-ಲೇಖಕರು: ಆರ್. ಇಳಂಗೋವನ್ – ದಕ್ಷಿಣ ರೈಲ್ವೆ ಎಂಪ್ಲಾಯಿಸ್ ಯೂನಿಯನ್ ಮುಖಂಡರು
-ಕೃಪೆ: ತೀಕದಿರ್ (ಕನ್ನಡಕ್ಕೆ: ಸಿ.ಸಿದ್ದಯ್ಯ)
ಯುಪಿಎಸ್ (UPS) ಎಂದು ಕರೆಯಲಾಗುವ ಏಕೀಕೃತ ಪಿಂಚಣಿ ಯೋಜನೆಯ ಮಾಹಿತಿಯನ್ನು ಕೇಂದ್ರ ಬಿಜೆಪಿ ಸಮ್ಮಿಶ್ರ ಸರ್ಕಾರ ಸ್ವಲ್ಪಮಟ್ಟಿಗೆ ಸೋರಿಕೆ ಮಾಡುತ್ತಿದೆ, ಸಂಪೂರ್ಣ ಅಧಿಸೂಚನೆ ಹೊರಬಂದಾಗ ಮಾತ್ರ ಇಡೀ ಸಮಸ್ಯೆ ಬೆಳಕಿಗೆ ಬರಲಿದೆ. ಹೊಸದಾಗಿ ಘೋಷಿಸಲಾದ ಏಕೀಕೃತ ಪಿಂಚಣಿ ಯೋಜನೆಯು 2025ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಅಂದರೆ 2025 ರ ಮಾರ್ಚ್ 31 ರ ನಂತರ ನಿವೃತ್ತರಾಗುವವರಿಗೆ ಇದು ಅನ್ವಯಿಸುತ್ತದೆ.
ಸೋರಿಕೆಗೊಂಡ ಅಂಶಗಳನ್ನು ಗಮನಿಸಿದರೆ, ಇದರಲ್ಲಿ ಬಹಳಷ್ಟು ವಂಚನೆಗಳಿರುವುದು ಕಾಣುತ್ತದೆ. ಯುಪಿಎಸ್ ಎಂಬುದು ಪಿಂಚಣಿ ಖಾತರಿಯಾಗಿದೆ ಎಂದು ಹೇಳಿದರೂ, ಹಳೆಯ ಪಿಂಚಣಿ ಯೋಜನೆಗೆ ಹೋಲಿಸಿದರೆ ಇದು ಅಸಮರ್ಪಕವಾಗಿದೆ. ‘ಯುಪಿಎಸ್’ ಎಂಬುದು ನಾಯಿಯ ಬಾಲ ಕತ್ತರಿಸಿ ನಾಯಿಗೆ ಸೂಪ್ ಮಾಡಿ ಕೊಟ್ಟಂತೆ ನಮ್ಮ ಹಣದಲ್ಲಿ 100 ಪರ್ಸೆಂಟ್ ತೆಗೆದುಕೊಂಡು ನಮಗೇ ಪಿಂಚಣಿ ಕೊಡುತ್ತಾರೆ!
ಹೊಸ ಪೆನ್ಸನ್ ಯೋಜನೆ ಜಾರಿ
ರಾಷ್ಟ್ರೀಯ ಪಿಂಚಣಿ ಯೋಜನೆ (NPS) – ಅಂದರೆ ಹೊಸ ಪಿಂಚಣಿ ಯೋಜನೆಯಲ್ಲಿ ವೇತನದ ಶೇ. 10 ರಷ್ಟನ್ನು ಉದ್ಯೋಗಿಗಳು ಪಾವತಿಸುತ್ತಾರೆ. ಶೇ. 14 ರಷ್ಟು ಕೊಡುಗೆಯನ್ನು ಸರ್ಕಾರ ನೀಡುತ್ತದೆ. ಈ ಒಟ್ಟು ಪಿಂಚಣಿ ನಿಧಿಯನ್ನು ಷೇರು ಮಾರುಕಟ್ಟೆಯಲ್ಲಿ ಮ್ಯೂಚುವಲ್ ಪಂಡ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಅದರಿಂದ ಬರುವ ಲಾಭವೂ ನಮ್ಮ ಪಿಂಚಣಿ ಖಾತೆಯಲ್ಲಿ ಇರುತ್ತದೆ. ನೌಕರರು ನಿವೃತ್ತಿಯ ಸಮಯದಲ್ಲಿ ಈ ನಿಧಿಯಿಂದ ಶೇ. 60ರಷ್ಟು ಹಣವನ್ನು ತೆಗೆದುಕೊಳ್ಳಬಹುದು. ಉಳಿದ ಶೇ. 40 ರಷ್ಟನ್ನು ಮ್ಯೂಚುವಲ್ ಪಂಡ್ ನಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಲಾಭದಿಂದ ಪಿಂಚಣಿ ಕೊಡಲಾಗುತ್ತದೆ. ಪಿಂಚಣಿದಾರ ಮತ್ತು ಅವನ ಜೀವಂತ ಸಂಗಾತಿ ಇಬ್ಬರ ಮರಣದ ನಂತರ ಶೇ. 40 ಅನ್ನು ವಾರಸುದಾರರಿಗೆ ಹಿಂತಿರುಗಿಸಲಾಗುತ್ತದೆ.
ಇದನ್ನೂ ಓದಿ: ಸಿಪಿಐಎಂ ಹಿರಿಯ ಸದಸ್ಯ ರಾಘವ ಅಂಚನ್ ಇನ್ನಿಲ್ಲ
ಏಕೀಕೃತ ಪಿಂಚಣಿ ಯೋಜನೆಯಲ್ಲಿ ಹೇಳಿರುವಂತೆ
ಪ್ರಸ್ತುತ ಘೋಷಿಸಲಾದ ಏಕೀಕೃತ ಪಿಂಚಣಿ ಯೋಜನೆ(UPS)ಗೆ ಉದ್ಯೋಗಿಗಳು ಶೇ. 10 ಕೊಡುಗೆಯನ್ನು ಮುಂದುವರಿಸುತ್ತಾರೆ. ಸರ್ಕಾರ ಶೇ. 18.5 ಅನ್ನು ನೀಡುತ್ತದೆ. ಅಂದರೆ ಒಟ್ಟು ಶೇ. 28.5ರಷ್ಟು ಪಿಂಚಣಿ ಖಾತೆಗೆ ಜಮಾ ಆಗಬೇಕಲ್ಲವೇ? ಆದರೆ ಸರ್ಕಾರವು ನೌಕರನ ಶೇ. 10ಕ್ಕೆ ಕೇವಲ ಶೇ. 10 ಅನ್ನು ಮಾತ್ರ ಸೇರಿಸುತ್ತದೆ. ಆದ್ದರಿಂದ ಒಟ್ಟು ನೌಕರನ ಖಾತೆಯಲ್ಲಿ ಶೇ. 28.5ರ ಬದಲಿಗೆ ಶೇ. 20ರಷ್ಟು ಮಾತ್ರ ಇರುತ್ತದೆ. ಉಳಿದ ಶೇ. 8.5ರಲ್ಲಿ ಸರ್ಕಾರ ಪ್ರತ್ಯೇಕ ಖಾತೆಯನ್ನು ಸ್ಥಾಪಿಸಲಿದೆಯಂತೆ. ಅದನ್ನು ಮಾರುಕಟ್ಟೆಯಲ್ಲಿ ನಿರಂತರವಾಗಿ ಹೂಡಿಕೆ ಮಾಡಿ ಲಾಭ ಪಡೆದರೆ, ಆ ಲಾಭವನ್ನು ಪ್ರತ್ಯೇಕ ಪಿಂಚಣಿ ಖಾತೆಗೆ ಸೇರಿಸುತ್ತಾರೆ. ಅವರು ಅದನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತ ಪಿಂಚಣಿಯಲ್ಲಿನ ಕೊರತೆಯನ್ನು ಸರಿದೂಗಿಸಲು ಬಳಸುತ್ತಾರೆ. ಪ್ರತ್ಯೇಕ ಪಿಂಚಣಿ ಖಾತೆಯಲ್ಲಿ ಇರುವ ಸಂಪೂರ್ಣ ಮೊತ್ತವನ್ನು ಸರ್ಕಾರ ತೆಗೆದುಕೊಳ್ಳುತ್ತದೆ, ಉದ್ಯೋಗಿಗೆ ಖಾತರಿ ಪಿಂಚಣಿ, ಸಂಗಾತಿಗೆ ಖಾತರಿಯ ಕುಟುಂಬ ಪಿಂಚಣಿ ನೀಡಲಾಗುತ್ತದೆ. ಇಬ್ಬರೂ ಮರಣಹೊಂದಿದ ನಂತರ, ಅವರು ಹೂಡಿಕೆ ಮಾಡಿದ ಹಣವು ನಾಮಿನಿಗೆ ಹೋಗುತ್ತದೆ ಹೊಸ ಪಿಂಚಣಿ ಯೋಜನೆಯಲ್ಲಿ, 40 ಪ್ರತಿಶತವು ರಿಟರ್ನ್ ರೂಪದಲ್ಲಿ ಲಭ್ಯವಿಲ್ಲಇಲ್ಲ. ಸರ್ಕಾರ ಅದನ್ನು ಉಳಿಸಿಕೊಳ್ಳುತ್ತದೆ.
ಸೇವೆಯ ಅವಧಿ ವ್ಯತ್ಯಾಸ
ಹೊಸ ಪಿಂಚಣಿ ಯೋಜನೆ(ಎನ್ ಪಿ ಎಸ್)ಯಲ್ಲಿ ಉದ್ಯೋಗಿ 25 ವರ್ಷಗಳ ಸೇವೆಯನ್ನು ಹೊಂದಿರಬೇಕು. ವೈಯಕ್ತಿಕ ಪಿಂಚಣಿ ಖಾತೆಯಲ್ಲಿ ಇರುವ ಇಡೀ ಮೊತ್ತದ ಶೇ. 100 ರಷ್ಟನ್ನು ಸರ್ಕಾರವೇ ತೆಗೆದುಕೊಳ್ಳಲು ಉದ್ಯೋಗಿ ಒಪ್ಪಿಕೊಳ್ಳಬೇಕು. ಹಾಗಾದರೆ, ನೌಕರನು ತನ್ನ ಕೊನೆಯ 12 ತಿಂಗಳ ಮೂಲ ವೇತನವನ್ನು ಕೂಡಿಸಿ, 12ರಿಂದ ಭಾಗಿಸಿದರೆ ಬರುವ ಸರಾಸರಿ ವೇತನದ ಶೇ. 50 ರಷ್ಟು ಖಾತರಿ ಪಿಂಚಣಿ ಲಭ್ಯವಿದೆ. ಆದರೆ ಒಪಿಎಸ್ ನಲ್ಲಿ 10 ವರ್ಷಗಳ ಸೇವೆಯ ನಂತರವೇ ಕೊನೆಯ ತಿಂಗಳ ಮೂಲ ವೇತನದ 50 ಪ್ರತಿಶತವು ಪಿಂಚಣಿಯಾಗಿ ಖಾತರಿಪಡಿಸುತ್ತದೆ. ಹೊಸ ಪಿಂಚಣಿ ಯೋಜನೆಯಲ್ಲಿ (NPS) 24 ಶೇಕಡಾದಲ್ಲಿ 60 ರಷ್ಟು ತೆಗೆದುಕೊಳ್ಳಬಹುದಲ್ಲವೇ? ಆದರೆ ಯುಪಿಎಸ್‌ನಲ್ಲಿ ವೈಯಕ್ತಿಕ ಪಿಂಚಣಿ ಖಾತೆಯಲ್ಲಿರುವ ಶೇ. 20ರಿಂದ ಶೇ. 60ರವರೆಗೆ ಹಿಂಪಡೆಯಬಹುದು. ಆ ರೀತಿಯಲ್ಲಿ ತೆಗೆದುಕೊಂಡರೆ ನಿಮ್ಮ ಶೇ. 50 ಪಿಂಚಣಿಯು ಅದೇ ಅನುಪಾತದಲ್ಲಿ ಕಡಿಮೆಯಾಗುತ್ತದೆ.
ಉದಾಹರಣೆಗೆ, ಶೇ. 60ರಷ್ಟನ್ನು ಹಿಂತೆಗೆದುಕೊಂಡರೆ, ಶೇ. 50ರಲ್ಲಿ ಶೇ. 60ರಷ್ಟು ಕಡಿಮೆಯಾಗುತ್ತದೆ. ಉಳಿದ ಶೇ. 40 ಮಾತ್ರ ಪಿಂಚಣಿಯಾಗಿ ಸಿಗುತ್ತದೆ. ಆದರೆ ಇದು ಖಾತರಿಯಾಗಿದೆ. ಎನ್ ಪಿ ಎಸ್ ನಲ್ಲಿ ಸಾಕಷ್ಟು ಪಿಂಚಣಿಯೂ ಇಲ್ಲ. ಖಾತರಿ ಪಿಂಚಣಿಯೂ ಇಲ್ಲ. ಅದೇ ರೀತಿ 25 ವರ್ಷ ಸೇವೆ ಸಲ್ಲಿಸಿದರೆ ಮಾತ್ರವೇ ಶೇ. 50ರಷ್ಟು ಪಿಂಚಣಿ ಸಿಗುತ್ತದೆ. ಸೇವಾ ಅವಧಿ 20 ವರ್ಷವಾಗಿದ್ದರೆ, ನಿಮ್ಮ ಪಿಂಚಣಿ 25 ವರ್ಷ ಸೇವಾವಧಿಗೆ 50 ಎಂದರೆ 20ಕ್ಕೆ ಎಷ್ಟು ಎಂದು ನೋಡುತ್ತಾರೆ. ಹಾಗೆಂದರೆ, ನಿಮ್ಮ ಮಾಸಿಕ ಸರಾಸರಿ ಸಂಬಳದ ಶೇ. 40 ಅನ್ನು ಮಾತ್ರ ನೀವು ಪಿಂಚಣಿಯಾಗಿ ಪಡೆಯುತ್ತೀರಿ. 10 ವರ್ಷಗಳು ನಿಮ್ಮ ಸೇವಾವಧಿ ಎಂದರೆ ಶೇ. 20 ಪಿಂಚಣಿ ಸಿಗುತ್ತದೆ. ಅಂದರೆ, ನಿವೃತ್ತಿ ವಯಸ್ಸಿನಲ್ಲಿ (60/62/65) ನಿವೃತ್ತರಾಗುವ ವ್ಯಕ್ತಿಯು 10,000 ರೂ.ಗಳ ಖಾತರಿಯ ಪಿಂಚಣಿಯನ್ನು ಪಡೆಯುತ್ತಾನೆ. OPS ನಲ್ಲಿ ಇದು 9000 ರೂಪಾಯಿ. ಆಂಧ್ರಪ್ರದೇಶಲ್ಲಿರುವ GPS ಎಂಬ ಖಾತರಿ ಪಿಂಚಣಿ ಯೋಜನೆಯಲ್ಲಿ, 10 ವರ್ಷಗಳ ಸೇವೆಯ ನಂತರ, ವೇತನದಲ್ಲಿ ಶೇ. 50 ಪಿಂಚಣಿ ಸಿಗುತ್ತದೆ. ಅಲ್ಲದೇ ಉದ್ಯೋಗಿಯ ಖಾತೆಯಲ್ಲಿರುವ ಶೇ.60ರಷ್ಟು ಮೊತ್ತವನ್ನು ತೆಗೆದುಕೊಳ್ಳಬಹುದು. ಪಿಂಚಣಿ ಪ್ರಮಾಣಾನುಗುಣವಾಗಿ ಕಡಿಮೆಯಾಗುವುದಿಲ್ಲ
ಯುಪಿಎಸ್ ನಲ್ಲಿ ಕನಿಷ್ಠ ಪಿಂಚಣಿ
ಒಬ್ಬರ ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿಯನ್ನು ಆಧರಿಸಿ ಮಾಸಿಕ ವೇತನವು ಒಂದು ಲಕ್ಷ ಎಂದು ಊಹಿಸೋಣ. ಅವರು ತಮ್ಮ ವೈಯಕ್ತಿಕ ಪಿಂಚಣಿ ಖಾತೆಯ ಶೇ. 100ರಷ್ಟನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಒಪ್ಪುತ್ತಾರೆ ಎಂದು ಭಾವಿಸೋಣ. ಅವರು 60ನೇ ವಯಸ್ಸಿಗೆ ನಿವೃತ್ತರಾದಾಗ 25 ವರ್ಷಗಳ ಸೇವಾವಧಿ ಹೊಂದಿದ್ದರೆ ಶೇ.50ರಷ್ಟು ಪಿಂಚಣಿ ರೂ. 50,000 ಸಿಗುತ್ತದೆ. ಅವರು ವೈಯಕ್ತಿಕ ಪಿಂಚಣಿ ಖಾತೆಯಿಂದ ಶೇ. 60 ಅನ್ನು ಹಿಂಪಡೆಯಲು ಬಯಸಿದರೆ, ಅವರ ಪಿಂಚಣಿ 50,000 ದಲ್ಲಿ ಶೇ. 60 ಅನ್ನು ಕಡಿತಮಾಡಿ ಉಳಿದ ಶೇ. 40 ಮಾತ್ರ ಪಿಂಚಣಿಯಾಗಿ ಲಭ್ಯವಿರುತ್ತದೆ. ಅಂದರೆ ರೂ. 20,000 ಮಾತ್ರ ಸಿಗುತ್ತದೆ. ಆದರೆ ಇದು ಖಾತರಿಯಾಗಿ ಸಿಗುತ್ತದೆ. ಈ ಮೊತ್ತವು ರೂ. 10,000 ಕ್ಕಿಂತ ಕಡಿಮೆಯಾದರೆ ರೂ. 10,000 ಖಾತರಿಯಾಗಿ ಲಭ್ಯವಿರುತ್ತದೆ.
ಸೇವಾ ಅವಧಿ 25 ವರ್ಷಗಳಾಗಿದ್ದರೆ ವೈಯಕ್ತಿಕ ಖಾತೆಯಲ್ಲಿರುವ ಸಂಪೂರ್ಣ ಪಿಂಚಣಿ ಮೊತ್ತವನ್ನು ಬಿಟ್ಟುಕೊಟ್ಟರೆ ರೂ. 50,000 ಪಿಂಚಣಿ; ಶೇ. 60ರಷ್ಟು ತೆಗೆದುಕೊಂಡರೆ ರೂ. 20,000 ಪಿಂಚಣಿ; 20 ವರ್ಷಗಳ ಸೇವಾ ಅವಧಿ ಮಾತ್ರ ಇದ್ದರೆ, ಸರಾಸರಿ ಒಂದು ತಿಂಗಳ ವೇತನದಲ್ಲಿ ಪೂರ್ಣ ವೈಯಕ್ತಿಕ ಖಾತೆಯಲ್ಲಿನ ಸಂಪೂರ್ಣ ಪಿಂಚಣಿ ಮೊತ್ತವನ್ನು ಬಿಟ್ಟುಕೊಟ್ಟರೆ ಶೇ. 40ರಷ್ಟು ಪಿಂಚಣಿ. ಅಂದರೆ ರೂ. 40,000 ಪಿಂಚಣಿ; 60 ಪರ್ಸೆಂಟ್ ತೆಗೆದುಕೊಂಡರೆ 40,000 ರೂ.ನಲ್ಲಿ ಶೇ. 40ರಷ್ಟು ಅಂದರೆ ರೂ. 16,000 ಪಿಂಚಣಿ ಖಾತರಿ. 10 ವರ್ಷಗಳ ಸೇವಾವಧಿಯನ್ನು ಹೊಂದಿದ್ದರೆ ಸಂಪೂರ್ಣ ವೈಯಕ್ತಿಕ ಖಾತೆಯಲ್ಲಿ ಇರುವ ಹಣವನ್ನು ಬಿಟ್ಟುಕೊಟ್ಟರೆ ಸರಾಸರಿ ಒಂದು ತಿಂಗಳ ವೇತನದಲ್ಲಿ ಶೇ. 20 ಅಂದರೆ ರೂ. 20,000 ಪಿಂಚಣಿ.
60ರಷ್ಟು ತೆಗೆದುಕೊಂಡರೆ, 20,000 ರೂ.ಗಳಲ್ಲಿ ಶೇ. 40 ಅಂದರೆ ರೂ. 8000 ಪಿಂಚಣಿ. ಆದರೂ ಇವರಿಗೆ ರೂ. 10,000 ಗ್ಯಾರಂಟಿ. 10 ವರ್ಷಕ್ಕಿಂತ ಕಡಿಮೆ ಇದ್ದರೆ ಪಿಂಚಣಿ ಇರುವುದಿಲ್ಲ. ಅವರ ಹಣ ಹಿಂತಿರುಗಿ ಸಿಗುತ್ತದೆಯೇ ಎಂಬುದು ಅಧಿಸೂಚನೆ ಹೊರ ಬಂದ ನಂತರವೇ ತಿಳಿಯುತ್ತದೆ. ಆದರೆ ನಾವು ಒತ್ತಾಯಿಸುವ ಹಳೆಯ ಪಿಂಚಣಿ ಯೋಜನೆ (OPS) ಯಲ್ಲಿ ಈ ಸಮಸ್ಯೆ ಇಲ್ಲ. 10 ವರ್ಷಗಳ ಸೇವಾವಧಿ ಇದ್ದರೂ ರೂ. 50,000 ಪಿಂಚಣಿ ಖಾತರಿಪಡಿಸಲಾಗಿದೆ. ಯಾವುದೇ ಕೊಡುಗೆಯ ಅಗತ್ಯವಿಲ್ಲ. ಆದ್ದರಿಂದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಎಂಬುದು ಖಾತರಿಯಾಗಿದೆ ಎಂದು ಹೇಳಿದರೂ ಎನ್‌ಪಿಎಸ್‌ನಂತೆ, ಹಳೆಯ ಪಿಂಚಣಿ ಯೋಜನೆಗೆ ಹೋಲಿಸಿದರೆ ಇದು ಅಸಮರ್ಪಕವಾಗಿದೆ.
ಏಕೀಕೃತ ಪಿಂಚಣಿ ಯೋಜನೆಯಲ್ಲಿನ ಕುಟುಂಬ ಪಿಂಚಣಿ
ಯುಪಿಎಸ್ ಯೋಜನೆಯಲ್ಲಿ ಕುಟುಂಬ ಪಿಂಚಣಿ ಸಂಗಾತಿಗೆ ಮಾತ್ರ ಲಭ್ಯವಿರುತ್ತದೆ. ಹೊಸ ಪಿಂಚಣಿ ಯೋಜನೆ (NPS) ಯಲ್ಲೂ ಇದೇ ಆಗಿದೆ. ನಿವೃತ್ತ ಉದ್ಯೋಗಿಯ ಅರ್ಹ ಪಿಂಚಣಿಯ ಶೇಕಡಾ 60 ರಷ್ಟು ಕುಟುಂಬ ಪಿಂಚಣಿ ಎಂದು ಖಾತರಿಪಡಿಸಲಾಗುತ್ತದೆ. ರೂ. 50,000 ಪಿಂಚಣಿ ಎಂದರೆ ಇದರಲ್ಲಿ ಶೇ. 60 ಎಂದರೆ, ರೂ. 30,000 ಕುಟುಂಬ ಪಿಂಚಣಿ ಖಾತರಿಯಾಗಿ ಸಿಗುತ್ತದೆ. ಪಿಂಚಣಿ ರೂ.10,000 ಆಗಿದ್ದರೆ ಅದರಲ್ಲಿ ಶೇ. 60ರಷ್ಟು ಕುಟುಂಬ ಪಿಂಚಣಿ ರೂ. 6000 ಆಗಿರುತ್ತದೆ. ಕನಿಷ್ಠ ಪಿಂಚಣಿ ರೂ. 10,000 ಎಂಬುದು ನಿವೃತ್ತಿಯ ವಯಸ್ಸಿನಲ್ಲಿ ನಿವೃತ್ತರಾದವರಿಗೆ ಮಾತ್ರ ಅನ್ವಯಿಸುತ್ತದೆ. ಕುಟುಂಬ ಪಿಂಚಣಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಕನಿಷ್ಠ ಕುಟುಂಬ ಪಿಂಚಣಿ ರೂ. 6000 ಮಾತ್ರ.
OPS ನಲ್ಲಿ ಪಿಂಚಣಿದಾರರು ಮರಣಹೊಂದಿದರೆ, ನಿವೃತ್ತಿಯ ದಿನಾಂಕದಿಂದ 7 ವರ್ಷಗಳವರೆಗೆ ಅಥವಾ 67 ವರ್ಷ ವಯಸ್ಸಿನವರೆಗೆ ಕೊನೆಯ ತಿಂಗಳ ಸಂಬಳದ 50 ಪ್ರತಿಶತದಷ್ಟು ಕುಟುಂಬ ಪಿಂಚಣಿಯನ್ನು ಪಾವತಿಸಲಾಗುತ್ತದೆ. ಅದರ ನಂತರ ಕೊನೆಯ ತಿಂಗಳ ಸಂಬಳದ ಶೇ. 30ರಷ್ಟನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ. ಕನಿಷ್ಠಪಕ್ಷ ರೂ. 9000 ಮೂಲ ಪಿಂಚಣಿ ನೀಡಲಾಗುವುದು. ಇದಕ್ಕಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ಬೆಲೆ ಏರಿಕೆಗೆ ಅನುಗುಣವಾಗಿ ಸಿಗುತ್ತದೆ. ಸಂಗಾತಿಯು ನಿಧನರಾದರೆ ಅವರ ಅಂಗವಿಕಲ ಮಗ ಅಥವಾ ಅವಿವಾಹಿತ ಅಥವಾ ವಿದವೆ ಅಥವಾ ವಿಚ್ಛೇದಿತ ಮಗಳು ಇವರ ಜೀವನಕ್ಕಾಗಿ, ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಜೀವನಪೂರ್ತಿ ಅಥವಾ ಮರುಮದುವೆ ಆಗುವವರೆಗೆ ಅದೇ ಪಿಂಚಣಿ ಸಿಗುತ್ತದೆ. ಆದರೆ NPS ಅಥವಾ UPS ಸಂಗಾತಿ ನಿದನದ ನಂತರ ಪಿಂಚಣಿ ಕೊನೆಗೊಳ್ಳುತ್ತದೆ.
ತುಟ್ಟಿಭತ್ಯೆಗೆ ಅನುಗುಣವಾಗಿ
ಎನ್ ಪಿ ಎಸ್ ನಲ್ಲಿ ತುಟ್ಟಿಭತ್ಯೆಗೆ ಅನುಗುಣವಾಗಿ ಪಿಂಚಣಿ ಹೆಚ್ಚಳವಿಲ್ಲ. ಯುಪಿಎಸ್ ನಲ್ಲಿ ತುಟ್ಟಿಭತ್ಯೆಗೆ ಅನುಗುಣವಾಗಿ ಇದೆ. ಆದರೆ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರಿಗೆ 2016ರಿಂದ ಲೆಕ್ಕ ಹಾಕಲಾಗುತ್ತದೆ. ಈಗ ಜುಲೈ 2024ರಲ್ಲಿ ಶೇಕಡಾ 53 ರಷ್ಟು ಸವಕಳಿಯಾಗಿದೆ. 1-1-2025 ರಂದು ಇದು ಶೇ. 57ರಷ್ಟು ಇರುತ್ತದೆ. ಹಾಗಾದರೆ 1-4-2025 ರಲ್ಲಿ ಈ 57 ಶೇಕಡಾ ಪಿಂಚಣಿಯಲ್ಲಿ ಅಥವಾ ಕುಟುಂಬ ಪಿಂಚಣಿಯಲ್ಲಿ ಸೇರಿಸುತ್ತಾರೆಯೇ ಎಂಬುದು ಅನುಮಾನವಾಗಿದೆ. 1-4-2025 ರಂದು ತುಟ್ಟಿಭತ್ಯೆಯನ್ನು ಹೊಸ ಆಧಾರದಲ್ಲಿ ರಚಿಸಿ ಮೊದಲಿನಿಂದ ಪ್ರಾರಂಭಿಸುತ್ತಾರೆ ಎಂದು ತೋರುತ್ತದೆ.
ಇಲ್ಲದಿದ್ದಲ್ಲಿ ಕನಿಷ್ಠ ಪಿಂಚಣಿಯನ್ನು ಕೇಂದ್ರ ಸರ್ಕಾರದಲ್ಲಿ ಇರುವ 9000 ರೂ.ಗಳಿಂದ ಹೆಚ್ಚುವರಿಯಾಗಿ 10,000 ರೂ.ಗಳನ್ನು ನಿಗದಿ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದರೆ ಪಿಂಚಣಿ, ಕನಿಷ್ಠ ಪಿಂಚಣಿ ಅಲ್ಲದೆ ಕುಟುಂಬ ಪಿಂಚಣಿ 1-4-2024 ರಲ್ಲಿ ಜಾರಿಗೆ ಬಂದಾಗ ತುಟ್ಟಿಭತ್ಯೆ ಇಲ್ಲದೆ ಪಿಂಚಣಿ ಮಾತ್ರವೇ ಸಿಗುತ್ತದೆ. ಆದ್ದರಿಂದ, ನಾವು ನೋಡಿದ ಉದಾಹರಣೆಯಲ್ಲಿ, ಮುಂದೆ ಬರುವ ಪಿಂಚಣಿಯಲ್ಲಿ ಶೇ. 57 ಹೆಚ್ಚುವರಿಯಾಗಿ ಸಿಗುವುದಿಲ್ಲ. ಕನಿಷ್ಠ ಕುಟುಂಬ ಪಿಂಚಣಿ ಕೇವಲ 6000 ರೂ. ಮಾತ್ರ ಸಿಗುತ್ತದೆ. ಅದಕ್ಕಾಗಿಯೇ ನಾವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಯು ಉತ್ತಮವಾದ ಪಿಂಚಣಿ ಅಲ್ಲ ಎಂದು ಹೇಳುತ್ತೇವೆ. ಹಳೆಯ ಪಿಂಚಣಿ ಯೋಜನೆ (OPS) ಉತ್ತಮವಾಗಿದೆ ಎಂದು ಹೇಳುತ್ತೇವೆ.
ಗ್ರಾಚ್ಯುಟಿ
ಗ್ರಾಚ್ಯುಟಿಯು ಒಪಿಎಸ್ ನಲ್ಲಿರುವಂತೆಯೇ ಎನ್ ಪಿ ಎಸ್ ಮತ್ತು ಯುಪಿಎಸ್ ನಲ್ಲಿಯೂ ಸಹ ಗ್ರಾಚ್ಯುಟಿ ನಿಯಮಗಳ ಪ್ರಕಾರ ಲಭ್ಯವಿದೆ. 5 ವರ್ಷಗಳ ಸೇವೆಯನ್ನು ಪೂರ್ಣಗೊಂಡ ನಂತರ, ಪ್ರತಿ ವರ್ಷದ ಸೇವೆಗೆ ಅರ್ಧ ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿಸಿ ಲೆಕ್ಕಹಾಕಲಾಗುತ್ತದೆ. ಗರಿಷ್ಠ 16.5 ತಿಂಗಳ ವೇತನ ಗ್ರಾಚ್ಯುಟಿಯಾಗಿ ಸಿಗುತ್ತದೆ. ಈಗ ಗರಿಷ್ಠ 25 ಲಕ್ಷ ರೂ.
ಲಂಬ್ಸಮ್ (ಸಗಟು) ಎಂಬ ಒಟ್ಟು ಮೊತ್ತ
ನೀವು ನಿವೃತ್ತಿ ವಯಸ್ಸನ್ನು ತಲುಪಿದಾಗ ನಿವೃತ್ತಿ ಹೊಂದಿದರೆ, ನಿಮ್ಮ ವೈಯಕ್ತಿಕ ಖಾತೆಯಲ್ಲಿ ಇರುವ 100 ಪ್ರತಿಶತದ ಪಿಂಚಣಿ ಮೊತ್ತವನ್ನು ಬಿಟ್ಟುಕೊಟ್ಟರೆ ಮಾತ್ರ ನೀವು ಈ ಮೊತ್ತವನ್ನು ಪಡೆಯುತ್ತೀರಿ. 6 ತಿಂಗಳ ಸೇವಾವಧಿಗೆ, ನಿಮ್ಮ ಕೊನೆಯ ತಿಂಗಳ ಮತ್ತು ತುಟ್ಟಿಭತ್ಯೆ ಸೇರಿಸಿ ಬರುವ ಮೊತ್ತದ ಹತ್ತನೇ ಒಂದು ಭಾಗ ಅಂದರೆ, ಶೇ. 10ರಷ್ಟು ಸಗಟು ಮೊತ್ತವನ್ನು ನೀಡಲಾಗುತ್ತದೆ. ಇದು ಗ್ರಾಚ್ಯುಟಿ ಅಲ್ಲ. ಒಂದು ವರ್ಷಕ್ಕೆ ಶೇ. 20 ಎಂಬ ಲೆಕ್ಕದಲ್ಲಿ 25 ವರ್ಷಗಳ ಸೇವಾವಧಿ ಮುಗಿಸಿದವರಿಗೆ 5 ತಿಂಗಳ ವೇತನ ಸಿಗುತ್ತದೆ. 10 ವರ್ಷ ಪೂರೈಸಿದರೆ 2 ತಿಂಗಳ ವೇತನ ಸಿಗುತ್ತದೆ. ಇದು ಮೀನು ಹಿಡಿಯುವ ಗಾಳಕ್ಕೆ ಹುಳು ಸಿಕ್ಕಿಸಿದಂತೆ.
ಕಮ್ಯುಟೇಶನ್
ಹಳೆಯ ಪಿಂಚಣಿ ಯೋಜನೆ (OPS)ಯ ಮಾಸಿಕ ಪಿಂಚಣಿಯಲ್ಲಿ ಶೇ. 40ರಂತೆ 12 ವರ್ಷಗಳಿಗೆ ಲೆಕ್ಕ ಹಾಕಿ ನಿವೃತ್ತಿಯ ಮೊದಲು ಪಡೆಯಬೇಕಾದ ಕಮ್ಯುಟೇಶನ್ ಇದೆ. 15 ವರ್ಷಗಳ ನಂತರ ಆ 40 ಶೇಕಡಾ ಮೊತ್ತ ಹಿಂತಿರುಗಿ ಬರುತ್ತದೆ. ಇದು NPS ನಲ್ಲಿಯೋ ಅಥವಾ UPS ನಲ್ಲಿಯೋ ಸಿಗುವುದಿಲ್ಲ.
ಹೆಚ್ಚುವರಿ ಪಿಂಚಣಿ (Additional pension)
ಹಳೆಯ ಯೋಜನೆಯಲ್ಲಿ (OPS) 80 ವರ್ಷಕ್ಕಿಂತ ಹೆಚ್ಚು ಬದುಕಿದರೆ ಹೆಚ್ಚುವರಿ ಪಿಂಚಣಿ ಇದೆ. 80 ವರ್ಷ ದಾಟಿದರೆ ಶೇ. 20 ಕೊಡಬಹುದು; 85 ವರ್ಷ ದಾಟಿದರೆ ಶೇ. 30 ಕೊಡಬಹುದು; 90 ವರ್ಷ ದಾಟಿದರೆ ಶೇ. 40 ಕೊಡಬಹುದು; 95 ವರ್ಷ ದಾಟಿದರೆ ಶೇ. 50 ಕೊಡಬಹುದು; 100 ವರ್ಷ ದಾಟಿದರೆ ಶೇ. 100 ರಷ್ಟು ಕೊಡಬಹುದು; ಹೆಚ್ಚುವರಿ ಪಿಂಚಣಿಗೆ ಕೂಡ ಅದೇ ಶೇಕಡಾವಾರು ತುಟ್ಟಿಭತ್ಯೆ ಅನ್ವಹಿಸುತ್ತದೆ. ಇದು NPS ನಲ್ಲಿ ಅಥವಾ UPS ನಲ್ಲಿ ಇಲ್ಲ.
ವೇತನ ಆಯೋಗದಲ್ಲಿ ಹೆಚ್ಚಳ
OPS ನಲ್ಲಿ ಪ್ರತಿ ವೇತನ ಆಯೋಗವು ಜಾರಿಗೆ ಬಂದಾಗಲೂ ಪಿಂಚಣಿ ಮತ್ತು ಕನಿಷ್ಠ ಪಿಂಚಣಿ ಹೆಚ್ಚಾಗುತ್ತದೆ. ಎನ್ ಪಿ ಎಸ್ ಅಥವಾ ಯುಪಿಎಸ್ ನಲ್ಲಿ ಇಂತಹ ಯಾವುದೇ ಖಾತರಿ ಇಲ್ಲ. ಯುಪಿಎಸ್ ನಲ್ಲಿಯೂ ನಮ್ಮ ಪಿಂಚಣಿ ಖಾತೆಯ ಹಣವನ್ನು ಮಾರುಕಟ್ಟೆಯಲ್ಲಿ ವಿವಿಧ ರೀತಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಎಷ್ಟೇ ಕುಸಿತ ಕಂಡರೂ, ಒಪ್ಪಿತ ಪಿಂಚಣಿ ಖಚಿತವಾಗಿದ್ದರೂ ಪಿಂಚಣಿ ಸಾಕಷ್ಟು ಇರುವುದಿಲ್ಲ ಎಂಬುದು ನಿಜವೇ ಆಗಿರುತ್ತದೆ. ಹಾಗೆಯೇ ಹಲವು ಚಳುವಳಿ, ಹೋರಾಟಗಳ ಫಲವಾಗಿ ಒಪಿಎಸ್ ಸೌಲಭ್ಯಗಳನ್ನು ಪಡೆದುಕೊಳ್ಳಲಾಗಿದೆ. ಆದ್ದರಿಂದ, ಹಳೆಯ ಪಿಂಚಣಿ ಯೋಜನೆ (OPS) ಸಾಕು, ಅದು ಉತ್ತಮವಾಗಿದೆ. ಇದರಲ್ಲಿ ತುಟ್ಟಿಭತ್ಯೆಯನ್ನು ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಖಾತರಿಪಡಿಸಲಾಗಿದೆ. ಕುಟುಂಬ ಪಿಂಚಣಿಯೂ ಇದೆ. ವಾರಸುದಾರರಿಗೂ ಇದೆ. ಕನಿಷ್ಠ ಪಿಂಚಣಿ ನ್ಯಾಯಯುತವಾಗಿದೆ. ಕಮ್ಯುಟೇಶನ್ ಇದೆ. ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ. ವೇತನ ಆಯೋಗದಲ್ಲಿ ಹೆಚ್ಚಳವಾಗುತ್ತದೆ.
ಮುಂಚಿತವಾಗಿ ನಿವೃತ್ತಿ ಪಡೆದವರು
1-1-2004 ರ ನಂತರ ಮತ್ತು 1-4-2025 ರ ಮೊದಲು ನಿವೃತ್ತರಾದರೆ, ಅವರು 10 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿದ್ದರೆ ಅವರಿಗೆ ಯುಪಿಎಸ್ ಅನ್ವಯಿಸುತ್ತದೆ. ಅವರು ಪಡೆದ ಪಿಂಚಣಿ ಖಾತೆಯಲ್ಲಿರುವ ಮೊತ್ತವನ್ನು ಅವರಿಗೆ ಪಾವತಿಸಬೇಕಾದ ಬಾಕಿ ಮೊತ್ತದಿಂದ ಕಡಿತ ಮಾಡಲಾಗುವುದು ಎನ್ನುತ್ತದೆ ಕೇಂದ್ರ ಸರ್ಕಾರದ ವೆಚ್ಚ ಇಲಾಖೆಯ ಸಂದೇಶ. ಅವರುಗಳಿಗೂ ಒಪಿಎಸ್ ಜಾರಿಯಾಗಬೇಕು ಎಂಬುದೇ ನ್ಯಾಯ.
ಷೇರು ಮಾರುಕಟ್ಟೆ ಹೂಡಿಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ 99 ಲಕ್ಷ ಉದ್ಯೋಗಿಗಳು ಹೊಸ ಪಿಂಚಣಿಯಲ್ಲಿದ್ದಾರೆ. ಅವರ ಹಣ ರೂ. 10.5 ಲಕ್ಷ ಕೋಟಿ ಷೇರು ಮಾರುಕಟ್ಟೆ ಆಟದಲ್ಲಿ ತೊಡಗಿಸಬೇಕು; ಕಾರ್ಪೊರೇಟ್‌ಗಳೂ ಲಾಭ ಪಡೆಯಬೇಕು; ಖಾತರಿ ಪಿಂಚಣಿ ಕೊಟ್ಟ ಹಾಗೆಯೂ ಇರಬೇಕು. ಅದೇ ಕೇಂದ್ರ ಸರ್ಕಾರದ ‘ಏಕೀಕೃತ ಪಿಂಚಣಿ ಯೋಜನೆ’ ನಾಯಿಯ ಬಾಲ ಕತ್ತರಿಸಿ ನಾಯಿಗೆ ಸೂಪ್ ಮಾಡಿ ಕೊಟ್ಟಂತೆ ನಮ್ಮ ಹಣದಲ್ಲಿ 100 ಪರ್ಸೆಂಟ್ ತೆಗೆದುಕೊಂಡು ನಮಗೇ ಪಿಂಚಣಿ ಕೊಡುತ್ತಾರೆ! ಇದನ್ನು ಒಪ್ಪಲು ಸಾಧ್ಯವಿಲ್ಲ.
ಕಾರ್ಪೊರೇಟ್‌ಗಳಿಗೆ ಹಣ ಮತ್ತು ವಿತ್ತೀಯ ಕೊರತೆ
“ಸರ್ಕಾರದಿಂದ ಹಳೆಯ ಪಿಂಚಣಿ ಯೋಜನೆ (OPS)ಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಏಕೆಂದರೆ ವಿತ್ತೀಯ ಕೊರತೆ ಇದೆ” ಎಂದು ಕೆಲವು ತಜ್ಞರು ವಾದಿಸುತ್ತಾರೆ. ಅದೂ ಸರಿಯೇ. ವಿತ್ತೀಯ ಕೊರತೆಯು ಶೇಕಡಾ 3 ರಷ್ಟಿರಬೇಕು ಎಂದು ನಿರ್ಧರಿಸಿದ ನಂತರ ಈಗ ಅದನ್ನು ಶೇ. 5.9ಕ್ಕೆ ಏಕೆ ಏರಿಸಲಾಗಿದೆ? ಹೇಗೆ?
ವಿತ್ತೀಯ ಕೊರತೆ ಇರುವಾಗಲೇ, ಕಾರ್ಪೊರೇಟ್‌ಗಳ ಮೇಲಿನ ತೆರಿಗೆಯನ್ನು ಶೇ. 30 ರಿಂದ ಶೇ. 22 ಕ್ಕೆ ಮತ್ತು ಹೊಸ ಉದ್ಯಮಿಗಳಿಗೆ ಶೇ. 15 ಕ್ಕೆ ಇಳಿಸುವ ಮೂಲಕ, 1.5 ಲಕ್ಷ ಕೋಟಿ ರೂ.ಗಳ ತೆರಿಗೆ ಆದಾಯವನ್ನು ಏಕೆ ಕಳೆದುಕೊಂಡಿತು? 17 ಲಕ್ಷ ಕೋಟಿ ರೂಪಾಯಿಗಳ ಕಾರ್ಪೊರೇಟ್ ಗಳ ಸಾಲ ಮನ್ನಾ ಮಾಡಿದ್ದೇಕೆ? ಜನರ ತೆರಿಗೆ ಹಣದಿಂದ ವಿತ್ತೀಯ ಕೊರತೆಯನ್ನು ಸರಿದೂಗಿಸಿದವರು ಯಾರು?
ಉತ್ಪಾದನೆಯ ಉತ್ತೇಜನದ ಹೆಸರಿನಲ್ಲಿ ಕಾರ್ಪೊರೇಟ್‌ಗಳಿಗೆ 2 ಲಕ್ಷ ಕೋಟಿ ರೂಪಾಯಿ ನೀಡಿದವರು ಯಾರು? 500 ಕಾರ್ಪೊರೇಟ್ ಗಳಿಗೆ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು, ಅವರ ಸಂಬಳ 5000 ರೂ.ಗಳನ್ನು ನಾವೇ ಕೊಡುತ್ತೇವೆ ಎಂದು 2 ಲಕ್ಷ ಕೋಟಿ ರೂಪಾಯಿಗಳನ್ನು ಈ ಬಜೆಟ್ ನಲ್ಲಿ ಮೀಸಲಿಟ್ಟವರು ಯಾರು? “5 ಲಕ್ಷ ಕೋಟಿ ಡಾಲರ್ ಆರ್ಥಿಕತೆ” “ಸುವರ್ಣ ಭಾರತ” ಎಂಬುದು ಕಾರ್ಪೊರೇಟ್‌ಗಳಿಗೆ ಮಾತ್ರವಲ್ಲವೇ? ತಮ್ಮ ಜೀವಿತಾವಧಿಯ ಕಾಲದಲ್ಲಿ ರಾಷ್ಟ್ರಕ್ಕಾಗಿ ದುಡಿದವರಿಗೆ ಇಲ್ಲವೇ? ದುಡಿಯುವ ಜನರಿಗಾಗಿ ಅಲ್ಲವೇ?
ಯಾವುದೇ ಪಿಂಚಣಿ ಇಲ್ಲದ 10 ಕೋಟಿ ಹಿರಿಯ ನಾಗರಿಕರಿಗೆ ತಿಂಗಳಿಗೆ ರೂ. 3000 ಪಿಂಚಣಿ ಏಕೆ ನೀಡಬಾರದು? ಇದಕ್ಕೆ ಒಟ್ಟು ಕೇವಲ 3 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಇದು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 1.8 ಮಾತ್ರ. ಇಪಿಎಸ್ ಪಿಂಚಣಿದಾರರಿಗೆ ಯಾವುದೇ ಕನಿಷ್ಠ ಪಿಂಚಣಿ 9000 ರೂಪಾಯಿ ಏಕೆ ನೀಡಬಾರದು?
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ದೇಶವ್ಯಾಪಿ ಮುಷ್ಕರ ನಡೆಸಬೇಕು. ಪಂಜಾಬ್ ಮತ್ತು ಹರಿಯಾಣ ಕಾರ್ಮಿಕರು ಬೃಹತ್ ಮುಷ್ಕರ ಆರಂಭಿಸಿದ್ದಾರೆ. ಹೋರಾಡಿದರೆ ಗೆಲುವು ಅಸಾಧ್ಯವೇನಲ್ಲ.. ಎಲ್ಲರೂ ಬೀದಿಗಿಳಿದು ಸತತ ಹೋರಾಟ ನಡೆಸಿದರೆ ಗೆಲುವು ನಿಶ್ಚಿತ.
ಹಳೆಯ ಪಿಂಚಣಿ ಯೋಜನೆ (OPS) ಸಾಕು, ಅದು ಉತ್ತಮವಾಗಿದೆ. ಇದರಲ್ಲಿ ತುಟ್ಟಿಭತ್ಯೆಯನ್ನು ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಖಾತರಿಪಡಿಸಲಾಗಿದೆ. ಕುಟುಂಬ ಪಿಂಚಣಿಯೂ ಇದೆ. ವಾರಸುದಾರರಿಗೂ ಇದೆ. ಕನಿಷ್ಠ ಪಿಂಚಣಿ ನ್ಯಾಯಯುತವಾಗಿದೆ. ಕಮ್ಯುಟೇಶನ್ ಇದೆ. ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ. ವೇತನ ಆಯೋಗದಲ್ಲಿ ಹೆಚ್ಚಳವಾಗುತ್ತದೆ. ಇದಕ್ಕಾಗಿ ನಾವು ಹೋರಾಡಬೇಕಿದೆ.
ಇದನ್ನೂ ನೋಡಿ: ಮದರ್ ತೆರೇಸಾ ಸಂಸ್ಮರಣೆ | ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ | ವಿಚಾರ ಸಂಕಿರಣ