ನಾ ದಿವಾಕರ
ನಿಮ್ಮ ಪುರುಷಾಹಮಿಕೆಯ ಕಾಮಾಸ್ತ್ರಗಳು
ಯಜಮಾನಿಕೆಯ ಲಂಬಾಸ್ತ್ರಗಳು
ಮೃದು ಕಾಯಗಳ ಶ್ವಾಸಕೋಶಗಳನೂ ಸೀಳಿ
ಹೆಣ್ತನ ಘನತೆಯ ಉಸಿರುಗಟ್ಟಿಸಿವೆ
ಸಾಕ್ಷಿ ಕೇಳುತ್ತೀರಾ ? ಜೀವಗನ್ನಡಿ
ಸೀಳಿದ ಭ್ರೂಣ-ಗರ್ಭಗಳಿಂದ ಕೀರಲು ಧ್ವನಿಗಳು
ಅಸ್ಮಿತೆಗಾಗಿ ಗೋಗರೆಯುತ್ತಿವೆ
ಠಾಣೆಗಳ ಕಡತಗಳಿಗಂಟಿದ ರಕ್ತದ ಕಲೆ
ಹಾಳೆಗಳ ದಾಟಿ ನಾಳೆಗಳನ್ನು ನೋಡುತ್ತಿದೆ
ಸಾಕ್ಷಿ ಕೇಳುತ್ತೀರಾ ?
ಎಳೆಬಾಲೆಯರ ಕಂಪಿಸುವ ಅವಯವಗಳು
ಮಾತನಾಡಲು ತವಕಿಸುತ್ತಿವೆ
ತನ್ನನೇ ಅರಿಯದ ಜೀವ ಮತ್ತೊಂದರೊಡನೆ
ಸಂವಾದಿಸಲಾರದೆ ಮೂಕವಾಗಿದೆ
ಸಾಕ್ಷಿ ಕೇಳುತ್ತೀರಾ ?
ಇದನ್ನೂ ಓದಿ:ಯುದ್ಧವೆಂದರೆ ಸಾವಲ್ಲ !!!
ಕಳೆದ ಜೀವಂತಿಕೆಗೋ ಅಳಿದ ಅಸ್ಮಿತೆಗೋ
ಅಥವಾ ಮರ್ತ್ಯದೊಡನೆ ಸಂಭಾಷಿಸುತ್ತಿರುವ
ನಾಳಿನ ಶುಷ್ಕ ಕನಸುಗಳಿಗೋ
ಯಾವುದಕ್ಕೆ ಸಾಕ್ಷಿ ಕೇಳುತ್ತೀರಿ ?
ಜೀವಸತ್ವ ಕಳೆದ ದೇಹಗಳನ್ನೇ ಸೀಳಿಬಿಡಿ
ತೃಣಮಾತ್ರ ಸಾಕ್ಷ್ಯ ದೊರೆತೀತು
ಪುರುಷಾಧಿಪತ್ಯದ ಅಣು-ಕಣಗಳಲ್ಲಿ ;
ಅವು ವ್ಯವಸ್ಥೆಯ ಕನ್ನಡಿಯ ಚೂರುಗಳು
ಸುಳ್ಳು ನುಡಿಯುವುದಿಲ್ಲ !
ವಿಡಿಯೋ ನೋಡಿ: ದೀಪಾವಳಿ ಹಬ್ಬದ ವಿಶೇಷ ಕವಿತೆ : ನನ್ನ ಹಣತೆ – ಡಾ. ಜಿ.ಎಸ್. ಶಿವರುದ್ರಪ್ಪ Janashakthi Media