ಪ್ರಭಾತ್ ಪಟ್ನಾಯಕ್ : ವಿಶ್ವ ಅರ್ಥವ್ಯವಸ್ಥೆಯ ಮಂದ ಗತಿ ವಿಶ್ವದ ಬಹುಪಾಲು ಜನರ ನಿಜ-ಆದಾಯ ಸ್ಥಗಿತ

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ.ನಾಗರಾಜ್

ಒಂದು ಸಾಧಾರಣ ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯು ಶೇ. 1 ಕ್ಕಿಂತಲೂ ಕೆಳಗಿನ ದರದಲ್ಲಿ ಬೆಳೆಯುತ್ತಿದೆ ಮತ್ತು ವಿಶ್ವ ತಲಾ ಆದಾಯವು ವಾರ್ಷಿಕ ಶೇ. 1 ಕ್ಕಿಂತ ತುಸು ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತಿದೆ. ವಿಶ್ವದಲ್ಲಿ ಆದಾಯಗಳ ನಡುವಿನ ಅಸಮತೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸರಾಸರಿಯಾಗಿ ಹೇಳುವುದಾದರೆ, ವಿಶ್ವದ ಜನಸಂಖ್ಯೆಯ ಬಹುಪಾಲು ಮಂದಿಯ ನಿಜ ಆದಾಯವು ಸ್ಥಗಿತಗೊಂಡಿರಲೇ ಬೇಕು. ಇಂತಹ ಸನ್ನಿವೇಶದಲ್ಲಿ ಬಂಡವಾಳಶಾಹಿಯನ್ನು ಸಮಾಜವಾದಿ ಕ್ರಾಂತಿಯು ಹಿಂದಿಕ್ಕದಂತೆ ಅದನ್ನು ಉನ್ನತ ಮಟ್ಟದ ಚಟುವಟಿಕೆಗಳಲ್ಲಿ ಸ್ಥಿರಗೊಳಿಸ ಬಯಸಿದ ಖ್ಯಾತ ಅರ್ಥಶಾಸ್ತ್ರಜ್ಞ ಕೀನ್ಸ್ ಅವರ ಜೀವಮಾನದ ಯೋಜನೆಯು ಒಂದು ಭ್ರಾಂತಿಯಾಗಿದೆ ಎಂಬುದನ್ನು ನವ-ಉದಾರವಾದಿ ಬಂಡವಾಳಶಾಹಿಯ ಪ್ರಸ್ತುತ ಸ್ಥಿತಿಯು ಬಹಳಷ್ಟು ಮಟ್ಟಿಗೆ ಸ್ಪಷ್ಟಪಡಿಸುತ್ತದೆ. ಅರ್ಥವ್ಯವಸ್ಥೆ

2008ರ ಆರ್ಥಿಕ ಬಿಕ್ಕಟ್ಟಿನ ನಂತರ ವಿಶ್ವ ಅರ್ಥವ್ಯವಸ್ಥೆಯು ನಿಧಾನಗೊಂಡಿದೆ ಎಂಬ ಅಂಶವು ವಿವಾದಾತೀತವಾಗಿದೆ. ವಿಶ್ವ ಅರ್ಥವ್ಯವಸ್ಥೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಲು ಅಮೇರಿಕದ ಸಂಪ್ರದಾಯವಾದಿ ಅರ್ಥಶಾಸ್ತ್ರಜ್ಞರೂ ಸಹ ʼಸೆಕ್ಯುಲರ್ ಸ್ಟಾಗ್ನೇಷನ್’(ಅನಿಯಮಿತ ಸ್ಥಗಿತತೆ) ಎಂಬ ಪದವನ್ನು ಬಳಸಲಾರಂಭಿಸಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಒಂದು ವಿಶಿಷ್ಟ ವ್ಯಾಖ್ಯಾನವನ್ನು ಹೊಂದಿದ್ದಾರೆ ಎಂಬುದು ಬೇರೆ ಮಾತು. ಅರ್ಥವ್ಯವಸ್ಥೆಯ ಬೆಳವಣಿಗೆ ದರದ ಕೆಲವು ಅಂಕಿ-ಅಂಶಗಳ ಮೂಲಕ ಈ ನಿರ್ದಿಷ್ಟ ಅಂಶವನ್ನು ಸ್ಪಷ್ಟಪಡಿಸುವುದು ಈ ಟಿಪ್ಪಣಿಯ ಉದ್ದೇಶ. ಜಿಡಿಪಿಯನ್ನು ಲೆಕ್ಕ ಹಾಕುವ ವಿಷಯದಲ್ಲಿ ಕೆಲವು ದೇಶಗಳು ಅನುಸರಿಸುವ ವಿಧಾನಗಳು ವಿಶ್ವಾಸಾರ್ಹವಲ್ಲ ಎಂಬುದು ಕುಖ್ಯಾತ ಸಂಗತಿ; ಒಟ್ಟು ವಿಶ್ವದ ಜಿಡಿಪಿಯ ಅಂಕಿ-ಅಂಶಗಳಲ್ಲಿ ಇದು ಇನ್ನಷ್ಟು ನಿಜ.

ಭಾರತದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಅಧಿಕೃತವಾಗಿ ಹೇಳುವ ವಾರ್ಷಿಕ ಶೇ. 7 ಅಥವಾ ಅದಕ್ಕಿಂತಲೂ ಮೇಲಿನ ಸಂಖ್ಯೆಯ ಬೆಳವಣಿಗೆ ದರವು ವಾಸ್ತವವಾಗಿ ಶೇ. 4ರಿಂದ 4.5ಕ್ಕಿಂತ ಹೆಚ್ಚು ಇದ್ದಿರಲಾರದು ಎಂದು ಹಲವರು ಸೂಚಿಸುತ್ತಾರೆ. ನಿಯಂತ್ರಣ ನೀತಿಗಳ (ಡಿರಿಜಿಸ್ಟೆ) ಅವಧಿಗೆ ಹೋಲಿಸಿದರೆ ನವ-ಉದಾರವಾದಿ ಅವಧಿಯಲ್ಲಿ ಸಾಧಿಸಿದ ಜಿಡಿಪಿ ಬೆಳವಣಿಗೆಯ ವೇಗದ ಬಗ್ಗೆ ವ್ಯಕ್ತಪಡಿಸುವ ಹರ್ಷೋನ್ಮಾದವು ಸರಿಯಾದುದಲ್ಲ. ಅಸಮಾನತೆಗಳು ಗಮನಾರ್ಹವಾಗಿ ವಿಸ್ತರಿಸುತ್ತಿರುವಾಗ, ಜಿಡಿಪಿ ಬೆಳವಣಿಗೆಯ ದರವು ಹಿಂದಿನ ಅವಧಿಗೆ ಹೋಲಿಸಿದರೆ ಹೆಚ್ಚಿಲ್ಲವೆಂದಾದರೆ, ನವ- ಉದಾರವಾದಿ ಅವಧಿಯಲ್ಲಿ ದುಡಿಯುವ ಜನರ ಸ್ಥಿತಿಯು ಹದಗೆಟ್ಟಿದೆ ಎಂಬ ಪ್ರತಿಪಾದನೆಯನ್ನು ಪೌಷ್ಟಿಕಾಂಶ ಸೇವನೆಯಂತಹ ಕೆಲವು ಸೂಚಕಗಳ ಅಂಕಿ-ಅಂಶಗಳು ಇನ್ನಷ್ಟು ದೃಢವಾಗಿ ಸಮರ್ಥಿಸುತ್ತವೆ.

ಇದನ್ನೂ ಓದಿ: ಬಂಡವಾಳ ಕೇಂದ್ರೀತ ಆರ್ಥಿಕತೆಯಿಂದ ಸಂಕಷ್ಟಕ್ಕೆ ಸಿಲುಕಿದ ದುಡಿಯುವ ಜನ – ಸೈಯದ್ ಮುಜೀಬ್ ಆರೋಪ

ಜಿಡಿಪಿಯ ಅಂಕಿ-ಅಂಶಗಳು ಅತ್ತ ಇತ್ತ ಓಲಾಡುತ್ತಿರುವುದರ ಹೊರತಾಗಿಯೂ, ವಿಶ್ವ ಜಿಡಿಪಿಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸೋಣ. ಈ ಉದ್ದೇಶಕ್ಕಾಗಿ ನಾನು ವಿಶ್ವ ಬ್ಯಾಂಕಿನ ಅಂಕಿ-ಅಂಶಗಳನ್ನು ಬಳಸುತ್ತೇನೆ. ಪ್ರತಿ ದೇಶದ ನಿಜ ಜಿಡಿಪಿಯನ್ನು 2015ರ ಬೆಲೆಗಳಲ್ಲಿ, 2015ರ ವಿದೇಶಿ ವಿನಿಮಯ ದರಗಳಲ್ಲಿ ಮತ್ತು ಡಾಲರ್ ಕರೆನ್ಸಿಯ ಮೂಲಕ ಒಟ್ಟುಗೂಡಿಸಿ, ವಿಶ್ವ ಜಿಡಿಪಿಯ ಅಂಕಿ-ಅಂಶಗಳನ್ನು ಅಂದಾಜು ಮಾಡಲಾಗಿದೆ. 1961ರಿಂದ ಹಿಡಿದು 2018ರ ವರೆಗಿನ ಅವಧಿಯನ್ನು ಉಪ-ಅವಧಿಗಳಾಗಿ ವಿಭಜಿಸುವುದು ಮತ್ತು ಈ ಉಪ- ಅವಧಿಗಳ ನಡುವೆ ಹೋಲಿಕೆ ಮಾಡುವ ಕೆಲಸವು ಸಾಕಷ್ಟು ಕ್ಲಿಷ್ಟಕರವಾಗಿದೆ. ದಶಮಾನಗಳ ಕಾಲಮಾನದ ಬೆಳವಣಿಗೆ ದರಗಳನ್ನು ತೆಗೆದುಕೊಳ್ಳುವ ಕ್ರಮವೂ ಸಹ ಸಮಸ್ಯಾತ್ಮಕವಾಗಿದೆ, ಏಕೆಂದರೆ, ದಶಕದ ಆರಂಭವು ಅರ್ಥವ್ಯವಸ್ಥೆಯು ತಳ ಮಟ್ಟವನ್ನು (trough) ತಲುಪಿದ ವರ್ಷವಾಗಿದ್ದರೆ, ಆ ದಶಕದ ಬೆಳವಣಿಗೆಯ ದರವು ಉತ್ಪ್ರೇಕ್ಷಿತಗೊಳ್ಳುತ್ತದೆ ಮತ್ತು ಅದು ನೀಡುವ ಚಿತ್ರಣವು ವಿಕೃತವಾಗಿರುತ್ತದೆ.

ಸಾಧ್ಯವಾದಷ್ಟು ಮಟ್ಟಿಗೆ, ಅರ್ಥವ್ಯವಸ್ಥೆಯು ಗರಿಷ್ಠ ಮಟ್ಟ ತಲುಪಿದ ವರ್ಷಗಳನ್ನು ನಾನು ತೆಗೆದುಕೊಂಡಿದ್ದೇನೆ ಮತ್ತು ವಿಶ್ವ ಅರ್ಥವ್ಯವಸ್ಥೆಯು ಒಂದು ಗರಿಷ್ಠ ಮಟ್ಟದಿಂದ ಮತ್ತೊಂದು ಗರಿಷ್ಠ ಮಟ್ಟದವರೆಗಿನ ಅವಧಿಯ ಬೆಳವಣಿಗೆ ದರಗಳನ್ನು ಲೆಕ್ಕ ಹಾಕಿದ್ದೇನೆ. ಈ ಕ್ರಮವು ಬೆಳವಣಿಗೆ ದರದಲ್ಲಿನ (ಅನಿಯಮಿತ) ಬದಲಾವಣೆಯ ಬಗ್ಗೆ ಒಂದು ಹೆಚ್ಚು ವಿಶ್ವಾಸಾರ್ಹ ಚಿತ್ರವನ್ನು ನೀಡುತ್ತದೆ. ಈ ಉದ್ದೇಶಕ್ಕಾಗಿ ತೆಗೆದುಕೊಂಡ ನಿರ್ದಿಷ್ಟ ವರ್ಷಗಳೆಂದರೆ, 1961, 1973, 1984, 1997, 2007 ಮತ್ತು 2018. ಈ ಕೊನೆಯ 2018ರ ವರ್ಷವು ಕೊರೊನಾ ಸಾಂಕ್ರಾಮಿಕವು ಪ್ರಾರಂಭವಾಗುವ ಮೊದಲು ಅರ್ಥವ್ಯವಸ್ಥೆಯು ತಲುಪಿದ ಗರಿಷ್ಠ ಮಟ್ಟದ ಕೊನೆಯ ವರ್ಷವಾಗಿತ್ತು. ಈ ವರ್ಷಗಳು ವ್ಯಾಖ್ಯಾನಿಸುವ ಉಪ ಅವಧಿಗಳಲ್ಲಿ ವಿಶ್ವ ಜಿಡಿಪಿ ಬೆಳವಣಿಗೆಯ ದರಗಳು ಈ ಕೆಳಗಿನಂತಿವೆ:

ಅವಧಿ ವಾರ್ಷಿಕ ಬೆಳವಣಿಗೆ ದರ
1961-1973: ಶೇ. 5.4
1973-1984: ಶೇ. 2.9
1984-1997: ಶೇ. 3.1
1997-2007: ಶೇ. 3.5

2007-2018: ಶೇ. 2.7

ತಪ್ಪು ಅನಿಸಿಕೆ

ಈ ಅಂಕೆ-ಸಂಖ್ಯೆಗಳಲ್ಲಿ ಮೂರು ಮುಖ್ಯವಾದ ಅಂಶಗಳು ಎದ್ದು ಕಾಣುತ್ತವೆ. ಮೊದಲನೆಯದು, ಡಿರಿಜಿಸ್ಟ್ (ನಿಯಂತ್ರಣ ನೀತಿ) ಅವಧಿಯಲ್ಲಿ ವಿಶ್ವ ಅರ್ಥವ್ಯವಸ್ಥೆಯ ಬೆಳವಣಿಗೆ ದರವು ಒಟ್ಟಾರೆಯಾಗಿ ನವ-ಉದಾರವಾದಿ ಅವಧಿಯಲ್ಲಿ ದಾಖಲಾದ ದರಕ್ಕಿಂತಲೂ ಅಧಿಕವಾಗಿದೆ. ಆದರೆ, ಮಾರುಕಟ್ಟೆಯ ಶ್ರೇಷ್ಠತೆಯ ಅಂಶವನ್ನು ಹಾಡಿ ಹೊಗಳುವವರು ನವ-ಉದಾರವಾದಿ ಯುಗದಲ್ಲಿ ವಿಶ್ವ ಅರ್ಥವ್ಯವಸ್ಥೆಯು ವೇಗವಾಗಿ ಬೆಳೆದಿರಲೇಬೇಕು ಎಂದು ಭಾವಿಸುತ್ತಾರೆ ಮತ್ತು ಹಿಂದಿನ ಅವಧಿಯು ದಾಖಲಿಸಿದ ಬೆಳವಣಿಗೆ ದರವನ್ನು ಕಡೆಗಣಿಸುತ್ತಾರೆ. ಅವರ ಈ ಅನಿಸಿಕೆಯು ಸಂಪೂರ್ಣವಾಗಿ ತಪ್ಪು. ವಾಸ್ತವವು ಅದಕ್ಕೆ ತದ್ವಿರುದ್ಧವಾಗಿದೆ. ಅಂದರೆ, ನವ-ಉದಾರವಾದಿ ಅವಧಿಯಲ್ಲಿ ವಿಶ್ವ ಅರ್ಥವ್ಯವಸ್ಥೆಯ ಬೆಳವಣಿಗೆಯು ಗಮನಾರ್ಹವಾಗಿ ನಿಧಾನಗೊಂಡಿದೆ.

ಇದನ್ನೂ ಓದಿ: ನೈಸ್ ಕಂಪನಿ ದೌರ್ಜನ್ಯ – ಹಗರಣಗಳಿಗೆ ಉಪ ಮುಖ್ಯಮಂತ್ರಿ ಬೆಂಬಲ; KPRS ಖಂಡನೆ

ಎರಡನೆಯದು, ನಿಯಂತ್ರಣಗಳ ಅವಧಿ ಮತ್ತು ನವ-ಉದಾರವಾದಿ ಅವಧಿಯ ನಡುವಿನ ಮಧ್ಯಂತರದ ಅವಧಿಯಲ್ಲಿ ವಿಶ್ವ ಅರ್ಥವ್ಯವಸ್ಥೆಯ ಬೆಳವಣಿಗೆಯು ನಿಧಾನಗತಿಯಲ್ಲಿತ್ತು: ಬೆಳವಣಿಗೆಯ ದರವು ಶೇ. 5.4ರಿಂದ ಶೇ. 2.9ಕ್ಕೆ ಇಳಿಯಿತು. ಈ ನಿಧಾನಗತಿಯು, ಬಂಡವಾಳಶಾಹಿ ಜಗತ್ತಿನಲ್ಲಿ ಅರವತ್ತರ ದಶಕದ ಉತ್ತರಾರ್ಧದಲ್ಲಿ ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ ಸಂಭವಿಸಿದ ಹಣದುಬ್ಬರದ ವೇಗವರ್ಧನೆಯನ್ನು ಎದುರಿಸಲು ಬಂಡವಾಳಶಾಹಿಯು ಅನುಸರಿಸಿದ ತಂತ್ರದ ಪರಿಣಾಮವಾಗಿತ್ತು ಮತ್ತು ಇದು ನಿಯಂತ್ರಣಗಳ ಅವಧಿಯ ಅಂತ್ಯವನ್ನು ಗುರುತಿಸಿತು. ವಿಶ್ವ ಜಿಡಿಪಿ ಬೆಳವಣಿಗೆಯ ನಿಧಾನಗತಿಯ ಈ ಮಧ್ಯಂತರದ ಅವಧಿಯು ನವ-ಉದಾರವಾದಿ ಆಳ್ವಿಕೆಯನ್ನು ಜಾರಿಗೊಳಿಸಲು ಒಂದು ಸನ್ನಿವೇಶವನ್ನು ಸೃಷ್ಟಿಸಿತು. ಗಾತ್ರದಲ್ಲಿ ಹೆಚ್ಚುತ್ತಿದ್ದ ಮತ್ತು ಅಂತಾರಾಷ್ಟ್ರೀಯವಾಗಿ ಬೆಳೆಯುತ್ತಿದ್ದ ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಯನ್ನು ನವ-ಉದಾರವಾದತ್ತ ಹೊರಳುವಂತೆ ಒತ್ತಾಯಿಸಿತು.

ಸರ್ಕಾರದ ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ಮತ್ತು ಸಾಮೂಹಿಕ ನಿರುದ್ಯೋಗ ಸೃಷ್ಟಿಸುವ ಮೂಲಕ ಹಣದುಬ್ಬರನ್ನು ತಗ್ಗಿಸುವ ನೀತಿಯನ್ನು
ಬಂಡವಾಳಶಾಹಿ ಜಗತ್ತು ಅಧಿಕೃತವಾಗಿ ಹೊಂದಿತ್ತು. ಮೊದಲು ಹಣದುಬ್ಬರದ ಏರಿಕೆಯ ಮೂಲಕ ಮತ್ತು ನಂತರ ಬೆಳವಣಿಗೆಯ ನಿಧಾನಗತಿಯ ಮೂಲಕ ಪ್ರಕಟಗೊಂಡ ನಿಯಂತ್ರಣಗಳ ಅವಧಿಯ ಬಿಕ್ಕಟ್ಟಿನಿಂದ ಹೊರ ಬರಲು ಅರ್ಥವ್ಯವಸ್ಥೆಯನ್ನು ನವ- ಉದಾರವಾದತ್ತ ಹೊರಳುವಂತೆ ಮಾಡುವ ಹಣಕಾಸು ಬಂಡವಾಳದ ಒತ್ತಡವು ಅಂತಿಮವಾಗಿ ಫಲ ನೀಡಿತು.

ಯಾವ ಉತ್ತೇಜನವೂ ಇಲ್ಲ

ಮೂರನೆಯದು, ನವ-ಉದಾರವಾದದ ಅಡಿಯಲ್ಲಿ ಯುಎಸ್‌ನಲ್ಲಿ ವಸತಿ ಗುಳ್ಳೆಗಳು ಒಡೆದ ನಂತರ ಅರ್ಥವ್ಯವಸ್ಥೆಯು ಸುದೀರ್ಘವಾಗಿ ನಿಧಾನ ಗತಿಗೆ ಒಳಗಾಯಿತು ಎಂಬುದು. ಈ ನಿಧಾನ ಗತಿಯು ಬಂಡವಾಳಶಾಹಿ ಜಗತ್ತಿನಲ್ಲಿ ಒಂದು ಹಣಕಾಸಿನ ಬಿಕ್ಕಟ್ಟನ್ನು ಸೃಷ್ಟಿಸಿತು. ಪ್ರಭುತ್ವದ ಹಸ್ತಕ್ಷೇಪದ (ಮಾರುಕಟ್ಟೆಯ ದಕ್ಷತೆಗೆ ಈ ಪುರಾವೆ ಸಾಕು) ಮೂಲಕ ಹಣಕಾಸು ವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಪಾರುಮಾಡಲಾಯಿತು. ಆದರೆ, ನಿಜ ಅರ್ಥವ್ಯವಸ್ಥೆಗೆ ಯಾವ ಉತ್ತೇಜನವೂ ದೊರಕಲಿಲ್ಲ. ಮತ್ತು, ಪ್ರಭುತ್ವದ ಬೃಹತ್ ವೆಚ್ಚಗಳ ಮೂಲಕವಾಗಲಿ ಅಥವಾ ವಸತಿ ಗುಳ್ಳೆಗೆ ಹೋಲಿಸಬಹುದಾದ ಹೊಸ ಗುಳ್ಳೆಯ ಸೃಷ್ಟಿಯ ಮೂಲಕವಾಗಲಿ ಅರ್ಥವ್ಯವಸ್ಥೆಯ ಬೆಳವಣಿಗೆಯ ದರವನ್ನು ಪುನರುಜ್ಜೀವನಗೊಳಿಸುವ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.

ನಾವು ಉದ್ದೇಶಪೂರ್ವಕವಾಗಿ 2018ಅನ್ನು ಹೋಲಿಕೆಯ ಕೊನೆಯ ವರ್ಷವಾಗಿ ತೆಗೆದುಕೊಂಡಿದ್ದೇವೆ. ಏಕೆಂದರೆ, ಇದು ಗರಿಷ್ಠ ಮಟ್ಟದ ಬೆಳವಣಿಗೆಯ ದರವನ್ನು ದಾಖಲಿಸಿದ ವರ್ಷವನ್ನು ಪ್ರತಿನಿಧಿಸುತ್ತದೆ. 2018ರ ನಂತರದ ಅವಧಿಯು ವಿಶ್ವ ಅರ್ಥವ್ಯವಸ್ಥೆಯ ಪಾಲಿಗೆ ನಿರಾಶಾದಾಯಕವಾಗಿ ಪರಿಣಮಿಸಿದೆ. ವಾಸ್ತವವಾಗಿ 2018 ಮತ್ತು 2022 (ಜಿಡಿಪಿ ಅಂಕಿಅಂಶಗಳು ಲಭ್ಯವಿರುವ ಇತ್ತೀಚಿನ ವರ್ಷ) ನಡುವಿನ ವರ್ಷಗಳ ಜಿಡಿಪಿ ಬೆಳವಣಿಗೆ ದರವು, ವಾರ್ಷಿಕ ಶೇ. 2.1ರಷ್ಟು ಕೆಳ ಮಟ್ಟದಲ್ಲಿದೆ. ವಿಶ್ವ ಜನಸಂಖ್ಯೆಯ ಅಂಕಿ-ಅಂಶಗಳೂ ಸಹ ಹೆಚ್ಚು ವಿಶ್ವಾಸಾರ್ಹತೆ ಹೊಂದಿಲ್ಲ. ಭಾರತದಂತಹ ಒಂದು ದೊಡ್ಡ ದೇಶವೂ ಸಹ 2021ರಲ್ಲಿ ನಡೆಸಬೇಕಿದ್ದ ತನ್ನ ದಶವಾರ್ಷಿಕ ಜನಗಣತಿಯನ್ನು ನಡೆಸಿಲ್ಲ ಮತ್ತು ತದನಂತರವೂ ನಡೆಸಿಲ್ಲ. ಒಂದು ಸಾಧಾರಣ ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯು ಶೇ. 1ಕ್ಕಿಂತಲೂ ಕೆಳಗಿನ ದರದಲ್ಲಿ ಬೆಳೆಯುತ್ತಿದೆ (2022ರಲ್ಲಿ ಶೇ. 0.8 ಎಂದು ಅಂದಾಜಿಸಲಾಗಿದೆ) ಮತ್ತು ವಿಶ್ವ ತಲಾ ಆದಾಯವು ವಾರ್ಷಿಕ ಶೇ. 1ಕ್ಕಿಂತ ತುಸು ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತಿದೆ.

ಇದನ್ನೂ ನೋಡಿ: ‘Increase spending on nutrition- Madhura Swaminathan Janashakthi Media

ವಿಶ್ವದಲ್ಲಿ ಆದಾಯಗಳ ನಡುವಿನ ಅಸಮತೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸರಾಸರಿಯಾಗಿ ಹೇಳುವುದಾದರೆ, ವಿಶ್ವದ ಜನಸಂಖ್ಯೆಯ ಬಹುಪಾಲು ಮಂದಿಯ ನಿಜ ಆದಾಯವು ಸ್ಥಗಿತಗೊಂಡಿರಲೇ ಬೇಕು. ಒಂದು ವಿವರಣಾತ್ಮಕ ಉದಾಹರಣೆಯ ಮೂಲಕ ಈ ಅಂಶವನ್ನು ಸ್ಪಷ್ಟಪಡಿಸಬಹುದು. ವಿಶ್ವದ ಜನಸಂಖ್ಯೆಯ ಮೇಲ್ತುದಿಯ ಶೇ. 10ರಷ್ಟು ಮಂದಿಯು ವಿಶ್ವದ ಪ್ರಸ್ತುತ ಒಟ್ಟು ಆದಾಯದ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ಪಡೆಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಶೇ. 10ರಷ್ಟು ಮಂದಿಯ ಆದಾಯವು ಒಂದು ವೇಳೆ ವಾರ್ಷಿಕ ಶೇ. 2ರಷ್ಟು ವೃದ್ಧಿಯಾಗಿದ್ದರೆ, ಉಳಿದ ಶೇ. 90ರಷ್ಟು ಮಂದಿಯ ಆದಾಯವು, ಸರಾಸರಿಯಾಗಿ, ಸಂಪೂರ್ಣವಾಗಿ ಸ್ಥಗಿತವಾಗಿರುತ್ತದೆ. ಬಂಡವಾಳಶಾಹಿ ವ್ಯವಸ್ಥೆಯು ತನ್ನ ಇತ್ತೀಚಿನ ನವ-ಉದಾರವಾದಿ ಹಂತದಲ್ಲಿ ವಿಶ್ವದ ಜನಸಂಖ್ಯೆಯ ಒಂದು ಬೃಹತ್ ಜನಸಮೂಹವನ್ನು ಆದಾಯ ಸ್ಥಗಿತತೆಯ ಪರಿಸ್ಥಿತಿಗೆ ತಂದಿದೆ ಎಂಬ ತೀರ್ಮಾನವು ಅನಿವಾರ್ಯವಾಗುತ್ತದೆ. ಈ ವಿದ್ಯಮಾನವು ವಸಾಹತುಶಾಹಿ ಕಾಲವನ್ನು ನೆನಪಿಗೆ ತರುತ್ತದೆ. ಅಂದರೆ, ವಿಶ್ವದ ಜನಸಂಖ್ಯೆಯ ಒಂದು ಬಹುದೊಡ್ಡ ಭಾಗದ ಜನರ ನಿಜ ಆದಾಯವು ಕುಸಿದಿರಲೇಬೇಕು ಎಂದಾಗುತ್ತದೆ.

ತಾತ್ಕಾಲಿಕ ವಿದ್ಯಮಾನವಲ್ಲ

ಅದಕ್ಕಿಂತಲೂ ಮಿಗಿಲಾಗಿ, ಇದು ಕಾಲಾನಂತರದಲ್ಲಿ ನಶಿಸುವ ಒಂದು ತಾತ್ಕಾಲಿಕ ವಿದ್ಯಮಾನವಲ್ಲ. ಈ ಆದಾಯ ಕುಸಿತವೇ ನವ- ಉದಾರವಾದವು ವಿಶ್ವದ ಒಂದು ಬಹುದೊಡ್ಡ ಸಂಖ್ಯೆಯ ಜನರಿಗೆ ಕರುಣಿಸಿರುವ ಒಂದು ಉಡುಗೊರೆ. ಹಾಗಾಗಿ, ಪ್ರಸ್ತುತ ಹಂತದಲ್ಲಿ ಸ್ಥಗಿತಗೊಂಡಿರುವ ಬೆಳವಣಿಗೆಯನ್ನು ಚುರುಕುಗೊಳಿಸಬೇಕು ಎಂದಾದರೆ, ವಿಶ್ವ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದು ಅಗತ್ಯವಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರಭುತ್ವದ ಹಸ್ತಕ್ಷೇಪವು ಅಗತ್ಯವಾಗುತ್ತದೆ. ಅಂದರೆ, ಪ್ರಭುತ್ವವು ಬೃಹತ್ ಪ್ರಮಾಣದ ವೆಚ್ಚಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ವೆಚ್ಚಗಳಿಗೆ ಬೇಕಾಗುವ ಹಣವನ್ನು ವಿತ್ತೀಯ ಕೊರತೆಯ ಮೂಲಕ ಅಥವಾ ಬಂಡವಾಳಗಾರರು ಮತ್ತು ಶ್ರೀಮಂತರ ಮೇಲೆ ವಿಧಿಸುವ ತೆರಿಗೆಯನ್ನು ಹೆಚ್ಚಿಸುವ ಮೂಲಕ ಒದಗಿಸಿಕೊಂಡರೆ ಮಾತ್ರ, ಒಟ್ಟಾರೆ
ಬೇಡಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಬಹುದು.

ಆದರೆ, ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಮೂಲಕ ಹಣ ಒದಗಿಸಿಕೊಳ್ಳುವ ಈ ಎರಡೂ ವಿಧಾನಗಳನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ವಿರೋಧಿಸುತ್ತದೆ. ಮತ್ತು, ಪ್ರಭುತ್ವವು ರಾಷ್ಟ್ರ-ಪ್ರಭುತ್ವವಾಗಿರುವ ಮತ್ತು ಹಣಕಾಸು ಬಂಡವಾಳವು ಜಾಗತೀಕರಣಗೊಂಡಿರುವ ಸನ್ನಿವೇಶದಲ್ಲಿ, ಹಣಕಾಸು ಬಂಡವಾಳವು ಒಂದು ಸಣ್ಣ ಕಾರಣದ ಮೇಲೆ ಯಾವುದೇ ಒಂದು ದೇಶದಿಂದ ಸಾಮೂಹಿಕವಾಗಿ ಹೊರ ಹೋಗಬಹುದು. ಬಂಡವಾಳವು ಹೀಗೆ ಹೊರ ಹೋಗುವುದನ್ನು ತಡೆಯಲು ಪ್ರಭುತ್ವವು ಹಣಕಾಸು ಬಂಡವಾಳದ ಮರ್ಜಿಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದಕ್ಕಾಗಿ ಮತ್ತು ಆ ಮೂಲಕ ಅರ್ಥವ್ಯವಸ್ಥೆಯ ಬೆಳವಣಿಗೆ ದರವನ್ನು ಹೆಚ್ಚಿಸುವುದಕ್ಕಾಗಿ ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರ-ಪ್ರಭುತ್ವವು ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಲವಾರು ಪ್ರಭುತ್ವಗಳು ಸಂಘಟಿತವಾಗಿ ಏಕಕಾಲದಲ್ಲಿ ಇಲ್ಲಿ ಸೂಚಿಸಿದ ವಿಧಾನಗಳ ಮೂಲಕ ತಮ್ಮ ವೆಚ್ಚಗಳನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳುವ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸಬಹುದು. ಇದು ಈ ಇಡೀ ದೇಶಗಳ ಗುಂಪಿನಿಂದ ಹಣಕಾಸು ಬಂಡವಾಳವು ಪಲಾಯನ ಮಾಡುವುದನ್ನು ತಡೆಯಬಹುದು. ಇಂತಹ ಒಂದು ಪ್ರಯತ್ನದ ಬಗ್ಗೆ ಚರ್ಚೆಯೂ ಸಹ ಇನ್ನೂ ನಡೆದಿಲ್ಲ.

ಈ ಸನ್ನಿವೇಶದಲ್ಲಿ ಹಣಕಾಸು ನೀತಿ ಮಾತ್ರವೇ ಪ್ರಭುತ್ವಕ್ಕೆ ಲಭ್ಯವಿರುವ ಹಸ್ತಕ್ಷೇಪದ ಏಕೈಕ ಸಾಧನವಾಗಿ ಬಿಡುತ್ತದೆ. ಈ ವಿಷಯದಲ್ಲೂ ಸಹ, ಮುಂದುವರಿದ ದೇಶಗಳಲ್ಲಿ, ವಿಶೇಷವಾಗಿ ಯುಎಸ್‌ನಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರಕ್ಕೆ ಹೋಲಿಸಿದರೆ, ಯಾವುದೇ ದೇಶದ ಬಡ್ಡಿ ದರವು ಅತಿ ಕಡಿಮೆ ಇರುವಂತಿಲ್ಲ. ಏಕೆಂದರೆ, ಆಗ ಹಣಕಾಸು ಬಂಡವಾಳವು ಆ ದೇಶವನ್ನು ಆಕರ್ಷಕವಲ್ಲದ  ತಾಣ ಎಂದು ಭಾವಿಸುತ್ತದೆ ಮತ್ತು ಆ ದೇಶದಿಂದ ಸಾಮೂಹಿಕವಾಗಿ ಹೊರಹೋಗುತ್ತದೆ. ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಲು ತಾನು ಸೂಕ್ತವೆಂದು ಪರಿಗಣಿಸುವ ಯಾವುದೇ ಮಟ್ಟದ ಬಡ್ಡಿ ದರಗಳಿಗೆ ಸ್ವಾಯತ್ತವಾಗಿ ತನ್ನ ಬಡ್ಡಿ ದರಗಳನ್ನು ಇಳಿಕೆ ಮಾಡುವ
ಸಾಮರ್ಥ್ಯವನ್ನು ಯುಎಸ್ ಮಾತ್ರ ಹೊಂದಿದೆ (ಇದು, ಇತರ ದೇಶಗಳಿಗೂ ತಮ್ಮ ಬಡ್ಡಿ ದರಗಳನ್ನು ಇಳಿಕೆ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ).

ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಯುಎಸ್‌ನಲ್ಲಿ ಬಡ್ಡಿ ದರಗಳು ಶೂನ್ಯದ ಸಮೀಪದಲ್ಲಿವೆ. ಆದಾಗ್ಯೂ ವಿಶ್ವ ಅರ್ಥವ್ಯವಸ್ಥೆಯಲ್ಲಿ ಪುನರುಜ್ಜೀವನ ಕಂಡುಬಂದಿಲ್ಲ. ಅದಕ್ಕೆ ಬದಲಾಗಿ, ಬಹಳ ವರ್ಷಗಳಿಂದಲೂ ಜಾರಿಯಲ್ಲಿದ್ದ ಇಂತಹ ಕಡಿಮೆ ಬಡ್ಡಿ ದರಗಳು ಆ ದೇಶದ ಕಾರ್ಪೊರೇಟ್‌ಗಳಿಗೆ ತಮ್ಮ ಲಾಭದ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಧೈರ್ಯವನ್ನು ಕೊಟ್ಟವು ಮತ್ತು ಹಣದುಬ್ಬರವು ವೇಗ ಪಡೆಯಲು ಕಾರಣವಾದವು. ಬಂಡವಾಳಶಾಹಿಯನ್ನು ಸಮಾಜವಾದಿ ಕ್ರಾಂತಿಯು ಹಿಂದಿಕ್ಕದಂತೆ ಅದನ್ನು ಉನ್ನತ ಮಟ್ಟದ ಚಟುವಟಿಕೆಗಳಲ್ಲಿ ಸ್ಥಿರಗೊಳಿಸ ಬಯಸಿದ ಖ್ಯಾತ ಅರ್ಥಶಾಸ್ತ್ರಜ್ಞ ಕೀನ್ಸ್ ಅವರ ಜೀವಮಾನದ ಯೋಜನೆಯು ಹೀಗೆ ಒಂದು ಭ್ರಾಂತಿಯಾಗಿದೆ ನವ-ಉದಾರವಾದಿ ಬಂಡವಾಳಶಾಹಿಯ ಪ್ರಸ್ತುತ ಸ್ಥಿತಿಯು ಈ ಸಂಗತಿಯನ್ನು ಬಹಳಷ್ಟು ಮಟ್ಟಿಗೆ ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: ಷೇರುಪೇಟೆ ವಂಚನೆ: ಆಕ್ಸಿಸ್‌ ಬ್ಯಾಂಕ್‌ನ ನಾಲ್ವರು ಸೇರಿ ಎಂಟು ಮಂದಿ ಬಂಧನ

Donate Janashakthi Media

Leave a Reply

Your email address will not be published. Required fields are marked *