ಭಾರತದಲ್ಲಿ ಆಳುವ ಪಕ್ಷಗಳು ತಾವು ಏನು ಮಾಡುತ್ತಿದ್ದರೂ ಅವೆಲ್ಲ ಬಡವರ ಒಳಿತಿಗಾಗಿ ಎಂದು ಸದಾ ಹೇಳಿಕೊಂಡು ಬಂದಿವೆ. ಆದರೆ, ಈಗ, ಮಧ್ಯಮ ವರ್ಗಕ್ಕೆ ಬಹಿರಂಗವಾಗಿ ಆದ್ಯತೆ ನೀಡುವ ಮತ್ತು ಹಾಗೆ ಮಾಡುವಾಗ ದುಡಿಯುವ ಬಡವರನ್ನು ಶಿಕ್ಷಿಸಲೂ ಹೇಸದ ಒಂದು ಸರ್ಕಾರವಿದೆ. ಇಂತಹ “ನಾವೀನ್ಯತೆ”ಯನ್ನು ಹೊರತುಪಡಿಸಿದರೆ, 2025-26ರ ಬಜೆಟ್, ಹಿಂದಿನ ನವ ಉದಾರವಾದಿ ಬಜೆಟ್‌ಗಳು ಸಾಮಾನ್ಯವಾಗಿ ಅನುಸರಿಸಿದ, ತುಳಿದು ತುಳಿದು ಸವೆದಿರುವ ಹಾದಿಯನ್ನೇ ಅನುಸರಿಸಿದೆ. ಆದರೆ ಜನರ ಒಂದು ಜನವಿಭಾಗದ ವಿರುದ್ಧವಾಗಿ ಮತ್ತೊಂದು ಜನವಿಭಾಗವನ್ನು ಸಿನಿಕತನದಿಂದ ಬಳಸಿಕೊಳ್ಳುವುದು, ಅದು ಸರ್ಕಾರದ ಪರ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಸಹಾಯ ಮಾಡಬಹುದಾದರೂ ಸಹ, ಯಾವುದೇ ಆರ್ಥಿಕ ಬಿಕ್ಕಟ್ಟನ್ನೂ ಪರಿಹರಿಸುವುದಿಲ್ಲ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಫೆಬ್ರವರಿ 1, 2025 ರಂದು ಮಂಡಿಸಿದ ಬಜೆಟ್ ಬಹಿರಂಗವಾಗಿ ದುಡಿಯುವ ಜನರ ಜೀವನದ ಬಗ್ಗೆ ತೋರಿದಂತಹ ಸಿನಿಕತನ ಸ್ವಾತಂತ್ರ‍್ಯಾನಂತರದ ಭಾರತದಲ್ಲಿ ಇದುವರೆಗೆ ಯಾವ ಬಜೆಟಿನಲ್ಲೂ ಕಂಡು ಬಂದಿರಲಿಲ್ಲ. ತೆರಿಗೆ ಕಡಿತದಿಂದ ಮಧ್ಯಮ ವರ್ಗದ ಬಳಕೆಯನ್ನು ಹೆಚ್ಚಿಸುವ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವುದು ಬಜೆಟ್‌ನ ತಂತ್ರವಾಗಿದೆ ಎಂದು ಹಣಕಾಸು ಸಚಿವರಿಂದ ಹಿಡಿದು ಕೆಳಗಿನ ವರೆಗೆ ಎಲ್ಲ ಪಂಡಿತರೂ ಒಪ್ಪುತ್ತಾರೆ. ಈ ತೆರಿಗೆ ಕಡಿತವನ್ನು ಸರಿದೂಗಿಸಲು ಅದಕ್ಕೆ ಸಮನಾಗಿ ಸರ್ಕಾರದ ಯಾವುದೇ ಖರ್ಚು-ವೆಚ್ಚಗಳನ್ನು ಕಡಿತ ಮಾಡದೇ, ಮಧ್ಯಮ ವರ್ಗದ ಬಳಕೆಯ ಹೆಚ್ಚಳವನ್ನು ಉಂಟುಮಾಡುವುದು ಸಾಧ್ಯವಾದರೆ ಮಾತ್ರ ಈ ತಂತ್ರವು ಅರ್ಥಪೂರ್ಣವಾಗುತ್ತದೆ.
ಅಂತಹ ಒಂದು ಸಂದರ್ಭದಲ್ಲಿ, ಮಧ್ಯಮ ವರ್ಗದ ಬಳಕೆಯ ಹೆಚ್ಚಳವು ಒಟ್ಟು ಬೇಡಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅರ್ಥವ್ಯವಸ್ಥೆಯು ಉತ್ತೇಜನಗೊಳ್ಳುತ್ತದೆ. ಆದರೆ, ಬಜೆಟ್ ಪ್ರಕಾರ, ಈ ತೆರಿಗೆ ಕಡಿತಗಳ ಮೂಲಕ ಬಿಟ್ಟುಕೊಡಲಾದ ಸಂಪನ್ಮೂಲಗಳನ್ನು ಸರ್ಕಾರದ ವೆಚ್ಚಗಳ ಕಡಿತದ ಮೂಲಕ ಸರಿದೂಗಿಸಿಕೊಳ್ಳಲಾಗುವುದು: ಕೇಂದ್ರ ಸರ್ಕಾರದ ಒಟ್ಟು ಖರ್ಚು 2024-25ಕ್ಕಿಂತ (ಪರಿಷ್ಕೃತ ಅಂದಾಜು) ನಾಮಮಾತ್ರವಾಗಿ ಕೇವಲ ಶೇ. 7.4ರಷ್ಟು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ, ವಾಸ್ತವಿಕವಾಗಿ (ಹಣದುಬ್ಬರವನ್ನು ಪರಿಗಣನೆಗೆ ತಗೊಂಡರೆ) ಯಾವುದೇ ಹೆಚ್ಚಳವಿರುವುದಿಲ್ಲ ಮತ್ತು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಕುಸಿತವೇ ಇರುತ್ತದೆ.
ಇದನ್ನೂ ಓದಿ: ಹೈದರಾಬಾದ್| ಸುರಂಗದ ಒಂದು ಭಾಗ ಕುಸಿತ; 30 ಕಾರ್ಮಿಕರು ಸಿಲುಕಿರುವ ಶಂಕೆ
ಸರ್ಕಾರದ ವೆಚ್ಚಗಳ ಈ ಕಡಿತದಲ್ಲಿ ಬಹುಪಾಲನ್ನು ಆಹಾರ ಅನುದಾನದಲ್ಲಿ ಮಾಡಲಾಗಿದೆ. 2024-25ರ ಪರಿಷ್ಕೃತ ಅಂದಾಜಿಗಿಂತ ಕೇವಲ ಶೇ. 3ರಷ್ಟನ್ನು ನಾಮಮಾತ್ರವಾಗಿ ಏರಿಕೆಮಾಡಲಾಗಿದೆಯಾದರೂ ಆಹಾರದ 2023-24ರ ವಾಸ್ತವಿಕ ಖರ್ಚುಗಳಿಗೆ ಹೋಲಿಸಿದರೆ ಈ ವರ್ಷದ ಅನುದಾನದಲ್ಲಿ ಕುಸಿತವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯ 86,000 ಕೋಟಿ ರೂ.ಗಳ ವೆಚ್ಚಗಳು, 2024-25ರ ಪರಿಷ್ಕೃತ ಅಂದಾಜಿನ ಮಟ್ಟದಲ್ಲೇ ಉಳಿದಿವೆ ಮತ್ತು 2023-24ರ 89,154 ಕೋಟಿ ರೂ.ಗಳ ವಾಸ್ತವಿಕ ಖರ್ಚುಗಳಿಗೆ ಹೋಲಿಸಿದರೆ, ಕುಸಿದಿವೆ. ಈ ವರ್ಷದ ಜನವರಿ 25 ರಂದು ಈ ಯೋಜನೆಯಡಿಯಲ್ಲಿ 6,950 ಕೋಟಿ ರೂ.ಗಳ ವೇತನ ಪಾವತಿ ಬಾಕಿ ಉಳಿದಿರುವುದರಿಂದ, ವಾಸ್ತವಿಕ ಮೊತ್ತವು ಇನ್ನೂ ಕಡಿಮೆಯೇ.
ಸಾಮಾಜಿಕ ವಲಯವನ್ನು ಒಟ್ಟಾಗಿ ತೆಗೆದುಕೊಂಡರೆ, ಅದಕ್ಕಾಗಿ ಮಾಡಿದ ಹಂಚಿಕೆಗಳಲ್ಲಿ ವಾಸ್ತವವಾಗಿ ಕಡಿತವಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ 2025-26ರ ಹಂಚಿಕೆಯು 2024-25ರ ಪರಿಷ್ಕೃತ ಅಂದಾಜು ಹಂಚಿಕೆಗಿಂತ ಸುಮಾರು ಶೇ. 9.5ರಷ್ಟು ಹೆಚ್ಚುವ ನಿರೀಕ್ಷೆಯಿದೆ. ಆದರೆ ಇದು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಯಾಗಿದೆ. ಶಾಲಾ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಕಳೆದ ವರ್ಷ ಒದಗಿಸಿದ್ದ 73,000 ಕೋಟಿ ರೂ. ಗಳ (ಪರಿಷ್ಕೃತ ಅಂದಾಜು) ನಾಮಮಾತ್ರ ಹಂಚಿಕೆಯು ಈ ವರ್ಷ 78,600 ಕೋಟಿ ರೂಗಳಿಗೆ ಏರಿಕೆಯಾಗಿದೆ. ಈ ವಿಷಯದಲ್ಲಿಯೂ ಸಹ, ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಯಾಗಿದೆ. ಸಕ್ಷಮ್ ಅಂಗನವಾಡಿ ಮತ್ತು ಪೋಷಣ್-2 ಇಂತಹ ಇತರ ಹಲವಾರು ಯೋಜನೆಗಳ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ಪಿಎಂ-ಪೋಷಣ್ ವಿಷಯದಲ್ಲಿ ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಈ ವರ್ಷದ ಹಂಚಿಕೆ ನಿಶ್ಚಲವಾಗಿದೆ ಮತ್ತು ಪೋಷಣ್-2 ವಿಷಯದಲ್ಲಿ ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಶೇ. 3.6ರಷ್ಟು ನಾಮಮಾತ್ರ ಹೆಚ್ಚಳವಿದೆ.
ಬಂಡವಾಳ ಕೇಂದ್ರೀಕರಣದ ಪ್ರಕ್ರಿಯೆ
ಸಂಬಳದಾರರಿಗೆ ನೀಡಿದ ತೆರಿಗೆ ಕಡಿತವನ್ನು, ಆಹಾರದ ಮೇಲಿನ ಸಹಾಯಧನ ಕಡಿತ, ಉದ್ಯೋಗ ಖಾತ್ರಿ ಯೋಜನೆ ಮುಂತಾದ ಸಾಮಾಜಿಕ ವಲಯವನ್ನು ಹಿಂಡುವ ಮೂಲಕ ಸರಿಹೊಂದಿಸಿಕೊಳ್ಳುವ ಕ್ರಮವು ಬಡವರು ಮತ್ತು ಅಪಾರ ಸಂಖ್ಯೆಯ ದುಡಿಯುವ ಜನರ ಕೊಳ್ಳುವ ಶಕ್ತಿಯನ್ನು ಮಧ್ಯಮ ವರ್ಗದ ಒಂದು ಭಾಗಕ್ಕೆ ಮರುಹಂಚಿಕೆ ಮಾಡಿದಂತಾಗಿದೆ. ಹಾಗಾಗಿ, 2025-26ರ ಬಜೆಟ್ ಒಟ್ಟಾರೆಯಾಗಿ ಅರ್ಥವ್ಯವಸ್ಥೆಗೆ ಯಾವುದೇ ಉತ್ತೇಜನವನ್ನು ನೀಡುವುದಿಲ್ಲ ಮಾತ್ರವಲ್ಲ, ದುಡಿಯುವ ಬಡವರಿಗೆ ನಷ್ಟವನ್ನುಂಟುಮಾಡಿ ಸಂಬಳದಾರರಿಗೆ ರಿಯಾಯಿತಿಗಳನ್ನು ನೀಡಿದೆ. ಇದು ಶ್ರೀಮಂತರನ್ನು ಮುಟ್ಟದೆ, ದುಡಿಯುವ ಬಡವರಿಂದ ಕೊಳ್ಳುವ ಶಕ್ತಿಯನ್ನು ಸಂಬಳದಾರರಿಗೆ ಮರುಹಂಚಿಕೆ ಮಾಡುತ್ತದೆ. ಅದೇ ಸಮಯದಲ್ಲಿ ಜಾಗತೀಕರಣಗೊಂಡ ಹಣಕಾಸು ವ್ಯವಸ್ಥೆಯನ್ನು ಸಮಾಧಾನಪಡಿಸಲು ವಿತ್ತೀಯ ಕೊರತೆಯನ್ನು ಹೆಚ್ಚು-ಕಡಿಮೆ ಅದು ವಿಧಿಸಿದ ಮಿತಿಯೊಳಗೇ ಇಡುತ್ತದೆ.
ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ ಸಂಬಳದಾರರಿಗೆ ಹಣಕಾಸು ಬೆಂಬಲವನ್ನು ನೀಡಬಾರದು ಎಂಬುದು ಇದರ ಅರ್ಥವಲ್ಲ. ಈ ಬೆಂಬಲವು, 2025-26ರ ಬಜೆಟ್‌ನಲ್ಲಿ ಒಳಗೊಂಡಿರುವ ತಂತ್ರದ ರೀತಿಯಲ್ಲಿ, ದುಡಿಯುವ ಬಡವರಿಗೆ ನಷ್ಟವನ್ನುಂಟುಮಾಡುವ ಮೂಲಕ ಬರಬಾರದು ಎಂಬುದೇ ಇಲ್ಲಿರುವ ಮುಖ್ಯವಾದ ಆಶಯ.
ಈ ಕಾರ್ಯತಂತ್ರವು ಅರ್ಥವ್ಯವಸ್ಥೆಯ ನಿಧಾನಗತಿಯನ್ನು ನಿವಾರಿಸದಿದ್ದರೂ, ಎನ್‌ಡಿಎ ಸರ್ಕಾರದ ಮೂರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಮೊದಲನೆಯದು, ದುಡಿಯುವ ಬಡವರನ್ನು ಹಿಂಡುವುದರಿಂದಾಗಿ ಸಾರಭೂತವಾಗಿ ಕಿರು ಉತ್ಪಾದನಾ ವಲಯದಲ್ಲಿ ತಯಾರಿಸುವ ವಿವಿಧ ಸರಕುಗಳಿಗೆ ಬೇಡಿಕೆ ಇಳಿಕೆಯಾಗುತ್ತದೆ. ಆದರೆ, ಕೊಳ್ಳುವ ಶಕ್ತಿಯನ್ನು ಸಂಬಳದಾರರಿಗೆ ಮತ್ತು ಮಧ್ಯಮ ವರ್ಗಕ್ಕೆ ಸಾಮಾನ್ಯವಾಗಿ ಹಸ್ತಾಂತರಿಸುವುದರಿಂದ ಸಂಘಟಿತ
ವಲಯದಲ್ಲಿ, ಅದರಲ್ಲೂ ಮುಖ್ಯವಾಗಿ ಏಕಸ್ವಾಮ್ಯ ಬಂಡವಾಳ ವಲಯದಲ್ಲಿ ತಯಾರಿಸುವ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಈ ಕಾರ್ಯತಂತ್ರವು ಮಾರ್ಕ್ಸ್ ಯಾವುದನ್ನು ಬಂಡವಾಳದ ಕೇಂದ್ರೀಕರಣ ಪ್ರಕ್ರಿಯೆ ಎಂದು ಕರೆದಿದ್ದರೋ, ಆ ಪ್ರಕ್ರಿಯೆಯನ್ನು ಉತ್ತೇಜಿಸುವ ಮೂಲಕ ಏಕಸ್ವಾಮ್ಯ ಬಂಡವಾಳದ ಹಿತಾಸಕ್ತಿಗಳ
ಈಡೇರಿಕೆಯಾಗುತ್ತದೆ. ಈ ಮೂಲಕ ಹಿರಿ ಬಂಡವಾಳವು ಕಿರು ಬಂಡವಾಳದ ವೆಚ್ಚದಲ್ಲಿ ಬೆಳೆಯುತ್ತದೆ.
ಕಾರ್ಪೊರೇಟ್- ಹಿಂದುತ್ವ ಮೈತ್ರಿಕೂಟದ ಪ್ರಾಬಲ್ಯ ಇಂದಿನ ಭಾರತದ ರಾಜಕೀಯದ ಮುಖ್ಯಲಕ್ಷಣವಾಗಿದ್ದು, ಎನ್‌ಡಿಎ ಸರ್ಕಾರವು ಈ ಬಜೆಟ್ ಮೂಲಕ ತನ್ನನ್ನು ಬೆಂಬಲಿಸುವ ಕಾರ್ಪೊರೇಟ್ ಸ್ತಂಭದ ಹಿತಾಸಕ್ತಿಗಳನ್ನು ಈಡೇರಿಸುತ್ತಿದೆ.
ಸ್ವಪ್ರತಿಷ್ಠೆಯ ಗೀಳೇ ಮುಖ್ಯವಾದಾಗ..
ಎರಡನೆಯದು, ಅಸಂಘಟಿತ ವಲಯದಲ್ಲಿ ಬೇಡಿಕೆಯ ಕುಸಿತ ಮತ್ತು ಅದರಿಂದಾಗಿ ಅಲ್ಲಿನ ಉತ್ಪಾದನೆಯ ಕುಸಿತವನ್ನು ನಮ್ಮ ಅಧಿಕೃತ ಅಂಕಿ-ಸಂಖ್ಯೆಗಳ ವ್ಯವಸ್ಥೆಯು ಸರಿಯಾಗಿ ಪರಿಗಣಿಸುವುದಿಲ್ಲ. ಅಲ್ಪಾವಧಿಗಾಗಿ ಮಾಡುವ ಜಿಡಿಪಿಯ ತ್ವರಿತ ಮತ್ತು ಪ್ರಾಥಮಿಕ ಅಂದಾಜುಗಳನ್ನು ಮಾಡುವಾಗ ಅಸಂಘಟಿತ ವಲಯವನ್ನು ಪರಿಗಣಿಸುವುದಿಲ್ಲ ಮತ್ತು ಈ ಉದ್ದೇಶಕ್ಕಾಗಿ ಕಾರ್ಪೊರೇಟ್ ವಲಯದಿಂದ ಬಂದ ಅಂಕಿ-ಸಂಖ್ಯೆಗಳನ್ನೇ ಇಡೀ ಅರ್ಥವ್ಯವಸ್ಥೆಯ ಫಲಿತಾಂಶ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ಈ ಕಾರ್ಯತಂತ್ರವು ಅರ್ಥವ್ಯವಸ್ಥೆಯನ್ನು ಅದು ನಿಜವಾಗಿ ಇರುವುದಕ್ಕಿಂತ ಸುಂದರವಾಗಿ ಕಾಣುವಂತೆ ಬಿಂಬಿಸುತ್ತದೆ.
ನಮ್ಮ ಅಂಕಿಅಂಶಗಳ ವ್ಯವಸ್ಥೆಯ ಈ ವಿಶಿಷ್ಟ ಸಂದರ್ಭದಲ್ಲಿ ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾರ್ಪೊರೇಟ್ ಸಾಧನೆಯ ಉತ್ತಮ
ಅಂಕಿಅಂಶಗಳೇ ಇಡೀ ಅರ್ಥವ್ಯವಸ್ಥೆಯ ಉತ್ತಮ ಸಾಧನೆಯಾಗಿ ಬಿಂಬಿಸಲ್ಪಡುತ್ತವೆ. ಹಾಗಾಗಿ, ಸರ್ಕಾರವು ತನ್ನ ಬೆಂಬಲಿಗ ಕಾರ್ಪೊರೇಟ್‌ಗಳನ್ನು ಖುಷಿ ಪಡಿಸುವ ಹೊತ್ತಿನಲ್ಲೇ, ಅರ್ಥವ್ಯವಸ್ಥೆಯನ್ನು ತಾನು ಉತ್ತಮಪಡಿಸಿದ್ದೇನೆ ಎಂದು ಬೀಗಬಹುದು. ತನ್ನ ಸ್ವಂತ ಪ್ರತಿಷ್ಠೆಯ ಗೀಳು ಹತ್ತಿಕೊಂಡಿರುವ ಸರ್ಕಾರಕ್ಕೆ ಇದು ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗುತ್ತದೆ.
ಮೂರನೆಯದು, ಮಧ್ಯಮ ವರ್ಗಕ್ಕೆ ಒದಗಿಸಿದ ತೆರಿಗೆ ರಿಯಾಯಿತಿಗಳು ಸ್ಪಷ್ಟವಾಗಿವೆ. ಅವು ಎದ್ದು ಕಾಣುತ್ತಿದ್ದರೂ ಸಹ, ಇನ್ನೊಂದು ಬದಿಯಲ್ಲಿ, ಅಂದರೆ, ಈ ರಿಯಾಯಿತಿಗಳ ಹೊರೆ ಯಾರನ್ನು ಹಿಂಡುತ್ತದೆ ಎಂಬುದು ಹೊರನೋಟಕ್ಕೆ ಕಾಣಿಸುವುದಿಲ್ಲ. ಆದ್ದರಿಂದ, ದುಡಿಯುವ ಬಡವರ ಬೆಂಬಲವನ್ನು ದೂರಮಾಡದೇ, ಈ ತೆರಿಗೆ ರಿಯಾಯಿತಿಗಳ ಫಲಾನುಭವಿಗಳಿಂದ ಗಮನಾರ್ಹ ಬೆಂಬಲವನ್ನು ಪಡೆಯಬಹುದು ಎಂದು ಸರ್ಕಾರ ಭಾವಿಸುತ್ತದೆ.
ದುಡಿಯುವ ಬಡವರ ಸಂಕಷ್ಟಗಳು ಮೂಲದಲ್ಲಿ ಹಲವಾರು ಕಾರಣಗಳನ್ನು ಹೊಂದಿರುವುದರಿಂದ, ಅವಕ್ಕೆ ಸರಕಾರದ ವಿತ್ತೀಯ ಕಾರ್ಯತಂತ್ರ ಕಾರಣ ಎಂಬ ದೂಷಣೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುವಂತೆ ಮಾಡಬಹುದು. ಅದಲ್ಲದೆ, ಎನ್‌ಡಿಎ ಸರ್ಕಾರದ ಆರ್ಥಿಕ ಕಾರ್ಯತಂತ್ರದ ಪರಿಣಾಮವಾಗಿ ದುಡಿಯುವ ಬಡವರ ಬೆಂಬಲದಲ್ಲಿ ಯಾವುದೇ ಇಳಿಕೆ ಕಂಡುಬಂದರೆ, ಆತುಕೊಳ್ಳಲು ಹಿಂದುತ್ವದ ಕಾರ್ಯಕ್ರಮವಂತೂ ಇದ್ದೇ ಇರುತ್ತದೆ.
ದುಡಿಯುವ ಬಡವರ ಬಗ್ಗೆ ಸಿನಿಕತನ-ಹೊಸ ವಿದ್ಯಮಾನ
2025-26ರ ಬಜೆಟ್ ಏನನ್ನು ಆಧರಿಸಿದೆಯೋ ಅದನ್ನು ನಾವು ಒಂದು ಕಾರ್ಯತಂತ್ರ ಎಂದು ಕರೆಯುವ ಮೂಲಕ ಸರ್ಕಾರವು ಒಂದು ಮುಂದಾಲೋಚನೆಯನ್ನು ಹೊಂದಿದೆ ಎಂದು ಭಾವಿಸುತ್ತೇವೆ ಎಂದೇನೂ ಅಲ್ಲ. ಆದರೆ ಎನ್‌ಡಿಎ ಸರ್ಕಾರವು ಇತ್ತೀಚೆಗೆ ಮಧ್ಯಮ ವರ್ಗದ ಬಗ್ಗೆ ಬಲು ಹೊಗಳಿಕೆಯ ಮಾತುಗಳನ್ನು ಪದೇ ಪದೇ ಉಲ್ಲೇಖಿಸುತ್ತಿರುವುದು ಗಮನಾರ್ಹವಾಗಿದೆ. ಪ್ರಸ್ತುತ ಬಜೆಟ್ ಅಧಿವೇಶನದ ಆರಂಭದಲ್ಲಿ ಹಲವಾರು ಸಮಕಾಲೀನ ವಿಷಯಗಳ ಕುರಿತು ಸರ್ಕಾರದ ದೃಷ್ಟಿಕೋನವನ್ನು ವ್ಯಕ್ತಪಡಿಸುವುದಕ್ಕಾಗಿ ರಾಷ್ಟಾçಧ್ಯಕ್ಷೆ ಮುರ್ಮು ಅವರು ಮಾಡಿದ ಸಾಂಪ್ರದಾಯಿಕ ಭಾಷಣವು, ಮಧ್ಯಮ ವರ್ಗವನ್ನು ಹೊಗಳಿ ಹೊಗಳಿ ಅಟ್ಟಕೇರಿಸುವ ಮಾತುಗಳಿಂದ ಕೂಡಿತ್ತು. ಹಣಕಾಸು ಸಚಿವರು ಮಧ್ಯಮ ವರ್ಗವನ್ನು ಮತ್ತು ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಅದರ ಸಾಮರ್ಥ್ಯವನ್ನು ಪದೇ ಪದೇ ಶ್ಲಾಘಿಸಿದರು.
ಇದೆಲ್ಲವೂ ಬಜೆಟ್ ಒಂದು ಆಕಸ್ಮಿಕ ಕಲಸುಮೇಲೋಗರವಲ್ಲ, ಅದು ಒಂದು ಕಾರ್ಯತಂತ್ರದ ಭಾಗವಾಗಿದೆ _ ಕಾರ್ಪೋರೇಟ್-ಹಿಂದುತ್ವ ಮೈತ್ರಿಕೂಟದ ಪ್ರಾಬಲ್ಯವು ಮತ್ತಷ್ಟು ಬೆಂಬಲವನ್ನು ಗಳಿಸುವ ಉದ್ದೇಶದಿಂದ ದುಡಿಯುವ ಜನರು ಮತ್ತು ಮಧ್ಯಮ ವರ್ಗದ ನಡುವೆ ವಿಭಜನೆಯನ್ನು ಸೃಷ್ಟಿಸುವ ಒಂದು
ತಂತ್ರವಾಗಿದೆ – ಎಂಬುದನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಈ ಕಾರ್ಯತಂತ್ರವು ನವ ಉದಾರವಾದಿ ಸಾಂಪ್ರದಾಯಿಕತೆಗೆ ಅಂಟಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವನ್ನು ಸಂತೋಷಪಡಿಸುತ್ತದೆ: ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದೂ ಇಲ್ಲ ಅಥವಾ ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ವಿತ್ತೀಯ ಕೊರತೆಯ ಮಿತಿಯನ್ನೂ ಮೀರುವುದಿಲ್ಲ.
ಸಿನಿಕತನ ಇರುವುದು ಇಲ್ಲಿಯೇ: ಮಧ್ಯಮ ವರ್ಗದೊಳಗೆ ತನ್ನ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಸರ್ಕಾರವು ದುಡಿಯುವ ಬಡಜನರ ಹಿತಾಸಕ್ತಿಗಳನ್ನು ಬಲಿ ಕೊಡಲು ಸಿದ್ಧವಾಗಿದೆ. ತನಗೆ ಭಾರೀ ಬೆಂಬಲವಿದೆ ಎಂದು ಹೇಳಿಕೊಳ್ಳಲು ದುಡಿಯುವ ಬಡವರನ್ನು ನೋಯಿಸಲು ಅದು ಸಿದ್ಧವಾಗಿದೆ. ಬಂಡವಾಳಶಾಹಿ ಸಮಾಜದಲ್ಲಿ ಇದು ಸಾಮಾನ್ಯವಾಗಿ ನಡೆಯುವ ಸಂಗತಿಯೇ. ಆದರೆ, ಭಾರತದಲ್ಲಿ ಇದಂತೂ ಒಂದು ಹೊಸ ವಿದ್ಯಮಾನವೇ. ಭಾರತದಲ್ಲಿ ಆಡಳಿತ ನಡೆಸುವ ರಾಜಕೀಯ ಪಕ್ಷಗಳು ತಾವು ಏನು ಮಾಡುತ್ತಿದ್ದೇವೆಯೋ ಅದು ದುಡಿಯುವ ಬಡವರ ಒಳಿತಿಗಾಗಿ ಎಂದು ಸದಾ ಹೇಳಿಕೊಳ್ಳುತ್ತವೆ. ಆದರೆ, ಈಗ, ನಮ್ಮಲ್ಲಿ ಮಧ್ಯಮ ವರ್ಗಕ್ಕೆ ಬಹಿರಂಗವಾಗಿ ಆದ್ಯತೆ ನೀಡುವ ಮತ್ತು ಹಾಗೆ ಮಾಡುವಾಗ ದುಡಿಯುವ ಬಡವರನ್ನು ಶಿಕ್ಷಿಸುವ ಒಂದು ಸರ್ಕಾರವಿದೆ.
ಈ ಕಾರ್ಯತಂತ್ರದ ನಾವೀನ್ಯತೆಯನ್ನು ಹೊರತುಪಡಿಸಿದರೆ, 2025-26ರ ಬಜೆಟ್, ಹಿಂದಿನ ನವ ಉದಾರವಾದಿ ಬಜೆಟ್‌ಗಳು ಸಾಮಾನ್ಯವಾಗಿ ಅನುಸರಿಸಿದ, ತುಳಿದು ತುಳಿದು ಸವೆದಿರುವ ಹಾದಿಯನ್ನೇ ಅನುಸರಿಸುತ್ತದೆ: ಅಂದರೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಸೂಕ್ತ ಬೆಲೆಗಾಗಿ ರೈತರ ಬೇಡಿಕೆಗಳ ಸಂಪೂರ್ಣ ನಿರ್ಲಕ್ಷ್ಯ; ವಿಮಾ ವಲಯವನ್ನು 100 ಪ್ರತಿಶತ ವಿದೇಶಿ ಮಾಲೀಕತ್ವದ ಕಂಪನಿಗಳಿಗೆ ತೆರೆಯುವ ಮೂಲಕ ವಿದೇಶಿ ಕಂಪನಿಗಳಿಗೆ
ಹಾಸಿದ ರತ್ನಗಂಬಳಿಯನ್ನು ಮತ್ತಷ್ಟು ವಿಸ್ತರಿಸುವುದು; ಮತ್ತು ಗೂಳಿ ಹುಮ್ಮಸ್ಸ”ನ್ನು ತೋರಿಸುವಂತೆ ಮತ್ತು ಬೃಹತ್ ಹೂಡಿಕೆಯನ್ನು ಕೈಗೊಳ್ಳ್ಳುವಂತೆ ದೇಶೀಯ ಏಕಸ್ವಾಮ್ಯ ಬಂಡವಾಳಕ್ಕೆ ನೀತಿಬೋಧೆ (ಲಾಭದ ಪಾಲು ಹೆಚ್ಚುತ್ತಿರುವಾಗ ವೇತನದ ಸ್ಥಗಿತತೆಯಿಂದ ಉಂಟಾಗುವ ಆದಾಯದ ಅಸಮಾನ ಹಂಚಿಕೆಯಿಂದಾಗಿ ಬಳಕೆ ಸರಕುಗಳಿಗೆ ನಿಧಾನಗತಿಯ ಬೇಡಿಕೆಯೇ ಹೂಡಿಕೆಯ ಕೊರತೆಗೆ ಕಾರಣ ಎಂದು ಆರ್ಥಿಕ ಸಮೀಕ್ಷೆಯು ಸ್ಪಷ್ಟವಾಗಿ ಹೇಳಿದ್ದರೂ ಸಹ).
ವಿದೇಶಿ ಹಣಕಾಸು ಬಂಡವಾಳವನ್ನು ಆಕರ್ಷಿಸುವ ಮೂಲಕ ರೂಪಾಯಿಯ ಕುಸಿತವನ್ನು ನಿಲ್ಲಿಸಬಹುದು ಎಂದು ಸರ್ಕಾರವು ಆಶಿಸಿರಬಹುದು. ವಿದೇಶಿ ಹೂಡಿಕೆದಾರರನ್ನು ಈ ರೀತಿಯಲ್ಲಿ ಪುಸಲಾಯಿಸುವುದು ನಿರರ್ಥಕ ಎಂಬುದು ಬಜೆಟ್ ಪ್ರಕಟಗೊಂಡ ಕೇವಲ ಎರಡು ದಿನಗಳಲ್ಲಿ ಬಹಿರಂಗಗೊಂಡಿದೆ.
ರೂಪಾಯಿ ಕುಸಿತ ನಿಲ್ಲಲಿಲ್ಲ. ಫೆಬ್ರವರಿ 3ರಂದು ಅದು ಒಂದು ತೀವ್ರ ಕುಸಿತವನ್ನೇ ಕಂಡಿತು. ರೂಪಾಯಿ ಮೌಲ್ಯವು ಡಾಲರ್‌ಗೆ 87 ರೂ.ಗಳಿಗಿಂತಲೂ
ಕೆಳಗಿಳಿಯಿತು. ಕಥೆಯ ನೀತಿ ಎಂದರೆ, ಜನರ ಒಂದು ಗುಂಪಿನ ವಿರುದ್ಧವಾಗಿ ಸಿನಿಕತನದಿಂದ ಮತ್ತೊಂದು ಗುಂಪನ್ನು ಬಳಸಿಕೊಳ್ಳುವುದು, ಅದು ಸರ್ಕಾರದ ಪರ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಸಹಾಯ ಮಾಡಿದರೂ ಸಹ, ಯಾವುದೇ ಆರ್ಥಿಕ ಬಿಕ್ಕಟ್ಟನ್ನೂ ಪರಿಹರಿಸುವುದಿಲ್ಲ.
ಇದನ್ನೂ ನೋಡಿ: LIVE: ಕೆಪಿಎಸ್‌ಸಿ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ