ಗದಗ: 14 ವರ್ಷದ ವಿದ್ಯಾರ್ಥಿನಿಯೋರ್ವಳನ್ನು ಕೊಲೆಗೈದು ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದೇ ಅಕ್ಟೋಬರ್ 23 ರಂದು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೋರ್ವಳು ಕಾಣೆಯಾಗಿದ್ದಳು. ಮಗಳು ಕಾಣದ ಹಿನ್ನೆಲೆಯಲ್ಲಿ ಪೋಷಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ನಾಪತ್ತೆ ಕುರಿತು ಮಾಹಿತಿ ನೀಡಿದ್ದರು. ಆದರೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗದ ಕಾರಣ ಪೊಲೀಸರು ಹುಡುಕಾಟ ನಡೆಸುವ ಗೋಜಿಗೆ ಹೋಗಿರಲಿಲ್ಲ ಎನ್ನಲಾಗಿದೆ.
ನಿನ್ನೆ ಮನೆಯ ಪಕ್ಕದಲ್ಲೇ ಮಗಳ ಶವ ಪತ್ತೆಯಾಗಿದ್ದು, ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಆಕೆಯನ್ನು ಕೊಲೆ ಮಾಡಿ, ಗೋಣಿಚೀಲ ಹೊದಿಸಿ ಹೋಗಿದ್ದಾರೆ. ಘಟನೆ ನಡೆದು ಮೂರು, ನಾಲ್ಕು ದಿನಗಳಾಗಿದ್ದರಿಂದ ಶವ ಕೊಳೆತು ನಾರುತ್ತಿತ್ತು. ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದಾಗ ಮನೆಯವರಿಗೆ ಬಾಲಕಿಯ ಶವ ಪತ್ತೆಯಾಗಿದೆ. ಮುದ್ದಿನ ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮೂವರು ಸಿಪಿಐಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು, ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಸೇರಿದಂತೆ ಗ್ರಾಮೀಣ ಠಾಣೆ ಪೊಲೀಸರು, ಬೆಳರಚ್ಚುಗಾರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ತಿಂಗಳಷ್ಟೆ ಗದಗ್ ನಗರದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಈಗ ಮತ್ತೆ ಇಂತಹದ್ದೆ ಪ್ರಕರಣ ನಡೆದಿದ್ದು, ಗದಗ ಜನತೆ ಭಯದಲ್ಲಿ ಇದ್ದಾರೆ. ಸರಕಾರ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸರಿಯಾದ ರಕ್ಷಣೆ ಮತ್ತು ಸೌಲಭ್ಯಗಳನ್ನು ನೀಡಬೇಕು. ಇನ್ನೂ ಠಾಣೆಗಳಲ್ಲಿ ಮಹಿಳೆ/ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಬಂದಾಗ ಸ್ವಯಂ ದೂರು ದಾಖಲಿಸಿಕೊಳ್ಳಬೇಕು, ಇಲ್ಲವೆ ಪೋಷಕರಿಗೆ ಅರಿವು ಮೂಡಿಸಬೇಕು. ಆದರೆ ಇಲ್ಲ ಆ ರೀತಿ ನಡೆದಿಲ್ಲ. ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಪರಾಧಿಗಳಿಗೆ ಕಾನೂನು ರೀತಿಯಲ್ಲಿ ಬಲವಾದ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.