– ನವೀನ್ ಸೂರಿಂಜೆ
ಹಿಂದುತ್ವ ಸಂಘಟನೆಗಳ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ನೀಡಿ ಮುಖ್ಯ ಅತಿಥಿಯಾಗುತ್ತಾರೆ. ಗೋವಿಂದ ಬಾಬು ಪೂಜಾರಿಯಂತಹ ಕೋಟ್ಯಾಧಿಪತಿಗಳನ್ನು ಹಿಂದುತ್ವವಾದಿಗಳು ಹೀಗೆ ಬಲೆಗೆ ಬೀಳಿಸಿಕೊಂಡರೆ, ಬಡ ಹಿಂದುಳಿದ ವರ್ಗದ ಹುಡುಗರನ್ನು ಧರ್ಮ ರಕ್ಷಣೆಯ ಅಮಲಿನಲ್ಲಿ ಖೆಡ್ಡಾಗೆ ಬೀಳಿಸುತ್ತದೆ.
ಮಂಗಳೂರಿನಲ್ಲಿ ನೂರಾರು ಮಂದಿ ಕೋಟ್ಯಾಧಿಪತಿ ಮೇಲ್ವರ್ಗದ ಉದ್ಯಮಿಗಳಿದ್ದಾರೆ. ಆದರೆ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿಯೇ ಹಿಂದುತ್ವವಾದಿಗಳಿಂದ ಮೋಸ ಹೋಗಿದ್ದು ಹೇಗೆ ? ಹಿಂದುತ್ವವಾದಿಗಳಿಗೆ ಹಿಂದುಳಿದ ಸಮುದಾಯವೇ ಟಾರ್ಗೆಟ್ ಯಾಕೆ ಆಗುತ್ತದೆ ? ಇದು ಕೇವಲ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿಯ ಕತೆಯಲ್ಲ, ಮುಸ್ಲಿಂ ದ್ವೇಷದ ರಾಜಕೀಯದಲ್ಲಿ ಮೋಸಕ್ಕೊಳಗಾಗಿರುವ ಸಮುದಾಯವೊಂದರ ಕತೆಯಿದು.
ಕರಾವಳಿಯ ಮುಸ್ಲಿಂ ದ್ವೇಷದ ರಾಜಕಾರಣದಲ್ಲೂ ಹಿಂದುತ್ವವಾದಿಗಳು ಸಮುದಾಯವೊಂದನ್ನು ಕಾಲಾಳುಗಳನ್ನಾಗಿ ಬಳಸಿಕೊಳ್ಳುತ್ತಾರೆ. ಇತ್ತಿಚೆಗೆ ಇದೇ ಚೈತ್ರ ಕುಂದಾಪುರ ಭಾಷಣ ಮಾಡುತ್ತಾ “ಕೆಲವರ ಪಾಲಿಗೆ ಭಜರಂಗದಳ ಎಂದರೆ ಗೂಂಡಾಗಳು. ಕೆಲವರ ಪಾಲಿಗೆ ಭಜರಂಗದಳ ಎಂದರೆ ರೌಡಿಗಳು. ಕೆಲವರ ಪಾಲಿಗೆ ಭಜರಂಗದಳ ಎಂದರೆ ಪುಡಾರಿಗಳು. ಇನ್ನೂ ಕೆಲವರ ಪಾಲಿಗೆ ಭಜರಂಗದಳ ಎಂದರೆ ಕೆಲಸ ಇಲ್ಲದವರು. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಎಂದಿದ್ದರೆ ನಮ್ಮ ಭಜರಂಗದಳ ಗೂಂಡಾಗಿರಿಗೂ ಸಿದ್ದ, ರೌಡೀಸಂಗೂ ಸಿದ್ದ” ಎನ್ನುತ್ತಾರೆ. ಭಜರಂಗದಲ್ಲಿ ಅತ್ಯಂತ ಹೆಚ್ಚು ಸಕ್ರೀಯರಾಗಿ ರೌಡಿಗಳಾಗಿ ಬದುಕಿ, ಸಾಯುತ್ತಿರುವುದು ಹಿಂದುಳಿದ ಸಮುದಾಯದ ಹುಡುಗರು. ಎಲ್ಲಾ ಕೋಮುಗಲಭೆ, ನೈತಿಕ ಪೊಲೀಸ್ ಗಿರಿಯ ಎಫ್ಐಆರ್ ಗಳಲ್ಲಿ ಹಿಂದುಳಿದ ಸಮುದಾಯದ ಹೆಸರುಗಳೇ ಅತ್ಯಧಿಕವಾಗಲು ಕಾರಣ ಚೈತ್ರಾ ಕುಂದಾಪುರರಂತವರ ಭಾಷಣಗಳು ! ಇದು ಹಿಂದುಳಿದ ಸಮುದಾಯವೊಂದನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುಗಿಸಿಬಿಡುವ ವ್ಯವಸ್ಥಿತ ಪಿತೂರಿ.
ಗೋವಿಂದ ಬಾಬು ಪೂಜಾರಿ ಇಡೀ ಕರಾವಳಿಯ ಸಾಮಾಜಿಕ, ರಾಜಕೀಯ, ಆರ್ಥಿಕ ಪಲ್ಲಟಗಳ ಪ್ರತಿನಿಧಿಯಂತೆ ಕಾಣುತ್ತಾರೆ. ಉಳುವವನೇ ಹೊಲದೊಡೆಯ ಕಾನೂನಿನಿಂದ ಭೂಮಿ ಕಳೆದುಕೊಂಡ ಬಂಟರು ತಮ್ಮ ಮಕ್ಕಳನ್ನು ಉದ್ಯೋಗಕ್ಕಾಗಿ ಮುಂಬೈಗೆ ಕಳಿಸಿದರೆ, ಭೂಮಿ ಪಡೆದುಕೊಂಡ ಹಿಂದುಳಿದ ವರ್ಗದ ಕುಟುಂಬಗಳು ಬಂಟರಂತೆಯೇ ಸಾಮಾಜಿಕ ಸ್ಥಾನಮಾನಗಳನ್ನು ಪಡೆಯಬೇಕಿತ್ತು. ಆದರೆ ಭೂಮಿ ಪಡೆದುಕೊಂಡ ಕುಟುಂಬಗಳು ಸಾಮಾಜಿಕ ಸ್ಥಾನಮಾನಗಳನ್ನು “ಧರ್ಮ ರಕ್ಷಣೆ”ಯಲ್ಲಿ ಹುಡುಕಲು ಹೊರಟು ರೌಡಿಗಳಾದರು. ಭೂಮಿ ಸಿಗದೇ ಇದ್ದ ಗೋವಿಂದ ಬಾಬು ಪೂಜಾರಿಯಂತವರು ಹೊಟೇಲ್ ಗಳಲ್ಲಿ ಗ್ಲಾಸ್ ತೊಳೆದು, ಅಡುಗೆ ಕೆಲಸ ಮಾಡಿ, ಸ್ವಂತ ಉಧ್ಯಮ ಆರಂಭಿಸಿ ಕೋಟ್ಯಾಧಿಪತಿಗಳಾಗಿ ಊರಿಗೆ ಬಂದಾಗ ಶಾಲೆ, ಹಾಸ್ಟೇಲ್, ಆಸ್ಪತ್ರೆಗಳನ್ನು ಸ್ಥಾಪಿಸಿ ಸಾಮಾಜಿಕ, ರಾಜಕೀಯ ಸ್ಥಾನಮಾನ ಪಡೆಯುವ ಬದಲು ಧಾರ್ಮಿಕವಾದಿಗಳ ತೆಕ್ಕೆಯಲ್ಲಿ ಅದನ್ನು ಪಡೆಯಲು ಬಯಸುತ್ತಾರೆ. ನಾಗಮಂಡಲ, ಬ್ರಹ್ಮಕಲಶೋತ್ಸವಗಳೆಂಬ ವೈದಿಕರ ಹೊಟ್ಟೆತುಂಬಿಸುವ ಕೆಲಸಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಸುರಿಯುತ್ತಾರೆ. ಸಾಲದೆಂಬಂತೆ ಹಿಂದುತ್ವ ಸಂಘಟನೆಗಳ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ನೀಡಿ ಮುಖ್ಯ ಅತಿಥಿಯಾಗುತ್ತಾರೆ. ಗೋವಿಂದ ಬಾಬು ಪೂಜಾರಿಯಂತಹ ಕೋಟ್ಯಾಧಿಪತಿಗಳನ್ನು ಹಿಂದುತ್ವವಾದಿಗಳು ಹೀಗೆ ಬಲೆಗೆ ಬೀಳಿಸಿಕೊಂಡರೆ, ಬಡ ಹಿಂದುಳಿದ ವರ್ಗದ ಹುಡುಗರನ್ನು ಧರ್ಮ ರಕ್ಷಣೆಯ ಅಮಲಿನಲ್ಲಿ ಖೆಡ್ಡಾಗೆ ಬೀಳಿಸುತ್ತದೆ.
ಇದನ್ನೂ ಓದಿ:ಕೋಮುದ್ವೇಷಕ್ಕೆ ಬಲಿಯಾದ ನಾಲ್ಕು ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 25 ಲಕ್ಷ ಪರಿಹಾರ ಘೋಷಣೆ!
ಗೋವಿಂದ ಬಾಬು ಪೂಜಾರಿಯವರು 5000 ಜನರಿಗೆ ಉದ್ಯೋಗ ನೀಡುತ್ತಿರುವ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆಗಳನ್ನು ಹೊಂದಿರುವ ಕೋಟ್ಯಾಧಿಪತಿ ಉಧ್ಯಮಿ. ಇಂತಹ ಉದ್ಯಮಿಗೆ ಪುಟ್ ಪಾತ್ ನಲ್ಲಿ ಕಬಾಬ್ ಮಾರುವವನ್ನು ತೋರಿಸಿ “ಇವರು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಮಿತಿಯ ಸದಸ್ಯರು” ಎಂದೂ ವ್ಯಕ್ತಿಯೊಬ್ಬನನ್ನು ಸೆಲೂನ್ ನಲ್ಲಿ ಮೇಕಪ್ ಮಾಡಿಸಿ “ಇವರು ಬಿಜೆಪಿಯ ಟಿಕೆಟ್ ಫೈನಲ್ ಮಾಡುವ ಆರ್ ಎಸ್ ಎಸ್ ನ ಪ್ರಮುಖರು” ಎಂದು ನಂಬಿಸಬಹುದಾದರೆ ಇವರ ಹಿಂದುತ್ವದ ಅಫೀಮು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದಕ್ಕೆ ಉದಾಹರಣೆ.
ಮೇಲ್ವರ್ಗದವನೊಬ್ಬ ಸಣ್ಣ ಅಂಗಡಿಯೋ, ಹೊಟೇಲೋ ಪ್ರಾರಂಭಿಸಿದ ತಕ್ಷಣ ಆತನಿಗೆ ಅಧಿಕೃತ ರಾಜಕೀಯ ಸಂಪರ್ಕ ದೊರೆಯುತ್ತದೆ. ಆದರೆ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿ ಮಾತ್ರ ಈಗಲೂ ಪುಟ್ ಪಾತ್ ನ ಕಬಾಬ್ ವ್ಯಾಪಾರಿಯನ್ನು ರಾಜಕೀಯಕ್ಕೆ ನಂಬಬೇಕಾದ ಪರಿಸ್ಥಿತಿ ಯಾಕೆ ಬಂತು ಎಂಬುದು ಹಿಂದುಳಿದ ವರ್ಗದ ರಾಜಕೀಯದ ಬಗೆಗಿನ ಪ್ರತ್ಯೇಕ ಚರ್ಚೆ ಮಾಡಬೇಕಾಗುತ್ತದೆ.
ಹಾಗಾಗಿ ಹಿಂದುತ್ವದ ಅಫೀಮು ಸೇವಿಸಿದವರು ಒಂದೋ ಕೊಲೆಯಾಗಬೇಕು, ಇಲ್ಲವೇ ಕೊಲೆ ಆರೋಪಿಯಾಗಿ ಜೈಲು ಸೇರಬೇಕು. ನೀವು ಕೋಟ್ಯಾಧಿಪತಿಯಾಗಿ ಹಿಂದುತ್ವದ ಅಫೀಮು ಸೇವಿಸಿದರೆ ಗೋವಿಂದ ಬಾಬು ಪೂಜಾರಿಯಾಗುತ್ತೀರಿ. ಒಟ್ಟಾರೆ ಹಿಂದುತ್ವದ ಅಫೀಮು ನಿಮ್ಮ ಬದುಕು ಕಸಿಯುತ್ತದೆ. ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ನೀವು ಕುಸಿಯುತ್ತೀರಿ. ಅಥವಾ “ಮಂಗ” ಆಗುತ್ತೀರಿ. ಎಚ್ಚರ.