ಮುಂದಿದೆ ಒಂದು ದೀರ್ಘ ಹೋರಾಟ

ಪ್ರಕಾಶ ಕಾರಟ್
ಪ್ರಕಾಶ ಕಾರಟ್

ಮೂರು ಕೃಷಿ ಕಾಯ್ದೆಗಳು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳು:

ರೈತ ಸಂಘಟನೆಗಳು ಕರೆ ನೀಡಿದ ಡಿಸೆಂಬರ್ 8ರ ಭಾರತ್ ಬಂದ್‌ನ ದೊಡ್ಡ ಯಶಸ್ಸು ರೈತರ ಹೋರಾಟಕ್ಕೆ ಜನಗಳ ಬೆಂಬಲ ಮತ್ತು ಸಹಾನುಭೂತಿಯ ಒಂದು ಪ್ರದರ್ಶನ ನೀಡಿದೆ.

ಹಲವು ಸ್ಥಳಗಳಲ್ಲಿ ಬಂದ್ ಕರೆಗೆ ಸ್ವಯಂಸ್ಫೂರ್ತಿಯಿಂದಲೇ ಜನರು ಸ್ಪಂದಿಸಿದ್ದಾರೆ, ಹಲವಾರು ಸಂಘಟನೆಗಳು ಮತ್ತು ಸಮಾಜದ ವಿಭಿನ್ನ ಜನವಿಭಾಗಗಳು, ಕಾರ್ಮಿಕ ಸಂಘಟನೆಗಳು, ವ್ಯಾಪಾರಸ್ಥರ ಸಂಘಟನೆಗಳು, ಸಾರಿಗೆ ಸಂಘಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇವೆಲ್ಲವೂ ಈ ಪ್ರಶ್ನೆಯಲ್ಲಿ ಮೋದಿ ಸರಕಾರ ಒಬ್ಬಂಟಿಯಾಗಿ ಬಿಟ್ಟಿರುವುದನ್ನು ಸೂಚಿಸುತ್ತವೆ. ಸುಮಾರಾಗಿ ಎಲ್ಲ ಬಿಜೆಪಿಯೇತರ ರಾಜಕೀಯ ಪಕ್ಷಗಳೂ ಈ ಪ್ರತಿಭಟನಾ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿರುವುದು ಕೂಡ ಮಹತ್ವಪೂರ್ಣ ಸಂಗತಿ. ನಿರ್ದಿಷ್ಟವಾಗಿ ಇದುವರೆಗೂ  ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಅದರ ಯಾವ ಮಹತ್ವದ ಧೋರಣಾ ಕ್ರಮದ ವಿರುದ್ಧವೂ ದೃಢವಾದ ನಿಲುವು ತೆಗೆದುಕೊಳ್ಳ ಬಯಸದ ಪ್ರಾದೇಶಿಕ ಆಳುವ ಪಕ್ಷಗಳೂ ತಳೆದಿರುವ ನಿಲುವು ಗಮನಾರ್ಹ. ತೆಲಂಗಾಣದಲ್ಲಿ ಟಿ.ಆರ್.ಎಸ್. ಬಂದ್‌ನ್ನು ಯಶಸ್ವಿಗೊಳಿಸಲು ಸಕ್ರಿಯವಾಗಿ ಕೆಲಸ ಮಾಡಿತು. ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿಯ ಸರಕಾರ ರೈತರ ಆಶಯಗಳನ್ನು ಗೌರವಿಸಿ ಮಧ್ಯಾಹ್ಮ 1 ಗಂಟೆಯ ವರೆಗೆ ಎಲ್ಲ ಸರಕಾರಿ ಕಚೇರಿಗಳು, ಸಾರ್ವಜನಿಕ ಸಾರಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಿತು. ಒಡಿಶಾದಲ್ಲೂ, ಬಿಜೆಡಿ ಬಂದ್‌ನ್ನು ಬೆಂಬಲಿಸದಿದ್ದರೂ, ರೈತರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿತು ಮತ್ತು ಸರಕಾರೀ ಕಚೇರಿಗಳು ಮುಚ್ಚಿದ್ದವು.

ಆಂಧ್ರಪ್ರದೇಶ

ವಿವಿಧ ರಾಜಕೀಯ ಬಣ್ಣಗಳನ್ನೆಲ್ಲ ಮೀರಿದ ಈ ವ್ಯಾಪಕವಾದ ಬೆಂಬಲದ ಹಿಂದೆ ಇರುವುದು ವರ್ಗ ವಿಭಜನೆ. ಕಾರ್ಪೊರೇಟ್-ಪರ ಕೃಷಿ ಕಾಯ್ದೆಗಳು ಒಂದೆಡೆಯಲ್ಲಿ ದೊಡ್ಡ ಬಂಡವಳಿಗರು ಮತ್ತು ಇನ್ನೊಂದೆಡೆಯಲ್ಲಿ ಶ್ರೀಮಂತ ರೈತರೂ ಕೂಡ ಸೇರಿದಂತೆ ಸಮಸ್ತ ರೈತಾಪಿ ಜನಗಳು,  ಇವರ ನಡುವೆ ಒಂದು ತಿಕ್ಕಾಟವನ್ನು ಸೃಷ್ಟಿಸಿದೆ. ಬಂಡವಾಳಶಾಹಿ ರೈತರ ನಡುವೆಯೂ ಒಂದು ವಿಭಜನೆಯಿದೆ. ಪ್ರಾದೇಶಿಕ ಪಕ್ಷಗಳಿಂದ ಸುಮಾರಾಗಿ ಸರ್ವಸಮ್ಮತವೇ ಎನ್ನಬಹುದಾದ ಬೆಂಬಲ ಏಕೆ ಸಿಗುತ್ತಿದೆ ಎಂಬುದನ್ನು ಇದು ವಿವರಿಸುತ್ತದೆ.

ಈಗ ಮೂಡಿಬರುತ್ತಿರುವ ಇನ್ನೊಂದು ವರ್ಗ ಆಯಾಮವೆಂದರೆ, ರೈತಾಪಿಗಳು ಮತ್ತು ಕಾರ್ಮಿಕರ ಹಿತಾಸಕ್ತಿಗಳು ಒಂದುಗೂಡುತ್ತಿರುವುದು. ಕಳೆದ ಸಂಸದ್ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಮತ್ತು ಮೂರು ಕಾರ್ಮಿಕ ಶಾಸನಗಳನ್ನು ಒಂದರ ಹಿಂದೆ ಒಂದರಂತೆ ಅಂಗೀಕರಿಸಿರುವುದು ಮೋದಿ ಸರಕಾರದ ನಗ್ನ ಕಾರ್ಪೊರೇಟ್-ಪರ ನಿಲುವಿಗೆ ಉದಾಹರಣೆಯಾಗಿದೆ. ಕಾರ್ಮಿಕರೂ ಮತ್ತು ರೈತರೂ ಈ ಅವಳಿ ದಾಳಿಗಳನ್ನು ಎದುರಿಸಲು ಒಂದಾಗುತ್ತಿದ್ದಾರೆ.

ಕೃಪೆ: ಪಿ.ಮಹಮ್ಮದ್

ಮೂರು ಕಾಯ್ದೆಗಳು ಮತ್ತು ಒಂದು ಮಸೂದೆಯ ವಿರುದ್ಧ ರೈತರ ಹೋರಾಟಕ್ಕೆ ವಿವಿಧ ಜನವಿಭಾಗಗಳ ನಡುವೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವುದರ ಹಿಂದೆ ವರ್ಗವಿಭಜನೆಯ ಪ್ರಶ್ನೆಯಿದೆ. ಮೋದಿ ಸರಕಾರ ತನ್ನ ನಗ್ನ ಕಾರ್ಪೊರೇಟ್-ಪರ ನಿಲುವಿನಿಂದಾಗಿ ಒಂಟಿಯಾಗಿ ಬಿಟ್ಟಿದೆ. ಶ್ರೀಮಂತ ರೈತರೂ ಹೋರಾಟದಲ್ಲಿ ಸೇರಿಕೊಂಡಿದ್ದಾರೆ. ಬಂಡವಾಳಶಾಹಿ ರೈತರ ನಡುವೆಯೂ ವಿಭಜನೆಯಾಗಿದೆ. ಇನ್ನೊಂದೆಡೆಯಲ್ಲಿ ರೈತಾಪಿಗಳ ಮತ್ತು ಕಾರ್ಮಿಕರ ಹಿತಾಸಕ್ತಿಗಳು ಬೆಸೆದುಕೊಳ್ಳುತ್ತಿವೆ. ತನ್ನ ಕಾರ್ಪೊರೇಟ್-ಪರ ಕ್ರಮಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಮೋದಿ ಸರಕಾರ ಸೂಚಿಸಿದೆ. ಒಂದು ದೀರ್ಘ ಹೋರಾಟ ಮುಂದಿದೆ.

ಮೋದಿ ಸರಕಾರ ಈ ಮೂರು ಕೃಷಿ ಕಾಯ್ದೆಗಳನ್ನು ಮೊದಲಿಗೆ ಜೂನ್ ತಿಂಗಳಲ್ಲಿ ಸುಗ್ರೀವಾಜ್ಞೆಗಳಾಗಿ ತಂದಿತು. ನಂತರ ಇವನ್ನು ಸಪ್ಟಂಬರ್‌ನಲ್ಲಿ ವಿಧೇಯಕಗಳಾಗಿ ಸಂಸತ್ತಿನಲ್ಲಿ ಮಂಡಿಸಿತು ಮತ್ತು ಎಲ್ಲ ಸಂಸದೀಯ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಪಾಸು ಮಾಡಿಸಿಕೊಂಡಿತು.

ಸರಕಾರ ಈ ಸುಗ್ರೀವಾಜ್ಞೆಗಳನ್ನು ತಂದಾಗಲೇ ತನ್ನ ಆಶಯವನ್ನು ಸ್ಪಷ್ಟಗೊಳಿಸಿತ್ತು. ಉದಾಹರಣೆಗೆ, ಆವಶ್ಯಕ ಸರಕುಗಳ ಕಾಯ್ದೆಗೆ ತಿದ್ದುಪಡಿಗಳು ಎಲ್ಲ ಕೃಷಿ ಉತ್ಪನ್ನಗಳನ್ನು ಆವಶ್ಯಕ ಸರಕುಗಳ ಪಟ್ಟಿಯಿಂದ ತೆಗೆದಿರುವುದನ್ನು “ಉತ್ಪಾದಿಸುವ, ಇಟ್ಟುಕೊಳ್ಳುವ, ತೆಗೆಯುವ, ಹಂಚುವ ಮತ್ತು ಪೂರೈಸುವ ಸ್ವಾತಂತ್ರ್ಯವು ಪ್ರಮಾಣ ಹೆಚ್ಚುವುದರಿಂದ ಉಂಟಾಗುವ ಉಳಿತಾಯದ ಪ್ರಯೋಜನ ಪಡೆಯಲು ದಾರಿ ಮಾಡಿ ಕೊಡುತ್ತದೆ ಮತ್ತು ಕೃಷಿ ವಲಯಕ್ಕೆ ಖಾಸಗಿ ವಲಯದ / ವಿದೇಶಗಳ ನೇರ ಹೂಡಿಕೆಗಳನ್ನು ಆಕರ್ಷಿಸುತ್ತದೆ “ ಎಂದು ವಿವರಣೆ ಕೊಡಲಾಯಿತು.

ಹರಿಯಾಣ

ಈ ಮೂರು ಕಾಯ್ದೆಗಳು ಒಟ್ಟಾಗಿ, ಕೃಷಿ ಮಾರುಕಟ್ಟೆಗಳನ್ನು ನಿಯಂತ್ರಣ-ಮುಕ್ತಗೊಳಿಸುವ, ರಾಜ್ಯ ಸರಕಾರಗಳ ಹತೋಟಿಗಳನ್ನು ತೆಗೆದು ಹಾಕಿ ಧೋರಣೆಯನ್ನು ಕೇಂದ್ರೀಕರಿಸಿ ಕಾರ್ಪೊರೇಟ್ ಕೃಷಿ ವ್ಯಾಪಾರ ಮತ್ತು ದೊಡ್ಡ ವ್ಯಾಪಾರಸ್ಥರುಗಳ ಪ್ರವೇಶಕ್ಕೆ ಅನುಕೂಲ ಕಲ್ಪಿಸಿಕೊಡುವ ಕೆಲಸ ಮಾಡುತ್ತವೆ.

ಆರಂಭದಿಂದಲೇ ರೈತರು ಈ ಸುಗ್ರೀವಾಜ್ಞೆ ಒಡ್ಡಿರುವ ಬೆದರಿಕೆಯನ್ನು ಅರ್ಥಮಾಡಿಕೊಂಡರು. ಜುಲೈ ತಿಂಗಳಲ್ಲೇ ಈ ಮೂರು ಕಾಯ್ದೆಗಳ ವಿರುದ್ಧ ಚಳುವಳಿ ಆರಂಭವಾಯಿತು. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಮಿಕ ಸಂಘಗಳ ಬೆಂಬಲದೊಂದಿಗೆ ಆಗಸ್ಟ್ 5ರಂದು ಜೈಲ್ ಭರೋಗೆ ಕರೆ ನೀಡಿತು. 25 ರಾಜ್ಯಗಳಲ್ಲಿ 600 ಜಿಲ್ಲೆಗಳಲ್ಲಿ ಲಕ್ಷಾಂತರ ಜನ ಇದರಲ್ಲಿ ಭಾಗವಹಿಸಿದರು. ಪಂಜಾಬಿನಲ್ಲಿ ರೈಲ್ ರೋಕೋ ಅಕ್ಟೋಬರ್ 1 ರಿಂದ ಆರಂಭವಾಯಿತು. ಸಂಯುಕ್ತ ಕಿಸಾನ್ ಮೋರ್ಚಾ ಕರೆಯಂತೆ ದಿಲ್ಲಿ ಚಲೋ ನವಂಬರ್ 26ರಂದು, ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರ ನಡೆಸಿದ ದಿನ ಆರಂಭವಾಯಿತು.

ಪಶ್ಚಿಮ ಬಂಗಾಳ

ದಿಲ್ಲಿಯ ಗಡಿಗಳಲ್ಲಿ ಬೃಹತ್ ಪ್ರತಿಭಟನಾ ಕಾರ್ಯಾಚರಣೆಗಳನ್ನು ಕಂಡ ಕೇಂದ್ರ ಸರಕಾರ ಕಿಸಾನ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ಆರಂಭಿಸಿತು. ಮೂರು ಸುತ್ತುಗಳ ಮಾತುಕತೆಯ ನಂತರ  ಸರಕಾರ ಈ ಮೂರು ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟವಾಯಿತು.

ಪ್ರಧಾನ ಮಂತ್ರಿ ಮೋದಿ ಪ್ರತಿಪಕ್ಷಗಳು ಪ್ರತಿಭಟನೆಗಳನ್ನು ಪ್ರಚೋದಿಸುತ್ತಿವೆ, ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಆಪಾದಿಸಿದ್ದಾರೆ. ಕಳೆದ ಶತಮಾನದ ಕಾನೂನುಗಳು ಹಳೆಯದಾಗಿ ಬಿಟ್ಟಿವೆ, ಪ್ರಸಕ್ತ ಶತಮಾನವನ್ನು ಕಟ್ಟಲು ಅವನ್ನು ಉಪಯೋಗಿಸಲು ಸಾಧ್ಯವಾಗದು ಎಂದು ಹೇಳಿದ್ದಾರೆ.

ಈ ಕಾರ್ಪೊರೇಟ್-ಪರ ಕ್ರಮಗಳನ್ನು ಹಿಂದಕ್ಕೆ ಸರಿಸುವುದಿಲ್ಲ ಎಂದು ಸರಕಾರ ಸೂಚಿಸುತ್ತಿದೆ. ಕಾರ್ಪೊರೇಟ್ ಮಾಧ್ಯಮಗಳು ದೊಡ್ಡ ಬಂಡವಳಿಗರ ವರ್ಗ ಹಿತಗಳನ್ನು ಸ್ಪಷ್ಟವಾಗಿ ವ್ಯಕ್ತಗೊಳಿಸುತ್ತಿವೆ, ಸರಕಾರ ದೃಢವಾಗಿ ನಿಲ್ಲಬೇಕು, ರೈತರ ಬೇಡಿಕೆಗಳನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸುತ್ತಿವೆ. ಡಿಸೆಂಬರ್ 9ರ ಟೈಂಸ್ ಆಫ್ ಇಂಡಿಯಾ ಸಂಪಾದಕೀಯ ಇದನ್ನು ಬಿಂಬಿಸಿದೆ. “ಸರಕಾರ ಪ್ರತಿಭಟನಾಕಾರರ ಒತ್ತಡದಿಂದ ಎಂಎಸ್‌ಪಿ ಅಥವ ಕೃಷಿ ಕಾಯ್ದೆಗಳ ವಿಷಯದಲ್ಲಿ ರಾಜಿ ಮಾಡಿಕೊಂಡರೆ, ಭಾರತದಲ್ಲಿ ಯಾವುದೇ ಸುಧಾರಣಾ ಪ್ರಯತ್ನವನ್ನು ಯಾವುದೋ ಹಿತಾಸಕ್ತ ಗುಂಪಿನ ವಿರೋಧದಿಂದ ಮತ್ತು ರಾಷ್ಟ್ರೀಯ ರಾಜಧಾನಿಗೆ ಮುತ್ತಿಗೆ ಹಾಕುವುದರಿಂದ ಬುಡಮೇಲು ಮಾಡಬಹುದು ಎಂಬ ಸಂಕೇತ ನೀಡಿದಂತಾಗುತ್ತದೆ” ಎಂದು ಅದು ಹೇಳಿದೆ.

ಕೃಪೆ: ಇರ್ಫಾನ್, ನ್ಯೂಸ್ಕ್ಲಿಕ್

ಮಾತುಕತೆಗಳು ವಿಫಲವಾಗಿರುವುದರಿಂದ ರೈತ ಸಂಘಟನೆಗಳ ಐಕ್ಯ ವೇದಿಕೆಯ ಮುಂದೆ ಹೋರಾಟವನ್ನು ಮುಂದುವರೆಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲವಾಗಿದೆ. ಸರಕಾರದ ಲಿಖಿತ ಪ್ರಸ್ತಾವಗಳನ್ನು ತಿರಸ್ಕರಿಸಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅವರು ಪ್ರದರ್ಶಿಸಿರುವ ಭವ್ಯ ಐಕ್ಯತೆಯನ್ನು ಬಲಪಡಿಸಬೇಕಾಗಿದೆ. ಇದು ಮಹತ್ವದ್ದು, ಏಕೆಂದರೆ ಸರಕಾರ ಚಳುವಳಿಯನ್ನು ವಿಭಜಿಸಲು ಪ್ರಯತ್ನ ಮಾಡುತ್ತದೆ.

ರೈತರ ಈ ಜೀವನ್ಮರಣ ಹೋರಾಟದ ಬೆನ್ನಿಗೆ ನಿಲ್ಲಬೇಕಾಗಿದೆ, ದುಡಿಯುವ ಜನಗಳ ಎಲ್ಲ ವಿಭಾಗಗಳ ಸೌಹಾರ್ದ ಮತ್ತು ಬೆಂಬಲದಿಂದ ಅದನ್ನು ಬಲಪಡಿಸಬೇಕಾಗಿದೆ. ಕಾರ್ಮಿಕ ಆಂದೋಲನ  ಇದನ್ನು ಬೆಂಬಲಿಸುವುದು ಮಾತ್ರವೇ ಅಲ್ಲ,  ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾನೂನುಗಳ ವಿರುದ್ಧ ಅವಳಿ ಹೋರಾಟಗಳನ್ನು ಒಟ್ಟಿಗೆ ತಂದು ಒಂದು ಐಕ್ಯ ಹೋರಾಟವನ್ನು ಕಟ್ಟುವ ಹೊಣೆಯೂ ಅದರ ಮೇಲಿದೆ.

Donate Janashakthi Media

Leave a Reply

Your email address will not be published. Required fields are marked *