ಭರವಸೆ ಮೂಡಿಸುವ ನ್ಯಾಯಾಂಗದ ಧ್ವನಿ

ಇತ್ತೀಚಿನ ಸುಪ್ರೀಂ ಕೋರ್ಟ್‌ ತೀರ್ಪುಗಳಲ್ಲಿನ ತೀಕ್ಷ್ಣ ಮಾತುಗಳು ಭರವಸೆದಾಯಕವಾಗಿದೆ

 

ಇತ್ತೀಚಿನ ಕೆಲವು ಪ್ರಮುಖ ಪ್ರಕರಣಗಳಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ನೀಡುತ್ತಿರುವ ತೀರ್ಪುಗಳು ಹಾಗೂ ವ್ಯಕ್ತಪಡಿಸುತ್ತಿರುವ ತೀಕ್ಷ್ಣ ಅಭಿಪ್ರಾಯಗಳು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಜನಸಾಮಾನ್ಯರಲ್ಲಿ ನ್ಯಾಯಾಂಗದ ಮೇಲಿನ ಭರವಸೆಯನ್ನೂ ಗಟ್ಟಿಗೊಳಿಸುವಂತಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಅಡಿಪಾಯವನ್ನು ಮತ್ತಷ್ಟು ಸೂಕ್ಷ್ಮಗೊಳಿಸಬೇಕಾದ ಶಾಸನಸಭೆಗಳು ಮತ್ತು ಅಲ್ಲಿ ಜನತೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮತ್ತು ನೈತಿಕ ಹೊಣೆಯಿಂದ ವಿಮುಖವಾಗುತ್ತಿರುವ ಹೊತ್ತಿನಲ್ಲಿ, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಅಭಿಪ್ರಾಯಗಳು, ಪ್ರತಿಕ್ರಿಯೆ ಮತ್ತು ಅನಿಸಿಕೆಗಳು ಹಾಗೂ ಅಂತಿಮ ತೀರ್ಪುಗಳು ಭಾರತದ ಪ್ರಜಾತಂತ್ರಕ್ಕೆ ಆಶಾದಾಯಕವಾಗಿ ಕಾಣುವುದು ಸಹಜ. ಭರವಸೆ

-ನಾ ದಿವಾಕರ

ಪರಿಸರ ಪ್ರಜ್ಞೆ ಮತ್ತು ಕಾನೂನು

ಸಂರಕ್ಷಿತ ತಾಜ್‌ ಟ್ರೆಪಿಜಿಯಂ ವಲಯದಲ್ಲಿ ವ್ಯಕ್ತಿಯೊಬ್ಬರು 454 ಮರಗಳನ್ನು ಕಡಿಯಲು ಅನುಮತಿ ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ನ್ಯಾ ಅಭಯ್‌ ಎಸ್‌ ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ಈ ಕ್ರಮವನ್ನು ಕಟುವಾಗಿ ಖಂಡಿಸಿದ್ದು, ಅಪಾರ ಸಂಖ್ಯೆಯ ಮರಗಳನ್ನು ಕಡಿಯುವುದು ಮನುಷ್ಯನನ್ನು ಹತ್ಯೆ ಮಾಡುವುದಕ್ಕಿಂತಲೂ ಹೀನ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ. 10,400 ಚದರ ಕಿಲೋಮೀಟರ್‌ ವ್ಯಾಪ್ತಿಯ ತಾಜ್‌ ಟ್ರೆಪಿಜಿಯಂ ವಲಯವನ್ನು ಸುಪ್ರೀಂಕೋರ್ಟ್‌ ಆದೇಶದ ಮೂಲಕ ಗುರುತಿಸಲಾಗಿದ್ದು, ಇದು ಈ ಸ್ಮಾರಕವನ್ನು ಹಾಗೂ ಸುತ್ತಮುತ್ತಲು ಇರುವ ಚಾರಿತ್ರಿಕ ನಿವೇಶನಗಳನ್ನು ಸಂರಕ್ಷಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಕೈಗಾರಿಕಾ ಮಾಲಿನ್ಯವೂ ಸೇರಿದಂತೆ ಯಾವುದೇ ರೀತಿಯ ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡಕೂಡದು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಭರವಸೆ

ಇದನ್ನೂ ಓದಿ: ಸರಕಾರೀ ಪಿಂಚಣಿದಾರರಲ್ಲಿ ತಾರತಮ್ಯಕ್ಕೆ ಅನುವು ಮಾಡಿ ಕೊಡುವ ಮಸೂದೆಗೆ ಅಂಗೀಕಾರ

ಈ ರೀತಿಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಹಾಕಿದಲ್ಲಿ ಪ್ರತಿಯೊಂದು ಮರಕ್ಕೂ ತಲಾ ಒಂದು ಲಕ್ಷ ರೂ ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.  454 ಮರಗಳು ನೈಸರ್ಗಿಕವಾಗಿ ಸೃಷ್ಟಿಸಿರುವ ಹಸಿರು ವಾತಾವರಣವನ್ನು ಪುನಃ ಸೃಷ್ಟಿಸಬೇಕಾದರೆ ಕನಿಷ್ಠ 100 ವರ್ಷಗಳಾದರೂ ಬೇಕಾದೀತು ಎಂದು ಹೇಳಿರುವ ನ್ಯಾಯಪೀಠವು, ಅನುಮತಿ ಇಲ್ಲದೆ ಈ ಮರಗಳನ್ನು ಕಡಿಯುವುದು ಅಕ್ಷಮ್ಯ ಅಪರಾಧ ಎಂದು ಹೇಳಿದೆ. ಪರಿಸರ ನಾಶ ಮಾಡುವ ಯಾವುದೇ ವ್ಯಕ್ತಿ ಅಥವಾ ಉದ್ದಿಮೆಗೆ ಕರುಣೆ, ಔದಾರ್ಯ ತೋರಬೇಕಿಲ್ಲ ಎಂದು ಹೇಳಿರುವ ನ್ಯಾಯಪೀಠವು ಅಕ್ರಮವಾಗಿ ಮರಗಳ ಹನನ ಮಾಡುವವರಿಗೆ ಕಠಿಣ ಸಂದೇಶವನ್ನು ರವಾನಿಸಿದೆ. ಸೂಕ್ತ ಪ್ರಾಧಿಕಾರಗಳ ಪೂರ್ವಾನುಮತಿ ಇಲ್ಲದೆ ಅಥವಾ ಆದೇಶವನ್ನು ಉಲ್ಲಂಘಿಸಿ ಮರಗಳ ಹನನ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ. ಭರವಸೆ

ಪರಿಸರ ರಕ್ಷಣೆಯ ಯಾವುದೇ ಮೊಕದ್ದಮೆಯಲ್ಲಿ ಕಾನೂನು ನಿಯಮಗಳನ್ನು ಅಲಕ್ಷಿಸುವುದಾಗಲೀ, ಮನಬಂದಂತೆ ಪರಿಗಣಿಸುವುದಾಗಲೀ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುವಂತೆ ಹಿರಿಯ ವಕೀಲ ಮತ್ತು ಸುಪ್ರೀಂಕೋರ್ಟ್‌ನ ಅಮಿಕಸ್‌ ಕ್ಯೂರಿ  ಎ.ಡಿ.ಎನ್.‌ ರಾವ್‌ ವಿನಂತಿಸಿಕೊಂಡಿದ್ದು ಇಂತಹ ಪ್ರಕರಣಗಳಲ್ಲಿ ಕಾನೂನು ಉಲ್ಲಂಘನೆಗೆ ದಂಡ ವಿಧಿಸಲು ಸೂಕ್ತ ಮಾನದಂಡಗಳನ್ನು ರೂಪಿಸುವಂತೆ ಕೋರಿದ್ದಾರೆ.  ಶಿವಶಂಕರ್‌ ಅಗರ್ವಾಲ್‌ ಎಂಬ ವ್ಯಕ್ತಿ ಕಳೆದ ವರ್ಷ 454 ಮರಗಳನ್ನು ಹನನ ಮಾಡಿದ ಪ್ರಕರಣದಲ್ಲಿ ಕೇಂದ್ರ ಅಧಿಕಾರ ಸಮಿತಿ (Central Empowered Committtee) ಆದೇಶಿಸಿದ ತಲಾ ಒಂದು ಲಕ್ಷ ರೂಗಳ ದಂಡವನ್ನು ಸುಪ್ರೀಂಕೋರ್ಟ್‌ ಅನುಮೋದಿಸಿದೆ. ದಂಡದ ಪ್ರಮಾಣವನ್ನು ಕಡಿಮೆ ಮಾಡುವ ಆರೋಪಿಯ ವಕೀಲರ ಬೇಡಿಕೆಯನ್ನೂ ಕೋರ್ಟ್‌ ತಿರಸ್ಕರಿಸಿದೆ. ಭರವಸೆ

ಕಳೆದ ವರ್ಷ ಸೆಪ್ಟಂಬರ್‌ 18ರಂದು ಅಕ್ರಮವಾಗಿ ಕಡಿಯಲಾದ 454 ಮರಗಳ ಪೈಕಿ, 422 ಮರಗಳು ವೃಂದಾವನ್‌ ಚಟಿಕಾರಾ ರಸ್ತೆಯ ಖಾಸಗಿ ಭೂಮಿಯಲ್ಲಿದ್ದು, ಉಳಿದ 32 ಮರಗಳು ಇದಕ್ಕೆ ಹೊಂದಿಕೊಂಡಿರುವ ಸಂರಕ್ಷಿತ ಅರಣ್ಯ ಪ್ರದೇಶದ ಭೂಮಿಯಲ್ಲಿದೆ ಎಂದು CEC ತನ್ನ ವರದಿಯಲ್ಲಿ ಹೇಳಿತ್ತು. ಸಮಿತಿಯ ವರದಿಯು ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆಯಾಗಿರುವುದನ್ನು ಸ್ಪಷ್ಟಪಡಿಸಿದ್ದು ಅಗರ್ವಾಲ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸುವಂತೆ ನ್ಯಾಯಪೀಠ ಸೂಚಿಸಿದೆ. ಮರಗಳ ಅಕ್ರಮ ಹನನಕ್ಕೆ ದಂಡ ವಿಧಿಸುವಾಗ 1976ರ ಉತ್ತರಪ್ರದೇಶ ವೃಕ್ಷ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಅನುಸರಿಸುವಂತೆ ಆದೇಶಿಸಿರುವ ಸುಪ್ರೀಂ ನ್ಯಾಯಪೀಠ, ಸಂರಕ್ಷಿತ ಅರಣ್ಯ ಪ್ರದೇಶದ 32 ಮರಗಳ ಅಕ್ರಮ ಹನನವನ್ನು ಭಾರತೀಯ ಅರಣ್ಯ ಕಾಯ್ದೆ 1972ರ ಅನ್ವಯ ಶಿಕ್ಷಾರ್ಹ ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿದೆ. ಭರವಸೆ

ನ್ಯಾಯಾಂಗದ ಮೌಲ್ಯಯುತ ಉಪದೇಶ

ಕರ್ನಾಟಕದ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿರುವ ಹನಿಟ್ರ್ಯಾಪ್‌ ಹಗರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಜಾರ್ಖಂಡ್‌ ನಿವಾಸಿ ವಿನಯ್‌ ಕುಮಾರ್‌ ಸಿಂಗ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನೂ ತಿರಸ್ಕರಿಸಿರುವ ಸುಪ್ರೀಂಕೋರ್ಟ್‌ ನ್ಯಾಯಪೀಠ ಅರ್ಜಿದಾರರ ವಕೀಲರಾದ ವಿನಯ್‌ ಕುಮಾರ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.  ಅರ್ಜಿದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರ ನೇತೃತ್ವದ ನ್ಯಾಯಪೀಠವು ಪಿಐಎಲ್‌ ಅನ್ನು ವಜಾಗೊಳಿಸಿರುವುದೇ ಅಲ್ಲದೆ “ನಿಮಗೆ ಮಾಡಲು ಕೆಲಸವಿಲ್ಲ ಎಂದರೆ ನಮ್ಮ ಅಮೂಲ್ಯವಾದ ಸಮಯವನ್ನು ಏಕೆ ವ್ಯರ್ಥಮಾಡುತ್ತೀರಿ ” ಎಂದು ಪ್ರಶ್ನಿಸಿದೆ. ಭರವಸೆ

ಅರ್ಜಿದಾರರು ಮೂಲತಃ ಜಾರ್ಖಂಡ್‌ ನಿವಾಸಿಯಾಗಿದ್ದು, ನಿಮಗೂ ಈ ಪ್ರಕರಣಕ್ಕೂ ಏನು ಸಂಬಂಧ ? ಒಂದು ವೇಳೆ ಹನಿಟ್ರ್ಯಾಪ್‌ಗೆ ಒಳಗಾಗಿದ್ದರೆ ಕರ್ನಾಟಕದವರು ಅರ್ಜಿ ಹಾಕಲಿ ನೋಡಿಕೊಳ್ಳುತ್ತೇವೆ, ನಿಮಗೆ ಕೆಲಸ ಇಲ್ಲ ಎಂದರೆ ಬೇರೆ ಯಾವುದಾದರೂ ಕೆಲಸ ಮಾಡಿ, ನ್ಯಾಯಾಲಯದ ಸಮಯವನ್ನು ಸುಖಾಸುಮ್ಮನೆ ಹಾಳುಮಾಡಬೇಡಿ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.  ರಾಜಕೀಯದ ನಾನ್‌ ಸೆನ್ಸ್‌ ವಿಚಾರಗಳನ್ನು ವಿಚಾರಣೆ ಮಾಡಲು ನಮಗೆ ಸಮಯವಿಲ್ಲ ಎಂದು ಹೇಳಿರುವ ನ್ಯಾಯಪೀಠವು ಈ ಪ್ರಕರಣದಲ್ಲಿ ನ್ಯಾಯಾಧೀಶರು ಇದ್ದರೆ ಅವರು ಸರಿಪಡಿಸುತ್ತಾರೆ, ಮೊದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮಹತ್ವವನ್ನು ತಿಳಿದುಕೊಳ್ಳಿ ಎಂದು ಕಟು ಶಬ್ದಗಳಲ್ಲಿ ಬುದ್ಧಿವಾದ ಹೇಳಿದೆ. ಭರವಸೆ

ದೇಶದ ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ಮಹಿಳಾ ಸಮುದಾಯದ ನಡುವೆ ತೀವ್ರವಾದ ಚರ್ಚೆ ಹುಟ್ಟುಹಾಕಿದ್ದ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ಅಲಹಾಬಾದ್‌ ಹೈಕೋರ್ಟ್‌ನ ಮಾರ್ಚ್‌ 17ರ ತೀರ್ಪನ್ನು ತಡೆಹಿಡಿದಿರುವ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ನೇತೃತ್ವದ ಸುಪ್ರೀಂಕೋರ್ಟ್‌ ನ್ಯಾಯಪೀಠ, ಅಪ್ರಾಪ್ತ ಬಾಲಿಕೆಯ ಸ್ತನಗಳನ್ನು ಹಿಡಿದು ಎಳೆಯುವುದು, ಆಕೆಯ ಕೆಳ ಉಡುಪಿನ, ಪೈಜಾಮದ ಲಾಡಿಯನ್ನು ಬಿಚ್ಚುವುದು ಅತ್ಯಾಚಾರದ ಪ್ರಯತ್ನ ಎಂದು ಪರಿಗಣಿಸಲಾಗುವುದಿಲ್ಲ ಎಂಬ ಹೈಕೋರ್ಟ್‌ ತೀರ್ಪನ್ನು ಗಂಭೀರವಾಗಿ ಪರಿಗಣಿಸಿದ್ದು, ನ್ಯಾಯಮೂರ್ತಿ ರಾಮಮನೋಹರ್‌ ನಾರಾಯಣ್‌ ಮಿಶ್ರ ಅವರ ಈ ತೀರ್ಪು ಅಸೂಕ್ಷ್ಮವೂ, ಅಮಾನವೀಯವೂ ಆಗಿದೆ ಎಂದು ಕಟು ಶಬ್ದಗಳಲ್ಲಿ ಟೀಕಿಸಿದೆ. ಹೈಕೋರ್ಟ್‌ ತೀರ್ಪಿನ ಕೆಲವು ಸಾಲುಗಳು ಸೂಕ್ಷ್ಮ ಸಂವೇದನೆಯ ಕೊರತೆಯನ್ನು ಎತ್ತಿತೋರಿಸುವಂತಿದೆ ಎಂದು ಸುಪ್ರೀಂ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಹೈಕೋರ್ಟ್‌ನ ಈ ತೀರ್ಪು ಏಕಾಏಕಿ ರೂಪುಗೊಂಡಿರುವುದಲ್ಲ, ನವಂಬರ್‌ 24ರ ವಿಚಾರಣೆಯಲ್ಲೇ ತೀರ್ಪನ್ನು ಕಾದಿರಿಸಲಾಗಿತ್ತು , ಹಾಗಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಎಚ್ಚರಿಕೆಯಿಂದ ಪರಿಶೀಲಿಸಿ, ವಿಚಾರ ಮಾಡಿ ಈ ತೀರ್ಪು ನೀಡಲಾಗಿದೆ, ಇಂತಹ ತೀರ್ಪು ದಾಖಲು ಮಾಡುವ ಮುನ್ನ ನ್ಯಾಯಮೂರ್ತಿಗಳು ಹತ್ತು ಬಾರಿ ಯೋಚಿಸಬೇಕಿತ್ತು ಎಂದು ಸುಪ್ರೀಂ ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.  ಇದು ಬಹಳ ಗಂಭೀರ  ವಿಚಾರ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಬಿ.ಆರ್.‌ .ಗವಾಯಿ ಮತ್ತು ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಅವರ ನ್ಯಾಯಪೀಠವು, ಈ ಆದೇಶದ 21, 24 ಮತ್ತು 26ನೇ ಪ್ಯಾರಾಗಳಲ್ಲಿ ಹೇಳಿರುವ ಮಾತುಗಳು ಕಾನೂನಿಗೆ ಗೊತ್ತೇ ಇಲ್ಲದವಾಗಿದ್ದು, ಅಸೂಕ್ಷ್ಮವೂ, ಅಮಾನವೀಯವೂ ಆದವು. ಹಾಗಾಗಿ ತಡೆ ನೀಡಬೇಕಿದೆ ಎಂದು ಹೇಳಿದ್ದಾರೆ. (ಪ್ರಜಾವಾಣಿ 27 ಮಾರ್ಚ್‌ 2025)

ಇದಕ್ಕೂ ಮುನ್ನ ಕರ್ನಾಟಕದ ರಾಜಕಾರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ದ , ಅಕ್ರಮ ಭೂ ಕಬಳಿಕೆಯ ವಿಚಾರದಲ್ಲಿ ನಡೆಯುತ್ತಿರುವ ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್‌ “ ಬಡವರು ಐದು ಅಡಿ ಒತ್ತುವರಿ ಮಾಡಿದರೆ ಓಡೋಡಿ ಬಂದು ತೆರವು ಮಾಡುತ್ತೀರಿ, ಬುಲ್ಡೋಜರ್‌ ತೆಗೆದುಕೊಂಡು ಹೋಗಿ ಮನೆ ಒಡೆದು ಹಾಕ್ತೀರಿ, ಭಿಕ್ಷುಕರನ್ನೂ ಬಿಡುವುದಿಲ್ಲ, ಪ್ರಭಾವಿಗಳು ಒತ್ತುವರಿ ಮಾಡಿದರೆ ಸದರವೇ ? ”ಎಂದು ಕೇಳಿರುವುದು ( ಪ್ರಜಾವಾಣಿ 20 ಮಾರ್ಚ್‌ 2025) ನ್ಯಾಯಾಂಗದ ವಸ್ತುನಿಷ್ಠತೆ ಮತ್ತು ದೇಶದಲ್ಲಿ ಕಾನೂನು ಮತ್ತು ಸಂವಿಧಾನವನ್ನು ಕಾಪಾಡುವ ನಿಟ್ಟಿನಲ್ಲಿ ಇರಬೇಕಾದ ಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ.

ಭರವಸೆಯ ಬೆಳಕಿಂಡಿ

ಅಧಿಕಾರ ರಾಜಕಾರಣ ಮತ್ತು ಅದರೊಡನೆಯೇ ಸಾಗುವ ಅಧಿಕಾರಶಾಹಿಯ ಅಕ್ರಮ ಮಾರ್ಗಗಳು ಹಾಗೂ ಅಸಾಂವಿಧಾನಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಶಕ್ತಿ ಇರುವುದು ಸಾಮಾನ್ಯ ಜನತೆಗೆ ಮತ್ತು ನ್ಯಾಯಾಂಗಕ್ಕೆ ಮಾತ್ರ ಎನ್ನುವುದನ್ನು ಈ ಪ್ರಕರಣಗಳು ಸೂಚಿಸುತ್ತವೆ. ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿ ಮತ್ತು ನೈತಿಕ ಹೊಣೆಗಾರಿಕೆ ಎರಡನ್ನೂ ಮರೆತು, ಅಧಿಕಾರ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ಯಾವ ಮಾರ್ಗವನ್ನಾದರೂ ಅನುಸರಿಸುತ್ತಿರುವ ವಿಷಮ ಕಾಲಘಟ್ಟದಲ್ಲಿ, ಔದ್ಯಮಿಕ ಜಗತ್ತೂ ಇದನ್ನು ತನ್ನ ಹಿತಾಸಕ್ತಿಗಾಗಿ ಬಳಸಿಕೊಳ್ಳಲಾರಂಭಿಸಿದೆ. ಈ ಪ್ರಜಾಪ್ರಭುತ್ವ ವಿರೋಧಿ ವರ್ತನೆ ಮತ್ತು ಮನಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿ ನ್ಯಾಯಾಂಗದ ಮೇಲಿರುವಷ್ಟೇ, ನಾಗರಿಕ ಸಮಾಜದ ಮೇಲೂ ಇದೆ ಎನ್ನುವುದನ್ನು ಮನಗಾಣಬೇಕಿದೆ.

ಮೇಲೆ ಉಲ್ಲೇಖಿಸಿದ ಸುಪ್ರೀಂಕೋರ್ಟ್‌ನ ಎರಡು ತೀರ್ಪುಗಳು ಮತ್ತು ರಾಜ್ಯ ಹೈಕೋರ್ಟ್‌ನ ಅಭಿಪ್ರಾಯಗಳು ಈ ನಿಟ್ಟಿನಲ್ಲಿ ಭರವಸೆಯನ್ನು ಮೂಡಿಸುವ ದಿಕ್ಕಿನಲ್ಲಿವೆ.  ಭಾರತವು ವಿಕಾಸದ ಹಾದಿಯಲ್ಲಿ ಸಾಗುತ್ತಿರುವಾಗಲೇ ಪ್ರಜಾಪ್ರಭುತ್ವದ ಮೌಲ್ಯಗಳು ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ನ್ಯಾಯಾಂಗದ ಈ ಭರವಸೆಯ ಮಾತುಗಳು, ಸಂವಿಧಾನ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾನ್ಯ ಜನತೆಯಲ್ಲಿ ಮತ್ತಷ್ಟು ವಿಶ್ವಾಸವನ್ನು ಹುಟ್ಟಿಸುತ್ತದೆ. ನ್ಯಾಯಾಂಗವನ್ನು ಈ ದೃಷ್ಟಿಯಿಂದ ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ.

ಇದನ್ನೂ ನೋಡಿ: ರಂಗಭೂಮಿ ದಿನ | ಜರ್ನಿ ಥಿಯೇಟರ್ ತಂಡದಿಂದ ರಂಗಗೀತೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *