ಅಭ್ಯರ್ಥಿಗಳ ಆಯ್ಕೆಯಲ್ಲೂ ಅಚ್ಚರಿ ಮೂಡಿಸಿದ ಆಮ್‌ ಆದ್ಮಿ ಪಕ್ಷ; 23 ಕ್ಷೇತ್ರಗಳಿಗೆ ಹೆಸರು ಘೋಷಣೆ

ಬೆಂಗಳೂರು : ವಿಧಾನಸಭೆ ಚುನಾವಣೆ ಸಮಿಪಿಸುಯತ್ತಿರುವ ಬೆನ್ನಲ್ಲೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಎಡಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ, ಆಮ್‌ ಆದ್ಮಿ ಪಕ್ಷ  ಅಭ್ಯರ್ಥಿಗಳ ಪಟ್ಟಿ ಬಿಡೆಗಡೆಗೆ ಸಿದ್ಧತೆ ನಡೆಸಿದ್ದು. ಪದವೀಧರರನ್ನು ಹುಡುಕಿ ಟಿಕೆಟ್‌ ಘೋಷಿಸಲು ಮುಂದಾಗಿದೆ.

ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಆಪ್‌ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಉಳಿದ 5 ಕ್ಷೇತ್ರಗಳಿಗೆ ಪದವೀಧರರ ಹುಡುಕಾಟದಲ್ಲಿದೆ. ರಾಜಧಾನಿಯ ಎಲ್ಲ ಕ್ಷೇತ್ರಗಳಲ್ಲೂ ಎಎಪಿಯಿಂದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ‘ಆಪ್‌’ ಅಭ್ಯರ್ಥಿಗಳ ಮತ ಗಳಿಕೆಯೂ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳುತ್ತಿರುವ ಮುಖಂಡರು, ಅಭ್ಯರ್ಥಿಗಳ ಆಯ್ಕೆಯಲ್ಲೂ ಅಚ್ಚರಿ ಮೂಡಿಸಿದ್ದಾರೆ.ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಎಂ.ಬಿ.ಎ ಪದವೀಧರರು, ಮಾಜಿ ಸೈನಿಕರು, ವೈದ್ಯರು, ವಕೀಲರು, ವಿದೇಶಗಳಲ್ಲಿ ಕೆಲಸ ಮಾಡಿದ್ದವರಿಗೆ ಟಿಕೆಟ್‌ ಘೋಷಿಸಿದೆ. ಆಗಲೇ ಅವರೆಲ್ಲರೂ ಅಖಾಡದಲ್ಲಿ ಪ್ರಚಾರ ನಡೆಸುತ್ತಿದ್ದು ಜೆಡಿಎಸ್‌, ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸವಾಲೊಡ್ಡಲು ತಯಾರಿ ನಡೆಸಿದ್ದಾರೆ.

ಕೆ.ಮಥಾಯ್‌ ಅವರು ಶಾಂತಿನಗರ ಕ್ಷೇತ್ರದ ಅಭ್ಯರ್ಥಿ. ಮಥಾಯ್‌ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ನಿವೃತ್ತ ಕೆಎಎಸ್‌ ಅಧಿಕಾರಿಯೂ ಹೌದು. ಶಾಂತಿನಗರದಲ್ಲಿ ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಸವಾಲು ಹಾಕಲು ತಯಾರಾಗಿದ್ದಾರೆ.

ಇದನ್ನೂ ಓದಿ ವಿಧಾನಸಭೆ ಚುನಾವಣೆ : ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಎಎಪಿ ಪಕ್ಷ 

ಇನ್ನು ಪುಲಿಕೇಶಿ ನಗರದಿಂದ ಸ್ಪರ್ಧಿಸುತ್ತಿರುವ ಸುರೇಶ್‌ ರಾಥೋಡ್‌ ಸಾಫ್ಟ್‌ವೇರ್‌ ಇಂಜಿನಿಯರ್. ವೃತ್ತಿ ಬಿಟ್ಟು ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿ ಎಎಪಿ ಅಭ್ಯರ್ಥಿ. ಸಿ.ವಿ.ರಾಮನ್‌ ನಗರದ ಅಭ್ಯರ್ಥಿ ಮೋಹನ ದಾಸರಿ ಸುರತ್ಕಲ್‌ನಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದಿದ್ದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನಗರದಲ್ಲಿ ಆರುಶಿ ಫೌಂಡೇಶನ್‌ ಸ್ಥಾಪಿಸಿದ್ದಾರೆ. 200 ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

ರಾಜಾಜಿನಗರ ಕ್ಷೇತ್ರದ ಅಭ್ಯರ್ಥಿ ಬಿ.ಟಿ.ರಾಜಣ್ಣ, ಪದ್ಮನಾಭ ನಗರದ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ 36 ವರ್ಷದ ಅಜಯ್‌ಗೌಡ, ಬಿ.ಟಿ.ಎಂ ಲೇಔಟ್‌ನಿಂದ ಕಣಕ್ಕೆ ಇಳಿಯುತ್ತಿರುವ ಶ್ರೀನಿವಾಸ ರೆಡ್ಡಿ ಬಿ.ಇ ಪದವೀಧರರು.

ಬೊಮ್ಮನಹಳ್ಳಿಯಿಂದ ಅಖಾಡಕ್ಕೆ ಇಳಿಯುತ್ತಿರುವ 70 ವರ್ಷದ ಸೀತಾರಾಮ್‌ ಗುಂಡಪ್ಪ ಅವರು, ವಿದೇಶದ ಪ್ರಮುಖ ತೈಲ ಕಂಪನಿಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಸೌದಿ ಅರೇಬಿಯಾ, ಇರಾಕ್‌, ಇರಾನ್‌, ಕತಾರ್‌ನಲ್ಲಿ ಕೆಲಸ ಮಾಡಿದ್ದ ಗುಂಡಪ್ಪ ಅವರನ್ನು ‘ಆಪ್‌’ ಕಣಕ್ಕೆ ಇಳಿಸುತ್ತಿದೆ.

ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಚಿಕ್ಕಪೇಟೆಯ ಅಭ್ಯರ್ಥಿ. ದಾಸರಹಳ್ಳಿ, ಮಹಾಲಕ್ಷ್ಮಿ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರದಲ್ಲೂ ಎಂಬಿಎ, ಎಂ.ಕಾಂ ಪದವಿ ಪಡೆದ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

‘ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರಲು, ಉನ್ನತ ಶಿಕ್ಷಣ ಪಡೆದವರಿಗೇ ಟಿಕೆಟ್‌ ನೀಡಲಾಗುತ್ತಿದೆ’ ಎಂದು ಎಎಪಿ ಅಧ್ಯಕ್ಷ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *