ಪುತ್ತೂರು: ಸಿಝೇರಿಯನ್ ಹೆರಿಗೆಯಾದ ಬಳಿಕ ಬಾಣಂತಿಯ ಹೊಟ್ಟೆಯೊಳಗೆ ಬಟ್ಟೆಯ ತುಂಡು ಬಾಕಿಯಾಗಿದ್ದು, ಇದೀಗ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬಾಣಂತಿಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಪುತ್ತೂರಿನಲ್ಲಿ ಈ ವಿಚಾರವಾಗಿ ಬಾಣಂತಿ ಮಹಿಳೆ ಶರಣ್ಯಾ ಲಕ್ಷ್ಮೀ ರ ಪತಿ ಗಗನ್ ದೀಪ್ ಬಿ. ಪತ್ರಿಕಾಗೋಷ್ಠಿಯಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿದ್ದಾರೆ.
ಹೆರಿಗೆ ಸಂದರ್ಭ ಪುತ್ರೂರಿನ ಸಿಟಿ ಆಸ್ಪತ್ರೆಯ ವೈದ್ಯ ಡಾ. ಅನಿಲ್‌ರ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲಿ ಬಟ್ಟೆ ಬಾಕಿಯಾಗಿದ್ದು, ಈ ವಿಚಾರ ಅವರ ಗಮನಕ್ಕೆ ಬಂದ ಬಳಿಕವೂ ನಿರ್ಲಕ್ಷ್ಯ ಮುಂದುವರಿಸಿದ್ದಾರೆ. ಇದರಿಂದಾಗಿ ಪತ್ನಿಗೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಿದೆ ಎಂದು ಗಗನ್ ದೀಪ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ| ದಲಿತ ವ್ಯಕ್ತಿಯ ಮದುವೆ ಮೆರವಣಿಗೆಯ ವೇಳೆ ಮೇಲ್ಜಾತಿಯ ಪುರುಷರು ದಾಳಿ
2024ರ ನ.27ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ 33 ವರ್ಷ ಪ್ರಾಯದ ಶರಣ್ಯಾ ಲಕ್ಷ್ಮೀ ಬಿ. ಎಂಬವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಯಾಗಿತ್ತು. ಡಿ.2ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದಾದ ಬಳಿಕ ವಿಪರೀತ ಜ್ವರ ಬಂದಿತ್ತು. ಇದನ್ನು ಹೆರಿಗೆ ಮಾಡಿಸಿದ ಡಾ. ಗಮನಕ್ಕೆ ತಂದಾಗ ಜ್ವರದ ಔಷಧಿ ನೀಡಿದ್ದರು.
ಕೆಲವು ದಿನಗಳ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ, ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಬಟ್ಟೆ ಬಾಕಿ ಆಗಿರುವುದು ತಿಳಿದು ಬಂದಿದೆ. ಬಳಿಕ ಜ.25ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಡಾ. ವಿವೇಕ್ ಕಜೆ ನೇತೃತ್ವದಲ್ಲಿ ಸುಮಾರು 4 ತಾಸಿನ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಬಾಕಿಯಾಗಿದ್ದ ಬಟ್ಟೆಯನ್ನು ತೆರವು ಮಾಡಲಾಗಿದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಿದ್ದಲ್ಲದೇ, ಹಣವೂ ಖರ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪಿ.ಜಿ. ಪೋರ್ಟಲ್‌ನಲ್ಲಿ ಮೊದಲು ದೂರು ದಾಖಲಿಸಲಾಗಿದೆ. ಫೆ.22ರಂದು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿದೆ. ಫೆ.23ರಂದು ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಅನಿಲ್ ಮೇಲೆ ಪುತ್ತೂರು ನಗರ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲೂ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗಗನ್ ದೀಪ್ ಸಂಬಂಧಿಕರಾದ ಶಿವಪ್ರಸಾದ್ ಸರಳಿ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಬಿಟ್ಟಿ ಚಾಕರಿ ಬೇಡ ಸೇವಾ ಭದ್ರತಿ ನೀಡಿ | ಕರ್ನಾಟಕ ಸಂಜೀವಿನಿ ನೌಕರರ ಹೋರಾಟ Janashakthi Media