ದಿಲ್ಲಿಯಲ್ಲಿ ರೈತರು ಮತ್ತು ಕಾರ್ಮಿಕರ ಬೃಹತ್‍ ಸಮಾವೇಶ

“ಆರೆಸ್ಸೆಸ್‍-ಬಿಜೆಪಿ ಅಧಿಕಾರದಲ್ಲಿರಲು ಅನರ್ಹ-ಅದನ್ನುಸೋಲಿಸಬೇಕು”

ಆಗಸ್ಟ್ 24 ರಂದು ನವದೆಹಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ಕಾರ್ಮಿಕರು ಮತ್ತು ರೈತರ ಒಂದು ಬೃಹತ್‍ ಐತಿಹಾಸಿಕ ಅಖಿಲ ಭಾರತ ಜಂಟಿ ಸಮಾವೇಶ ನಡೆಯಿತು. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಒಕ್ಕೂಟಗಳ ವೇದಿಕೆ ಮತ್ತು ಸಂಯುಕ್ತ ಕಿಸಾನ್ ‍ಮೋರ್ಚಾ ಜಂಟಿಯಾಗಿ ಏರ್ಪಡಿಸಿದ್ದ ಈ ಸಮಾವೇಶದಲ್ಲಿ  ದೇಶದ ಎಲ್ಲೆಡೆಗಳಿಂದ ಬಂದ ಸುಮಾರು 7000 ರೈತ ಮತ್ತು ಕಾರ್ಮಿಕ ಪ್ರತಿನಿಧಿಗಳು  ಭಾಗವಹಿಸಿದರು.

ಮುಂಬರುವ ಅವಧಿಯಲ್ಲಿ ತಮ್ಮ  ಜಂಟಿ ಮತ್ತು ಸಂಯೋಜಿತ ಆಂದೋಲನಗಳ ತೀವ್ರತೆಯನ್ನು  ಹೆಚ್ಚಿಸುವ ಭಾರೀ ಉತ್ಸಾಹ ಮತ್ತು ಸಂಕಲ್ಪದಿಂದ ತುಂಬಿದ್ದ ಸಮಾವೇಶ ಕಾರ್ಮಿಕರು, ರೈತರು, ಸಾಮಾನ್ಯ ಜನರ ಮೇಲೆ ಮತ್ತು ನಮ್ಮ ಜನಗಳ ಪ್ರಜಾಸತ್ತಾತ್ಮಕ, ಜಾತ್ಯತೀತ, ಸಾಮರಸ್ಯದ ಜೀವನದ ಮೇಲೆ ಕೇಂದ್ರ ಸರ್ಕಾರದ ನೀತಿಗಳ ಪ್ರತಿಕೂಲ ಮತ್ತು ವಿನಾಶಕಾರಿ ಪರಿಣಾಮವನ್ನು ವಿಶ್ಲೇಷಿಸಿತು ಎಂದು ಸಮಾವೇಶದ ಸಂಘಟಕರು ನೀಡಿರುವ ಪತ್ರಿಕಾಹೇಳಿಕೆ ತಿಳಿಸಿದೆ.

ಸಮಾವೇಶವು ಅಂಗೀಕರಿಸಿದ ಘೋಷಣೆ ಕೇಂದ್ರ ಮತ್ತು ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ನೀತಿಗಳನ್ನು ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನವಿರೋಧಿ ಮತ್ತು ನಮ್ಮ ದೇಶದ ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಎಂದು ಬಣ್ಣಿಸಿದೆ.

ಈ ಆಳ್ವಿಕೆ ಭಾರತೀಯ ಅರ್ಥವ್ಯವಸ್ಥೆಗೆ ಹಾನಿ, ಅಗತ್ಯ ವಸ್ತುಗಳ  ಬೆಲೆಗಳಲ್ಲಿ ತೀಕ್ಷ್ಣ  ಏರಿಕೆ, ಹೆಚ್ಚೆಚ್ಚು ಉದ್ಯೋಗ-ನಷ್ಟ ಮತ್ತು ನಿರುದ್ಯೋಗ, ಉಂಟು ಮಾಡುತ್ತಿದೆ, ಶಿಕ್ಷಣ ಮತ್ತು ಆರೋಗ್ಯ ಪಾಲನೆಯನ್ನು ದುಬಾರಿಗೊಳಿಸುತ್ತಿದೆ, ಕೃಷಿ ಲಾಗುವಾಡುಗಳ  ಮೇಲೆ ಯಾವುದೇ ಸಬ್ಸಿಡಿ ಮತ್ತು ರೈತರ ಉತ್ಪನ್ನಗಳಿಗೆ  ಎಂಎಸ್‌ಪಿಯಿಲ್ಲದೆ ಸಾಮಾನ್ಯ ಜನರ ಜೀವನವನ್ನು ಶೋಚನೀಯವಾಗಿಸುತ್ತಿದೆ. ಈ ಆಳ್ವಿಕೆಯನ್ನು ಕಿತ್ತೊಗೆಯಬೇಕು ಎಂದು ಸಮಾವೇಶವು ಕರೆ ನೀಡಿತು. ಯಾವ ಭರವಸೆಗಳ ಆಧಾರದ ಮೇಲೆ ರೈತರು ಎಲ್ಲ ಕಷ್ಟ-ನಷ್ಟಗಳನ್ನು ಎದುರಿಸುತ್ತ ಗಡಿಗಳಲ್ಲಿ ನಡೆಸಿದ  ತಮ್ಮ 13 ತಿಂಗಳ ಸುದೀರ್ಘ ಧರಣಿಯನ್ನು ಸ್ಥಗಿತಗೊಳಿಸಿದರೋ ಅವುಗಳಲ್ಲಿ ಯಾವುದನ್ನೂ ಸರ್ಕಾರ ಈಡೇರಿಸಿಲ್ಲ, ಖಾಸಗೀಕರಣಕ್ಕಾಗಿ ಸಾರ್ವಜನಿಕ ವಲಯ ಮತ್ತು ಸರ್ಕಾರಿ ಇಲಾಖೆಗಳ ಮೇಲಿನ ದಾಳಿ ಮುಂದುವರೆದಿದೆ, ಯಾವುದೇ ನೇಮಕಾತಿಗಳನ್ನು ಮಾಡಲಾಗುತ್ತಿಲ್ಲ, ಹೊರಗುತ್ತಿಗೆ, ಕಾಂಟ್ರಾಕ್ಟೀಕರಣ ಮತ್ತು ಕ್ಯಾಶುವಲೀಕರಣ ವಿಪರೀತಗೊಂಡಿದೆ,  ಕಾರ್ಮಿಕ ಕಾನೂನುಗಳನ್ನು ಉದ್ಯೋಗದಾತರ ಹಿತದೃಷ್ಟಿಯಿಂದ ಮತ್ತು ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಸಂಹಿತೆಗಳಾಗಿ ಮಾಡಲಾಗುತ್ತಿದೆ.

ಅನಾರೋಗ್ಯಕರ ವಿಭಜಕ ಧ್ರುವೀಕರಣಕ್ಕಾಗಿ ದ್ವೇಷವನ್ನು ಹರಡುವ ಗುಂಪುಗಳು ಮತ್ತು ಶಕ್ತಿಗಳು ಮತ್ತು ಹಿಂಸಾಚಾರದಲ್ಲಿ ತೊಡಗುವ ಕಾವಲುಕೋರ ಗುಂಪುಗಳು ಆಳುವ ವಲಯದಲ್ಲಿನ ಪ್ರಬಲ ವ್ಯಕ್ತಿಗಳಿಂದ ಪರೋಕ್ಷ ಬೆಂಬಲವನ್ನು ಪಡೆಯುತ್ತಿವೆ. ಜನರ ಗಮನವನ್ನು ಅವರ ಜೀವನೋಪಾಯದ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಉದ್ದೇಶಿಸಿರುವ ಈ ತಂತ್ರಗಳು
ಅಪಾಯಕಾರಿ ಮತ್ತು ಸಾಮಾಜಿಕ ಹಂದರಕ್ಕೆ, ದೇಶದ ಏಕತೆ ಮತ್ತು ಸಮಗ್ರತೆಗೆ ವಿಷಕಾರಿಯಾಗಿದೆ. ಇಂತಹ ನಿರ್ದಯ ಆಳ್ವಿಕೆಯು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅದು ಅಧಿಕಾರಪೀಠದಲ್ಲಿ ಕೂರುವ ಹಕ್ಕನ್ನು ಹೊಂದಿಲ್ಲ , ಅದನ್ನು ಪದಚ್ಯುತಗೊಳಿಸಬೇಕು ಎಂದು ಸಮಾವೇಶವು ಅಂಗೀಕರಿಸಿದ ಘೋಷಣೆ ಹೇಳಿದೆ.

ಇದನ್ನೂ ಓದಿ:ರೈತರು ಮತ್ತು ಕೃಷಿಕಾರ್ಮಿಕರ ಆಂದೋಲನ ಆರಂಭ : ಸಂಯುಕ್ತ ಕಿಸಾನ್‍ ಮೋರ್ಚಾ (ಅಕ್ಟೋಬರ್ 3 – ಹುತಾತ್ಮ ದಿನಾಚರಣೆ; ನವೆಂಬರ್ 26- ವಿಜಯ ದಿನಾಚರಣೆ)

ಸಮಾವೇಶವು ರೈತರ , ಕಾರ್ಮಿಕರ ಮತ್ತು ಎಲ್ಲ ಜನವಿಭಾಗಗಳ ಬೇಡಿಕೆಗಳ ಸನ್ನದನ್ನು ಅಂಗೀಕರಿಸಿ ಇದರ ಮೇಲೆ ಮುಂದಿನ ದಿನಗಳಲ್ಲಿ ಜಂಟಿ ಮತ್ತು ಸಂಯೋಜಿತ ಕಾರ್ಯಾಚರಣೆಗಳಲ್ಲಿ ಭಾಗವಹಿಸಬೇಕು ಎಂದು ದೇಶಾದ್ಯಂತ ರೈತರು ಮತ್ತು ಕಾರ್ಮಿಕರಿಗೆ ಮನವಿ ಮಾಡಿದೆ.

ಸಮಾವೇಶ ಅಂಗೀಕರಿಸಿದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಕಾರ್ಯಕ್ರಮ ಹೀಗಿದೆ:

· 3 ಅಕ್ಟೋಬರ್ 2023: (2021ರಲ್ಲಿ ಲಖಿಂಪುರ್‌ ಖೇರಿಯಲ್ಲಿ ರೈತರ ಹತ್ಯಾಕಾಂಡ ನಡೆಸಿದ ದಿನ) ಆಪಾದಿತ ಪಿತೂರಿದಾರ, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿಯನ್ನು ವಜಾಗೊಳಿಸಲು ಮತ್ತು ಕಾನೂನು ಕ್ರಮಕ್ಕೆ ಒತ್ತಾಯಿಸಿ ಕರಾಳ ದಿನಾಚರಣೆ

· 26 ರಿಂದ 28 ನವೆಂಬರ್ 2023 ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ ರಾಜಭವನಗಳ ಮುಂದೆ ಹಗಲು-ರಾತ್ರಿ ಮಹಾಪಡಾವ್ ಹೋರಾಟ(26 ನವೆಂಬರ್ 2020 ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಮತ್ತು ರೈತರ ಐತಿಹಾಸಿಕ ಸಂಸದ್‍ ಚಲೋದ ಮೊದಲ ದಿನ.)

· ಡಿಸೆಂಬರ್ 2023/ಜನವರಿ 2024 – ದೇಶಾದ್ಯಂತ ದೃಢ ಮತ್ತು ಬೃಹತ್ ಸಂಯುಕ್ತ ಪ್ರತಿಭಟನಾ ಕಾರ್ಯಾಚರಣೆಗಳು.

Donate Janashakthi Media

Leave a Reply

Your email address will not be published. Required fields are marked *