ಪಶ್ಚಿಮ ಆಫ್ರಿಕಾದಲ್ಲೊಂದು ಮೌನ ಕ್ರಾಂತಿ

ಪಶ್ಚಿಮ ಆಫ್ರಿಕಾದಲ್ಲಿರುವ ಸಹೇಲಿ ಪ್ರದೇಶದಲ್ಲಿರುವ ಮೂರು ದೇಶಗಳು – ಮಾಲಿ, ನೈಜರ್, ಬುರ್ಕಿನಾ ಫಾಸೋ – ಸೇರಿ ಸಾಹೇಲ್ ದೇಶಗಳ ಮೈತ್ರಿಕೂಟ (AES) ರಚಿಸಿದ್ದಾರೆ. ಸುಮಾರು 27.8 ಲಕ್ಷ ಚದರ ಕಿ.ಮಿ ವ್ಯಾಪ್ತಿಯ 7.14 ಕೋಟಿ ಜನಸಂಖ್ಯೆ ಇರುವ ಈ ಸಾಹೇಲ್ಪ್ರಪ್ರದೇಶದಲ್ಲಿ ನೆಲೆ ಹೊಂದಿದ್ದ ಫ್ರೆಂಚ್ ಮಿಲಿಟರಿ ತುಕಡಿಗಳನ್ನು ಹೊರಹಾಕಲಾಗಿದೆ. ವಿದೇಶೀ ನಿಯಂತ್ರಣದ (ಫ್ರಮುಖವಾಗಿ ಫ್ರೆಂಚ್ ) ಗಣಿ ಮುಂತಾದ ಸಂಪನ್ಮೂಲಗಳನ್ನು ರಾಷ್ಟ್ರೀಕರಣ ಮಾಡಲಾಗಿದೆ. ಸಾಹೇಲ್ ದೇಶಗಳ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವುದು, ಪಾಸ್‌ಪೋರ್ಟ್‌ಗಳನ್ನು ಏಕೀಕರಿಸುವುದು ಮತ್ತು ಮೈತ್ರಿ ಹೂಡಿಕೆ ಬ್ಯಾಂಕ್ ಅನ್ನು ನಿರ್ಮಿಸುವುದಕ್ಕೆ ಅವರು ಬದ್ಧರಾಗಿದ್ದಾರೆ. ಈ ದೇಶಗಳಿಗೆ ಮಾರಕವಾಗಿದ್ದ CFA ಫ್ರಾಂಕ್ ಹಣಕಾಸು ವ್ಯವಸ್ಥೆಯನ್ನು ಬದಲಿಸಲು ಪ್ರಾದೇಶಿಕ ಕರೆನ್ಸಿಯನ್ನು ಆರಂಭಿಸುವ ಪ್ರಯತ್ನವೂ ಸೇರಿದೆ. ಪಶ್ಚಿಮ

-ವಸಂತರಾಜ ಎನ್.ಕೆ

ಪಶ್ಚಿಮ ಆಫ್ರಿಕಾದಲ್ಲೊಂದು ಮೌನ ಕ್ರಾಂತಿ ನಡೆಯುತ್ತಿದೆ. ಪಶ್ಚಿಮ ಆಫ್ರಿಕಾದಲ್ಲಿರುವ ಸಹೇಲಿ ಪ್ರದೇಶದಲ್ಲಿರುವ ಮೂರು ದೇಶಗಳು – ಮಾಲಿ, ನೈಜರ್, ಬುರ್ಕಿನಾ ಫಾಸೋ – ಸೇರಿ ಸಾಹೇಲ್ ದೇಶಗಳ ಮೈತ್ರಿಕೂಟ (AES) ರಚಿಸಿದ್ದಾರೆ. ಸುಮಾರು 27.8 ಲಕ್ಷ ಚದರ ಕಿ.ಮಿ ವ್ಯಾಪ್ತಿಯ 7.14 ಕೋಟಿ ಜನಸಂಖ್ಯೆ ಇರುವ ಈ ಸಾಹೇಲ್ಪ್ರಪ್ರದೇಶದಲ್ಲಿ ನೆಲೆ ಹೊಂದಿದ್ದ ಫ್ರೆಂಚ್ ಮಿಲಿಟರಿ ತುಕಡಿಗಳನ್ನು ಹೊರಹಾಕಲಾಗಿದೆ. ವಿದೇಶೀ ನಿಯಂತ್ರಣದ (ಫ್ರಮುಖವಾಗಿ ಫ್ರೆಂಚ್ ) ಗಣಿ ಮುಂತಾದ ಸಂಪನ್ಮೂಲಗಳನ್ನು ರಾಷ್ಟ್ರೀಕರಣ ಮಾಡಲಾಗಿದೆ. ಉತ್ತರದಲ್ಲಿ ಸಹಾರ ಮರುಭೂಮಿ ಮತ್ತು ಪಶ್ಚಿಮದಲ್ಲಿ ಕರಾವಳಿ ನಡುವೆ ಇರುವ ಪ್ರದೇಶಕ್ಕೆ ಸಾಹೆಲ್ ಎನ್ನಲಾಗುತ್ತದೆ. ಈ ಇಡೀ ಪ್ರದೇಶ (ಮಾತ್ರವಲ್ಲ ಆಫ್ರಿಕಾದ ಹೆಚ್ಚಿನ ಪ್ರದೇಶಗಳು) ಫ್ರೆಂಚ್ ವಸಾಹತುವಾಗಿದ್ದು, 1960-70-80 ದಶಕದಲ್ಲಿ ಮಾತ್ರವೇ ಸ್ವತಂತ್ರವಾಗಿದ್ದವು.

ಈ “ಮೌನಕ್ರಾಂತಿ”ಗೆ ಮುಂದೊಡಗು ಬಂದಿದ್ದು ಬರ್ಕಿನಾ ಫಾಸೊ ದ ಯುವ ನಾಯಕ ಕ್ಯಾಪ್ಟನ್ ಇಬ್ರಾಹಿಂ ಟ್ರಾವೊರೇ ಅವರಿಂದ. ಅವರ ಸರಕಾರ ಚಿನ್ನದ ಗಣಿಗಳನ್ನು ರಾಷ್ಟ್ರೀಕರಿಸಿದೆ. ಬುರ್ಕಿನಾ ಫಾಸೊ ಜನಸಂಖ್ಯೆಯ ಬಹುಪಾಲು ರೈತರ ಆಹಾರ ಭದ್ರತೆಯನ್ನು ಹೆಚ್ಚಿಸಲು, ಅವರ ಆಡಳಿತವು 400 ಟ್ರಾಕ್ಟರ್‌ಗಳು ಮತ್ತು ನೂರಾರು ಮೋಟಾರು ಪಂಪುಗಳನ್ನು ಒಳಗೊಂಡಂತೆ ಅಗತ್ಯ ಕೃಷಿ ಉಪಕರಣಗಳನ್ನು ಗ್ರಾಮೀಣ ಸಹಕಾರಿ ಸಂಘಗಳಿಗೆ ವಿತರಿಸಲು ಪ್ರಾರಂಭಿಸಿದೆ. ಇಂತಹುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಮಾಲಿ, ನೈಜರ್ ಜತೆಗೆ ನಿಕಟ ಸಹಕಾರ ಸಹಯೋಗ ಸಾಧಿಸಲು ಸಾಹೇಲ್ ದೇಶಗಳ ಮೈತ್ರಿಕೂಟ (AES) ರಚಿಸಿದ್ದಾರೆ. ನವ-ವಸಾಹತುಶಾಹಿ ಲೂಟಿಯನ್ನು ಹಿಮ್ಮೆಟ್ಟಿಸಲು ಇದು ಅಗತ್ಯವೆಂದು ಅವರಿಗೆ ಮನವರಿಕೆಯಾಗಿದೆ.

AESಯ ಆರ್ಥಿಕ ಆಶಯಗಳು ಕೇವಲ ಸಂಕೇತಾತ್ಮಕವಾಗಿಲ್ಲ. ಅದರ ಸ್ಥಾಪಕ ನಾಯಕರು ಸಾಹೇಲ್ ದೇಶಗಳ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವುದು, ಪಾಸ್‌ಪೋರ್ಟ್‌ಗಳನ್ನು ಏಕೀಕರಿಸುವುದು ಮತ್ತು ಸಾಹೇಲ್ ದೇಶಗಳ ಮೈತ್ರಿ ಹೂಡಿಕೆ ಬ್ಯಾಂಕ್ ಅನ್ನು ನಿರ್ಮಿಸುವುದಕ್ಕೆ ಬದ್ಧರಾಗಿದ್ದಾರೆ. ಈ ದೇಶಗಳಿಗೆ ಮಾರಕವಾಗಿದ್ದ CFA ಫ್ರಾಂಕ್ ಹಣಕಾಸು ವ್ಯವಸ್ಥೆಯನ್ನು ಬದಲಿಸಲು ಪ್ರಾದೇಶಿಕ ಕರೆನ್ಸಿಯನ್ನು ಆರಂಭಿಸುವ ಪ್ರಯತ್ನವೂ ಸೇರಿದೆ. ಇದು ಫ್ರೆಂಚ್ ನವ ವಸಾಹತುಶಾಹಿಗೆ ಮಹತ್ತರ ಸವಾಲಾಗಿದ್ದು, ಹಣಕಾಸು ನೀತಿಯನ್ನು ಮರುಸ್ವಾಧೀನಗೊಳಿಸುವ ಕ್ರಮವಾಗಿದೆ.

ಇದನ್ನೂ ಓದಿ: ಬಿ ಜನಾರ್ಧನ ಪೂಜಾರಿಯವರ ನಡೆಗೊಂದು ಬಹಿರಂಗ ಪತ್ರ

CFA ಫ್ರಾಂಕ್ ಹಣಕಾಸು ವ್ಯವಸ್ಥೆ ಆಫ್ರಿಕಾದ ಫ್ರೆಂಚ್ ವಸಾಹತುಗಳ ಹಣಕಾಸು ಆಮದು-ರಫ್ತು ವ್ಯವಹಾರವನ್ನು ಈ ದೇಶಗಳು ಸ್ವತಂತ್ರವಾದ ಮೇಲೂ ನಿಯಂತ್ರಿಸಲು ಅನುವು ಮಾಡಿಕೊಡುವ ವ್ಯವಸ್ಥೆ. ಇದರ ಪ್ರಕಾರ ಮೊದಲು ಈ CFA ಫ್ರಾಂಕ್ ಫ್ರೆಂಚ್ ಫ್ರಾಂಕ್ ಗೆ ತಳುಕು ಹಾಕಿಕೊಂಡಿತ್ತು ಮತ್ತು ಅದಕ್ಕಿಂತ ಕಡಿಮೆ ಮೌಲ್ಯವನ್ನು ಹೊಂದಿರುತ್ತಿತ್ತು. ಅದರ ಮೌಲ್ಯವನ್ನು ಫ್ರೆಂಚ್ ಕೇಂದ್ರೀಯ ಬ್ಯಾಂಕ್ ನಿರ್ಧರಿಸುತ್ತಿತ್ತು. ಈ ಆಪ್ರಿಕನ್ ದೇಶಗಳ ರಫ್ತು ಅಗ್ಗವಿರುವ ಮತ್ತು ಫ್ರೆಂಚ್ ಅಥವಾ ಇತರ ಪಾಶ್ಚಿಮಾತ್ಯ ಆಮದುಗಳು ದುಬಾರಿಯಾಗುವ ಹಾಗೆ CFA ಫ್ರಾಂಕ್ ಮತ್ತು ಫ್ರೆಂಚ್ ಫ್ರಾಂಕ್ ವಿನಿಮಯ ದರವನ್ನು ನಿರ್ಧರಿಸುತ್ತಿತ್ತು. ಅಂದರೆ ಈ ದೇಶಗಳಿಗೆ ತಮ್ಮ ಕರೆನ್ಸಿಯ ಮೌಲ್ಯ ನಿರ್ಧರಿಸುವ ಮತ್ತು ಆ ಮೂಲಕ ಆರ್ಥಿಕ ಸಾರ್ವಭೌಮತ್ವವಿರಲಿಲ್ಲ. ಫ್ರಾನ್ಸ್ ಯುರೋ ಕೂಟಕ್ಕೆ ಸೇರಿದ ಮೇಲೆ CFA ಫ್ರಾಂಕ್ ಯುರೋ ಗೆ ತಳುಕು ಹಾಕಿಕೊಂಡಿತ್ತು.

ಈ ವ್ಯವಸ್ಥೆಯ ಮೂಲಕ ಈ ದೇಶಗಳು ಸ್ವತಂತ್ರವಾದ ಮೇಲೂ ಫ್ರಾನ್ಸ್ ಈ ದೇಶಗಳ ಹಣಕಾಸು ಲೂಟಿಯಲ್ಲಿ ತೊಡಗಿತ್ತು. ಆಫ್ರಿಕಾದ ಮಾಜಿ ವಸಾಹತುಗಳ ಮೇಲೆ ಈ ವ್ಯವಸ್ಥೆಯ ಮೂಲಕ ತನ್ನ ನಿಯಂತ್ರಣ ಹೊಂದಿತ್ತು ಮತ್ತು ಅವುಗಳ ಬೆಳವಣಿಗೆಗೆ ತೊಡಕಾಗಿತ್ತು. ಇದಕ್ಕೆ ಬದಲಿ ವ್ಯವಸ್ಥೆ ರೂಪಿಸಲು ಹಲವು ಆಫ್ರಿಕನ್ ದೇಶಗಳು ಮತ್ತು ದೇಶಗಳ ಕೂಟಗಳು ಹಿಂದೆ ಪ್ರಯತ್ನಿಸಿದ್ದವು. ಇಡೀ (ಅಥವಾ ಬಹುಪಾಲು) ಆಫ್ರಿಕಾದ ದೇಶಗಳ ಸಾಮಾನ್ಯ ಮಾರುಕಟ್ಟೆ, ಆರ್ಥಿಕ ಒಕ್ಕೂಟ ಮತ್ತು
ಸಾಮಾನ್ಯ ಕರೆನ್ಸಿಯ ವ್ಯವಸ್ಥೆಗೆ ಇತ್ತೀಚೆಗೆ ಲಿಬ್ಯಾ ನಾಯಕ ಗದ್ದಾಫಿ ಪಪ್ರಯತ್ನಿಸದ್ದರಿಂದಲೇ, ಯುರೋ ಕೂಟ ಮತ್ತು ಯು.ಎಸ್ ಸೇಋಇದ್ದ ನಾಟೋ ಕೂಟ ಅವರ ಬಲಿ ತೆಗೆದುಕೊಂಡಿತ್ತು. CFA ಫ್ರಾಂಕ್ ಹಣಕಾಸು ವ್ಯವಸ್ಥೆ ಕಿತ್ತು ಹಾಕಿ ಬದಲಿ ವ್ಯವಸ್ಥೆ ಮಾಡದೇ ಈ ದೇಶಗಳ ಆರ್ಥಿಕ ಪ್ರಗತಿ ಸಾಧ್ಯವಿಲ್ಲ ಇಂತಹ ಪ್ರಯತ್ನವನ್ನು AES ತಮ್ಮ ದೇಶಗಳಿಂದ ಆರಂಭಿಸಲಿದೆ.

ಫ್ರೆಂಚ್ ಮತ್ತು ಯುರೋಪಿನ ನವ-ವಸಾಹತುಶಾಹಿ ವ್ಯವಸ್ಥೆಗೆ ಸವಾಲು ಹಾಕುವ ಪ್ರಯತ್ನ ಮಹತ್ವದ ಬೆಳವಣಿಗೆ. ಈ ಮೌನಕ್ರಾಂತಿಯ ಪ್ರಮುಖ ಭಾಗ.

ಇವು 1983ರ ಆಗಸ್ಟ್ 4ರಂದು ಬುರ್ಕಿನಾ ಫಾಸೊದಲ್ಲಿ ಅಧಿಕಾರಕ್ಕೆ ಬಂದು, ಆಫ್ರಿಕಾದಾದ್ಯಂತ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹ ತಂದ, ಥಾಮಸ್ ಶಂಕರ ಎಂಬ ಪ್ರಸಿದ್ಧ ನಾಯಕ ಕಂಡ ಕನಸು. ಅವರನ್ನು1987ರಲ್ಲಿ ಹತ್ಯೆ ಮಾಡಿದರೂ ಅವರ ಆಶಯಗಳನ್ನು ಜೀವಂತವಿರಿಸಿ ಈಗಿನ ನಾಯಕರು ನನಸು ಮಾಡಹೊರಟಿದ್ದಾರೆ..

AES ಕೂಟದ ಪ್ರಯತ್ನಗಳು, ಸ್ವಾತಂತ್ರ್ಯದ ನಂತರ ಹಳೆಯ ಫ್ರೆಂಚ್ ವಸಾಹತುಗಳಿಂದ ಹೊರಹೋಗಿದ್ದ ಬಿಲಿಯನ್‌ ಯೂರೊಗಳನ್ನು ಹಿಂತಿರುಗಿಸುವ ಗುರಿಯನ್ನು ಹೊಂದಿವೆ. ಇವು CFA ವಲಯ ಮತ್ತು ಇತರ ಆರ್ಥಿಕತೆಗಳ ನಡುವೆ ಇರುವ ವಾರ್ಷಿಕ ಬೆಳವಣಿಗೆಯ ಅಂತರವನ್ನು ಕಡಿಮೆ ಮಾಡುವತ್ತವೂ ದೃಷ್ಟಿ ಹರಿಸುತ್ತಿವೆ.

AES ಕೂಟದ ಭದ್ರತಾ ಸಹಕಾರವೂ ಈ ಆರ್ಥಿಕ ಕಾರ್ಯಕ್ರಮಗಳಿಗೆ ಬಲ ನೀಡಿದೆ. AES ಕೂಟದ ಸಂಯುಕ್ತ ಪಡೆಗಳು ಲಿಪ್ಟಾಕೊ-ಗೌರ್ಮಾ ತ್ರಿ- ಸೀಮಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ, ಸಮುದಾಯಗಳನ್ನು ನಾಶಮಾಡಿದ ಜಿಹಾದಿ ಹೋರಾಟಗಳನ್ನು ನಿಯಂತ್ರಿಸಲು. 2023 ಡಿಸೆಂಬರ್ ವೇಳೆಗೆ ಫ್ರೆಂಚ್ ಸೇನೆಯನ್ನು ತಮ್ಮ ದೇಶಗಳಿಂದ ಹೊರಹಾಕುವ ಮೂಲಕ, 1960ರಿಂದ ಪ್ರತಿ ವರ್ಷ ಆಫ್ರಿಕಾ ರಾಷ್ಟ್ರಗಳಲ್ಲಿ ಫ್ರಾನ್ಸ್ ನಡೆಸುತ್ತಿರುವ ಸೇನಾ ಹಸ್ತಕ್ಷೇಪದ ನೇರ ಸವಾಲು ಹಾಕಿದೆ.

ಆರು ವಾರಗಳಲ್ಲಿ, (ಸೆಪ್ಟೆಂಬರ್ 16, 2025ರಂದು), ಅಧಿಕೃತ ಸ್ಥಾಪನೆಯ ಎರಡು ವರ್ಷಗಳನ್ನು ಮುಗಿಸಲಿರುವ. AES ಕೂಟ ಇನ್ನೂ ಅನಿಶ್ಚಿತ ಭವಿಷ್ಯ ಹೊಂದಿರುವ ನಾಜೂಕಾದ ಶಿಶುವಾಗಿದೆ. ಅದರ ಬ್ಯಾಂಕ್ ಆಫ್ರಿಕಾದ ಸ್ವಾಯತ್ತ ಸಂಪತ್ತಿನ ನಿಧಿಗಳು, ವಲಸೆ ಹೂಡಿಕೆಗಳು ಮತ್ತು BRICS+ ಪಾಲುದಾರಿಕೆಯನ್ನು ಭದ್ರಪಡಿಸಬೇಕಿದೆ. ಜೊತೆಗೆ, ನವ-ವಸಾಹತುಶಾಹಿ ಶಕ್ತಿಗಳಿಂದ ಬರುವ ನಿರ್ಬಂಧಗಳು ಮತ್ತು ಗುಪ್ತ ಧ್ವಂಸಕಾರ್ಯಗಳನ್ನು ಸಹ ಎದುರಿಸಬೇಕಿದೆ.

ರಾಷ್ಟ್ರೀಯ ವಿಮೋಚನಾ ಹೋರಾಟಗಳ ಅನುಭವ ತೋರಿಸುವಂತೆ, ಜನರನ್ನು ಕೇಂದ್ರದಲ್ಲಿರಿಸದೆ ಘನತೆಗೆ ಹೋರಾಟವನ್ನು ಮುಂದುವರಿಸಲಾಗುವುದಿಲ್ಲ. ಸಾಹೇಲ್‌ನಲ್ಲಿ ಎದ್ದಿರುವ ಕ್ರಾಂತಿಗಳಂತೆ, ಜನರು ಸ್ವತಂತ್ರ, ದೇಶಪ್ರೇಮಿ ಕ್ರಾಂತಿಗಳ ಪ್ರಮುಖ ಚಾಲನಾ ಶಕ್ತಿಯೂ, ಅಂತಿಮ ಲಾಭಾರ್ಥಿಗಳೂ ಆಗಿದ್ದಾರೆ.

ಈ ಕ್ರಾಂತಿಯ ಹಿನ್ನಡೆಯ ವಿರುದ್ಧದ ಏಕೈಕ ಅರ್ಥಪೂರ್ಣ ಭದ್ರತಾ ವ್ಯವಸ್ಥೆ ಎಂದರೆ ಜನಪ್ರಿಯ ಶಕ್ತಿಗಳು ಮತ್ತು AES ಸರ್ಕಾರಗಳ ನಡುವಿನ ಸಹಕಾರ ಮತ್ತು ಸಂವಾದ. ತಮ್ಮ ಜನರಷ್ಟೇ ಅಲ್ಲ, ಸಂಪೂರ್ಣ ಖಂಡದ ನಿರೀಕ್ಷೆಗಳನ್ನು ಹೊತ್ತಿರುವ ಈ ಸರ್ಕಾರಗಳು, ಈ ಸಂವಾದದ ಮೂಲಕ AESಕೂಟದ ಭವಿಷ್ಯವನ್ನು ಸಂಯುಕ್ತವಾಗಿ ಕಟ್ಟಬೇಕಿದೆ.

ಇದನ್ನೂ ನೋಡಿ: ʼಒಳಮೀಸಲಾತಿಯ ಕಿಚ್ಚು ನಿಮ್ಮ ಪಕ್ಷವನ್ನು ಸುಟ್ಟು ಹಾಕುತ್ತದೆʼ, ದಲಿತ ನಾಯಕರಿಂದ ಸರಕಾರಕ್ಕೆ ಎಚ್ಚರಿಕೆJanashakthi

Donate Janashakthi Media

Leave a Reply

Your email address will not be published. Required fields are marked *