PACL ಹಣಕಾಸು ಸಂಸ್ಥೆಯಿಂದ ಹಣ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮನವಿ

ಮಂಗಳೂರು: PACL ಹಣಕಾಸು ಸಂಸ್ಥೆಯಿಂದ ಹಣ ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ  ಕೂಡಲೇ ನ್ಯಾಯ ಒದಗಿಸಿ ಕೊಡಬೇಕೆಂದು ದ. ಕ.ಜಿಲ್ಲಾ PACL ಏಜೆಂಟರ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗವೊಂದು ನಗರದಲ್ಲಿಂದು(23-08-2023) ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಂಗಳೂರು ಹೋರಾಟ ಸಮಿತಿಯು ಮನವಿಯನ್ನು ಸಲ್ಲಿಸಿತು.
ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್(PACL) ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಹಣಕಾಸು ಸಂಸ್ಥೆಯು ದೇಶದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಆ ಮೂಲಕ ಭೂ ವ್ಯವಹಾರ (Real estate)ದಲ್ಲಿ ಹಣವನ್ನು ವ್ಯಯಿಸಿ ಅದರ ಲಾಭಾಂಶವನ್ನು ತನ್ನ ಹೂಡಿಕೆದಾರರಿಗೆ ವಿತರಿಸಲು ಹಲವು ಸ್ಕೀಮ್ ಗಳ ಮೂಲಕ ಅವರು ಹೂಡಿದ ಹಣಕ್ಕೆ ಹೆಚ್ಚಿನ ಲಾಭ ನೀಡುವ ಆಸೆಯನ್ನು ತೋರಿಸಿ ದೇಶಮಟ್ಟದಲ್ಲಿ ಸುಮಾರು 49100 ಕೋಟಿ ರೂಪಾಯಿಗಳ ದೊಡ್ಡಮೊತ್ತದ ಹಗರಣ ನಡೆದು ಸುಮಾರು 1.49 ಮಿಲಿಯನ್ ಹೂಡಿಕೆದಾರರಿಗೆ ಮೋಸಮಾಡಲಾಗಿದ್ದು,ಕೂಡಲೇ ನ್ಯಾಯ ಒದಗಿಸಿ ಕೊಡಬೇಕೆಂದು ಮಂಗಳೂರು ಹೋರಾಟ ಸಮಿತಿಯು ಮನವಿಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಪತ್ತು ವರುಷಗಳ ಹಿಂದೆ ಪ್ರಾರಂಭಗೊಂಡ ಪಿ.ಎ.ಸಿ.ಎಲ್ ಸಂಸ್ಥೆಯು ಸುಮಾರು 5 ಸಾವಿರದಷ್ಟು ಗ್ರಾಹಕರನ್ನು ಹೊಂದಿದೆ. ಸುಮಾರು ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಈ ಜಿಲ್ಲೆಯ ಜನರು ಕಳೆದುಕೊಂಡಿರುತ್ತಾರೆ. ಪಿಎಸಿಎಲ್ ಸಂಸ್ಥೆಯ ಮೋಸದ ಹಗರಣ ಬೆಳಕಿಗೆ ಬಂದ ನಂತರ ಸರಕಾರ ಸಿಬಿಐ ತನಿಖೆಗೆ ಒಳಪಡಿಸಿ ಇದರ ಎಲ್ಲಾ ವ್ಯವಹಾರಗಳು ಕಾನೂನುಬಾಹಿರ ಎಂದು ಘೋಷಿಸಿ ಅವುಗಳ ಎಲ್ಲಾ ಶಾಖೆಗಳನ್ನು ಮುಚ್ಚಲು ಆದೇಶ ಹೊರಡಿಸಿದರು. ಈ ಸಂದರ್ಭದಲ್ಲೇ ಸುಮಾರು 66 ಕಂತುಗಳನ್ನು ಕಟ್ಟಿ ಅವಧಿ ಪೂರ್ಣಗೊಳಿಸಿದ ಹೂಡಿಕೆದಾರರು ನ್ಯಾಯಯುತ ಸಿಗಬೇಕಾದ ಹಣಕ್ಕಾಗಿ ಅರ್ಜಿ ಸಲ್ಲಿಸಿದ ವೇಳೆಯಲ್ಲಿ ಹೂಡಿಕೆದಾರರಿಂದ ಪಡೆದುಕೊಂಡ ಬಾಂಡ್ ಗಳು ಪಿಎಸಿಎಲ್ ನ ಸಂಸ್ಥೆಯ ಕೈವಶದಲ್ಲಿರುವಾಗಲೇ ಸರಕಾರ ಶಾಖೆಗಳನ್ನು ಮುಚ್ಚಿಸಿದ್ದರಿಂದ ಬಹುತೇಕ ಹೂಡಿಕೆದಾರರು ದಾಖಲೆಗಳನ್ನು ಕಳೆದುಕೊಂಡಿರುತ್ತಾರೆ ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸಿದೆ.
ಮಾನ್ಯ ಸುಪ್ರೀಂ ಕೋರ್ಟ್ ಹೂಡಿಕೆದಾರರಿಗೆ ಹಣವನ್ನು ಮರುಪಾವತಿಸಲು ಸೆಬಿಗೆ ಆದೇಶ ನೀಡಿದ್ದರೂ ಸೆಬಿ ಮಾತ್ರ ಹೂಡಿಕೆದಾರರು ಕಳೆದುಕೊಂಡ ಹಣವನ್ನು ಮರುಪಾವತಿಸುವ ಬದಲಾಗಿ ಕೇವಲ ಒಂದು ಕಂತಿನ ಹಣವನ್ನಷ್ಟೇ ಪಾವತಿಸಿದೆ ಅದೂ ಕೆಲವೇ ಕೆಲವು ಹೂಡಿಕೆದಾರರಿಗಷ್ಷೇ. ಪಿಎಸಿಎಲ್ ನಿಂದ ಮೋಸಗೊಳಗಾದ ಜಿಲ್ಲೆಯ ಸಂತ್ರಸ್ತ ಹೂಡಿಕೆದಾರರ ಕುಟುಂಬಗಳು ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತಮ್ಮ ಕನಸುಗಳ ಈಡೇರಿಕೆಗಾಗಿ ಹೂಡಿದ ಹಣವನ್ನು ಕಳೆದುಕೊಂಡು ಸಾಲದ ಕೂಪಕ್ಕೆ ಬಿದ್ದು ನರಳಾಡುವ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೋರಾಟ ಸಮಿತಿಯು ತಮ್ಮ ಮನವಿಯಲ್ಲಿ ದೂರಿದೆ.
ಪಿಎಸಿಎಲ್ ಎಂಬ ಮೋಸದ ಹಣಕಾಸು ಸಂಸ್ಥೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಕೋಟಿ ಮೊತ್ತವನ್ನು ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೊತ್ತವನ್ನು ಮರುಪಾವತಿಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಇಲ್ಲದಿದ್ದರೆ ತೀವ್ರ ರೀತಿಯ ಹೋರಾಟವನ್ನು ಮಾಡಬೇಕಾದೀತು ಎಂದು ಹೋರಾಟ ಸಮಿತಿಯು ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನು ನೀಡಿದೆ.
ನಿಯೋಗದಲ್ಲಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾದ ಬಿ ಕೆ ಇಮ್ತಿಯಾಜ್,ಸಂತೋಷ್ ಬಜಾಲ್,ದಾಮೋದರ ಉಳ್ಳಾಲ,ಅಧ್ಯಕ್ಷರಾದ ತೆಲ್ಮ ಮೊಂತೆರೋ,ಪ್ರಧಾನ ಕಾರ್ಯದರ್ಶಿ ಆಸುಂತಾ ಡಿಸೋಜ,ಇತರ ಮುಖಂಡರಾದ ನಾನ್ಸಿ ಫೆರ್ನಾಂಡಿಸ್,ಶ್ಯಾಮಲ, ಶಾಲಿನಿ, ವಾಯಿಲೆಟ್, ಜನಾರ್ದನ ಪುತ್ತೂರು,ಮೋಲಿ ಡಿಸೋಜ,ಸುನೀತಾ ಬಜಾಲ್ ಮುಂತಾದವರು ಉಪಸ್ಥಿತರಿದ್ದರು
Donate Janashakthi Media

Leave a Reply

Your email address will not be published. Required fields are marked *