ಮಳೆಯ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ ಓರ್ವ ಮಹಿಳೆ ಸಾವು : ರಾಜ್ಯದ ನಾನಾ ಕಡೆ ನಾಲ್ವರ ಬಲಿ

ಮಂಗಳೂರು: ಕರಾವಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಹಿಳೆಯೊಬ್ಬರು ಸಾವನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮನೆಯೊಳಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಲಾಗಿದೆ. ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರದಲ್ಲಿಇಂದು ಬೆಳಿಗ್ಗೆ ನಡೆದಿದೆ. ಮನೆ ಮೇಲೆ ಗುಡ್ಡ ಕುಸಿದು ಮನೆಯೊಳಗೆ ಇಬ್ಬರು ಮಹಿಳೆಯರು ಸಿಲುಕಿದ್ದರು. ಇವರನ್ನು ರಕ್ಷಿಸುವ ಕಾರ್ಯಚರಣೆ ನಡೆದು 20 ವರ್ಷದ ಶಫಾ ಎಂಬ ಯುವತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ,  ಗ್ರಾಮದ ಗುಂಪು ಮನೆಗಳ ಪೈಕಿ ಮಹಮ್ಮದ್‌ ಎಂಬುವರ ಮನೆ ಮೇಲೆ ಗುಡ್ಡ ಜರಿದು ಬಿದ್ದಿದೆ. ಮನೆಯ ಒಳಗಿದ್ದ ಮಹಮ್ಮದ್‌ ಅವರ ಪತ್ನಿ ಝರಿನಾ (49) ಮತ್ತು ಪುತ್ರಿ ಶಫಾ (20) ಸಿಲುಕಿಕೊಂಡಿದ್ದರು. ಆದರೆ, ಮನೆಯೊಳಗ ಸಿಲುಕಿಕೊಂಡಿದ್ದ  ಝರೀನಾ ಅವರು ಹೊರಬರಲಾಗದೆ ಮೃತಪಟ್ಟಿದ್ದಾರೆ.  ಅವರ ಮೃತದೇಹವನ್ನು ಪೊಲೀಸರು ಮತ್ತು ಸ್ಥಳೀಯರು ಹೊರತೆಗೆದಿದ್ದಾರೆ. ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರು ಕಾರ್ಯಚರಣೆಯಿಂದ ಒಬ್ಬ ಮಹಿಳೆಯ ರಕ್ಷಣೆಯಾಗಿದೆ. ಬಂಟ್ವಾಳ ತಹಶೀಲ್ದಾರ್‌  ಎಸ್‌.ಬಿ.ಕೂಡಲಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಐದನೇ ಬಲಿಯಾಗಿದೆ.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ: ಜನಜೀವನ ಅಸ್ತವ್ಯಸ್ಥ..!

ಒಂದೇ ದಿನದಲ್ಲಿ ಇನ್ನೂ ನಾಲ್ವರು ಬಲಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಇನ್ನೂ ನಾಲ್ವರು ಮಳೆಯ ಹೊಡೆತಕ್ಕೆ ಮತ್ತು ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

ಕಾಲು ಜಾರಿ ಬಿದ್ದು ಇಬ್ಬರು ನೀರು ಪಾಲಾಗಿದ್ದಾರೆ. ಉತ್ತರ ಕನ್ನಡದ ಕುಮಟಾದ ಬೆಟ್ಕುಳಿಯಲ್ಲಿಇಬ್ಬರು ಬಲಿಯಾಗಿದ್ದಾರೆ. ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ  ಕಾಲು ಜಾರಿ ಬಿದ್ದಿದ್ದು. ಹೊಳೆಯಲ್ಲಿ ಕೊಚ್ಜಿಕೊಂಡು ಹೋಗಿದ್ದಾರೆ. ಮೃತರನ್ನು ಸತೀಶ ಪಾಂಡುರಂಗ ನಾಯ್ಕ (38), ಉಲ್ಲಾಸ ಗಾವಡಿ (50) ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆಲೆಟ್ಟಿಯ ಕೂರ್ನಡ್ಕ ಬಳಿ ಕೇರಳ ಮೂಲದ ಕಾರ್ಮಿಕರೊಬ್ಬರು ಹೊಳೆಯ ಸಂಖ ದಾಟುತ್ತಿರುವಾಗ ಆಯ ತಪ್ಪಿ ಬಿದ್ದು ಹೊಳೆಯ ಪಾಲಾಗಿರುವ ಘಟನೆ ನಡೆದಿದೆ. ತೋಟದಲ್ಲಿ ಕೂಲಿ ಕೆಲಸ ಮುಗಿಸಿ ಹಿಂತಿರುಗುವಾಗ ಘಟನೆ ನಡೆದಿದ್ದು, ಸದ್ಯ ನಾಪತ್ತೆಯಾಗಿರುವ ಕಾರ್ಮಿಕನ ಹುಡುಕಾಟದಲ್ಲಿ ಅಗ್ನಿಶಾಮಕ ದಳದವರು ತೊಡಗಿದ್ದಾರೆ.

ಮರ ಬಿದ್ದು ಬೈಕ್‌ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್‌ ಪರಿಸರದಲ್ಲಿ ಬೃಹತ್‌ ಆಲದ ಮರವೊಂದು ಬಿದ್ದು ಬೈಕ್‌ ಸವಾರ ಸಾವಿಗೀಡಾಗಿದ್ದಾರೆ. ಗಾಳಿ ಮಳೆ ಹಿನ್ನೆಲೆಯಲ್ಲಿ ಮರ ಧರೆಗುರುಳಿದ್ದು, ಸಂಚರಿಸುತ್ತಿದ್ದ ಬೈಕ್‌ ಸವಾರನ ಮೇಲೆ ಬಿದ್ದಿದೆ. ಬೈಕ್‌ ಸವಾರ ಪ್ರವೀಣ್‌ ಆಚಾರ್ಯ ಸಾವಿಗೀಡಾಗಿದ್ದಾರೆ. ಮರ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *