ಕಲಬುರ್ಗಿ: ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ಈಚೆಗೆ ಸಂಭವಿಸಿದ ಹಲ್ಲೆ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನ ತಂದೆ ದಶರಥ ಪೂಜಾರಿ(65 ವರ್ಷ) ಕಳೆದ ಹತ್ತು ದಿನದಿಂದ ಸಾವು ಬದುಕಿನ ಹೋರಾಟ ನಡೆಸಿ, ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಭಾನುವಾರ(ಜೂನ್ 13) ಮೃತಪಟ್ಟಿದ್ದಾರೆ.
ಚಾಮನೂರು ಗ್ರಾಮದ ಕುರುಬ ಸಮಾಜಕ್ಕೆ ಸೇರಿದ ಸೂರ್ಯಕಾಂತ ಪೂಜಾರಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂಗೀತಾ ಮಾಲಗತ್ತಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಒಂದು ಗಂಡು ಮಗು ಇದೆ.
ಮದುವೆಗೆ ವಿರುಧ ವ್ಯಕ್ತಪಡಿಸಿದ್ದ ಯುವತಿಯ ಕುಟುಂಬಸ್ಥರು ದ್ವೇಷಿಸುತ್ತಿದ್ದರು. ಸೂರ್ಯಕಾಂತ್ ಹಾಗೂ ಸಂಗೀತಾ ಮಾಲಗತ್ತಿ ದಂಪತಿಗಳು ಕುಟುಂಬ ಸಮಾರಂಭದ ನಿಮಿತ್ತ ಜೂನ್ 1ರಂದು ಚಾಮನೂರಿಗೆ ಬಂದಿದ್ದರು. ಜೂನ್ 2ರಂದು ಗ್ರಾಮದ ಹುಡುಗಿಯ ತಂದೆ ದ್ಯಾವಪ್ಪ ಹಾಗೂ ಅವರ ಪುತ್ರರು ದಶರಥ ಪೂಜಾರಿ ಮತ್ತು ಅವರ ಕುಟುಂಬಸ್ಥರ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೈದಿದ್ದರು.
ಘಟನೆಯಲ್ಲಿ ಯುವಕ ಸೂರ್ಯಕಾಂತ ಪೂಜಾರಿ ತಂದೆ ದಶರಥ ಪೂಜಾರಿ, ಸಹೋದರ ತಿಪ್ಪಣ್ಣ ಪೂಜಾರಿ ಹಾಗೂ ಸಂಗೀತಾ ಮೇಲೆ ಹಲ್ಲೆ ನಡೆಸಲಾಗಿತ್ತು. ದಶರಥ ಪೂಜಾರಿ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿತ್ತು.
ಈ ಸಂಬಂಧ ಮಹಿಳೆಯ ಪೋಷಕರಾದ ದ್ಯಾವಪ್ಪ ಮಾಲಗತ್ತಿ, ಲಕ್ಷ್ಮಿ ದ್ವಾವಪ್ಪ, ಈಶ್ವರಾಜ ಹಾಗೂ ಯಂಕಪ್ಪ ವಿರುದ್ಧ ದೂರು ಸಲ್ಲಿಕೆಯಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಾದ ದ್ಯಾವಪ್ಪ ಮತ್ತು ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.