ಬೆಂಗಳೂರು: ಪಾನ್ ಕಾರ್ಡನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಸರಕಾರ ಮಾರ್ಚ್ 31 ವರೆಗೆ ರೂ. 1,000 ದಂಡವನ್ನು ಬಡಜನರಿಂದ ಲೂಟಿ ಮಾಡುತ್ತಿರುವ ಕೇಂದ್ರ ಸರಕಾರದ ಜನವಿರೋಧಿ ಕ್ರಮಕ್ಕೆ ಜನ ಸಾಮಾನ್ಯರ ತೀವ್ರ ವಿರೋಧದಿಂದಾಗಿ ತನ್ನ ಗಡುವನ್ನು ಜೂನ್ 30 ರವರೆಗೆ ಮಾತ್ರ ವಿಸ್ತರಿಸಿದೆ ವಿನಃ ದಂಡದ ಹೆಸರಲ್ಲಿ ಯಥಾರೀತಿ ಸುಲಿಗೆಗೆ ಮುಂದಾಗಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಪಾನ್ ಕಾರ್ಡನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಲು ದಂಡ ರೂಪದಲ್ಲಿ ದುಬಾರಿ ಹಣವನ್ನು ಜನಸಾಮಾನ್ಯರಿಂದ ದೋಚಿ, ಲಾಭ ಮಾಡಿಕೊಳ್ಳಲು ಹೊರಟಿರುವ ಕೇಂದ್ರ ಸರಕಾರ ಬಡವರ ಹಾಗೂ ಮಧ್ಯಮ ವರ್ಗದ ಜನರನ್ನು ಭಯ ಭೀತಿಗೊಳಿಸಿ ಲೂಟಿ ಮಾಡುತ್ತಿರುವ ಕ್ರಮವನ್ನು ಸಹಿಸಲು ಸಾದ್ಯವಿಲ್ಲ ಎಂದಿದ್ದಾರೆ.
ಇದನ್ನು ಓದಿ: ಸಾರ್ವಜನಿಕರು ಎಲ್ಲೆಂದರಲ್ಲಿ ಆಧಾರ್ ಹಂಚಿಕೊಳ್ಳದಿರಿ: ಕೇಂದ್ರ ಸರ್ಕಾರ ಸೂಚನೆ
ಆಧಾರ್ ಇಲ್ಲವೆಂದು, ಆಧಾರ್ ಲಿಂಕ್ ಆಗಿಲ್ಲವೆಂದು ಯಾವುದೇ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ್ಯೂ ದಂಡ ಕಟ್ಟಿ ಲಿಂಕ್ ಮಾಡಲು ಕಠಿಣ ಕ್ರಮಕೈಗೊಂಡಿರುವ ಸರಕಾರ ಜನತೆಗೆ ಎಸಗುತ್ತಿರುವ ದ್ರೋಹವಲ್ಲದೇ ಇನ್ನೇನು? ಈಗಾಗಲೇ ಜಿ.ಎಸ್.ಟಿ ಹೆಸರಿನಲ್ಲಿ ಲೂಟಿ ಮಾಡಿ, ರಾಜ್ಯಗಳಿಗೆ ಸರಿಯಾದ ಪಾಲೂ ಸಹ ಕೊಡದೇ ತನ್ನ ಬೊಕ್ಕಸ ತುಂಬಿಸಿಕೊಂಡಿರುವ ಕೇಂದ್ರದ ಬಿಜೆಪಿ ಸರಕಾರ ಮತ್ತೆ ಪಾನ್ ಕಾರ್ಡ್ ಹೆಸರಿನಲ್ಲಿ ಸುಲಿಗೆ ಹೊರಟಿದೆ ಎಂದು ಆರೋಪಿಸಿದ್ದಾರೆ.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಆಧಾರ್ ಪಾನ್ ಕಾರ್ಡ್ ಲಿಂಕ್ ಹೆಸರಲ್ಲಿ ಸಾಮಾನ್ಯ ಜನರ ಸುಲಿಗೆಗೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಒಂದೆಡೆಯಾದರೆ, ಸರಕಾರದ ಜನವಿರೋಧಿ ನೀತಿಗಳ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಡಿಸೆಲ್, ಪೆಟ್ರೊಲ್, ಅಡುಗೆ ಅನಿಲ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದಾಗಿ ಜನ ಸಾಮಾನ್ಯರರು ದಿನನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಮತ್ತೆ ಪಾನ್ ಕಾರ್ಡ್ ಲಿಂಕ್ ಹೆಸರಲ್ಲಿ ದಂಡ ಕಟ್ಟಬೇಕಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ.
ಇದನ್ನು ಓದಿ: ಎನ್‌ಆರ್‌ಸಿ ಬಿಕ್ಕಟ್ಟು: 27 ಲಕ್ಷ ಜನರಿಗೆ ಆಧಾರ್ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಸಂಸದರು ಈ ಸಮಸ್ಯೆಯ ಕುರಿತು ಜನತೆಯ ಪರವಾಗಿ ಧ್ವನಿ ಎತ್ತಬೇಕಿತ್ತು. ಆದರೆ ಯಾರೊಬ್ಬರೂ ತುಟಿ ಬಿಚ್ಚದಿರುವುದು ಮತ ನೀಡಿ ಆಯ್ಕೆ ಮಾಡಿದ ಜನರಿಗೆ ಮಾಡುತ್ತಿರುವ ಅವಮಾನವಾಗಿದೆ. ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡಲು ಗಡುವು ನೀಡುವುದು ಸರ್ವತಾ ಸರಿಯಲ್ಲ. ಅದರ ಬದಲಾಗಿ ಕೇಂದ್ರ ಸರಕಾರ ಉಚಿತವಾಗಿ ಹಾಗೂ ನಿರಂತರವಾಗಿ ಈ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ಒತ್ತಾಯಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ