ ಕೋರಿ ಸೆಪ್ಟೆಂಬರ್ 2021ರಲ್ಲಿ ಭಾಸ್ಕರ್ ರಾವ್ ರಾಜೀನಾಮೆ ಸಲ್ಲಿಸಿದ್ದರು. ನಿರ್ಧಾರ ಪುನರ್ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡಿತ್ತು. ಆದರೆ ಈ ನಿರ್ಧಾರದಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಸರ್ಕಾರ ರಾಜೀನಾಮೆ ಅಂಗೀಕರಿಸಿತ್ತು.
ಇದನ್ನು ಓದಿ: ಆಮ್ ಆದ್ಮಿ ಪಕ್ಷದತ್ತ ಭಾಸ್ಕರ್ ರಾವ್ ಹೆಜ್ಜೆ?
1954ರಂದು ಜನಿಸಿದ ಭಾಸ್ಕರ್ ರಾವ್ ಅವರು 2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು. ಈ ವೇಳೆ ಕರ್ನಾಟಕದ ಆಪ್ ಪಕ್ಷದ ಉಸ್ತುವಾರಿ ಮತ್ತು ಶಾಸಕ ದೀಲಿಪ್ ಪಾಂಡೆ, ಕರ್ನಾಟಕದ ರಾಜ್ಯಾಧ್ಯಕ್ಷ ಪೃಥ್ವಿ ರಡ್ಡಿ, ಪ್ರಧಾನ ಕಾರ್ಯದರ್ಶಿ ಸಂಚಿತ್ ಸಾವನಿ, ಎಂ ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಸವನಗುಡಿಯಿಂದ ಸ್ಪರ್ಧೆ : 2023 ರ ವಿಧಾನಸಭಾ ಚುನಾವಣೆಯಲ್ಲಿ ಭಾಸ್ಕರ್ ರಾವ್ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಬಿಎಂಪಿ ಚುನಾವಣೆ, ತಾಪಂ, ಜಿಪಂ ಚುನಾವಣೆಯ ಸಂಪೂರ್ಣ ಹೊಣೆಯನ್ನು ಭಾಸ್ಕರ್ ರಾವ್ ಗೆ ನೀಡಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.