ನಿರಂಜನ: ಚಳವಳಿಗಳ ಸಖ್ಯದಲ್ಲಿ ಬೆಳೆದ ಪ್ರಗತಿಶೀಲ ಸಾಹಿತ್ಯದ ಲೋಕದೃಷ್ಟಿ

ಜನ್ಮಶತಮಾನೋತ್ಸವದ ಹೊತ್ತಿನಲ್ಲಿ ಒಂದು ನೆನಪು ನಿರಂಜನ
ಇಪ್ಪತ್ತನೆಯ ಶತಮಾನದ ನಾಲ್ಕು ಮತ್ತು ಐದನೆಯ ದಶಕಗಳ(1943-44) ನಡುವೆ ಹುಸಿಮಿಂಚಿನಂತೆ ಕಾಣಿಸಿ ಕಣ್ಮರೆಯಾದ ಸಾಹಿತ್ಯ ವಿದ್ಯಮಾನ ‘ಪ್ರಗತಿಶೀಲ ಪಂಥ.’ ಇದನ್ನು ಪ್ರಗತಿಶೀಲ ಸಾಹಿತ್ಯ ಚಳವಳಿಯೆಂದು ಕರೆಯಲಾಗಿದೆ. ಆದರೆ ಇಂದು ಅದರ ಒಟ್ಟು ಸ್ವರೂಪವನ್ನು ವಿಮರ್ಶಾತ್ಮಾಕವಾಗಿ ಪರಿಶೀಲಿಸಿದರೆ ಅದನ್ನು ‘ಚಳವಳಿ’ಯೆಂದು ಕರೆಯುವುದು ಕಶ್ಟವೆನ್ನಿಸುತ್ತದೆ. ಚಳವಳಿಗೆ ಒಂದು ಸಂಘಟನಾ ಶಕ್ತಿ ಮತ್ತು ತಾತ್ವಿಕ ಮುನ್ನೋಟಗಳಿರುತ್ತವೆ. ಅಲ್ಲದೆ ಯಾವುದೇ ಜನಚಳವಳಿಗಳು ಹುಟ್ಟಿಸುವ ಸಾಮಾಜಿಕ ಕಂಪನಗಳು ಅಸಂಖ್ಯ. ಆದರೆ ಅಂತಹ ಕಂಪನಗಳನ್ನು ಹುಟ್ಟಿಸಲು ಬೇಕಿದ್ದ ಶಕ್ತಿ ‘ಪ್ರಗತಿಶೀಲ’ ಲೇಖಕರಲ್ಲಿ ಇರಲಿಲ್ಲವೆಂದೇ ಹೇಳಬಹುದು. ಯಾಕೆಂದರೆ, ಚಳವಳಿಗೆ ಬೇಕಾದ ತಾತ್ವಿಕ-ದಾರ್ಶನಿಕ ಕಸುವು ಹೆಚ್ಚಿನ ಪ್ರಗತಿಶೀಲ ಲೇಖಕರಲ್ಲಿ ಇರಲಿಲ್ಲ. ಅಲ್ಲದೆ ಅದು ಗಟ್ಟಿಯಾದ ಸಂಘಟನಾತ್ಮಕ ಶಕ್ತಿಯನ್ನೂ ಹೊಂದಿರಲಿಲ್ಲ.

-ರಂಗನಾಥ ಕಂಟನಕುಂಟೆ

ಮಂಗಳೂರು, ಧಾರವಾಡ ಮುಂತಾದ ಕೆಲವು ಊರುಗಳಲ್ಲಿ ಪ್ರಗತಿಶೀಲ ಲೇಖಕರ ಸಂಘಗಳನ್ನು ಕಟ್ಟಿಕೊಂಡರೂ ಅವು ಹೆಚ್ಚು ಕಾಲ ಕ್ರಿಯಾಶೀಲವಾಗಿ ಉಳಿಯಲಿಲ್ಲ. ಅಂದರೆ ಚಳವಳಿಯನ್ನು ಮುನ್ನಡೆಸಲು ಅಗತ್ಯವಿದ್ದ ಸಂಘಟನಾತ್ಮಕ ವ್ಯವಸ್ಥೆ ಮತ್ತು ಅದನ್ನು ಮುನ್ನಡೆಸುವ ಗಟ್ಟಿಯಾದ ತಾತ್ವಿಕತೆ ಇಲ್ಲದ ಕಾರಣ ಅದು ಚಳವಳಿಯಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಇವೆರಡೂ ಇರಲಿಲ್ಲವೆಂದ ಮೇಲೆ ಯಾವುದೇ ಜನಪರ ಕಾಳಜಿ ಚಳವಳಿಯಾಗಿ ರೂಪುಗೊಳ್ಳುವುದು ಅಸಾಧ್ಯ. ಪ್ರಗತೀಲ ಲೇಖಕರಿಗೆ ಜನಪರ ಆಶಯವಿತ್ತು. ಆದರೆ ಅವರಿಗೆ ಸೈದ್ಧಾಂತಿಕ ತಿಳುವಳಿಕೆಯ ಕೊರತೆಯಿತ್ತು. ಆದ್ದರಿಂದ ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯವು ಸಾತ್ವಿಕವಾಗಿ ಬೆಳೆಯಲು ಸಾಧ್ಯವಾಗದೆ ಮೊಳಕೆಯಲ್ಲಿಯಲ್ಲಿಯೇ ಮುರುಟಿಹೋಯಿತು.

ಈ ಬಗೆಗೆ ಕನ್ನಡದ ಪ್ರಸಿದ್ಧ ಲೇಖಕರಾಗಿದ್ದ ಚಿ. ಶ್ರೀನಿವಾಸರಾಜು ಅವರು ಪ್ರಗತಿಶೀಲ ಸಾಹಿತ್ಯ ಚಳವಳಿಯ ವಿಫಲತೆಯನ್ನು ಕುರಿತು ಚರ್ಚಿಸುತ್ತ ಅದರ ಹಲವು ಮಿತಿಗಳನ್ನು ಗುರುತಿಸಿದ್ದಾರೆ. (ಸುವರ್ಣ ಸಾಹಿತ್ಯ ವಿಮರ್ಶೆ, ಪು.107, ಕನ್ನಡ ಮತ್ತು ಸಂಸ್ಕøತಿ ಇಲಾಖೆ 2006) ಅದರಲ್ಲಿ ಅತ್ಯಂತ ಪ್ರಮುಖವಾದುದು ‘ಸೈದ್ಧಾಂತಿಕ ಕೊರತೆ.’ ಅಂದರೆ ಪ್ರಗತಿಶೀಲ ಸಾಹಿತಿಗಳೆಂದು ತಮ್ಮನ್ನು ತಾವು ಭಾವಿಸಿಕೊಂಡಿದ್ದ ಹೆಚ್ಚಿನ ಲೇಖಕರಿಗೆ ಪ್ರಗತಿಶೀಲತೆಯ ವ್ಯಾಖ್ಯಾನವೇ ಸ್ಪಶ್ಟವಾಗಿದ್ದಂತೆ ಕಾಣುತ್ತಿಲ್ಲ. ಬಸವಣ್ಣ, ಮಾಕ್ರ್ಸ್, ಗಾಂಧಿ, ಅಂಬೇಡ್ಕರ್ ಮುಂತಾದವರ ಚಿಂತನೆಗಳಿಂದಲೂ ಹೆಚ್ಚು ಪ್ರಭಾವಿತರಾಗಿರಲಿಲ್ಲ. ಅಲ್ಲದೆ ಪ್ರಗತಿಶೀಲ ಲೇಖಕರ ನಡುವೆಯೇ ವೈಚಾರಿಕ ಮಂಥನ ನಡೆದಂತೆಯೂ ಕಾಣುತ್ತಿಲ್ಲ; ಮತ್ತು ತಾತ್ವಿಕವಾಗಿ ಪರಸ್ಪರ ಹೊಂದಾಣಿಕೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾಗಿ ಶಿವಾನಂದ ತಗಡೂರು ಪುನಾರಾಯ್ಕೆ

ಹಾಗಾಗಿ ಪ್ರಗತಿಶೀಲ ಲೇಖಕರ ನಡುವೆ ಬಹಳ ಬೇಗ ತಾತ್ವಿಕ ಭಿನ್ನಮತ ಹುಟ್ಟಿ ಪರಸ್ಪರ ದೂರವಾದರು. ಪ್ರಗತಿಶೀಲರು ಸಂಘಟನಾತ್ಮಕವಾಗಿ ಮತ್ತು ಸೈದ್ಧಾಂತಿಕವಾಗಿ ಒಗ್ಗೂಡಲು ಸಾಧಿಸಲಾಗದೆ ವಿಘಟನೆಗೊಂಡರು. ಹಾಗಾಗಿ ಪ್ರಗತಿಶೀಲ ಲೇಖಕರ ಸಾಮಾಜಿಕ ಕಾಳಜಿಗಳು ಒಂದು ಸಾಹಿತ್ಯದ ಇಲ್ಲವೇ ಸಾಮಾಜಿಕ ಚಳವಳಿಯಾಗಿ ಬೆಳೆಯಲು ಸಾಧ್ಯವೇ ಆಗಲಿಲ್ಲ. ಆದ್ದರಿಂದ ಪ್ರಗತಿಶೀಲ ಪಂಥದ ಸಾಹಿತ್ಯವನ್ನು ಒಂದು ‘ಚಳವಳಿ’ಯೆಂದು ಭಾವಿಸುವುದು ಕಶ್ಟವೆನ್ನಿಸುತ್ತದೆ.

ಮುಂಗಾರು ಮಳೆಯ ಹೊತ್ತಿನಲ್ಲಿ ಮೋಡಗಳ ನಡುವೆ ಹುಟ್ಟಿ ಮರೆಯಾಗುವ ಹುಸಿಮಿಂಚಿನಂತೆ ಕನ್ನಡದ ಪ್ರಗತಿ ಪಂಥವು ಕಣ್ಮರೆಯಾಯಿತೆನ್ನಬಹುದು. ಯಾಕೆಂದರೆ ಹುಸಿಮಿಂಚಿಗೆ ಮಿಂಚಾಗಿ ಗುಡುಗಾಗಿ ಭಾರಿ ಮಳೆ ತರಬೇಕೆಂಬ ಕನಸಿದ್ದರೂ ಅದರೊಳಗೆ ಮಿಂಚಲು ಗುಡಗಲು ಸ್ಫೋಟಿಸಲು ‘ಒಳಕಾವು’ ಇರಬೇಕಾಗುತ್ತದೆ. ಅಂತಹ ತೀವ್ರವಾದ ಒಳಕಾವು ಇಲ್ಲದಾಗ ಮಿಂಚು ಹುಸಿಯಾಗುತ್ತದೆ. ಈ ಹುಸಿಮಿಂಚಿನಂತೆ ಕನ್ನಡದ ಪ್ರಗತಿಶೀಲ ಪಂಥವು ಹುಸಿಯಾಯಿತು. ಯಾಕೆಂದರೆ ಪ್ರಗತಿಶೀಲ ಲೇಖಕರಿಗೆ ಬರೆಯುವ ಉತ್ಸಾಹ ಹೆಚ್ಚಿದ್ದರು ಪ್ರಗತಿಪಂಥವನ್ನು ಕಟ್ಟಲು ಬೇಕಿದ್ದ ಸೈದ್ಧಾಂತಿಕ ಅರಿವು ಮತ್ತು ಬದ್ಧತೆಗಳು ಇರಲಿಲ್ಲ. ಅವರೆಲ್ಲ ಕಾಳಜಿಗಳು ವ್ಯಕ್ತಿನಿಶ್ಟವಾಗಿಯೇ ಇದ್ದ ಕಾರಣ ತಾತ್ವಿಕ ಪ್ರಶ್ನೆ ಮುಂದೆ ಬಂದಾಗ ಎಲ್ಲರೂ ಸಿಡಿದು ಹೋದರು.

ಇಂತಹ ಒಳಕಾವಿದ್ದ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿ ಎಪ್ಪತ್ತರ ದಶಕದಲ್ಲಿ ಹುಟ್ಟಿ ದೊಡ್ಡ ಕಂಪನ ಮೂಡಿಸಿತು. ಅದೇ ದಲಿತ-ಬಂಡಾಯ ಚಳವಳಿ. ಇದು ಸಾಹಿತ್ಯಕವಾಗಿಯೂ ಸಾಮಾಜಿಕವಾಗಿಯೂ ಮೂಡಿಸಿದಂತಹ ಕಂಪನಗಳು ಅರ್ಧ ಶತಮಾನದ ನಂತರವೂ ಕನ್ನಡದ ನೆಲದಲ್ಲಿ ಅನುರಣಿಸುತ್ತಿವೆ. ಇಂತಹ ಕಂಪನ ಹುಟ್ಟಿಸಿದ ದಲಿತ-ಬಂಡಾಯ ಸಾಹಿತ್ಯ ಸಾಮಾಜಿಕ ಚಳವಳಿಗಳು ಕೂಡ ನಾಯಕರ ವೈಯಕ್ತಿಕ ಹಿತಾಸಕ್ತಿಗಳಿಗೆ ಬಲಿಯಾದುದು ಈಗ ಚರಿತ್ರೆ. ಅದು ಬೇರೆಯದೇ ಆದ ಅಧ್ಯಯನದ ವಿಚಾರ. ಆದರೆ ಹಲವು ಮಿತಿಗಳ ನಡುವೆಯೂ ದಲಿತ ಬಂಡಾಯ ಸಾಹಿತ್ಯ ಚಳವಳಿಗಳು ಹುಟ್ಟಿಸಿದಶ್ಟು ಕಂಪನಗಳನ್ನು ಪ್ರಗತಿಶೀಲ ಸಾಹಿತ್ಯ ‘ಚಳವಳಿ’ ಹುಟ್ಟಿಸಲಿಲ್ಲವೆಂಬುದು ಗಮನಿಸಬೇಕಾದ ವಿಚಾರ. ಇಂತಹ ಒಂದು ತಾತ್ವಿಕವಾದ ಚೌಕಟ್ಟಿನಲ್ಲಿಯೇ ಕನ್ನಡದ ಪ್ರಗತಿಪಂಥವನ್ನು ಚರ್ಚೆಗೆ ಒಳಪಡಿಸಬೇಕಾಗಿದೆ.

ಆದರೆ ಇಂತಹ ಹುಸಿತನದ ಕಾಳಜಿಗಳು ಮತ್ತು ಸೈದ್ಧಾಂತಿಕ ಅಪಕಲ್ಪನೆಗಳಿಗೆ ಅಪವಾದವಾಗಿದ್ದ ಲೇಖಕರೆಂದರೆ ಕುಳಕುಂದ ಶಿವರಾಯ ಅಲಿಯಾಸ್ ನಿರಂಜನ. ಇವರಿಗೆ ಮಾತ್ರ ಪ್ರಗತಿಶೀಲ ಪಂಥದ ಲೇಖಕರಲ್ಲಿ ಇರಬೇಕಾದ ಸೈದ್ಧಾಂತಿಕ ಅರಿವು ಹಾಗೂ ಬದ್ಧತೆಯಿತ್ತು. ಅಲ್ಲದೆ ಅವರಿಗೆ ಸಂಘಟನೆ ಕಟ್ಟಿ ಮುನ್ನಡೆಸುವುದರ ಬಗೆಗೆ ಅನುಭವ ಮತ್ತು ಅರಿವೂ ಇತ್ತು. ಯಾಕೆಂದರೆ ಅವರು ಚಳವಳಿಗಳ ಹಿನ್ನೆಲೆಯಲ್ಲಿ ಬೆಳೆದು ಬಂದವರಾಗಿದ್ದರು. ಚಳವಳಿಗಳ ಕಾರ್ಯಕರ್ತರಾಗಿ ಸಂಘಟಕರಾಗಿ ಕೆಲಸ ಮಾಡುತ್ತಲೇ ತಮ್ಮ ಲೋಕದೃಶ್ಟಿಯನ್ನು ರೂಪಿಸಿಕೊಂಡವರಾಗಿದ್ದರು. ಹಾಗಾಗಿ ಅವರಿಗೆ ಪ್ರಗತಿಶೀಲ ಲೇಖಕರಿಗೆ ಇರಬೇಕಾಗಿದ್ದ ಒಂದು ‘ಅರ್ಹತೆ’ಯಿತ್ತು. ತಾತ್ವಿಕವಾಗಿ ಸ್ಪಶ್ಟತೆ ಮತ್ತು ಸಂಘಟನೆಗಳಲ್ಲಿ ತೊಡಗಿಕೊಂಡು ಕೆಲಸ ಮಾಡಿದ ಶಿಸ್ತು ಎರಡರ ಪರಿಚಯವೂ ಇತ್ತು. ಇದಕ್ಕಿಂತ ಮಿಗಿಲಾಗಿ ಅವರ ಜೀವನವೇ ಒಂದು ಹೋರಾಟವಾಗಿತ್ತು. ಆ ಜೀವನವೇ ಅವರನ್ನು ರೂಪಿಸಿದ ದೊಡ್ಡ ಗುರು ಕೂಡ ಆಗಿತ್ತೆಂಬುದು ಅತಿಶಯೋಕ್ತಿಯಾಗಲಾರದು.

ಪ್ರಸಿದ್ದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಹೇಳಿದಂತೆ ‘ಅವರ ಜೀವನ ಒಂದು ರೋಚಕ ಕಾದಂಬರಿ’ಯಾಗಿದೆ. (ನಿರಂಜನರ ಶತಮಾನೋತ್ಸವ ಕಾರ್ಯಕ್ರಮ, ಧಾರವಾಡ, ಫೆಬ್ರವರಿ 9, 2025) ಯಾಕೆಂದರೆ, ಅವರ ತಾಯಿ ಬಾಲವಿಧವೆ. 8ನೇ ವಯಸ್ಸಿಗೆ ಮದುವೆಯಾಗಿ ವಿಧವೆಯಾದವರು. ಆ ನಂತರ ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಮಗುವಿಗೆ ಜನ್ಮನೀಡಿದರು. ತಂದೆ ಯಾರೆಂದೇ ತಿಳಿಯದ ಮಗು ಶಿವರಾಯ. ಸಮಾಜ ಈ ಮಗುವಿನ ಜನ್ಮ ಮತ್ತು ತಾಯಿಯ ಬಗೆಗೆ ವರ್ತಿಸಿದ ರೀತಿ ಕ್ರೌರ್ಯದಿಂದ ಕೂಡಿತ್ತು. ಅಂತಹ ಕ್ರೌರ್ಯವಿದ್ದ ಸಮಾಜದಲ್ಲಿ ಹೋರಾಡಿ ಜೀವನವನ್ನು ರೂಪಿಸಿಕೊಳ್ಳಬೇಕಾಗಿತ್ತು. ಸಮಾಜದ ಎಲ್ಲ ಟೀಕೆಗಳನ್ನು ಮೆಟ್ಟಿ ನಿಂತು ಅಕ್ಶರವನ್ನು ಕಲಿತು ಬರೆಹವನ್ನೇ ಬದುಕಾಗಿಸಿಕೊಂಡು ಬೆಳೆದ ನಿರಂಜನರು ಪ್ರಗತಿಶೀಲ ಸಾಹಿತ್ಯದ ನಿಜವಾದ ರೂಪಕದಂತೆ ಇಂದು ಕಾಣುತ್ತಿದ್ದಾರೆ. ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಸಾಹಿತ್ಯವನ್ನು ಮರುಓದಿಗೆ ಒಳಪಡಿಸುವುದು ಅತ್ಯಗತ್ಯ.

ತಮ್ಮ ಬದುಕು ಕಟ್ಟಿಕೊಳ್ಳಲು ಸಂಘರ್ಶ ನಡೆಸುತ್ತಿದ್ದ ನಿರಂಜನರು ಮತ್ತೊಂದು ಅರ್ಥದಲ್ಲಿ ಅವರು ಬೆಳೆದ ಪರಿಸರವೇ ಚಳವಳಿಯದಾಗಿತ್ತು. ಅಂದರೆ ಅವರ ಬಾಲ್ಯಕಾಲವು ಸ್ವಾತಂತ್ರ್ಯ ಚಳವಳಿಯ ಜೊತೆಗೆ ಹೆಜ್ಜೆ ಹಾಕುತ್ತಿತ್ತು. ಹಾಗಾಗಿ ಅವರು ತಮ್ಮ ಬಾಲ್ಯದಲ್ಲಿಯೇ ಚಳವಳಿಗೆ ತೆರೆದುಕೊಂಡರು. ಸ್ವಾತಂತ್ರ್ಯ ಚಳವಳಿ ಅವರನ್ನು ಆಕರ್ಶಿಸಿತು. ಅದು ಅವರ ಲೋಕದೃಶ್ಟಿಯನ್ನು ರೂಪಿಸಿ ಕುಳಕುಂದ ಶಿವರಾಯರನ್ನು ‘ಕಿಶೋರ’ನಾಮದ ಲೇಖಕರನ್ನಾಗಿಸಿತು. ನಂತರ ಅದೇ ಶಿವರಾಯರನ್ನು ‘ನಿರಂಜನ’ರನ್ನಾಗಿಸಿತು. ಕನ್ನಡ ಸಾಹಿತ್ಯದಲ್ಲಿ ಅವರ ಹೆಸರನ್ನು ಅಮರರನ್ನಾಗಿಸಿತು. ಅಂದರೆ ಅವರು ಜನಿಸಿ ಬಾಲ್ಯ ಕಳೆದ ದಕ್ಶಿಣ ಕನ್ನಡ ಜಿಲ್ಲೆಯ ಅಂದಿನ ಪರಿಸರವೇ ನಿರಂಜನರನ್ನು ಕನ್ನಡದ ಮಹತ್ವ ಲೇಖಕರನ್ನಾಗಿ ಬೆಳೆಸಿದೆ.

ಇಂತಹ ಪರಿಸರದಲ್ಲಿ ಬೆಳೆದ ನಿರಂಜನರು ಪ್ರಗತಿಶೀಲ ಸಾಹಿತ್ಯ ಪಂಥದ ಆಶಯವನ್ನು ಸರಿಯಾಗಿ ಪ್ರತಿನಿಧಿಸಬಲ್ಲವರಾಗಿದ್ದರು. ಆ ಕಾಲದಲ್ಲಿ ಪ್ರಗತಿಶೀಲ ಲೇಖಕರಾಗಿ ಜನಪ್ರಿಯರಾಗಿದ್ದ ಅನಕೃ, ತರಾಸು, ಶ್ರೀರಂಗ, ಅರ್ಚಕ ವೆಂಕಟೇಶ್, ಕುಮಾರ ವೆಂಕಣ್ಣ, ದ. ಬಾ. ಕುಲಕರ್ಣಿ ಮುಂತಾದ ದೊಡ್ಡ ಲೇಖಕರ ನಡುವೆ ನಿರಂಜನರು ಭಿನ್ನವಾಗಲು ಅವರ ಚಳವಳಿಯ ಸಖ್ಯವೇ ಕಾರಣವಾಗಿತ್ತು. ಪ್ರಗತಿಶೀಲರಲ್ಲಿ ಅವರೊಂದಿಗೆ ಕೊಂಚ ಹೆಜ್ಜೆ ಹಾಕಿದವರೆಂದರೆ ಬಸವರಾಜ ಕಟ್ಟಿಮನಿಯವರು ಮಾತ್ರ. ಇನ್ನುಳಿದ ಪ್ರಗತಿಶೀಲ ಲೇಖಕರಿಗೆ ಜನಪರವಾದ ಕಾಳಜಿಗಳು ಇದ್ದರೂ ಅದಕ್ಕೆ ಬೇಕಾದ ರಾಜಕೀಯ ಸಿದ್ಧಾಂತವೇ ಇರಲಿಲ್ಲ. ನಿರಂಜನರಿಗೆ ಸೈದ್ಧಾಂತಿಕ ತಿಳುವಳಿಕೆಯಿದ್ದ ಕಾರಣ ಅವರು ವ್ಯಕ್ತಿಯಾಗಿ ಮತ್ತು ಲೇಖಕರಾಗಿ ಪ್ರಗತಿಶೀಲ ಲೇಖಕರಲ್ಲಿಯೇ ಭಿನ್ನರಾಗಿ ಉಳಿದರು.

ಅಲ್ಲದೆ ಪ್ರಗತಿಶೀಲ ಲೇಖಕರ ನಡುವೆ ತಮ್ಮ ನಿಶ್ಟುರ ವ್ಯಕ್ತಿತ್ವದಿಂದಾಗಿ ಒಂಟಿಯಾಗಿ ಬಾಳಿದರು. ಅವರ ನಿಶ್ಟುರತೆಗೆ ಒಂದು ಎತ್ತುಗೆಯೆಂದರೆ 1952ರಲ್ಲಿ ಹಿರಿಯೂರಲ್ಲಿ ನಡೆದ ಪ್ರಗತಿಶೀಲ ಲೇಖಕರ ಸಮಾವೇಶದ ಅವರ ಭಾಶಣ. ಆ ಸಮಾವೇಶವನ್ನು ಅನಕೃ ಅವರ ಬಣ ಆಯೋಜಿಸಿತ್ತು. ದಾ. ಕೃ. ಭಾರದ್ವಾಜರ ಅಧ್ಯಕ್ಶತೆಯಲ್ಲಿ ಆ ಸಮ್ಮೇಳನ ನಡೆದಿತ್ತು. ಅಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿರಂಜನರು ಯಾವ ಅಂಜಿಕೆಯೂ ಇಲ್ಲದೆ ಅನಕೃ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಂದು ಅವರು ಆಡಿದ ಮಾತುಗಳನ್ನು ಸ್ವತಃ ನಿರಂಜನರೇ ಬರೆಹರೂಪದಲ್ಲಿ ದಾಖಲಿಸಿದ್ದಾರೆ. ‘ಪ್ರಗತಿಶೀಲ ಸಾಹಿತ್ಯ ಎತ್ತ ಸಾಗುತ್ತಿದೆ?’ ಎಂದು ಪ್ರಶ್ನೆಯೆತ್ತುವ ಮೂಲಕ ಪ್ರಗತಿಶೀಲ ಸಾಹಿತ್ಯದ ಬಿಕ್ಕಟ್ಟುಗಳನ್ನು ಅನಾವರಣಗೊಳಿಸಿದ್ದಾರೆ.

(ಪ್ರತಿಧ್ವನಿ ನಿರಂಜನರ ವಾಚಿಕೆ. ಇದು ಬುದ್ಧಿ ಭಾವ ಬದುಕು ಎಂಬ ಕೃತಿಯಲ್ಲಿಯೂ ಪ್ರಕಟವಾಗಿದೆ.) ಬಹಳ ನಿಶ್ಟುರವಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಹಿರಿಯೂರಿನ ಸಮಾವೇಶದಲ್ಲಿ ಪಾಲ್ಗೊಂಡ ಲೇಖಕರಿಗೆ ಪ್ರಗತಿಶೀಲ ಚಿಂತನೆಗಳ ಬಗೆಗೆ ಪ್ರಾಥಮಿಕ ತಿಳುವಳಿಕೆಯೇ ಇಲ್ಲದಿದ್ದನ್ನು ಅವರು ತಮ್ಮ ಬರೆಹದಲ್ಲಿ ದಾಖಲಿಸಿದ್ದಾರೆ. ಸಮಾವೇಶದ ಅಧ್ಯಕ್ಶತೆ ವಹಿಸಿದ್ದ ಭಾರದ್ವಾಜರು ಆಧ್ಯಾತ್ಮದ ಹೆಸರಲ್ಲಿ ಮೌಢ್ಯದ ಬಗೆಗೆ ಭಾಶಣ ಮಾಡಿದ್ದನ್ನು ದಾಖಲಿಸಿದ್ದಾರೆ. ಅವರ ಆ ಭಾಶಣದ ಬರೆಹರೂಪವನ್ನು ಗಮನಿಸಿದರೆ ಕನ್ನಡದಲ್ಲಿ ಮಿಂಚಿ ಮರೆಯಾದ ಪ್ರಗತಿಶೀಲ ಸಾಹಿತ್ಯ ಪಂಥದ ಮಿತಿಗಳೇನೆಂಬುದು ಸ್ಪಶ್ಟಗೊಳ್ಳುತ್ತದೆ.

ಅವರ ಅಂದಿನ ಭಾಶಣವು ಮೊಳಕೆಯೊಡೆವ ಹಂತದಲ್ಲಿಯೇ ಪ್ರಗತಿಶೀಲ ಸಾಹಿತ್ಯದ ಸಸಿ ಬಾಡಿ ಹೋಗಲು ಕಾರಣವಾಗಿದ್ದನ್ನು ಎತ್ತಿ ತೋರಿಸುತ್ತದೆ. ಅಂದರೆ ಕನ್ನಡದಲ್ಲಿ ಮೊಳಕೆಯೊಡೆಯಲು ಮುಂದಾಗಿದ್ದ ಪ್ರಗತಿಶೀಲ ಸಾಹಿತ್ಯವು ಅದರ ಭ್ರೂಣಾವಸ್ಥೆಯೇ ಹುಸಿಯಾಗಿತ್ತು. ಇಂತಹ ಹುಸಿತನದ ಇಲ್ಲವೇ ಸೈದ್ಧಾಂತಿಕ ಅರಿವು ಮತ್ತು ಸಂಘಟನಾ ಶಕ್ತಿಯಿಲ್ಲದ ಕಾರಣಕ್ಕಾಗಿಯೇ ಪ್ರಗತಿಶೀಲ ಸಾಹಿತ್ಯವು ತಲೆಯೆತ್ತಲಿಲ್ಲ. ಇದು ಅನಕೃ ಮತ್ತು ನಿರಂಜನರ ನಡುವಿನ ತಾತ್ವಿಕ ಭಿನ್ನಮತ ಮತ್ತು ಸಂಘರ್ಶದ ಬಿಕ್ಕಟ್ಟಾಗಿ ಕಾಣಿಸಿಕೊಂಡು ಪ್ರಗತಿಶೀಲ ಸಾಹಿತ್ಯವು ತನ್ನ ಎಳವೆಯಲ್ಲಿಯೇ ಮುದುಡಿತು.

ಚಳವಳಿಯಾಗಿ ಪ್ರಗತಿಶೀಲ ಪಂಥವು ಸೋತರೂ ಅದರ ನೈಜ ಮಾದರಿಯಾಗಿ ನಿರಂಜನರ ಸಾಹಿತ್ಯವು ಕನ್ನಡದಲ್ಲಿ ಉಳಿದಿದೆ. ಉಳಿದ ಪ್ರಗತಿಶೀಲ ಲೇಖಕರು ಸೈದ್ಧಾಂತಿಕ ಅರಿವಿನೊಂದಿಗೆ ಸಾಹಿತ್ಯವನ್ನು ಸೃಶ್ಟಿಸಲು ಚಳವಳಿಯನ್ನು ರೂಪಿಸಲು ಯತ್ನಿಸಿದ್ದರೆ ಅದರ ಪರಿಣಾಮಗಳು ಬೇರೆಯೇ ಆಗಿರುತ್ತಿದ್ದವು. ಆದರೆ ಅಂತಹ ಪ್ರಯತ್ನವನ್ನು ಯಾವ ಲೇಖಕರು ಮಾಡಲಿಲ್ಲ. ಅನಕೃ ತರಾಸು ಮುಂತಾವದರಿಗಿದ್ದ ವೈದಿಕ ಸಂಪ್ರದಾಯವಾದಿ ಮನೋಭಾವ ಪ್ರಗತಿಪಂಥಕ್ಕೆ ದೊಡ್ಡ ಶತ್ರುವಾಗಿತ್ತು. ಸ್ವಾಮೀಜಿಗಳ ಬೂಟಾಟಿಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಕುರಿತು ಬರೆದರೂ ಆಳದಲ್ಲಿ ಸಮಾನತೆಯ ವಿರೋಧಿ ಮನೋಭಾವವನ್ನೆ ಹೊಂದಿದ್ದರು.

ಇಂತಹ ಹುಸಿ ಪ್ರಗತಿಶೀಲರ ನಡುವೆ ನಿರಂಜನರು ಭಿನ್ನವಾಗಲು ಕಾರಣವಾದುದೇ ಜನಚಳವಳಿಗಳ ಒಡನಾಟ ಮತ್ತು ಅಲ್ಲಿ ಪಡೆದ ನೈಜ ಶಿಕ್ಶಣ. ಅಂತಹ ಶಿಕ್ಶಣದಿಂದಾಗಿ ನಿರಂಜನರು ಇಂದಿಗೂ ಪ್ರಸ್ತುತವಾಗಿ ಉಳಿದಿದ್ದಾರೆ. ಇಂದಿಗೆ ಮಾತ್ರವಲ್ಲ ನಮ್ಮ ಸಮಾಜದಲ್ಲಿ ಕನ್ನಡ ಜಗತ್ತಿನಲ್ಲಿ ಎಲ್ಲಿಯವರೆಗೂ ಜಾತಿ ವರ್ಗ ಲಿಂಗತಾರತಮ್ಯಗಳನ್ನು ಆಧರಿಸಿದ ಶೋಶಣೆ ಮತ್ತು ಅಸಮಾನತೆಗಳು ಇರುತ್ತವೆಯೋ ಅಲ್ಲಿಯವರೆಗೂ ಅವರು ಪ್ರಸ್ತುತರಾಗಿಯೇ ಉಳಿದಿರುತ್ತಾರೆ. ಯಾಕೆಂದರೆ ತುಳಿತಕ್ಕೊಳಗಾದವರು ತಲೆಯೆತ್ತಿ, ಎದೆ ಸೆಟೆಸಿ ನಿಲ್ಲುವ ಹೊತ್ತಿನಲ್ಲಿ ಅವರ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳು ನೆರವಿಗೆ ಬರುತ್ತವೆ. ಅವುಗಳ ಓದು ಹೋರಾಟ ಶಿಕ್ಶಣವನ್ನು ಅನುಭವನ್ನು ನೀಡುತ್ತದೆ. ಅನ್ಯಾಯ ಮಿತಿಮೀರಿದ ಹೊತ್ತಿನಲ್ಲಿ ಜನರು ಹೇಗೆ ಬಂಡಾಯ ಹೂಡುತ್ತಾರೆಂಬ ಹೋರಾಟದ ಶಿಕ್ಶಣವನ್ನು ಅವರ ಕೃತಿಗಳು ನೀಡುತ್ತವೆ.

ಇಂದು ಮನುಶ್ಯ ಮನುಶ್ಯರ ನಡುವಿನ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ನೆಲಮುಗಿಲುಗಳಶ್ಟು ತೀವ್ರವಾಗಿರುವಾಗ ನಿರಂಜನರ ಸಾಹಿತ್ಯದ ಓದು ಜನರಿಗೆ ಹೋರಾಟದ ಕಸುವನ್ನು ತುಂಬುತ್ತವೆ. ಅಂತಹ ಶಕ್ತ ಕೃತಿಗಳನ್ನು ರಚಿಸಿದ ನಿರಂಜನರು ಸ್ವತಃ ಹೋರಾಟಗಳ ಸಕ್ರಿಯ ಕಾರ್ಯಕರ್ತರು ಮತ್ತು ಚಳವಳಿಗಳ ಸಂಗಾತಿಯಾಗಿದ್ದರು ಎಂಬುದು ಸ್ಪಶ್ಟವಾಗುತ್ತದೆ.(ಅವರ ಮುಖತಃ ಎಂಬ ಕೃತಿಯಲ್ಲಿ ಅವರು ನೀಡಿರುವ ಸಂದರ್ಶನಗಳನ್ನು ಗಮನಿಸಿದರೆ ಸ್ಪಶ್ಟವಾಗುತ್ತದೆ. ದಲಿತ ಬಂಡಾಯ ಚಳವಳಿಗಳ ಶರುವಾದ ಹೊತ್ತಿನಲ್ಲಿ ಡಿ.ಆರ್. ನಾಗರಾಜ, ಬರಗೂರು ರಾಮಚಂದ್ರಪ್ಪ, ಶಿವಪ್ಪನಾಯಕ ಮುಂತಾದವರು ನಡೆಸಿರುವ ಸಂದರ್ಶನಗಳನ್ನು ಗಮನಿಸಿದರೆ ಇದು ಸ್ಪಶ್ಟವಾಗುತ್ತದೆ.)

ಹಾಗಾಗಿ ಅವರ ಜನಪರ ಚಳವಳಿಗಳ ಒಡನಾಟ ಹೇಗೆ ಶುರುವಾಯಿತು? ಎಂಬುದನ್ನು ಇಲ್ಲಿ ತಿಳಿಯುವ ಮೂಲಕ ಅವರ ವ್ಯಕ್ತಿತ್ವ ಮತ್ತು ಲೋಕದೃಶ್ಟಿಗಳು ರೂಪುಗೊಂಡಿದ್ದನ್ನು ತಿಳಿಯಬಹುದು. ಅಲ್ಲದೆ ಅವರು ಚಳವಳಿಗಳ ಜೊತೆಗೆ ನಂಟು ಹೊಂದಿದ್ದರಿಂದ ಆದ ವಿಶೇಶ ಅನುಕೂಲಗಳೇನು? ಎಂಬುದನ್ನು ಇಲ್ಲಿ ತಿಳಿಯಬೇಕಾದುದು ಅತ್ಯಂತ ಮಹತ್ವದ್ದೆನಿಸುತ್ತದೆ. ಯಾಕೆಂದರೆ ಇಂದಿಗೂ ಚರ್ಚೆಯಲ್ಲಿರುವ ಒಂದು ಸಂಗತಿಯೆಂದರೆ ಲೇಖಕರಾದವರು ಚಳವಳಿಗಳ ಜೊತೆಗೆ ಗುರುತಿಸಿಕೊಳ್ಳಬೇಕೇ? ಬೇಡವೇ? ಸಿದ್ದಾಂತಗಳ ಮತ್ತು ಚಳವಳಿಗಳ ಸಖ್ಯ ಸೃಜನಶೀಲ ಲೇಖಕರಿಗೆ ಇರಬೇಕೆ? ಇರಬೇಡವೇ? ಎಂಬ ಪ್ರಶ್ನೆಗಳು ಮುಂಚೂಣಿಗೆ ಬರುತ್ತಿರುತ್ತವೆ. ಅಂತಹ ಸಂದರ್ಭಗಳಲ್ಲಿ ಲೇಖಕರು ಸ್ವತಂತ್ರವಾಗಿದ್ದು ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳುವ ಮೂಲಕ ಸೃಜನಶೀಲ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕೆಂಬ ಬೋಧನೆಯನ್ನು ಮಾಡಲಾಗುತ್ತದೆ.

ಅಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ಲೇಖಕರ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತ ಮುಕ್ತಚಿಂತನೆ ಮತ್ತು ಅಭಿವ್ಯಕ್ತಿಯನ್ನು ಬೆಂಬಲಿಸಲಾಗುತ್ತದೆ. ಚಳವಳಿಗಳ ಜೊತೆಗಿನ ಒಡನಾಟವನ್ನು ನಕಾರಾತ್ಮಕವಾಗಿ ಬಿಂಬಿಸುತ್ತ ಸಾಹಿತ್ಯ ಸೃಶ್ಟಿಯ ಹಿಂದಿರುವ ‘ರಾಜಕೀಯ ಆಯಾಮ’ಗಳನ್ನು ಬದಿಗೆ ಸರಿಸಲಾಗುತ್ತಿರುತ್ತದೆ. ಇದರಿಂದಾಗಿ ಸಾಹಿತ್ಯ ಚಿಂತನೆಗಿರಬಹುದಾದ ತಾತ್ವಿಕ ಬುನಾದಿಯನ್ನು ಬಿಟ್ಟುಕೊಡಲಾಗುತ್ತದೆ. ಇದರಿಂದಾಗಿ ಸಾಹಿತ್ಯ ಮೀಮಾಂಸೆಯೊಂದು ಗಟ್ಟಿಯಾದ ಮತ್ತು ತಾತ್ವಿಕವಾಗಿ ಬೆಳೆಯಬಹುದಾದ ಅವಕಾಶಗಳನ್ನು ಮೊಟಕುಗೊಳಿಸಲಾಗುತ್ತದೆ. ಅದರಲ್ಲಿಯೂ ಈ ಕಾಲದಲ್ಲಿ ಸಾಹಿತ್ಯವನ್ನು ‘ಶುದ್ಧ’ ಸಾಹಿತ್ಯದ ನಂಬಿಕೆಯ ಆಧಾರದಲ್ಲಿ ಓದಲು ಸಾಧ್ಯವೇ ಇಲ್ಲ. ಇಂದು ‘ಓದು’ ಕೂಡ ಒಂದು ರಾಜಕೀಯ ಆಯ್ಕೆಯೇ ಆಗಿರುತ್ತದೆ. ಯಾವ ಯಾವ ಲೇಖಕರನ್ನು ಓದುತ್ತೇವೆ? ಎಂಬುದರ ಆಧಾರದ ಮೇಲೆ ನಮ್ಮ ರಾಜಕೀಯ ನಿಲುವುಗಳು ಸ್ಪಶ್ಟವಾಗುತ್ತಿರುತ್ತವೆ. ಇಂತಹ ಹೊತ್ತಿನಲ್ಲಿ ಸಾಹಿತ್ಯ ಓದಿನ ತಾತ್ವಿಕ ಆಯಾಮ ಬಹಳ ಮಹತ್ವದ್ದು.

ಅಲ್ಲದೆ ಸಾಹಿತ್ಯದ ಚಿಂತನೆಗಳು ಏಕಮುಖವಲ್ಲ. ಹಾಗಾಗಿ ನಾವು ಸಾಹಿತ್ಯದ ಹಲವು ಆಯಾಮಗಳನ್ನು ನಿರಾಕರಿಸಿದರೆ ಅಂತಿಮವಾಗಿ ಸಾಹಿತ್ಯ ಚಿಂತನೆ ಒಮ್ಮುಖವಾಗಿ ದುರ್ಬಲವಾಗುತ್ತದೆ. ಅವು ವ್ಯಕ್ತಿನಿಶ್ಟವಾಗಿ ವಿಕಾಸಗೊಳ್ಳುತ್ತ ಸಮಶ್ಟಿಯನ್ನು ಕಡೆಗಣಿಸುತ್ತವೆ. ವ್ಯಕ್ತಿ ಕೇಂದ್ರಿತವಾದ ಯಾವ ಚಿಂತನೆಯೂ ದೊಡ್ಡ ದರ್ಶನವಾಗಿ ಬೆಳೆಯಲು ಸಾಧ್ಯವಿಲ್ಲ. ಕುವೆಂಪು ಅವರಿಗೆ ಪುರ್ಣದೃಶ್ಟಿಯಿದ್ದ ಕಾರಣಕ್ಕಾಗಿಯೇ ಅವರು ಕನ್ನಡದ ದೊಡ್ಡ ಲೇಖಕರಾಗಿ ಬೆಳೆಯಲು ಸಾಧ್ಯವಾದುದು. ಇದೆಲ್ಲಕ್ಕಿಂತ ಮುಖ್ಯವಾಗಿ ಸೃಜನಶೀಲ ಚಿಂತನೆಗೆ ಒದಗಬಹುದಾದ ಹರಿತಗುಣವನ್ನೇ ಮೊಂಡು ಮಾಡಲಾಗುತ್ತದೆ. ಇದರಿಂದಾಗಿ ಲೇಖಕರ ಚಿಂತನೆಗಳು ದುರ್ಬಲವಾಗಿ, ಸಾಹಿತ್ಯ ಕೃತಿಗಳ ದರ್ಶನಗಳು ಅಳ್ಳಕವಾಗಿ ಕೃತಿಗಳು ನೀರಸವಾಗುತ್ತವೆ.

ಇಂದು ಬರೆಯುತ್ತಿರುವ ಹೊಸತಲೆಮಾರಿನ ಹೆಚ್ಚಿನ ಲೇಖಕರಲ್ಲಿ ಈ ಸಮಸ್ಯೆ ಎದ್ದು ಕಾಣುತ್ತದೆ. ಇಂತಹ ಹಲವು ಸಮಸ್ಯೆಗಳಿಗೆ ಉತ್ತರವೆಂಬಂತೆ ನಿರಂಜನರ ಬದುಕು ಮತ್ತು ಬರೆಹಗಳಿವೆ. ಅವರ ಕೃತಿಗಳಲ್ಲಿ ಸಾಹಿತ್ಯಿಕವಾಗಿ ಮಿತಿಗಳಿರಬಹುದು. ಆದರೆ ಚಳವಳಿಯ ನಂಟು ಹೊಂದಿದ್ದ ಕಾರಣ ಅವರಿಗೆ ಕಾಣುತ್ತಿದ್ದ ಲೋಕವೇ ಬೇರೆಯಾಗಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಚಳವಳಿಗಳು ಲೇಖಕರನ್ನು ಹೇಗೆ ರೂಪಿಸಬಲ್ಲವು ಎಂಬುದಕ್ಕೆ ನಿರಂಜನರು ಅತ್ಯುತ್ತಮ ಉದಾಹರಣೆ. ಇದಕ್ಕೆ ಅವರ ಒಟ್ಟು ಬರೆಹಗಳೇ ಸಾಕ್ಶಿ. ಅವರ ಎಲ್ಲ ಬರೆಹಗಳನ್ನು ಪ್ರಗತಿಶೀಲರೆಂದು ಗುರುತಿಸಿಕೊಂಡಿದ್ದ ಇತರೆ ಲೇಖಕರ ಬರೆಹಗಳು ಮತ್ತು ಚಿಂತನೆಗಳ ಜೊತೆಗೆ ಹೋಲಿಕೆ ಮಾಡಿ ನೋಡಿದರೆ ಅವರ ಬರೆಹಗಳ ವಿಶಿಶ್ಟತೆ ಗೋಚರಿಸುತ್ತದೆ. ಅವರು ಯಾಕೆ ಪ್ರಗತಿಶೀಲ ಮನೋಭಾವದ ನಿಜವಾದ ಲೇಖಕರಾಗಿದ್ದರು ಎಂಬುದು ಮನದಟ್ಟಾಗುತ್ತದೆ.

ಅವರು ಲೇಖಕರಾಗುವ ಮೊದಲು ಚಳವಳಿಗಳ ಭಾಗವಾಗಿ ನೈಜ ಅನುಭವಗಳ ಮೂಲಕ ತಮ್ಮ ಲೋಕದೃಶ್ಟಿಯನ್ನು ರೂಪಿಸಿಕೊಂಡರು. ಅದರಿಂದ ಸಾಹಿತ್ಯ ಸೃಶ್ಟಿಗೆ ಬೇಕಾಗಿದ್ದ ತಾತ್ವಿಕ ದರ್ಶನವನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ಹಾಗಾಗಿ ಅವರ ಲೋಕ ದೃಶ್ಟಿಯನ್ನು ರೂಪಿಸಿದ ಅವರ ಚಳವಳಿಗಳ ಸಂಬಂಧವನ್ನು ಒಟ್ಟು ಮೂರು ಹಂತಗಳಲ್ಲಿ ಗುರುತಿಸಬಹುದು. ಒಂದು. ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಪ್ರಭಾವ. ಎರಡು. ಕ್ರಾಂತಿಕಾರಿ ಕಮ್ಯುನಿಸ್ಟ್ ಚಳವಳಿ ಪ್ರಭಾವ. ಮತ್ತು ಮೂರನೆಯದಾಗಿ ಕನ್ನಡ ಪ್ರಗತಿಶೀಲ ಸಾಹಿತ್ಯದ ಪಂಥದ ಲೇಖಕರ ಜೊತೆಗಿನ ಒಡನಾಟ ಮತ್ತು ಪ್ರಗತಿಶೀಲ ಸಾಹಿತ್ಯ ಚಳವಳಿಯನ್ನು ರೂಪಿಸಲು ಪ್ರಯತ್ನಿಸಿದ್ದು.

ಈ ಮೂರು ಹಂತದ ವಿಭಿನ್ನ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗಿದ್ದನ್ನು ಇಲ್ಲಿ ಗಮನಿಸಬೇಕಾಗಿದೆ. ಸ್ವಾತಂತ್ರ್ಯ ಚಳವಳಿಯ ಮೂಲಕ ಆರಂಭದಲ್ಲಿ ಗಾಂಧೀಜಿಯವರ ವಿಚಾರಧಾರೆಯಿಂದ ಪ್ರಭಾವಗೊಂಡಿದ್ದರು. ಆನಂತರ ಕಯ್ಯೂರು ರೈತ ಬಂಡಾಯದ ರೂಪದಲ್ಲಿ ಕ್ರಾಂತಿಕಾರಿ ಕಮ್ಯುನಿಸ್ಟ್ ಚಳವಳಿ ಹಾಗೂ ಮಾಕ್ರ್ಸ್‍ವಾದದ ಪ್ರಭಾವವಾಗಿದೆ. ಇದೇ ಅವರ ಚಿಂತನೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿರುವುದು. ಅಲ್ಲದೆ ತಮ್ಮ ಜೀವನದಲ್ಲಿ ಕೊನೆಯವರೆಗೂ ಬದ್ಧತೆಯಿಂದ ಕಾಪಾಡಿಕೊಂಡಿದ್ದು ಇದೇ ಮಾಕ್ರ್ಸ್‍ವಾದಿ ಚಿಂತನೆಯಾಗಿದೆ. ಚಳವಳಿಯ ಕೆಲಸಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಕೊಳ್ಳುವುದರಿಂದ ದೂರವಾದರೂ ಅವರ ಆಲೋಚನೆ ಮತ್ತು ಬದುಕುವ ರೀತಿನೀತಿಗಳಿಂದ ಮಾಕ್ರ್ಸ್‍ವಾದವನ್ನು ದೂರಮಾಡÀಲಿಲ್ಲ. ಅದರ ಬೆಳಕಿನಲ್ಲಿಯೇ ಹೆಜ್ಜೆ ಹಾಕಿದ್ದರೆಂಬುದು ಮಹತ್ವದ ಸಂಗತಿ. ಈ ಕಾರಣಕ್ಕಾಗಿಯೇ ಕನ್ನಡ ಸಾಹಿತ್ಯದಲ್ಲಿ ಮೂಲೆಗುಂಪಾಗುವ ಸವಾಲನ್ನು ಎದುರಿಸಿದರು ಎಂಬುದು ದಿಟವಾದರೂ ಅದು ಬೇರೆಯದೇ ಚರ್ಚೆ.

ಮೊದಲಿಗೆ 1934ರಲ್ಲಿ ಮಹಾತ್ಮ ಗಾಂಧೀಜಿಯವರು ಸುಳ್ಯಕ್ಕೆ ಬರುತ್ತಾರೆ. ಆಗ ನಿರಂಜನರು ಗಾಂಧೀಜಿಯವರನ್ನು ನೋಡಿ ಅವರಿಂದ ಪ್ರಭಾವಕ್ಕೊಳಗಾಗುತ್ತಾರೆ. ಆ ನಂತರ 1937ರಲ್ಲಿ ಜವಹರಲಾಲ್ ನೆಹರು ಅವರು ಸುಳ್ಯಾಗೆ ಬರುತ್ತಾರೆ. ಅವರ ಭಾಶಣವನ್ನು ನಿರಂಜನ ಕೇಳುತ್ತಾರೆ. ಇದು ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಗಾಂಧಿವಾದಿಯಾಗಿ ಬದಲಾಗುತ್ತಾರೆ. ಆ ನಂತರ ಹೈಸ್ಕೂಲು ವಿದ್ಯಾರ್ಥಿಯಾಗಿ ನೀಲೇಶ್ವರದಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. ಆಗ ಸಮೀಪದಲ್ಲಿಯೇ ಇದ್ದ ಕಯ್ಯೂರಿನಲ್ಲಿ ಬ್ರಿಟಿಶ್ ವಿರೋಧಿ ಮತ್ತು ಊಳಿಗಮಾನ್ಯಶಾಹಿ ಭೂಮಾಲೀಕರ ವಿರುದ್ದ ರೈತರು ಹೋರಾಟ ನಡೆಸುತ್ತಿರುತ್ತಾರೆ. ಆ ಹೋರಾಟವನ್ನು ನೇರವಾಗಿ ಕಂಡವರು; ಮತ್ತು ಆ ಹೋರಾಟದ ನೇತಾರರ ಸಂಪರ್ಕಕ್ಕೆ ನಿರಂಜನರು ಬಂದಿದ್ದರು.

ಗಣಪತಿ ಕಾಮತ್, ಕಾಞಂಗಾಡ್ ಮಾಧವನ್, ವಿವಿಕುಂಞಂಬು, ಕೇರಳಿಯನ್ ಚಂದ್ರೋತ್ ಮುಂತಾದವರು ಸಂಪರ್ಕಕ್ಕೆ ಬರುತ್ತಾರೆ. ಇವರ ಸಂಪರ್ಕವೇ ಅವರನ್ನು ಅಂದಿನ ಕ್ರಾಂತಿಕಾರಿ ಕಮ್ಯುನಿಶ್ಟ್ ಚಳವಳಿಯ ಜೊತೆಗೆ ನಂಟನ್ನು ಏರ್ಪಡಿಸುತ್ತದೆ. (ಚಿರಸ್ಮರಣೆ ಮೊದಲ ಮುದ್ರಣದ ಮುನ್ನುಡಿ, 1955) ಇದೇ ಕಾಲದಲ್ಲಿಯೇ ಅವರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಾರೆ. ಆ ಮೂಲಕ ಸಕ್ರೀಯರಾಗಿ ಚಳವಳಿಯಲ್ಲಿ ತೊಡಗಿಕೊಳ್ಳುತ್ತಾರೆ. ಹತ್ತೊಂಬತ್ತು ವರ್ಶದವರಿದ್ದಾಗ ಕಮ್ಯುನಿಶ್ಟ್ ಪಕ್ಶದ ಸದಸ್ಯತ್ವವನ್ನು ಸ್ವೀಕರಿಸುತ್ತಾರೆ. ಆ ನಂತರ ಕಮ್ಯುನಿಸ್ಟ್ ಪಕ್ಶದ ಮುಖವಾಣಿಯಾಗಿದ್ದ ‘ಜನಶಕ್ತಿ’ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಾರೆ. ಅಂದರೆ ಹಂತಹಂತವಾಗಿ ಮೇಲೇರುತ್ತ ಸಂಘಟನೆಯಲ್ಲಿ ಆಳವಾಗಿ ಬೇರೂರುತ್ತಾರೆ.

ಚಳವಳಿಗಳಲ್ಲಿನ ಈ ತೊಡಗುವಿಕೆಯೇ ಅವರನ್ನು ಮೊದಲು ಗಾಂಧಿವಾದಿಯಾಗಿಸಿ ನಂತರ ಮಾಕ್ರ್ಸ್‍ವಾದಿಯನ್ನಾಗಿಯೂ ಬದಲಾಯಿಸಿತು. 1947ರಲ್ಲಿ ಸ್ವಾತಂತ್ರ್ಯ ಬಂದರೂ ಕ್ರಾಂತಿಕಾರಿ ಚಳವಳಿಗಳ ಮೇಲೆ ನಿಶೇಧ ಮುಂದುವರಿದಿರುತ್ತದೆ. ಹಾಗಾಗಿಯೇ ಅವರು 1948ರಿಂದ 1950ರವರೆಗೆ ಸುಮಾರು ಮೂರು ವರ್ಶಗಳ ಕಾಲ ಭೂಗತರಾಗಿ ಚಳವಳಿಯ ಕೆಲಸ ಮಾಡುತ್ತಾರೆ. ಅಂದರೆ ಅವರ ಜೀವನದ ಮೊದಲ ಇಪ್ಪತ್ತೈದು ವರ್ಶಗಳ ಕಾಲ ದುಡಿಮೆ, ಶಿಕ್ಶಣ ಮತ್ತು ಚಳವಳಿಗಳಲ್ಲಿ ತೊಡಗಿಕೊಳ್ಳುವ ಮೂಲಕ ಜೀವನ ನಡೆಸುತ್ತಾರೆ.

ಅವರ ಬದುಕಿನ ಈ ಹಂತದಲ್ಲಿಯೇ ಅವರು ಲೋಕದೃಶ್ಟಿಯನ್ನು ರೂಪಿಸಿಕೊಂಡದ್ದು; ವಿಶೇಶವಾಗಿ ಮಾಕ್ರ್ಸ್‍ವಾದಿ ವಿಚಾರಧಾರೆಯಿಂದ ಪ್ರಭಾವಿತರಾಗಿ ಅದರ ಹಾದಿಯಲ್ಲಿಯೇ ತಮ್ಮ ಮುಂದಿನ ಸೃಜನಶೀಲ ಬದುಕನ್ನು ಸವೆಸಿದ್ದು ತಿಳಿದು ಬರುತ್ತದೆ. ಸಮಾಜದ ಬದಲಾವಣೆಗೆ, ಸಮಸಮಾಜವನ್ನು ಸ್ಥಾಪಿಸಲು ಚಳವಳಿಗಳ ಅಗತ್ಯವನ್ನು ಮತ್ತು ಅವುಗಳ ಮಹತ್ವವನ್ನು ಸಾರುವ ಕಥನಗಳನ್ನು ಕಟ್ಟಿದ್ದರು. ಅವರ ವಿಮೋಚನೆ(1953), ಚಿರಸ್ಮರಣೆ(1955), ಕಲ್ಯಾಣಸ್ವಾಮಿ(1956), ಸ್ವಾಮಿ ಅಪರಂಪಾರ(1967), ಮತ್ತು ಮೃತ್ಯುಂಜಯ(1976)ಗಳಂತಹ ಹೋರಾಟದ ವಸ್ತುಗಳನ್ನುಳ್ಳ ಕಾದಂಬರಿಗಳನ್ನು ರಚಿಸಿ ಕನ್ನಡ ಗದ್ಯಲೋಕಕ್ಕೆ ತಮ್ಮದೇ ಆದ ವಿಶಿಶ್ಟ ಕಾಣಿಕೆ ನೀಡಿದರು.

ಈ ನಡುವೆಯೇ ನಿರಂಜನರು ಪ್ರಗತಿಶೀಲ ಪಂಥದ ಲೇಖಕರ ಸಂಪರ್ಕಕ್ಕೆ ಬಂದರು. ಇದರಿಂದ ಹದಿನೆಂಟು ಹತ್ತೊಂಬತ್ತು ವರ್ಶ ತರುಣರಾಗಿದ್ದಾಗಲೇ ಅವರು ಪ್ರಗತಿಶೀಲ ಲೇಖಕರ ಒಟನಾಟದಲ್ಲಿ ಬೆಳೆದರು. ಅನಕೃ ಅಂತಹ ಹಿರಿಯ ಲೇಖಕರ ಪರಿಚಯವಾಯಿತು. 1943-44ರಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇದೇ ಹೊತ್ತಿನಲ್ಲಿ ಮುಂಬೈನಲ್ಲಿ ನಡೆದ ಅಖಿಲ ಭಾರತೀಯ ಪ್ರಗತಿಶೀಲ ಲೇಖಕರ ಸಮಾವೇಶದಲ್ಲಿ ಕನ್ನಡದ ಪ್ರತಿನಿಧಿಯಾಗಿ ಪಾಲ್ಗೊಂಡರು. ಆ ಸಮಾವೇಶದಲ್ಲಿ ಸಜ್ಜಾದ್ ಜಹೀರ್ ಅವರಂತಹ ಲೇಖಕರು ಮತ್ತು ಕ್ರಾಂತಿಕಾರಿ ಮನೋಭಾವದ ಲೇಖಕರ ಪರಿಚಯವಾಯಿತು. ಅಂದರೆ ಅಖಿಲ ಭಾರತೀಯ ಮಟ್ಟದ ಪ್ರಗತಿಶೀಲ ಚಳವಳಿಯ ಪ್ರಭಾವ ಕೂಡ ಅವರ ಮೇಲಾಯಿತು. ಅಲ್ಲಿದ್ದ ಲೇಖಕರಿಗೆ ಇದ್ದ ಸ್ಪಶ್ಟತೆ ಕನ್ನಡದ ಲೇಖಕರಿಗೆ ಇರಲಿಲ್ಲ. ಆ ನಂತರ ಪ್ರಗತಿಶೀಲ ಲೇಖಕರ ತಾತ್ವಿಕ ವಿಚಾರಗಳು ಇವರಿಗೆ ಇಶ್ಟವಾಗದೆ ಅವರಿಂದ ದೂರವಾಗತೊಡಗಿದರು.

ಇಲ್ಲಿಯೇ ನಿರಂಜರು ಉಲ್ಲೇಖಿಸಿರುವ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಫ್ರೆಂಚ್ ಲೇಖಕ ಲೂಯಿ ಆರಗಾನ್ ಅವರು ಲೇಖಕ ಸಜ್ಜಾದ್ ಜಹೀರ್ ಅವರಿಗೆ ಹೇಳಿದ ಮಾತನ್ನು ನಿರಂಜನರು ಉಲ್ಲೇಖಿಸಿದ್ದಾರೆ. ಅದೇನೆಂದರೆ “ಸಾಹಿತಿಗಳನ್ನು ಸಂಘಟಿಸುವಶ್ಟು ಕಶ್ಟದ ಕೆಲಸ ಇನ್ನೊಂದಿಲ್ಲ. ಪ್ರತಿಯೊಬ್ಬರೂ ವಿಶಿಶ್ಟ ಹಾದಿಯನ್ನೇ ಅಪೇಕ್ಶಿಸುತ್ತಾರೆ.’ ಎಂದು ಹೇಳಿದ್ದನ್ನು ದಾಖಲಿಸಿದ್ದಾರೆ. ಈ ಮಾತನ್ನು ಗಮನಿಸಿದರೆ ಎಲ್ಲ ದೇಶಗಳಲ್ಲಿಯೂ ಲೇಖಕರನ್ನು ಸಂಘಟಿಸುವುದು ಅಸಾಧ್ಯವೇ ಸರಿ. ಬಹುಶಃ ಅದು ನಿರಂಜನರ ಅನುಭವವೂ ಆಗಿರಬಹುದು. ಇಂದು ಲೇಖಕರನ್ನು ಒಗ್ಗೂಡಿಸುವ ಕೆಲಸ ಮಾಡುವ ಎಲ್ಲರದೂ ಇದೇ ಅಭಿಪ್ರಾಯವಾಗಿರಬಹುದು. ಯಾಕೆಂದರೆ ನಿರಂಜನರು ಪ್ರಗತಿಶೀಲ ಲೇಖಕರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದವರು. ಅದು ಸಾಧ್ಯವಾಗದೆ ಕೊರಗಿದ್ದೂ ಉಂಟು.

ತಾತ್ವಿಕವಾಗಿ ಇದ್ದ ಬಿರುಕಿನಿಂದ ಪ್ರಗತಿಶೀಲ ಚಳವಳಿಯಲ್ಲಿ ತೊಡಗಿದ್ದ ಲೇಖಕರು ಬೇರೆ ಬೇರೆಯಾಗುತ್ತಾರೆ. ಅದೆಶ್ಟು ಬೇರೆಯಾಗಿದ್ದರು ಎಂಬುದನ್ನು ತಿಳಿಯಬೇಕಾದರೆ 1952ರಲ್ಲಿ ಹಿರಿಯೂರಿನಲ್ಲಿ ನಡೆದ ಪ್ರಗತಿಶೀಲ ಲೇಖಕರ ಸಮಾವೇಶದಲ್ಲಿ ನಿರಂಜನರು ಮಾಡಿದ ಭಾಶಣವನ್ನು ಗಮನಿಸಿದರೆ ಸ್ಪಶ್ಟವಾಗುತ್ತದೆ. ವ್ಯಕ್ತಿಗತವಾಗಿ ಮತ್ತು ತಾತ್ವಿಕವಾಗಿ ಪ್ರಗತಿಶೀಲ ಪಂಥ ವಿಘಟನೆಗೊಂಡಿದ್ದು ಅರಿವಿಗೆ ಬರುತ್ತದೆ. ಆ ನಂತರ ಪ್ರಗತಿಶೀಲ ಮನೋಭಾವದ ಲೇಖಕರನ್ನು ಒಗ್ಗೂಡಿಸಲು 1976ರ ಜನವರಿಯಲ್ಲಿ ದಾವಣಗೆರೆಯಲ್ಲಿ ಪ್ರಗತಿಶೀಲ ಪಂಥದ ಲೇಖಕರ ಸಮಾವೇಶವನ್ನು ಆಯೋಜಿಸುತ್ತಾರೆ.

ಅದರ ಅಧ್ಯಕ್ಶತೆಯನ್ನು ವಹಿಸಿ ಪ್ರಗತಿಶೀಲ ಸಾಹಿತ್ಯದ ಮಹತ್ವ ಮತ್ತು ಲೇಖಕರು ತಾತ್ವಿಕವಾಗಿ ಗಟ್ಟಿಗೊಂಡು ಜನಪರ ಸಾಹಿತ್ಯವನ್ನು ಸೃಶ್ಟಿಸುವುದರ ಅಗತ್ಯವನ್ನು ಕುರಿತು ಅವರು ಮಾತನಾಡಿದ್ದನ್ನು ಇಲ್ಲಿ ಗಮನಿಸಬಹುದು. ಇದೆಲ್ಲವನ್ನು ಗಮನಿಸಿದರೆ ವಿದ್ಯಾರ್ಥಿ ದೆಸೆಯಿಂದ ಆರಂಭವಾಗಿ ಕನ್ನಡ ಮಹತ್ವದ ಲೇಖಕರಾಗಿ ಬೆಳೆದ ಹಂತದಲ್ಲಿಯೂ ರೈತರು, ಕಾರ್ಮಿಕರು, ಸಾಹಿತಿಗಳು, ಪತ್ರಕರ್ತರು ಮುಂತಾದವರನ್ನು ಒಗ್ಗೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರ ಹಿಂದೆ ದುಡಿದಿರುವುದು ಕಂಡುಬರುತ್ತದೆ. ಇದೆಲ್ಲ ಅವರೊಳಗಿನ ಸಾಮಾಜಿಕ ಕಾರ್ಯಕರ್ತ ಬೇರೆ ಬೇರೆ ರೂಪಗಳಲ್ಲಿ ಕ್ರಿಯಾಶೀಲವಾಗಿ ದುಡಿದದ್ದನ್ನು ಎತ್ತಿತೋರಿಸುತ್ತದೆ. ಅಂದರೆ ಒಂದಲ್ಲ ಒಂದು ರೀತಿಯಲ್ಲಿ ಚಳವಳಿ ಜೊತೆಗೆ ನೇರವಾಗಿ ಇಲ್ಲವೇ ಚಳವಳಿಗೆ ಪೂರಕವಾಗಿ ನಾನಾ ಬಗೆಯ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಹೀಗಿದ್ದೂ ಲೂಯಿ ಆರಗಾನ್ ಮಾತು ನಿರಂಜನರ ಅನುಭವ ಆಗಿದ್ದೂ ಹೌದು. ಅಂದರೆ ಸಾಹಿತಿಗಳ ಸಂಘಟನೆ ದೊಡ್ಡ ಸವಾಲು. ಅಂತಹ ಸವಾಲನ್ನು ಸ್ವೀಕರಿಸಿ ಅದನ್ನು ಎದುರಿಸಿಯೂ ಅನುಭವ ಪಡೆದಿದ್ದರು ಎಂಬುದು ಗಮನಾರ್ಹ ವಿಚಾರ.

ಹೀಗೆ ಚಳವಳಿಗಳ ಜೊತೆಗೆ ಒಂದಿಲ್ಲೊಂದು ಬಗೆಯ ಸಂಬಂಧವಿದ್ದ ಪರಿಣಾಮ ಅವರು ರಾಜಕೀಯ ಸಿದ್ಧಾಂತವನ್ನು ಮಡಿವಂತಿಕೆಯಿಂದ ಕಾಣಲಿಲ್ಲ. ‘ಲೇಖಕರು ರಾಜಕೀಯ ಪಕ್ಶದ ಸದಸ್ಯರಾದರೆ ಅದರಿಂದ ತಪ್ಪೇನಿಲ್ಲ’ ಎಂಬ ಅಭಿಪ್ರಾಯವನ್ನು ಹೊಂದಿದ್ದರು. (ನಿರಂಜನ-ಬರಗೂರು ಜೊತೆಗೆ ಸಂದರ್ಶನ, ಮುಖತಃ) ಹಾಗೆಯೇ ಲೇಖಕರು ಚಳವಳಿಗಳ ಜೊತೆಗೆ ತೊಡಿಗಿಸಿಕೊಳ್ಳುವುದನ್ನು ವಿರೋಧಿಸುವುದಿಲ್ಲ. ಬದಲಿಗೆ ಲೇಖಕರು ಚಳವಳಿಗಳ ಜೊತೆಗೆ ತೊಡಗಿಕೊಳ್ಳುವದರಿಂದ ಹೊಸಬಗೆಯ ಪಾತ್ರಗಳನ್ನು ಸೃಶ್ಟಿಸಲು ಸಾಧ್ಯವಾಗುತ್ತದೆಯೆಂಬ ಅಭಿಪ್ರಾಯ ಹೊಂದಿದ್ದರು. ಅಂದರೆ ಚಳವಳಿಗಳು ಲೇಖಕರಿಗೆ ಭಿನ್ನ ಲೋಕದ ದರ್ಶನವನ್ನು ಮಾಡಿಸಿ ಹೊಸ ಸಮಾಜ ನಿಮಾರ್ಣದ ಸಾಧ್ಯತೆಗಳ ಬಗೆಗೆ ಚಿಂತಿಸಲು ನೆರವಾಗುತ್ತದೆ ಎಂದು ನಂಬಿದ್ದರು.

ಅಲ್ಲದೆ ಚಳವಳಿಗಳಿಂದ ದೂರವಾದರೆ ಲೇಖಕರಿಗೆ ನಶ್ಟವೆಂದು ಭಾವಿಸಿದ್ದರು. ಇದೆಲ್ಲವನ್ನು ಗಮನಿಸಿದರೆ ಅವರೊಳಗಿನ ‘ರಾಜಕೀಯ ಪ್ರಜ್ಞೆ’ ಸದಾ ಎಚ್ಚರವಾಗಿದ್ದುದು ಗೋಚರಿಸುತ್ತದೆ. ಲೇಖಕರನ್ನು ದಂತಗೋಪುರದ ಬೊಂಬೆಗಳಂತೆ ಭಾವಿಸದೆ ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಂತೆಯೇ ಅವರು ಗ್ರಹಿಸಿದ್ದರು ಎಂಬುದು ಖಚಿತಗೊಳ್ಳುತ್ತದೆ.

ಹೀಗೆ ಗ್ರಹಿಸುವುದಕ್ಕೆ ಅವರಿಗೆ ಚಳವಳಿಗಳ ಪ್ರೇರಣೆ ಮತ್ತು ತರಬೇತಿಗಳಿರುವಂತೆ ಚಳವಳಿಗಳಲ್ಲಿ ಪಾಲ್ಗೊಂಡು ಪ್ರಸಿದ್ದ ಲೇಖಕರಾಗಿ ಬೆಳೆದ ಅನೇಕ ಲೇಖಕರ ಪ್ರೇರಣೆಯೂ ಇದೆ. ಎತ್ತುಗೆಗೆ ರೋಮ ರೋಲಾ, ರಶ್ಯನ್ ಚಿಂತಕ ಬೆಲಿನ್ಸ್‍ಕಿ, ಮ್ಯಾಕ್ಸಿಂ ಗಾರ್ಕಿ, ಸ್ಪ್ಯಾನಿಶ್ ಕ್ರಾಂತಿಕಾರಿ ಕವಿ ಮತ್ತು ಯೋಧ ರಾಲ್ಫ್ ಫಾಕ್ಸ್ ಫ್ರಾಂಕೋ ಮುಂತಾದವರು ಅವರನ್ನು ಪ್ರಭಾವಿಸಿದ್ದಾರೆ. ಅವರಿಂದ ಕಲಿತಿರುವುದನ್ನು ತಮ್ಮ ಬರೆಹಗಳಲ್ಲಿ ಮತ್ತೆ ಮತ್ತೆ ಉಲ್ಲೇಖಿಸಿದ್ದಾರೆ. ಬೆಲಿನ್ಸ್‍ಕಿಯವರ ಸಾಹಿತ್ಯ ಮೀಮಾಂಸೆಯ ಕುರಿತಾದ ನಿರಂಜನರ ಲೇಖನವನ್ನು ಗಮನಿಸಿದರೆ ಇದು ಸ್ಪಶ್ಟವಾಗುತ್ತದೆ. ಬೆಲಿನ್ಸ್‍ಕಿ ಮಂಡಿಸುವ ಸಾಹಿತ್ಯ ಸಿದ್ಧಾಂತÀವನ್ನು ಒಪ್ಪಿ ಅದನ್ನು ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ಪ್ರೇರಣೆಯಾಗಿ ಸ್ವೀಕರಿಸಿರುವುದು ತಿಳಿಯುತ್ತದೆ. ಇನ್ನು ಮ್ಯಾಕ್ಸಿಂ ಗಾರ್ಕಿ ಅವರ ಪ್ರಿಯವಾದ ಲೇಖಕ. ಆತನ ‘ತಾಯಿ’ ಕಾದಂಬರಿಯನ್ನು ಅನುವಾದಿಸಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ತಮ್ಮ ಊರಿನ ಪರಿಸರದಿಂದ, ತಮ್ಮ ವೈಯಕ್ತಿಕ ಬದುಕಿನಿಂದ ಹಿಡಿದ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿರುವ ಲೇಖಕರ ತನಕÀ ಸಾಕಶ್ಟು ಜನರಿಂದ ಕಲಿತಿದ್ದಾರೆ. ತಮ್ಮ ಬದುಕಿಗೆ ಬೇಕಾದ ಪ್ರೇರಣೆ ಪಡೆದಿದ್ದಾರೆ. ಆ ಮೂಲಕ ತಮ್ಮ ಸೃಜನಶೀಲ ಬದುಕಿಗೆ ತಾತ್ವಿಕ ಭೂಮಿಕೆಯನ್ನು ರೂಪಿಸಿಕೊಂಡು ಅದರಂತೆ ಜೀವಿಸಿದ್ದರು. ಅಲ್ಲದೆ ಲೇಖಕರಾದವರು ಖಚಿತ ತಾತ್ವಿಕ ನಿಲುವನ್ನು ಹೊಂದಿ ಬರೆವಣಿಗೆ ಮಾಡುವುದು ಲೇಖಕರಿಗೂ ಜನರಿಗೂ ಒಳ್ಳೆಯದು ಎಂಬ ನಿಲುವಿಗೆ ತಲುಪಿದ್ದವರು. ಈ ಬಗೆಗೆ ತಮ್ಮ ಬರೆಹಗಳಲ್ಲಿ ಅವರು ಚರ್ಚಿಸಿದ್ದಾರೆ.

ಬರೆಯುವುದು ಯಾತಕ್ಕೋಸ್ಕರ?

ಕೊನೆಯಲ್ಲಿ ಅವರೇ ಬರೆದಿರುವ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುವ ಮೂಲಕ ಈ ಟಿಪ್ಪಣಿಯನ್ನು ಮುಗಿಸಬಹುದೆನಿಸುತ್ತದೆ. ‘ನಾನು ಬರೆಯುತ್ತಿರುವುದು ಯಾತಕ್ಕೋಸ್ಕರ? ಯಾತಕ್ಕೆಂದರೆ, ಬರೆಯದೆ ಸುಮ್ಮನಿರುವುದು ನನ್ನಿಂದ ಸಾಧ್ಯವೇ ಇಲ್ಲ. ಯಾಕೆಂದರೆ, ಕಾಗದದ ಮೇಲೆ ಬರೆಯದೆ ಇದ್ದರೂ ವಿಶಯಗಳನ್ನು ಸ್ಪಶ್ಟಗೊಳಿಸುವುದಕ್ಕೋಸ್ಕರ ಮನಸಿನಲ್ಲಾದರೂ ಬರೆಯುತ್ತಿರುತ್ತೇನೆ. ಯಾಕೆಂದರೆ, ನನಗೆ ಚಿಂತನೆಯ ಹಾಗೂ ವರ್ತನೆಯ ಅತ್ಯುನ್ನತ ವಿಧಾನವೇ ಬರವಣಿಗೆ. ಯಾಕೆಂದರೆ ನನಗೆ ಬರೆಯುವುದೆಂದರೆ ಉಸಿರಾಡಿದಂತೆ, ಬದುಕಿದಂತೆ. ನಾನು ಸದಾ ಕಾಲವೂ ಚಲಿಸುತ್ತಲೇ ಇದ್ದೇನೆ; ಬದುಕಿರುವವರೆಗೂ ನಿಲ್ಲುವುದೆಂದಿಲ್ಲ. ಚಲನೆ; ನೇರವಾದ ಚಲನೆ ಇಲ್ಲದ ಬದುಕು ನನ್ನ ಪಾಲಿಗೆ ಅರ್ಥಶೂನ್ಯ. ನಾವು ಬರೆಹಗಾರರು ಕುಂಟುತ್ತಿರುವವರನ್ನು ಬೇಗ ಬನ್ನಿ ಎಂದು ಕರೆಯುತ್ತಿದ್ದೇವೆ. ಆದರೆ ಅವರಿಗೋಸ್ಕರ ನಾವು ಕಾದಿರಬೇಕಾದುದಿಲ್ಲ. ನಮ್ಮನ್ನು ಹಿಂದೆ ಹಾಕಿ ಮುಂದೆ ಸಾಗುವುದು ಅವರಿಗೆ ಸೇರಿದ್ದು. ಮುನ್ನಡೆಯುವ ಸೇನೆ ಎಂದೂ ತಡೆದು ನಿಲ್ಲುವುದಿಲ್ಲ.” ಎಂಬ ರೋಮಾ ರೋಲ ಅವರ ಮಾತನ್ನು ನಿರಂಜನರು ಉಲ್ಲೇಖಿಸಿದ್ದಾರೆ.

ರೋಲ ಅವರ ಮಾತು ನಿರಂಜನರಿಗೆ ಯಥಾವತ್ತಾಗಿ ಅನ್ವಯಿಸುತ್ತದೆ. ಬದುಕುವುದಕ್ಕಾಗಿಯೇ ಬರೆದವರು ನಿರಂಜನರು. ಪತ್ರಕರ್ತರಾಗಿ, ಕಾದಂಬರಿಕಾರರಾಗಿ ನಿರಂತರವಾಗಿ ಗದ್ಯ ಬರೆಹ ಮಾಡಿದರು. ತಮ್ಮ ಚೈತನ್ಯವನ್ನು ಉಳಿಸಿಕೊಳ್ಳಲು ಜೀವನೋತ್ಸಾಹ ಉಳಿಸಿಕೊಂಡು ಉಸಿರಾಡಲು ಓದು ಬರೆಹಗಳು ನಿರಂಜನರಿಗೆ ಅನಿವಾರ್ಯವಾಗಿದ್ದವು. ಅದರಲ್ಲಿಯು ಪಾಶ್ರ್ವವಾಯುವಿಗೆ ತುತ್ತಾಗಿ ಸುಮಾರು ಇಪ್ಪತ್ತೊಂದು ವರ್ಶಗಳ ಕಾಲ ಅದರಿಂದ ನರಳುತ್ತಿದ್ದಾಗ ಅವರಿಗೆ ಓದು ಬರೆಹಗಳೇ ಶಕ್ತಿ ತುಂಬಿದ್ದು. ಓದು ಬರೆಹಗಳಿಲ್ಲದೆ ಅವರು ಈ ಕಾಲವನ್ನು ಕಳೆದಿದ್ದರೆ ಜೀವನದ ಸ್ಥಿತಿ ಹೇಗಿರುತ್ತಿತ್ತು? ಎಂಬುದನ್ನು ಊಹಿಸಲು ಕಶ್ಟ. ಅಂತಹ ಸಂದರ್ಭವನ್ನು ಅವರಿಗೆ ನಿಭಾಯಿಸುವ ಚೈತನ್ಯ ತುಂಬಿದ್ದು ಬರೆಹ ಮತ್ತು ಅವರಿಗಿದ್ದ ರಾಜಕೀಯ ಪ್ರಜ್ಞೆ ಆಗಿದ್ದವು. ಅದರಲ್ಲಿಯೂ ಪ್ರಗತಿಶೀಲ ಸಾಹಿತ್ಯ ಸೃಶ್ಟಿಯೇ ಅವರ ಬದ್ಧತೆಯಾಗಿತ್ತು ಎಂಬುದು ಮುಖ್ಯವಿಚಾರ. ಅಂತಹ ಬದ್ಧತೆಯನ್ನು ಹೊಂದುವಂತೆ ಮಾಡಿದ್ದು ಚಳವಳಿಯ ಶಿಕ್ಶಣ ಮತ್ತು ಸೈದ್ಧಾಂತಿಕ ಅರಿವೇ ಆಗಿತ್ತು ಎಂಬುದು ನೆನಪಿಡಬೇಕಾದ ಸಂಗತಿ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ- ಹೈಕೋರ್ಟ್ ಆದೇಶ Janashakthi Media

Donate Janashakthi Media

Leave a Reply

Your email address will not be published. Required fields are marked *