ಪ್ರತಿಯೊಂದು ಚುನಾವಣೆಯೂ ನವ ಭಾರತ ಸಾಗುವ ಹೊಸ ದಿಕ್ಕನ್ನು ತೋರುತ್ತಿರುವುದು ಸ್ಪಷ್ಟ
ಭಾರತದ ಅಧಿಕಾರ ರಾಜಕಾರಣಕ್ಕೆ ಹೊಸ ದಿಕ್ಕು ದೆಸೆ ಕಾಣಿಸುವ ಸಣ್ಣ ಬೆಳಕಿಂಡಿಯನ್ನು ತೆರೆಯುವ ಹಾದಿಯಲ್ಲಿರುವ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (AAP) ರಾಜಧಾನಿ ದೆಹಲಿಯಲ್ಲಿ ಹತ್ತು ವರ್ಷಗಳ ಆಳ್ವಿಕೆಯ ನಂತರ ಪರಾಭವಗೊಂಡಿದೆ. ಗೆದ್ದೇ ಗೆಲ್ಲುವ ಎಂಬ ಛಲ ಮತ್ತು ಧೋರಣೆಗೂ , ಚುನಾವಣೆ ಗೆಲ್ಲುವುದಕ್ಕಾಗಿ ಯಾವುದೇ ಮಾರ್ಗವನ್ನು ಅನುಸರಿಸುತ್ತೇವೆ ಎಂಬ ದಾರ್ಷ್ಟ್ಯಕ್ಕೂ ಇರುವ, ಇರಬೇಕಾದ ಸೂಕ್ಷ್ಮ ವ್ಯತ್ಯಾಸವನ್ನು ಇತ್ತೀಚಿನ ಚುನಾವಣೆಗಳು ಸ್ಪಷ್ಟವಾಗಿ ಜನತೆಯ ಮುಂದಿಡುತ್ತಿವೆ. ಆದರೆ ಆಮ್ ಆದ್ಮಿಯಂತಹ ಪಕ್ಷಗಳಿಗೆ ಇದು ಅರ್ಥವಾದಂತೆ ಕಾಣುತ್ತಿಲ್ಲ. ಮತ್ತೊಂದೆಡೆ 27 ವರ್ಷಗಳ ನಂತರ ದೆಹಲಿ ಗದ್ದುಗೆಯನ್ನು ಏರಲು ಯಶಸ್ವಿಯಾಗಿರುವ ಬಿಜೆಪಿಗೆ ತನ್ನ ಮಾರುಕಟ್ಟೆ ಆರ್ಥಿಕತೆ ಹಾಗೂ ಹಿಂದುತ್ವ ರಾಜಕಾರಣವನ್ನು ಮತ್ತಷ್ಟು ಚುರುಕುಗೊಳಿಸಲು ಈ ಚುನಾವಣೆಗಳು ನೆರವಾಗುತ್ತವೆ.
–ನಾ ದಿವಾಕರ
ರಾಜಕಾರಣದ ಅಂತಿಮ ಗುರಿ ಚುನಾವಣೆಯೇ ಆಗುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪಿತವಾಗಿರುವ ಒಂದು ನಂಬಿಕೆ. ಆದರೆ ಚುನಾವಣೆಗಳಿಂದಾಚೆಗೂ ದೇಶದ ತಳಸಮಾಜದ ವಂಚಿತ ಜನತೆ ಒಂದು ರಾಜಕೀಯ ವ್ಯವಸ್ಥೆಯನ್ನು ಕಾಣುವ ತವಕದಿಂದಿರುತ್ತಾರೆ. ಬಹುಶಃ ಭಾರತದಲ್ಲಿ ಮುಖ್ಯವಾಹಿನಿಯ ಎಲ್ಲ ಪಕ್ಷಗಳೂ ಈ ಕಟುಸತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿವೆ. ಹಾಗಾಗಿಯೇ ದಿನದಿಂದ ದಿನಕ್ಕೆ ತತ್ವ, ಸಿದ್ಧಾಂತ ಮತ್ತು ಪಕ್ಷ ನಿಷ್ಠೆ ಎನ್ನುವುದು ಸಾಂದರ್ಭಿಕವಾಗಿ ಬದಲಾಗುವ ಅಥವಾ ತ್ಯಜಿಸುವ ರಾಜಕೀಯ ಪರಿಕರಗಳಾಗಿ ಪರಿಣಮಿಸಿವೆ. ದೆಹಲಿ ಚುನಾವಣೆಗಳಿಗೆ ಕೆಲವೇ ದಿನಗಳ ಮುನ್ನ ಆಮ್ ಆದ್ಮಿ ಪಕ್ಷದ ಏಳು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದು ಈ ವಿದ್ಯಮಾನದ ಒಂದು ಝಲಕ್. ರಾಜಕೀಯ ನಾಯಕರಿಗೆ, ಜನಪ್ರತಿನಿಧಿಗಳಿಗೆ ಅಧಿಕಾರ ಕೇಂದ್ರವೇ ಅಂತಿಮ ತಾಣ ಎನಿಸಿದಾಗ ಇದು ಸಹಜ.
ಪದಚ್ಯುತಗೊಂಡ ಪರ್ಯಾಯ ಮಾದರಿ
ಈ ವ್ಯತ್ಯಯಗಳ ನಡುವೆಯೇ ಆಮ್ ಆದ್ಮಿ ಪಕ್ಷವು ಚುನಾವಣೆಗಳ ಪರಾಭವದ ಮೂಲಕ ತನ್ನ ಪ್ರಧಾನ ರಾಜಕೀಯ ಭೂಮಿಕೆಯನ್ನು ಕಳೆದುಕೊಂಡಿದೆ. ಅತಿಯಾದ ಆತ್ಮವಿಶ್ವಾಸ ಮತ್ತು ಕೇಜ್ರೀವಾಲ್ ಸುತ್ತ ನಿರ್ಮಾಣವಾಗಿದ್ದ ಏಕವ್ಯಕ್ತಿ ಪ್ರಭಾವಳಿ ಆಮ್ ಆದ್ಮಿಯ ಸೋಲಿಗೆ ಪ್ರಧಾನ ಕಾರಣಗಳೆಂದು ಹೇಳಬಹುದು. ಆಡಳಿತ ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ಆಂದೋಲನದ ಭೂಮಿಕೆಯ ಮೇಲೆ ನಿರ್ಮಿಸಲಾದ ಒಂದು ಪ್ರಾದೇಶಿಕ ಪಕ್ಷಕ್ಕೆ, ತನ್ನ ಪ್ರಾಮಾಣಿಕ ನಡೆ-ನುಡಿ ಮತ್ತು ಆಡಳಿತಾತ್ಮಕ ನೀತಿಗಳು ಮುಖ್ಯ ಪ್ರಣಾಳಿಕೆಗಳಾಗಬೇಕು. ಆದರೆ ಕೇಜ್ರಿವಾಲ್ ವಿರುದ್ಧ ಮಾಡಲಾದ ಅಬಕಾರಿ ಹಗರಣ ಮತ್ತಿತರ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಜೈಲು ಸೇರಿದರೂ ಅಲ್ಲಿಂದಲೇ ಆಡಳಿತ ನಡೆಸುವ ದಾರ್ಷ್ಟ್ಯ ಪ್ರಾಮಾಣಿಕತೆ ಎನಿಸಿಕೊಳ್ಳುವುದಿಲ್ಲ. ಅದು ಕೇವಲ ವ್ಯಕ್ತಿ ಕೇಂದ್ರಿತ ಅಧಿಕಾರ ರಾಜಕಾರಣದ ಪರಾಕಾಷ್ಠೆಯಾಗಿ ಮಾತ್ರ ಕಾಣಲು ಸಾಧ್ಯ.
ಇದನ್ನೂ ಓದಿ: ಹಾವೇರಿ| ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸೃಷ್ಟಿ ಪಾಟೀಲ ರಾಜೀನಾಮೆ
ಆಡಳಿತಾತ್ಮಕವಾಗಿ ಆಮ್ ಆದ್ಮಿ ಸರ್ಕಾರ ಜಾರಿಗೊಳಿಸಿದ ಕೆಲವು ನೀತಿಗಳು ನಿಜಕ್ಕೂ ಸಮಾಜಮುಖಿಯಾಗಿದ್ದು, ಉಳಿದ ಸರ್ಕಾರಗಳಿಗೆ ಮಾದರಿಯಾಗಿದ್ದು ವಾಸ್ತವ. ಮುಖ್ಯವಾಗಿ ಸರ್ಕಾರಿ, ಪಬ್ಲಿಕ್ ಶಾಲೆಗಳ ಅಭಿವೃದ್ಧಿ, ನವೀಕರಣ ಮತ್ತು ಆಧುನಿಕೀಕರಣ ಇಡೀ ದೇಶದ ಗಮನ ಸೆಳೆದಿತ್ತು. ಮನೆಗಳಿಗೆ ಸಮರ್ಪಕವಾದ ಉಚಿತ ವಿದ್ಯುತ್ ಸಂಪರ್ಕ, ನೀರಿನ ಸರಬರಾಜು, ಉಚಿತ ಸಾರಿಗೆ ಇತ್ಯಾದಿ ಉಪಕ್ರಮಗಳು ಪ್ರಶಂಸಾರ್ಹವಾಗಿದ್ದುದು ಸತ್ಯ. ಆದರೆ ಇವು ಆಡಳಿತ ಮಾದರಿಗಳಾಗುತ್ತವೆಯೇ ಹೊರತು, ತಳಸಮಾಜವು ಎದುರಿಸುತ್ತಿರುವ ದೈನಂದಿನ ಸಂಕೀರ್ಣ ಹಾಗೂ ಜಟಿಲ ಸಮಸ್ಯೆಗಳಿಗೆ ಪೂರ್ಣ ಪರಿಹಾರವಾಗುವುದಿಲ್ಲ. ಅಸಮಾನತೆ ಅಗಾಧವಾಗಿರುವ ಭಾರತೀಯ ಸಮಾಜದಲ್ಲಿ ತಳಸಮಾಜದ, ಅದರೊಳಗಿನ ಕೆಳಸ್ತರದ ವಂಚಿತ ಜನಸಮೂಹಗಳಿಗೆ ಇದು ತಲುಪುವುದೂ ಇಲ್ಲ.
ಕೇಜ್ರಿವಾಲ್ ಸರ್ಕಾರ ಪರಿಚಯಿಸಿದ ʼಉಚಿತ-ಫ್ರೀಬಿ-ರೇವ್ಡಿʼ ಎಂದು ವ್ಯಾಖ್ಯಾನಿಸಲ್ಪಡುವ ಗ್ಯಾರಂಟಿ ಯೋಜನೆಗಳು ಒಂದು ಹಂತದವರೆಗೆ ಮಧ್ಯಮ ವರ್ಗಗಳನ್ನೂ ಸಂತೃಪ್ತಿಪಡಿಸಲು ಸಾಧ್ಯ. ಆದರೆ ಸರ್ಕಾರಗಳ ಗ್ಯಾರಂಟಿ ಯೋಜನೆಗಳ ಮೂಲಕ ವಂಚಿತ ಜನರಿಗೆ ಒದಗಿಸುವ ಸೌಕರ್ಯಗಳು ಅಥವಾ ಸಾಧನಗಳು ಬಾಹ್ಯ ಸ್ವರೂಪಿ (Peripheral) ಆಗಿದ್ದು, ನಿತ್ಯ ಬದುಕಿನ ನಿರ್ವಹಣೆಗೆ ಪೂರಕವಾಗಿ ಪರಿಣಮಿಸುವುದೇ ಹೊರತು, ಜನಸಾಮಾನ್ಯರ ಭವಿಷ್ಯದ ಜೀವನವನ್ನು ಸುಸ್ಥಿರಗೊಳಿಸುವ ಒಂದು ಭೂಮಿಕೆ ಆಗುವುದಿಲ್ಲ. ಏಕೆಂದರೆ ಭಾರತ ಅನುಸರಿಸುತ್ತಿರುವ, ಆಮ್ ಆದ್ಮಿ ಪಕ್ಷವೂ ಅನುಮೋದಿಸುವ, ನವ ಉದಾರವಾದಿ ಆರ್ಥಿಕ ನೀತಿಗಳು, ಈ ಕೆಳಸ್ತರದ ಸಮಾಜವನ್ನು ಹೆಚ್ಚುಹೆಚ್ಚು ಶೋಷಣೆಗೊಳಪಡಿಸುವ ವಿಧಾನಗಳನ್ನು ರೂಪಿಸುತ್ತಲೇ ಇರುತ್ತದೆ. ತಾತ್ಕಾಲಿಕ ಶಮನ ರೋಗ ನಿವಾರಣೆಗೆ ಮದ್ದಾಗಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಬಿಡಿಸಿ ಹೇಳಬೇಕಿಲ್ಲ.
ಗ್ಯಾರಂಟಿಗಳೇ ಅಂತಿಮ ಗುರಿಯಾದಾಗ
ಆದಾಗ್ಯೂ ಗ್ಯಾರಂಟಿ ಯೋಜನೆಗಳು ಭಾರತದ ರಾಜಕಾರಣದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿವೆ. ಇತರ ರಾಜ್ಯಗಳಂತೆಯೇ ದೆಹಲಿ ಚುನಾವಣೆಗಳಲ್ಲೂ ಬಿಜೆಪಿ-ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪೈಪೋಟಿಯ ಮೇಲೆ ಗ್ಯಾರಂಟಿಗಳನ್ನು ಘೋಷಿಸಿವೆ. ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ, ಹಿಂದಿನ ಸರ್ಕಾರದ ಎಲ್ಲ ಗ್ಯಾರಂಟಿಗಳನ್ನು ಮುಂದುವರೆಸುವುದೇ ಅಲ್ಲದೆ, ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದಾಗಿ ಘೋಷಿಸಿತ್ತು. ಇದು ಸಹಜವಾಗಿಯೇ ಸಾಮಾನ್ಯ ಮತದಾರರನ್ನು ಆಕರ್ಷಿಸಿರುತ್ತದೆ. ತಳಸಮಾಜದಲ್ಲಿ ಈ ಗ್ಯಾರಂಟಿಗಳ ನಿರೀಕ್ಷೆ ಹೆಚ್ಚಾಗುತ್ತಿರುವುದು, ಅಲ್ಲಿ ಜೀವನಾವಶ್ಯ ಅವಕಾಶ-ಸೌಲಭ್ಯ ವಂಚಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ಸಂಕೇತ ಅಲ್ಲವೇ ? ಈ ಸಂಖ್ಯೆಯನ್ನು ಕಡಿಮೆ ಮಾಡಲು ಅಗತ್ಯವಾದ ದೀರ್ಘಕಾಲೀನ, ದೂರಗಾಮಿ ಆರ್ಥಿಕ ನೀತಿಗಳು ಪರ್ಯಾಯ ರಾಜಕಾರಣ ಎನಿಸಿಕೊಳ್ಳುತ್ತದೆ. ಆಮ್ ಆದ್ಮಿ ಇಂತಹ ಯಾವುದೇ ಸೂತ್ರವನ್ನು ಜನರ ಮುಂದಿಡಲಿಲ್ಲ.
ಕೇಂದ್ರ ಬಿಜೆಪಿ ಸರ್ಕಾರವೂ ಈ ಸೂತ್ರವನ್ನು ರೂಪಿಸಲಾಗುವುದಿಲ್ಲ. ಏಕೆಂದರೆ ಭಾರತದ ಅರ್ಥವ್ಯವಸ್ಥೆಯನ್ನು ನಿರ್ದೇಶಿಸುತ್ತಿರುವ ನವ ಉದಾರವಾದಿ ಮಾರುಕಟ್ಟೆ ನೀತಿಗಳು ಇದನ್ನು ಆಗಗೊಡುವುದಿಲ್ಲ. ಹಾಗಾಗಿ ಜನಜೀವನವನ್ನು ಮೇಲ್ದರ್ಜೆಗೇರಿಸುವ ದೃಷ್ಟಿಯಿಂದ ರಾಜಕೀಯ ಪೈಪೋಟಿಯ ಬದಲು ಗ್ಯಾರಂಟಿ ಯೋಜನೆಗಳ ಪೈಪೋಟಿಯೇ ಪ್ರಧಾನ ಪ್ರಣಾಳಿಕೆಯಾಗಿಬಿಡುತ್ತದೆ. ಲೋಕಸಭೆಯನ್ನೂ ಸೇರಿದಂತೆ ಇತ್ತೀಚಿನ ಎಲ್ಲ ಚುನಾವಣೆಗಳಲ್ಲೂ ಇದನ್ನು ಗಮನಿಸಬಹುದು. ಆದರೆ ತಳಸಮಾಜದ ಜನತೆ, ತಮ್ಮ ಸುಸ್ಥಿರ ಭವಿಷ್ಯಕ್ಕಾಗಿ, ಈ ಶಮನಕಾರಿ ಕ್ರಮಗಳನ್ನೂ ದಾಟಿ ಆಡಳಿತ ವ್ಯವಸ್ಥೆಯಿಂದ, ಚುನಾಯಿತ ಸರ್ಕಾರದಿಂದ ಚಿಕಿತ್ಸಕ ಗುಣದ ಆರ್ಥಿಕ ನೀತಿಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಇದನ್ನು ಮರೆಮಾಚಲು ಬಿಜೆಪಿ ತನ್ನ ಹಿಂದುತ್ವದ ಬತ್ತಳಿಕೆಯಿಂದ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಪರ್ಯಾಯ ರಾಜಕಾರಣವನ್ನು ಪ್ರತಿಪಾದಿಸುವ ಆಮ್ ಆದ್ಮಿಯಂತಹ ಪಕ್ಷಗಳು ಇದನ್ನು ದಾಟಿ ಯೋಚಿಸಬೇಕಾಗುತ್ತದೆ. ಯೋಚಿಸಲಿಲ್ಲ ಎನ್ನುವುದು ಕಟು ಸತ್ಯ.
ಹಾಗಾಗಿಯೇ ಆಮ್ ಆದ್ಮಿಯ ಹತ್ತು ವರ್ಷದ ಆಡಳಿತದಿಂದ ದೆಹಲಿ ಜನತೆ ಭ್ರಮನಿರಸನಗೊಂಡಿದ್ದಾರೆ. ಪಕ್ಷವು ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಶೇಕಡಾ 10ರಷ್ಟು ಮತಗಳನ್ನು ಕಳೆದುಕೊಂಡಿರುವುದು ಇದರ ಸಂಕೇತವಾಗಿದೆ. ಮೀಸಲು ಕ್ಷೇತ್ರಗಳಲ್ಲೂ ಕಳೆದ ಬಾರಿ ಹನ್ನೆರಡೂ ಕ್ಷೇತ್ರಗಳನ್ನು ಗೆದ್ದಿದ್ದ ಆಮ್ ಆದ್ಮಿ ಈ ಬಾರಿ ನಾಲ್ಕು ಕಡೆ ಸೋಲನುಭವಿಸಿದೆ. ಕಡುಬಡವರು, ಬಡವರು, ಮಧ್ಯಮ ವರ್ಗಗಳು, ಶ್ರೀಮಂತರು ಈ ನಾಲ್ಕೂ ವರ್ಗಗಳಲ್ಲಿ ಆಮ್ ಆದ್ಮಿಯ ಮತ ಹಂಚಿಕೆಯ ಪ್ರಮಾಣ ಕುಸಿದಿರುವುದು ಇದನ್ನು ಮತ್ತಷ್ಟು ದೃಢೀಕರಿಸುತ್ತದೆ. ತಳಸ್ತರದ ಸಮಾಜವನ್ನೇ ಉದ್ದೇಶಿಸಿ ಜಾರಿಗೊಳಿಸುವ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ದೆಹಲಿಯ ಶೇಕಡಾ 19ರಷ್ಟು ಬಡಜನತೆ ಆಮ್ ಆದ್ಮಿಯಿಂದ ವಿಮುಖವಾಗಿ ಬಿಜೆಪಿಯತ್ತ ವಾಲಿದೆ. ಇದಕ್ಕೆ ಪೂರಕವಾಗಿ ಬಿಜೆಪಿಯ ಭಾವನಾತ್ಮಕ ಹಿಂದುತ್ವ ರಾಜಕಾರಣವೂ ಪ್ರಮುಖ ಕಾರಣವಾಗಿ ಕಾಣುತ್ತದೆ.
2011-12ರ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಸಂಗ್ರಾಮದ ಫಲಾನುಭವಿಯಾಗಿ ತಮ್ಮ ರಾಜಕೀಯ ವರ್ಚಸ್ಸು ಮತ್ತು ಅಸ್ತಿತ್ವವನ್ನು ರೂಪಿಸಿಕೊಂಡ ಕೇಜ್ರಿವಾಲ್ ಪ್ರಪ್ರಥಮವಾಗಿ, ತಮ್ಮ ಸರ್ಕಾರವನ್ನು ಕಳಂಕರಹಿತವಾಗಿ ನಡೆಸುವ ಪ್ರಯತ್ನಗಳನ್ನು ನಡೆಸಬೇಕಿತ್ತು. ಬಂಡವಾಳಶಾಹಿ ಆರ್ಥಿಕತೆಯು ಅದಕ್ಕೆ ಅವಕಾಶ ನೀಡುವುದಿಲ್ಲವಾದರೂ, ಆಡಳಿತದಲ್ಲಿ ಹಾಗೂ ಅಧಿಕಾರಶಾಹಿಯಲ್ಲಿ ಭ್ರಷ್ಟತೆಯ ಬೇರುಗಳನ್ನು ಕಿತ್ತು ಹಾಕುವುದರ ಮೂಲಕ ಇದು ಸಾಧ್ಯವಾಗಬಹುದಿತ್ತು. ಆದರೆ ಆಮ್ ಆದ್ಮಿ ಸರ್ಕಾರ ಹಲವು ಹಗರಣಗಳ ಕಳಂಕವನ್ನು ಮೆತ್ತಿಸಿಕೊಂಡಿದ್ದೇ ಅಲ್ಲದೆ, ಅಬಕಾರಿ ನೀತಿಯ ಪ್ರಕರಣದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸೆರೆವಾಸ ಅನುಭವಿಸಬೇಕಾಯಿತು. ಇದರ ಹಿಂದೆ ಇರಬಹುದಾದ ಕೇಂದ್ರ ಸರ್ಕಾರದ ಪಿತೂರಿ, ಹುನ್ನಾರ, ದ್ವೇಷ ರಾಜಕಾರಣ ಈ ಆರೋಪಗಳೆಲ್ಲವೂ ಸಮಾಜದ ಹಿತವಲಯವನ್ನು ತಲುಪುವುದೇ ಹೊರತು, ತಳಸಮಾಜದ ವಂಚಿತ ಜನರನ್ನು ಸಮಾಧಾನಪಡಿಸುವುದಿಲ್ಲ. ಅಲ್ಲಿನ ನಿರೀಕ್ಷೆಗಳು ಭಿನ್ನವಾಗಿರುತ್ತವೆ.
ಸ್ವ ವಿಮರ್ಶೆಯ ಕೊರತೆ
ಹತ್ತು ವರ್ಷಗಳ ಅಧಿಕಾರಾವಧಿ ಯಾವುದೇ ಸರ್ಕಾರದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವುದು ಸಹಜ. ಆದರೆ ಮತದಾರರು ಗೆದ್ದೇ ಗೆಲ್ಲಿಸುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸ, ನೈತಿಕ ಭ್ರಷ್ಟತೆಗೆ ಎಡೆಮಾಡಿಕೊಡಬಾರದು. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಈ ಪಾಠವನ್ನು ಕಲಿತಿದೆ. ಆದರೆ ಆಮ್ ಆದ್ಮಿ ಕಲಿಯಲಿಲ್ಲ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಅಸಹಕಾರ ಎಷ್ಟೇ ಇದ್ದರೂ, ಆಡಳಿತಾತ್ಮಕವಾಗಿ ಅದನ್ನು ಸರಿದೂಗಿಸುವ ಕ್ಷಮತೆಯನ್ನು ಕೇಜ್ರಿವಾಲ್ ತೋರಲಿಲ್ಲ. ಬದಲಾಗಿ ತಮ್ಮ ಸರ್ಕಾರದ ವೈಫಲ್ಯಗಳಿಗೆಲ್ಲಾ ಕೇಂದ್ರವನ್ನೇ ದೂರುವ ಮಾರ್ಗವನ್ನು ಅನುಸರಿಸಿದ್ದರು. ಯಮುನಾ ನದಿಗೆ ವಿಷ ಬೆರೆಸಲಾಗಿದೆ ಎಂಬ ಅಪ್ರಬುದ್ಧ ಆರೋಪವನ್ನೂ ಸೇರಿದಂತೆ, ಬಿಜೆಪಿ ಆಮ್ ಆದ್ಮಿ ಮಾಡಿದ ಹಲವು ಗುರುತರ ಆರೋಪಗಳು ದೆಹಲಿಯಂತಹ ಆಧುನಿಕ ನಗರದ ಜನತೆಯನ್ನು ಆಕರ್ಷಿಸುವುದಿಲ್ಲ. ಬದಲಾಗಿ ಹಿಂದೆ ಸರಿಯುವಂತೆ ಮಾಡುತ್ತದೆ. ಈ ರಾಜಕೀಯ ಸೂಕ್ಷ್ಮವನ್ನು ಗ್ರಹಿಸುವಲ್ಲಿ ಕೇಜ್ರಿವಾಲ್ ವಿಫಲರಾಗಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿಯ ಪರಾಭವಕ್ಕೆ ಮತ್ತೊಂದು ಮೂಲ ಕಾರಣ, ಬಹಳ ಪರಿಣಾಮಕಾರಿಯಾಗಿ ರಾಷ್ಟ್ರಮಟ್ಟದಲ್ಲಿ ಒಂದು ಪ್ರಭಾವಶಾಲಿ ಪರ್ಯಾಯದ ವೇದಿಕೆಯಾಗಿದ್ದ INDIA ಮೈತ್ರಿಕೂಟವನ್ನು ನಿರ್ಲಕ್ಷಿಸಿದ್ದು ಮತ್ತು ವಿಭಜಿಸಲು ಪ್ರಯತ್ನಿಸಿದ್ದು. ಪರ್ಯಾಯ ರಾಜಕಾರಣದ ಧ್ಯೇಯ ಹೊಂದಿರುವ ಒಂದು ಪಕ್ಷದಿಂದ ಇದು ಅನಿರೀಕ್ಷಿತವಷ್ಟೇ ಅಲ್ಲ ಅನಪೇಕ್ಷಿತವೂ ಹೌದು. ಇಲ್ಲಿ ಕಾಂಗ್ರೆಸ್ ಪಕ್ಷವೂ ಪಾಠ ಕಲಿಯಬೇಕಿದೆ. ಸತತ ಮೂರನೆ ಬಾರಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಪಕ್ಷದ ಮತಹಂಚಿಕೆ ಶೇಕಡಾ 2ರಷ್ಟು ಹೆಚ್ಚಾಗಿದ್ದರೂ, ಶೇಕಡಾ 6.3ಕ್ಕೆ ಸೀಮಿತವಾಗಿದೆ. ಇದು ಪಕ್ಷವು ತಳಮಟ್ಟದಲ್ಲಿ ಜನಮನ್ನಣೆ ಕಳೆದುಕೊಂಡಿರುವುದರ ಸೂಚಕ ಅಲ್ಲವೇ ? ಹಾಗಿದ್ದಾಗ್ಯೂ ಆಮ್ ಆದ್ಮಿಯನ್ನು ದೂರೀಕರಿಸಿ, ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಕನಿಷ್ಠ 12 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಸೋಲಿಗೆ ಕಾರಣವಾಗಿದೆ.
ಒಂದು ರಾಷ್ಟ್ರೀಯ ಪಕ್ಷವಾಗಿ ಶತಮಾನದ ಚರಿತ್ರೆ ಇರುವ ಕಾಂಗ್ರೆಸ್ ನಾಯಕರಿಗೆ ತಾವು ನಿಂತ ನೆಲ ಕುಸಿಯುತ್ತಿದೆ ಅಥವಾ ಶಿಥಿಲವಾಗಿದೆ ಎಂಬ ಭಾವನೆಯೇ ಇಲ್ಲವೆಂದು ತೋರುತ್ತದೆ. ಕಳೆದ ಲೋಕಸಭೆಯ ಚುನಾವಣೆಗಳಷ್ಟೇ ಅಲ್ಲದೆ ಮಹಾರಾಷ್ಟ್ರ, ಹರಿಯಾಣಗಳಲ್ಲೂ ಇದು ಸ್ಪಷ್ಟವಾಗಿ ಗೋಚರಿಸಿದೆ. ಆದರೆ ಆತ್ಮಾವಲೋಕನದ ಪರಿಜ್ಞಾನವನ್ನೇ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ತನ್ನ ಸ್ವಪ್ರತಿಷ್ಠೆಗಾಗಿ, ಸಾಧ್ಯವಾಗಬಹುದಾದ ಸಂಭಾವ್ಯ ಪರ್ಯಾಯಗಳನ್ನು ಭಂಗಗೊಳಿಸುತ್ತಲೇ ಇದೆ. ದೆಹಲಿ ಚುನಾವಣೆಯಿಂದಾದರೂ ಕಾಂಗ್ರೆಸ್ ಈ ಪಾಠ ಕಲಿಯಬಹುದೇ ? ಶತಮಾನದ ನಡಿಗೆಯ ನಂತರ ಬಿಟ್ಟುಕೊಡುವ ಔದಾರ್ಯ ಅಥವಾ ಉದಾತ್ತತೆಯನ್ನೇ ರೂಢಿಸಿಕೊಳ್ಳದ ಒಂದು ರಾಜಕೀಯ ಪಕ್ಷ ತನ್ನದೇ ಸ್ವಯಂ ನಿರ್ಮಿತ ಕೋಶದೊಳಗೆ ಸೇರಿಕೊಂಡು, ಇಲ್ಲವಾಗಿಬಿಡುವ ಅಪಾಯವನ್ನು ಕಾಂಗ್ರೆಸ್ ಎದುರಿಸುತ್ತಿದೆ. ದೆಹಲಿ ಇದನ್ನು ಸ್ಪಷ್ಟವಾಗಿ ಎತ್ತಿತೋರಿಸಿದೆ.
ಭವಿಷ್ಯದ ದೃಷ್ಟಿಯಿಂದ !!!
ಭಾರತದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ಕೇವಲ ಸಂವಿಧಾನದ ಸುತ್ತಲಿನ ಬೇಲಿಗಳಲ್ಲಿ ಬಂಧಿಸಿ ನೋಡಲಾಗುವುದಿಲ್ಲ. ದೇಶದ ಬಹುತ್ವ ಸಂಸ್ಕೃತಿಯನ್ನು ಹಂತಹಂತವಾಗಿ ಶಿಥಿಲಗೊಳಿಸಿ ತನ್ನ ಹಿಂದೂ ರಾಷ್ಟ್ರದ ಕನಸನ್ನು ನನಸಾಗಿಸುವ ದೂರಗಾಮಿ ದೃಷ್ಟಿಯಿಂದಲೇ ಬಿಜೆಪಿ ತನ್ನ ರಾಜಕೀಯ ನೀತಿಗಳನ್ನೂ ರೂಪಿಸುತ್ತಿದೆ. ಇದನ್ನು ಬೆಂಬಲಿಸುವ ಸಮಯಸಾಧಕ ಪ್ರಾದೇಶಿಕ ಪಕ್ಷಗಳು ಹೆಚ್ಚಾಗುತ್ತಿರುವಂತೆಯೇ, ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಆರಾಧಿಸುವ ತಳಸಮುದಾಯಗಳ ಜನಪ್ರತಿನಿಧಿಗಳೂ ಹೆಚ್ಚಾಗುತ್ತಿದ್ದಾರೆ. ಇದು ಅಧಿಕಾರ ರಾಜಕಾರಣದ ವ್ಯಾಮೋಹ ಮತ್ತು ವೈಯುಕ್ತಿಕ ಭವಿಷ್ಯದ ಪ್ರಶ್ನೆಯಾಗುವುದರಿಂದ, ರಾಜಕೀಯ ತತ್ವ ಸಿದ್ಧಾಂತಗಳು ಅನುಷಂಗಿಕ (Secondary) ಆಯ್ಕೆಯಾಗಿಬಿಡುತ್ತದೆ. ಪರ್ಯಾಯ ರಾಜಕಾರಣದ ವಾರಸುದಾರರಾಗಿ ಮೂಡಿಬಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷ ಈ ದೃಷ್ಟಿಯಿಂದ ಪರ್ಯಾಯ ಮಾರ್ಗಗಳನ್ನು ರೂಪಿಸಿಯೇ ಇಲ್ಲ. ಬದಲಾಗಿ ಬಿಜೆಪಿ ಅನುಸರಿಸುವ ಮತಾಧಾರಿತ ನೀತಿಗಳು ಮತ್ತು ಅಲ್ಪಸಂಖ್ಯಾತ ವಿರೋಧಿ ಆಡಳಿತ ನೀತಿಗಳಿಗೆ ಸಮಾನಾಂತರವಾಗಿ ತನ್ನದೇ ಆದ ಪ್ರತಿಸೂತ್ರಗಳನ್ನು ರೂಪಿಸುತ್ತಿದೆ.
ಈ ದೃಷ್ಟಿಯಿಂದ ನೋಡಿದಾಗ ದೆಹಲಿ ಚುನಾವಣಾ ಫಲಿತಾಂಶಗಳು ಕೇವಲ ಆಮ್ ಆದ್ಮಿ ಅಥವಾ ಕಾಂಗ್ರೆಸ್ ಪಕ್ಷದ ಹಿನ್ನಡೆಯಾಗಿ ಕಾಣುವುದಿಲ್ಲ. ಬದಲಾಗಿ ಭಾರತಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಬಹುತ್ವ ಸಂಸ್ಕೃತಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಪ್ರಜಾಸತ್ತಾತ್ಮಕ ಪರ್ಯಾಯ ರಾಜಕಾರಣಕ್ಕೆ ಹಿನ್ನಡೆಯಾಗಿ ಕಾಣುತ್ತದೆ. ಹಿಂದುತ್ವವನ್ನು ವಿರೋಧಿಸುವುದೆಂದರೆ ಹಿಂದೂ ವಿರೋಧಿ ಎಂದು ಭಾವಿಸಬೇಕಿಲ್ಲ. ಬದಲಾಗಿ ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು, ಬಹುತ್ವವನ್ನು ಹಾಗೂ ಅದನ್ನು ಪ್ರತಿನಿಧಿಸುವ ಬಹುಸಂಖ್ಯೆಯ ತಳಸಮುದಾಯಗಳನ್ನು ಒಳಗೊಳ್ಳುವುದೇ ಆಗಿರುತ್ತದೆ. ಹಾಗೆಯೇ ಈ ತಳಸಮಾಜವನ್ನು ದುಸ್ಥಿತಿಗೆ ದೂಡುತ್ತಲೇ ಇರುವ ನವ ಉದರವಾದಿ ಕಾರ್ಪೋರೇಟ್ ಆರ್ಥಿಕತೆಯನ್ನು ವಿರೋಧಿಸುವುದೂ ಆಗಿರುತ್ತದೆ.
ಈ ಎರಡು ಪ್ರಮೇಯಗಳನ್ನು ಆಧರಿಸಿ ಮುನ್ನಡೆಯದ ಯಾವುದೇ ರಾಜಕೀಯ ಕೂಟ ಭಾರತಕ್ಕೆ ಅತ್ಯವಶ್ಯವಾಗಿರುವ “ಪರ್ಯಾಯ ರಾಜಕಾರಣ”ವನ್ನು ಸೃಷ್ಟಿಸುವುದಿಲ್ಲ. ಪ್ರತಿಯೊಂದು ಚುನಾವಣೆಯೂ ಇದನ್ನು ನಿರೂಪಿಸುತ್ತಿದೆ. ಆದರೆ ಕಾಂಗ್ರೆಸ್ ಆಗಲೀ, ಆಮ್ ಆದ್ಮಿ ಇತರ ಪಕ್ಷಗಳೇ ಆಗಲೀ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಒಳಗೊಳ್ಳುವ ರಾಜಕಾರಣ (Inclusive Politics) ಮೂಲ ಧ್ಯೇಯವಾಗದ ಹೊರತು ಇದು ಸಾದ್ಯವಾಗುವುದೂ ಇಲ್ಲ. ಈ ಧ್ಯೇಯ ಸಾಧನೆಗೆ ಸ್ವ ವಿಮರ್ಶೆ, ಆತ್ಮಾವಲೋಕನವೇ ಪ್ರಥಮ ಆದ್ಯತೆ ಮತ್ತು ಆಯ್ಕೆ ಎನ್ನುವುದು ಚರಿತ್ರೆ ನಮಗೆ ಕಲಿಸಿರುವ ಅಮೂಲ್ಯ ಪಾಠ. ಈ ಚಾರಿತ್ರಿಕ ಪಾಠವನ್ನು ಕಾಂಗ್ರೆಸ್ ಇನ್ನಿತರ ವಿರೋಧ ಪಕ್ಷಗಳು ಕಲಿತಿವೆಯೇ? ಮುಂಬರುವ ಚುನಾವಣೆಗಳಿಗೆ ಮುನ್ನ ಈ ಪ್ರಶ್ನೆಗೆ ಜನಸಾಮಾನ್ಯರು ಸ್ಪಷ್ಟ ಉತ್ತರ ಬಯಸುತ್ತಾರೆ. ಉತ್ತರ ಬರುವುದೇ ಕಾದುನೋಡೋಣ.
(ಹೆಚ್ಚಿನ ಅಂಕಿ ಅಂಶಗಳಿಗಾಗಿ Capital gains for BJP – The Hindu 9 ಫೆಬ್ರವರಿ 2005 ನೋಡಿ)
ಇದನ್ನೂ ನೋಡಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 2020ರ ರದ್ದತಿ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯ…. Janashakthi Media