ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ನೀಡುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ರೋಹಿಂಗ್ಯಾ ಮುಸ್ಲಿಮರಿಗೆ ಇಡಬ್ಲ್ಯುಎಸ್ ವಸತಿಯನ್ನು ನೀಡಲು ಯಾವುದೇ ನಿರ್ದೇಶನ ಹೊರಡಿಸಲಿಲ್ಲವೆಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೇ ಅಕ್ರಮ ವಿದೇಶಿಗರು ಅವರು ನೆಲೆಸಿರುವ ಸ್ಥಳದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸೂಚನೆ ನೀಡಿದೆ.

ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ನೀಡಲಾಗುವುದೆಂದು ಈ ಹಿಂದೆ ಹೇಳಿದ್ದ ಕೇಂದ್ರ ಸರ್ಕಾರ ಇದೀಗ ವಸತಿ ನೀಡುವುದಿಲ್ಲ ತಿಳಿಸಿದೆ.

ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ವಸತಿಯನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಟ್ವೀಟ್‌ ಮಾಡಿದ್ದರು. ಇದು ಸುದ್ದಿಯಾಗಿ ಪ್ರಕಟವಾಗುತ್ತಿದ್ದಂತೆ ಕೆಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಕೇಂದ್ರ ತನ್ನ ಸ್ಪಷ್ಟನೆಯನ್ನು ವ್ಯಕ್ತಪಡಿಸಿದ್ದು, ಇದೀಗ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಮರಿಗೆ ಯಾವುದೇ ವಸತಿಯನ್ನು ನೀಡಲು ಸಾಧ್ಯವಿಲ್ಲವೆಂದು ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದೆ.

ಹರ್ದೀಪ್‌ ಸಿಂಗ್‌ ಪುರಿ ಹೇಳಿಕೆ

1,100 ರೋಹಿಂಗ್ಯಾ ಮುಸ್ಲಿಮರು ಟೆಂಟ್‌ನಲ್ಲಿ ವಾಸಿಸುತ್ತಿದ್ದು ಅವರನ್ನು ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಅಪಾರ್ಟ್‌ಮೆಂಟ್‌ಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ. ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ ಎಂದಿದ್ದಾರೆ.

ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್‌ ವಾಲಾ ಪ್ರದೇಶದ ಇಡಬ್ಲ್ಯೂಎಸ್‌ ಅಪಾರ್ಟ್‌ಮೆಂಟ್‌ ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, ರಾತ್ರಿಯಿಡೀ ದೆಹಲಿ ಪೊಲೀಸರಿಂದ ಭದ್ರತೆ ನೀಡಲಿದ್ದೇವೆ. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ. ಭಾರತ 1951 ರ ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ. ಜನಾಂಗ, ಧರ್ಮವನ್ನು ಲೆಕ್ಕಿಸದೇ ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದಿದ್ದರು.

ಕೇಂದ್ರ ಈ ಹಿಂದೆ ಹೇಳಿದ್ದು

ಮ್ಯಾನ್ಮಾರ್‌ ದೇಶದಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಭಾರತಲ್ಲಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ. ಈ ನಿರಾಶ್ರಿತರು ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.

ಪಾಕ್‌ ಸೇರಿದಂತೆ ಉಗ್ರ ಸಂಘಟನೆಯೊಂದಿಗೆ ಮುಸ್ಲಿಮರು ಸಂಬಂಧ ಹೊಂದಿದ್ದಾರೆ. ದೇಶದಲ್ಲಿ ಕೋಮುವಾದ ಹರಡುತ್ತಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಎಲ್ಲ ದೇಶಗಳಂತೆ ವಲಸೆಗೆಂದು ಬರುವ ಜನರ ಮೇಲೆ ನಮಗೆ ಅನುಕಂಪವಿದೆ. ಆದರೆ ವಿಶೇಷವಾಗಿ ಈ ಪ್ರಕರಣದಲ್ಲಿ ದೇಶದ ಭದ್ರತೆ ವಿಚಾರವೂ ಇರುವ ಕಾರಣ ಈ ಅನುಕಂಪ ದುರ್ಬಳಕೆಯಾಗಬಾರದು ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ.

ಅಲ್ಲದೆ, ಗುಪ್ತಚರ ವರದಿಗಳು ಅಧಿಕೃತವಾಗಿ ಪಾಕಿಸ್ತಾನ ಮೂಲದ ಉಗ್ರರು ಮತ್ತು ಇತರ ದೇಶಗಳಲ್ಲಿರುವ ಉಗ್ರರ ಜೊತೆ ರೋಹಿಂಗ್ಯಾ ಮುಸ್ಲಿಮರಿಗೆ ಸಂಪರ್ಕವಿದೆ ಎನ್ನುವ ಮಾಹಿತಿಗಳಿವೆ. ಅಷ್ಟೇ ಅಲ್ಲದೇ ದೇಶದಲ್ಲಿರುವ ಬೌದ್ಧರ ಮೇಲೆ ಹಿಂಸಾಚಾರ ನಡೆಯುವ ಭೀತಿಯೂ ಇದೆ.

ವಲಸಿಗರ ನೀತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ನೀತಿಗೆ ಭಾರತ ಬದ್ಧವಾಗಿದೆ. ಆದರೆ ಇದರ ಜೊತೆಗೆ ದೇಶದಲ್ಲಿರುವ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆಯನ್ನು ಕಾಪಾಡುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ತನ್ನ ಹೇಳಿಕೆಯಲ್ಲಿ ವರದಿಯನ್ನು ಸಲ್ಲಿಸಿತ್ತು.

Donate Janashakthi Media

Leave a Reply

Your email address will not be published. Required fields are marked *