ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ(ಎಎಪಿ) ಇಂದಿನವರೆಗೂ ಯಾರಿಗೆ ಬೆಂಬಲ ನೀಡಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆದಿರುವ ಪಕ್ಷವು ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಆಮ್ ಆದ್ಮಿ ಪಕ್ಷವು ವಿರೋಧ ಪಕ್ಷಗಳ ರಾಷ್ಟ್ರಪತಿ ಚುನಾವಣೆಯ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿವುದಾಗಿ ಘೋಷಣೆ ಮಾಡಿದೆ. ಇದೇ ಸಂದರ್ಭದಲ್ಲಿ ʻನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ನಾವು ಯಶವಂತ್ ಸಿನ್ಹಾ ಅವರಿಗೆ ಮತ ಹಾಕುತ್ತೇವೆʼ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಪಂಜಾಬ್ ಸಂಸದ ರಾಘವ್ ಚಡ್ಡಾ ಮತ್ತು ಶಾಸಕ ಅತಿಶಿ ಸೇರಿದಂತೆ ಇತರ ಸದಸ್ಯರು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎಎಪಿ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸರ್ಕಾರ ಹೊಂದಿರುವ ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷವಾಗಿದೆ. ಎಎಪಿ ದೆಹಲಿಯ ಮೂವರು ಸೇರಿದಂತೆ ಎರಡು ರಾಜ್ಯಗಳ 10 ರಾಜ್ಯಸಭಾ ಸಂಸದರನ್ನು ಹೊಂದಿದೆ. ಅಲ್ಲದೆ, ಈ ಪಕ್ಷವು ಪಂಜಾಬ್ನಲ್ಲಿ 92, ದೆಹಲಿಯಲ್ಲಿ 62 ಮತ್ತು ಗೋವಾದಲ್ಲಿ ಇಬ್ಬರು ಶಾಸಕರು ಸೇರಿದಂತೆ ಒಟ್ಟು 156 ಶಾಸಕರನ್ನು ಹೊಂದಿದೆ.
ಆಮ್ ಆದ್ಮಿ ಪಕ್ಷದ ಜೊತೆಗೆ, ತೆಲಂಗಾಣದ ಆಡಳಿತಾರೂಢ ಪಕ್ಷ ಟಿಆರ್ಎಸ್ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ತನ್ನ ಬೆಂಬಲವನ್ನು ನೀಡಿದೆ. ತೆಲಂಗಾಣದಲ್ಲಿ ಬಿಜೆಪಿ ಕಾಲಿಡುವ ಯತ್ನದ ನಡುವೆಯೇ ಎನ್ಡಿಎಗೆ ನಿಕಟವಾಗಿರುವ ಟಿಆರ್ಎಸ್ ಈ ಕ್ರಮ ಕೈಗೊಂಡಿದೆ. ಜುಲೈ 21ರಂದು ಮತ ಎಣಿಕೆ ನಡೆಯಲಿದೆ.