ನಲಗೊಂಡ : ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮನೆಯಲ್ಲಿ ಐಸೋಲೇಷನ್‍ನಲ್ಲಿರುವಂತೆ ಸೂಚನೆ ನೀಡಿದ ವೇಳೆ ಮನೆಯಲ್ಲಿ ಐಸೋಲೇಷನ್ ಆಗುವಷ್ಟು ಸೌಕರ್ಯ ಇಲ್ಲದೆ ಹನ್ನೊಂದು ದಿನಗಳ ಕಾಲ ಮರದ ಮೇಲೆ ದಿನಕಳೆದ ಪ್ರಸಂಗವೊಂದು ನಡೆದಿದೆ.
ತೆಲಂಗಾಣದ ನಲಗೊಂಡ ಜಿಲ್ಲೆಯ ಕೊಥಾನಂದಿಕೊಂಡ ಗ್ರಾಮದಲ್ಲಿ ವಾಸವಿರುವ ಶಿವ ಎಂಬ ವಿದ್ಯಾರ್ಥಿಯೊರ್ವನಿಗೆ ಕೆಲದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಬಳಿಕ ಅಲ್ಲಿನ ಆರೋಗ್ಯ ಇಲಾಖೆ ಮತ್ತು ಸ್ಥಳೀಯರು ಐಸೋಲೆಷನ್‍ನಲ್ಲಿ ಇರುವಂತೆ ಸೂಚನೆ ನೀಡಿದರು ಆದರೆ ಶಿವ ಅವರ ಮನೆಯಲ್ಲಿ ಒಂದೇ ಕೋಣೆ ಇದ್ದುದರಿಂದಾಗಿ ಆತ ಮರದಲ್ಲಿ 11 ದಿನ ವಾಸವಾಗುವ ಮೂಲಕ ಐಸೋಲೇಷನ್‍ಗೆ ಒಳಗಾಗಿದ್ದಾನೆ.
ತೆಲಂಗಾಣದ ಮಾಧ್ಯಮಗಳ ವರದಿಯಂತೆ, ಕೊಥಾನಂದಿಕೊಂಡ ಗ್ರಾಮ ಹಾಗೂ ಸುತ್ತಮುತ್ತ ಯಾವುದೇ ಐಸೋಲೇಷನ್ ಸೆಂಟರ್ ಗಳಿಲ್ಲ. ಕುಟುಂಬದೊಂದಿಗೆ ವಾಸವಿರುವ ಕಾರಣ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಹಾಗಾಗಿ ನಾನು ಮರದ ಮೇಲೆ ವಾಸವಾಗಲು ನಿರ್ಧರಿಸಿದೆ ಎಂದು ಶಿವು ಪ್ರತಿಕ್ರಿಯೆ ನೀಡಿದ್ದಾರೆ.
ಕೋಠಾನಂದಿಕೊಂಡಾದಲ್ಲಿ ಸುಮಾರು 350 ಕುಟುಂಬಗಳು ವಾಸವಾಗಿವೆ. ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮಿ ಕ್ರಮಿಸಬೇಕು. ತುರ್ತು ಚಿಕಿತ್ಸೆಗಾಗಿ 30 ಕಿ.ಮಿ ಕ್ರಮಿಸಬೇಕಾದಂತಹ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ತಮ್ಮ ಅಳಲು ಹೊರಹಾಕಿದ್ದಾರೆ.
ಇತ್ತೀಚೆಗೆ ಹಳ್ಳಿಗಳಲ್ಲೂ ಕೋವಿಡ್ 2 ನೇ ಅಲೆ ಆತಂಕ ಮನೆಮಾಡಿದೆ. ಬಹುತೇಕ ಹಳ್ಳಿಗಳಲ್ಲೂ ದಿನ ನಿತ್ಯ ಮೂರರಿಂದ ಐದು ಕೇಸ್ ಗಳು ಬರುತ್ತಿವೆ. ಹಳ್ಳಿಯೊಂದರಲ್ಲಿ ಕೊವಿಡ್ 19 ರೋಗಿಗಳಿಗೆ ಮನೆಯಲ್ಲಿ ಐಸೋಲೇಟ್ ಆಗುವುದೇ ದೊಡ್ಡ ಸಮಸ್ಯೆಯಾಗಿದೆ. ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಅಗತ್ಯ ಸೌಲಭ್ಯಗಳಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು ಇಲ್ಲದಂತಿವೆ. ಪಂಚಾಯತಿ ಮಟ್ಟದಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯುವ ಅಗತ್ಯತೆ ಇದೆ.