ಉಕ್ಕಿನ ಕಾರ್ಖಾನೆಗೆ ವಿರೋಧ: ನೆಲದ ನೋವಿಗೆ ಹೊಮ್ಮಿದ ಕಾವ್ಯಧ್ವನಿ

ಕೊಪ್ಪಳಬಲ್ಡೋಟಾ ಸ್ಟೀಲ್ಮತ್ತು ಪವರ್ ಲಿಮಿಟೆಡ್ (ಬಿಎಸ್ಪಿಎಲ್‌) 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇಂಟಿಗ್ರೇಟೆಡ್ಉಕ್ಕಿನ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಫೆ. 24ರಂದು ಕೊಪ್ಪಳ ಬಂದ್ ಮಾಡಲು ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ತೀರ್ಮಾನಿಸಿದೆ‌. ಉಕ್ಕಿನ

ಇತ್ತೀಚಿಗೆ ‌ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ‌ ಸಮಾವೇಶದಲ್ಲಿ ಕಾರ್ಖಾನೆ ಸ್ಥಾಪಿಸುವುದಾಗಿ ಬಿಎಸ್‌ಪಿಎಲ್ ಘೋಷಿಸಿತ್ತು. ಈ ಘೋಷಣೆ ಹೊರ ಬಿದ್ದ ದಿನದಿಂದಲೇ ಜನಪರ ಸಂಘಟನೆಗಳು ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿವೆ. ಉಕ್ಕಿನ

ಜನಪರ ಸಂಘಟನೆಗಳ ಕೆಲಸವನ್ನು ಮೆಚ್ಚಿ ಅನೇಕರು ಸಾಮಾಜಿಕ ತಾಣಗಳಲ್ಲಿ ನಿರಂತರ ಚರ್ಚೆಗಳನ್ನು ಹಾಗೂ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಆರಂಭಿಸಿದ್ದಾರೆ. ಕೊಪ್ಪಳದ ಯುವ ಕವಿಗಳು “ನೆಲದ ನೋವಿಗೆ ಕಾವ್ಯಧ್ವನಿ” ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಕವಿತೆಗಳ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.  ಹಲವು ಸಂಘಟನೆಗಳು ಸೇರಿಕೊಂಡು ನಡೆಯುತ್ತಿರುವ ಈ ಜನಾಂದೋಲನಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಕಾವ್ಯದ ಮೂಲಕ ನಮ್ಮ ನೆಲವನ್ನು ಉಳಿಸಿಕೊಳ್ಳುತ್ತೇವೆ ಎಂದು ಕವಿ ಮಹೇಶ್‌ ಬಳ್ಳಾರಿ ಹಾಗೂ ರಮೇಶ್‌ ಬನ್ನಿಕೊಪ್ಪ ಜನಶಕ್ತಿ ಮೀಡಿಯಾಗೆ ತಿಳಿಸಿದರು. ಉಕ್ಕಿನ

ಕಾರ್ಖಾನೆ ವಿರೋಧಿಸಿ ನಡೆಯುತ್ತಿರುವ ಕಾವ್ಯಧ್ವನಿ ಅಭಿಯಾನದ ಆಯ್ದ ಕವಿತೆಗಳು ಈ ಕೆಳಗಿನಂತಿವೆ. ಉಕ್ಕಿನ

ಇದನ್ನೂ ಓದಿ: ಹಿಂದುತ್ವ ಶಕ್ತಿಗಳ ವಿರುದ್ದ ಹೋರಾಟದಿಂದ ಭಾರತ ಉಳಿಯಲು ಸಾಧ್ಯ: ಯು. ಬಸವರಾಜ

ಕವಿತೆ – 01 : ‘ಬಿಕ್ಕಳಿಕೆ

ಮಹೇಶ ಬಳ್ಳಾರಿ

ನಿಮ್ಮ ಉಕ್ಕಿಗಾಗಿ
ನಮ್ಮ ನೆಲವೀಗ ತುಕ್ಕು ಹಿಡಿಯುತ್ತಿದೆ
ಭೂ ತಾಯಿ ಒಡಲು ಬಿಕ್ಕುತ್ತಿದೆ

ಹೆಪ್ಪುಗಟ್ಟಿದ ಮೌನ
ಅದೆಂಥದೋ ಹತಾಶ, ಭಯಾನಕ ಭವಿಷ್ಯದ
ಮಂಕುಬೂದಿ ದಿಕ್ಕೆಂಟರಲ್ಲೂ ಕವಿದಿದೆ

ನಿರಾಳವಾಗಿದ್ದ ಕೊಪ್ಪಳವೀಗ
ಕರಾಳವಾಗುತ್ತಿದೆ
ಇಂಗಾಲದ ದಾಳಿಗೆ ಕಂಗಾಲಾಗುತ್ತಿದೆ

ಕುಕ್ಕುವುದು ಮನುಷ್ಯ ಧರ್ಮವಲ್ಲ
ಸುಡುವ ನೆತ್ತಿ, ಹಸಿದ ಹೊಟ್ಟೆಗಳ ಶಾಪ
ಬಲುಕೆಟ್ಟದ್ದು ನೆನಪಿರಲಿ

ಹಣ ಮತ್ತು ಅಧಿಕಾರಗಳ ವ್ಯಭಿಚಾರವಿದು
ತೂಗುಕತ್ತಿಯೀಗ ನಮ್ಮ ಮೇಲೆ.
ಸಾವು ಪಕ್ಕದಲ್ಲೇ ನಿಂತಿದೆ ಬಾಚಿಕೊಳ್ಳಲು ಕಬಂಧ ಬಾಹುಗಳ ಚಾಚಿ

ಕಕ್ಕುಲಾತಿಯ ನೆಲವಿದು, ಕರುಳಬಳ್ಳಿಯ ಸೆಲೆಯಿದು
ಬನ್ನಿರೆಲ್ಲ ಈಗಲಾದರೂ
ಮಣ್ಣ ಋಣಕ್ಕೆ, ಮಣ್ಣ ಗುಣಕ್ಕೆ.

ಉಸಿರು ನಿಲ್ಲುವ ಮುನ್ನ ಧಿಕ್ಕರಿಸಬೇಕಿದೆ
ನೆಲದ ನೋವಿಗೆ ಧ್ವನಿಯಾಗಬೇಕಿದೆ
ಕೊಪ್ಪಳದ ಸಪ್ಪಳ ರಾಜಧಾನಿಗೆ ತಲುಪಿಸಬೇಕಿದೆ ..

ಸುಟ್ಟು ಬೂದಿಯಾಗುವ ಆತಂಕ
ಉಕ್ಕು-ಅಣುಸ್ಥಾವರಗಳ ನಡುವೆ ಸಿಕ್ಕು
ಜನಸಾಗರ ಉಕ್ಕಬೇಕಿದೆ, ನೆಲಕೆ ಗೆಲುವು ದಕ್ಕಬೇಕಿದೆ.

ಇದನ್ನೂ ಓದಿ: ಬೆಂಗಳೂರು| 4 ವರ್ಷಗಳಲ್ಲಿ 3 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕ್ಯಾನ್ಸರ್ ಶಂಕೆ

ಕವಿತೆ – 02 : ಬಿಕ್ಕುವ ಬಿಕ್ಕಳಿಕೆಗೆ ಕೊನೆಯಿಲ್ಲ

-ರಮೇಶ ಸಿ ಬನ್ನಿಕೊಪ್ಪ

ಇಲ್ಲಿ, ನಾವು ಬಿಕ್ಕುವ
ಬಿಕ್ಕುಗಳಿಗೆ ಕೊನೆಯಿಲ್ಲ.
ವಿಷದ ತುತ್ತು ತಿನ್ನುವುದು
ಇವರಿಗೆ ಇನ್ನು ತಿಳಿಯುತ್ತಿಲ್ಲ.

ಇರುವ ಮಣ್ಣು ಮರುಗುತಿದೆ
ಉಣ್ಣುವ ಅನ್ನ ಹಲುಬುತಿದೆ
ಕುಡಿವ ನೀರು ನೋಯುತಿದೆ
ಸೇವಿಸುವ ಗಾಳಿ ಗುದ್ದಾಡುತಿದೆ
ಆಗಿನಿಂದಲೂ ವಿಷದ ಹುಣ್ಣಾಗಿವೆ.

ಅವರು,
‘ಉಕ್ಕಿನ’ ಕಾರ್ಖಾನೆ
ತರುವ ಧಾವಂತದಲ್ಲಿದ್ದಾರಂತೆ.
ಹಣ ಅಧಿಕಾರದ ಅಮಲಿಗೆ
ನಮ್ಮನ್ನು ಬಲಿ ಮಾಡುವ ಆತುರವಂತೆ.

ನಾವು,
ಉಗುಳುವ ವಿಷಾನಿಲಕ್ಕೆ
ಎಲುಬಿನ ಹಂದರದ ಚಕ್ಕಳವಾಗಿದ್ದೇವೆ.
ದಮ್ಮು ಕೆಮ್ಮು ಉಬ್ಬಸ
ಕ್ಯಾನ್ಸರ್…ಮಾರಿಗೆ
ಜೀವಂತ ಹೆಣವಾಗಿದ್ದೇವೆ.

ಇಷ್ಟಾದರೂ…
ನಿಮ್ಮಗಿನ್ನೂ ಕರುಣೆಯಿಲ್ಲವೇ..?
‘ಉಕ್ಕು’ವ ನಿಮ್ಮ ತೆವಲಿಗೆ
ನಮ್ಮ ‘ಬಿಕ್ಕು’ಗಳಿಗೆ ಬೆಲೆಯಿಲ್ಲವೇ…?

ನಮ್ಮ ನೆಲವಿಗ ಭಯದಿ ಕುಸಿಯುತಿದೆ
ಕಾಯಬೇಕಾದವರೇ
ಕೊಲ್ಲುವವರ ಕೂಟ ಸೇರುತಿದ್ದಾರೆ.

ನಮ್ಮ ನೆಲವನುಳಿಸಲು
‘ಋಣ’ದ ಗಣಿಯೊಳಗಿನ
‘ಹಂಗನು’ ಹರಿದು ಹೋರಾಟಕ್ಕಿಳಿಯಬೇಕಿದೆ.

ಇಲ್ಲವಾದರೆ,
‘ಉಕ್ಕಿ’ನ ಕೊಟೆಯೊಳಗೆ
ಎದೆಯುಸಿರು ಕಳೆದುಕೊಂಡು
ಸೋತು.. ಸೋತು..
ಬಿಕ್ಕಬೇಕಾದೀತು…

ಇದನ್ನೂ ಓದಿ: ʼಸಾಹಿತ್ಯದ ಹೊಸ ಧ್ವನಿʼ – ಜನಸಾಹಿತ್ಯ ಸಮ್ಮೇಳನ

 

ಕವಿತೆ – 03: ಕಪ್ಪು ಕೊಪ್ಪಳ….

-ವೀರೇಶ ಜಿ. ಮೇಟಿ

ಕಾರ್ಖಾನೆಗಳು ಉಗುಳಿ
ನೆಲ, ಜಲ, ಹೊಲ ಕಪ್ಪಾಗಿದೆ
ಇಂಗಾಲದುಗುಳು
ಬರಗಾಲದ ಮರಳು ತರಲಿದೆ
ಎಚ್ಚೆತ್ತುಕೊಳ್ಳಬೇಕಿದೆ ಕೊಪ್ಪಳ….

ಹೊಲದ ಬೆಳೆ, ಮನೆ, ರಸ್ತೆ,
ನೆಲಗಳಿಗೆಲ್ಲ ಕರಿ ಬೂದಿಯ ಬಲ
ಎಲ್ಲಿ ನೋಡಿದರಲ್ಲಿ ಕಾರ್ಖಾನೆ
ಉಗುಳುವ ಬೂದಿ.. ನೋವು ಸಾವು ಖಚಿತ ;
ಆದರೂ ಮೈಮರತಿದೆ ಕೊಪ್ಪಳ…

ಜಲವೂ ವಿಶಾನಿಲದಾಗಾರ
ಗಾಳಿಯೂ ಕಲ್ಮಶ, ಮಬ್ಬೇರಿದ
ಬೆಳಕು, ಅನಿವಾರ್ಯದ ಬಾಳು,
ದಿನವೂ ಅದೇ ಕಪ್ಪಿನಲಿ ಮಿಂದೆದ್ದು
ಜೀವಿಸುತಿದೆ ಕೊಪ್ಪಳ…

ಅನ್ನದಾತ, ಶ್ರಮಿಕ
ದುಡ್ಡಿನಾಸೆಗೆ ಭೂತಾಯಿ ಮಾರಿ
ಮಾರುಹೋಗಿಹರು ಮರಗುತಿಹರು
ಜೀವದವದಿ ಕಡಿಮೆ, ನಮಗಷ್ಟೇ
ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಎಂದು ಕೊಪ್ಪಳ…

ಉಕ್ಕಿಗಾಗಿ ಹಕ್ಕು ಪಡೆದ ಹಕ್ಕಿಗಾಗಿ
ಬಿಕ್ಕುತಿಹ, ಹೋರಾಟಕೆ ಸಿದ್ಧರಾಗಿ
ಹಣವಂತರ ಬಲಕೆ ಕುಗ್ಗಿತಿದೆ
ಕೊಪ್ಪಳ.. ಕಪ್ಪು ಕಪ್ಪು ಕಪ್ಪು ಎಂದು…

ಮುಕ್ತಿ ಎಂದು, ಕಪ್ಪ ತೊಳೆದು
ತುಪ್ಪ ಬೆಳೆದು ಬದುಕ ಕಟ್ಟಿ
ಬೆಳಗುವುದೆಂದು ಸೇರಿ ಕೈಜೋಡಿಸಿ
ಕಪ್ಪು ತಡೆದು ಬೆಣ್ಣೆ ಬೆಳೆದು ಬದುಕೋಣ ಬನ್ನಿ ಕೊಪ್ಪಳ…

ಇದನ್ನೂ ಓದಿ: ಕಲಬುರಗಿ| ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಸಿಪಿಐಎಂ ಆಗ್ರಹ

ಕವಿತೆ – 04: ಜೀವ ಹಿಂಡಲು ನಿಮಗೆ ಕೊಪ್ಪಳವೇ ಬೇಕೆ?

– ಸೋಮಲಿಂಗಪ್ಪ ಬೆಣ್ಣಿ

ಹಸಿದರೂ ಚಿಂತೆಯಿಲ್ಲ
ಬೇಡ ನಮಗೆ ಕಾರ್ಖಾನೆ
ನೆಮ್ಮದಿಯ ನಾಳೆಗಳ
ಕಸಿಯದಿರಿ ಸುಮ್ಮನೆ

ಕೊಪ್ಪಳದ ನೆಲದ ನೋವ
ಅರಿಯುತಿಲ್ಲ ಇನ್ನೂ ಏಕೆ?
ಜೀವ ಹಿಂಡಲು ನಿಮಗೆ
ಕೊಪ್ಪಳವೇ ಬೇಕೆ?

ಅನ್ನ ನೀಡುವ ರೈತನ ಕೈಗೆ
ಕಪ್ಪು ಮಸಿಯ ಬಳಿದಿರಿ
ಹಸು, ಎತ್ತು, ಎಮ್ಮೆಗಳ
ಹೊಟ್ಟೆಗೆ ವಿಷವ ತುಂಬಿದಿರಿ

ಈಗಾಗಲೇ ಕಪ್ಪು ಬೂದಿಯ ಒಳಗೆ
ಕಳೆದು ಹೋಗಿದೆ ಹಸಿರು
ಮತ್ತೆ ಹುಡುಕುವುದು ಎಲ್ಲಿ
ನೆಮ್ಮದಿಯ ಉಸಿರು?

ಎಸಿ ಕಾರು ಗಾಜಿನ ಮನೆ
ನಿಮಗೆಲ್ಲಿಯ ನೋವು?
ಒಮ್ಮೆ ನಡೆದು ಬಂದು ನೋಡಿ
ಜನರ ನಿತ್ಯ ಸಾವು

ಬದುಕಿನ ಗಾಯಕೆ ಎಳೆಯದಿರಿ ಬರೆ
ತೊಲಗಿಸಿ ಕಾರ್ಖಾನೆ ಬೇಗ
ನಾಳೆಯ ಪೀಳಿಗೆಯ ಜೋಳಿಗೆಗೆ
ಬೇಕಿದೆ ನೆಮ್ಮದಿಯ ಜಾಗ

ಕವಿತೆ -05  : ಆಲಿಸಿರಿ ದಯವಿಟ್ಟು

– ವೀರೇಶ ಬ.ಕುರಿ ಸೋಂಪೂರ

ಬದುಕುವ ಹಕ್ಕಿಗೆ ಬರೆ ಇಡಬೇಡಿರಿ
ಕೇಳಿರಿ ನಮ್ಮಯ ಮೊರೆಯನ್ನು.
ಮಾರಕ ಕಾರ್ಖಾನೆ ಬೇಡಪ್ಪ ಬೇಡ
ಕಳಚಿರಿ ಕಣ್ಣಿನ ಪೊರೆಯನ್ನು‌.

ಉಸಿರಾಡುವ ಗಾಳಿಯೇ ವಿಷವಾಗಿ
ಕಳೆದಿಹುದು ಎದೆಯ ಕಸುವನ್ನು.
ನೆಲ-ಜಲ ಸಕಲವೂ ಮಲಿನವಾಗಿ
ಕಸಿದಿವೆ ಮನಸಿನ ಖುಷಿಯ‌ನ್ನು.

ಜೀವ ಸಂಕುಲಕೆ ತೀರದ ಗೋಳಿದು
ಬೆಳೆಗಳ ಅಳಿದಿದೆ ಬೂದಿಯ ಅಬ್ಬರ.
ಕಂಗಾಲಾಗಿಸಿದೆ ಇಂಗಾಲದ ಹೊಗೆ
ಕಾಯಿಲೆ, ಕಸಾಲೆ ಜನರಿಗೆ ತರ-ತರ.

ಅನ್ನವ ಬೆಳೆಯುವ ಭೂಮಿತಾಯಿ
ತೆಪ್ಪಗಾಗಿಹಳು ಕಪ್ಪು ದೂಳಿಗೆ.
ಸೊಪ್ಪು ಸೊದೆಯಿಲ್ಲ ಜಾನುವಾರಿಗೆ
ಹೀಗಾದರೆ ಹೇಗೆ ಬಾಳಿನ ಏಳಿಗೆ?!

ಊರಿಗೆ ಊರೇ ಮೃತ್ಯು ಕೂಪಗಳು
ನೆಮ್ಮದಿಯೆಂಬುದು ಮರೀಚಿಕೆ!
ಕೊಪ್ಪಳದಿಂದ ಹೊರಗಟ್ಟಿ ಕಾರ್ಖಾನೆ
ಇರದಿದ್ದರೆ ಆಪತ್ತು ಬಲು ಜೋಕೆ!

ದನ-ಕರು, ಮನೆ-ಮಠ ಮಾರಿಕೊಂಡು
ಎಲ್ಲಿಗ್ಹೋಗಬೇಕು ಹುಟ್ಟಿದೂರ ಬಿಟ್ಟು?!
ಮಣ್ಣಿನ‌ ಮಕ್ಕಳ ಅರಣ್ಯರೋಧನವ
ಮಹನೀಯರೆ ಆಲಿಸಿರಿ ದಯವಿಟ್ಟು.

ಓ ನನ್ನ‌ ಬಾಂಧವರೆ ಜಾಗೃತರಾಗುತ
ಪಕ್ಷ-ಪಂಗಡವ ಬದಿಗಿಟ್ಟು ನಡೆಯಿರಿ.
ಸ್ವಸ್ಥ ಜೀವನಕೆ ಕಂಟಕ ಕಾರ್ಖಾನೆ
ಒಗ್ಗಟ್ಟಿನಿಂದಲಿ ವಿನಾಶವ ತಡೆಯಿರಿ

 

ಇದನ್ನೂ ನೋಡಿ: ಕಟ್ಟಡ ಕಾಮಗಾರಿ ವೇಳೆ ಗೋಡೆ ಕುಸಿತ – ಓರ್ವ ಕಾರ್ಮಿಕನಿಗೆ ಗಂಭೀರ ಗಾಯ Janashakthi Media

 

Donate Janashakthi Media

Leave a Reply

Your email address will not be published. Required fields are marked *