ವೋಟರ್ ಐಡಿಗೆ ಆಧಾರ್ ಲಿಂಕ್ – ವಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಚುನಾವಣಾ ಕಾನೂನು(ತಿದ್ದುಪಡಿ) ಮಸೂದೆ, 2021 ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

ಕಾಂಗ್ರೆಸ್,ಸಿಪಿಐಎಂ, ಡಿಎಂಕೆ, ಎನ್ ಸಿ ಪಿ, ತೃಣಮೂಲ ಕಾಂಗ್ರೆಸ್, ಶಿವಸೇನೆ, ಬಿಎಸ್‌ಪಿ ಬಿಜು ಜನತಾದಳ, ವೈ ಎಸ್ ಆರ್ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಚುನಾವಣಾ ಕಾನೂನು ತಿದ್ದುಪಡಿ ಮಸೂದೆಯನ್ನು ವಿರೋಧಿಸಿವೆ.

ಚುನಾವಣಾ ಕಾನೂನುಗಳ ಮಸೂದೆಯನ್ನು ಆಯ್ಕೆ ಸಮಿತಿಯು ಪರಿಶೀಲಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ. ಚುನಾವಣಾ ಕಾನೂನುಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ಲೋಕಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸದೆ ಅಂಗೀಕರಿಸಿರುವುದನ್ನು ಸಿಪಿಐಎಂ ಪೊಲೀಟ್ ಬ್ಯೂರೋ ಬಲವಾಗಿ ಖಂಡಿಸಿದೆ. ” ಸಂಸತ್ತಿನ ಸದಸ್ಯರಿಗೆ ಚರ್ಚೆಗೆ ಸಮಯ ನೀಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಸಂಸದರು ಯಾವುದೇ ತಿದ್ದುಪಡಿಗಳನ್ನು ತರಲು ಅನುಮತಿಸಲಿಲ್ಲ, ಇದು ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಬೆಳಗ್ಗೆ ಅದನ್ನು ಕೂಲಂಕುಷ ಪರೀಕ್ಷೆಗಾಗಿ ಸಂಸದೀಯ ಆಯ್ಕೆ ಸಮಿತಿಗೆ ಕಳುಹಿಸುವ ಚರ್ಚೆ ನಡೆಯಿತು. ಈ ನಿರ್ಧಾರವನ್ನು ಕೈಬಿಟ್ಟು, ಸರ್ಕಾರವು ಊಟದ ನಂತರ ಪೂರಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿ ಮಸೂದೆಯನ್ನು ಅಂಗೀಕರಿಸಿ ಉದ್ಧಟತನವನ್ನು ಪ್ರದರ್ಶಿಸಿತು ಎಂದು ಸಿಪಿಐಎಂ ಆರೋಪಿಸಿದೆ.

ಈ ಮಸೂದೆಯು ಮತದ ಗೌಪ್ಯತೆಯನ್ನು ಉಲ್ಲಂಘಿಸುವ ಅಪಾಯವನ್ನು ಹೊಂದಿದೆ, ಇದು ರಹಸ್ಯ ಮತದಾನದ ತತ್ವ ಮತ್ತು ಮತದಾರನ ಖಾಸಗಿತನದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂಬುದು ಸಿಪಿಐಎಂ ನ ವಾದವಾಗಿದೆ.

 

ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಆಧಾರ್ ಕಾರ್ಡ್‌ಅನ್ನು ಈ ಹಿಂದೆ ವಾಸಸ್ಥಳದ ಪುರಾವೆಯಾಗಿ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಆಧಾರ್ ಕಾರ್ಡ್ನಲ್ಲಿ ನಮಗೆ ಮನೆಯ ವಿಳಾಸದ ದಾಖಲೆ ಸಿಗುತ್ತದೆ. ಹಾಗಂದ ಮಾತ್ರಕ್ಕೆ ಆಧಾರ್ ಕಾರ್ಡ್ ಪೌರತ್ವದ ಸೂಚಕ ಅಲ್ಲ. ಈ ಕ್ರಮದ ಮೂಲಕ ನೀವು ಈ ದೇಶದ ನಾಗರೀಕರಲ್ಲದವರಿಗೆ ಮತದಾನದ ಹಕ್ಕನ್ನು ನೀಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

ಪ್ರತಿಪಕ್ಷದವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವೆಲ್ಲವೂ ಆಧಾರ ರಹಿತ. ಸರ್ಕಾರವು ನಕಲಿ ಮತದಾನವನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೆ ತರುತ್ತಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಕ್ರಮವನ್ನ ವಿರೋಧ ಪಕ್ಷಗಳು ಬೆಂಬಲಿಸಬೇಕೆ ಹೊರತು ವಿರೋಧಿಸಬಾರದು ಎಂದು ಕೇಂದ್ರ ಸಚಿವ ಕಿರಣ್ ರಿಜುಜು ಹೇಳಿದ್ದಾರೆ.

ಯೋಜನೆಗೆ ಬ್ರೇಕ್‌ ಹಾಕಿದ್ದ ಸುಪ್ರೀಂ ಕೋರ್ಟ್

ವಿಭಿನ್ನ ಸ್ಥಳಗಳಲ್ಲಿ ಒಂದೇ ವ್ಯಕ್ತಿಯ ಬಹು ದಾಖಲಾತಿಗಳ ಸಮಸ್ಯೆಯನ್ನು ನಿಗ್ರಹ ಮಾಡುವ ನಿಟ್ಟಿನಲ್ಲಿ ಮತದಾರರ ಚುನಾವಣಾ ಡೇಟಾದೊಂದಿಗೆ ಯುಐಡಿಎಐ (ಆಧಾರ್) ಸಂಖ್ಯೆಗಳನ್ನು ಲಿಂಕ್ ಮಾಡುವ ಚುನಾವಣಾ ಆಯೋಗದ ಯೋಜನೆಗೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿತ್ತು. ರಾಜ್ಯ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಮಾತ್ರ ಆಧಾರ್ ಅನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ 2015 ರಲ್ಲಿ ಸ್ಪಷ್ಟಪಡಿಸಿತ್ತು.

ಮೇ 17 ರಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಕಳುಹಿಸಲಾದ ಪ್ರಸ್ತಾಪದಲ್ಲಿ ಹೊಸ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಆದ್ಯತೆಯನ್ನು ಹೆಚ್ಚಾಗಿ ಗುರುತು ಮಾಡಿದ್ದಾರೆ. ಆಧಾರ್-ಮತದಾರರ ID ಕಾರ್ಡ್ ಲಿಂಕ್; ನಾಗರಿಕರಿಗೆ 18 ವರ್ಷ ತುಂಬಿದ ತಕ್ಷಣ ಮತದಾರರ ಗುರುತಿನ ಚೀಟಿ ಲಭ್ಯವಾಗುವಂತೆ ಮಾಡುವುದು, ‘ಸೇವಾ ಮತದಾರರ’ ನಿಯಮಗಳು; ಮತ್ತು ಪಾವತಿಸಿದ ಸುದ್ದಿಯನ್ನು ಭ್ರಷ್ಟ ವರದಿ ಎಂದು ಗುರುತು ಮಾಡುವ ಪ್ರಸ್ತಾಪವನ್ನು ಚುನಾವಣಾ ಆಯೋಗದ ನೂತನ ಆಯುಕ್ತ ಸುಶೀಲ್ ಚಂದ್ರ ಮಾಡಿದ್ದರು.

ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್‌ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡುತ್ತಿದೆ. ಸಾಮಾನ್ಯವಾಗಿ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡುವುದಕ್ಕೂ ಮುನ್ನ ಚುನಾವಣಾ ಆಯೋಗ ತಂಡವು ರಾಜ್ಯಗಳಿಗೆ ಭೇಟಿ ನೀಡುತ್ತದೆ. ಮತದಾನ ಪಟ್ಟಿಯನ್ನು ಪರಿಶೀಲಿಸಿ ನವೀಕರಿಸುವ ಕಾರ್ಯ ಮಾಡುತ್ತದೆ.

Donate Janashakthi Media

Leave a Reply

Your email address will not be published. Required fields are marked *