ವರದಿ : ಹುಸೇನ್ ಪಾಷಾ, ಕೊಪ್ಪಳ
ಕೊಪ್ಪಳ: ಗಣೇಶೋತ್ಸವಕ್ಕೆ ಡಿಜೆ ಇರಲೇಬೇಕು. ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಲಕ್ಷಾಂತರ ರೂಪಾಯಿ ಖರ್ಚಾದರೂ ಪರವಾಗಿಲ್ಲ ಡಿಜೆ ಬೇಕು ಎಂಬ ಒತ್ತಡ ಸಂಘಟಕರನ್ನು ಕಾಡುತ್ತೆ.
ಸಾಮಾಜಿಕ ಕಾರ್ಯಕ್ಕೆ ಅಂಥ ಡಿಜೆಗೆ ಖರ್ಚಾಗುವ ಲಕ್ಷಾಂತರ ರೂಪಾಯಿಗಳನ್ನು ಬಳಸಿದರೆ? ಅಂಥ ಯೋಚನೆ ಬಂದ ಕೂಡಲೇ ಅದನ್ನು ಗಣೇಶೋತ್ಸವದ ನಾಲ್ಕನೆ ದಿನ ಕಾರ್ಯರೂಪಕ್ಕೆ ತಂದಿದೆ ಕಿನ್ನಾಳನ ಹಿಂದೂ ಮಹಾಗಣಪತಿ ಕಾಮನಕಟ್ಟಿ ಗೆಳೆಯರ ಬಳಗ. ಅವರ ಯೋಚನೆ ಡಿಜೆ ದುಡ್ಡಿನಲ್ಲಿ ರಸ್ತೆ ರಿಪೇರಿ ಮಾಡಿಸುವುದು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲೆಗೆ ಪ್ರಸಿದ್ದಿಯಾಗಿರುವ ಕಲಾಗ್ರಾಮ ಕಿನ್ನಾಳಗೆ (ಕೊಪ್ಪಳದಿಂದ) ಹೋಗುವ ಮುಖ್ಯ ರಸ್ತೆ ಹಾಳಾಗಿ ಕೆಲವು ವರ್ಷಗಳು ಆಗಿವೆ. ಶಾಸಕರು ಬದಲಾದರೂ ರಸ್ತೆ ರಿಪೇರಿ ಆಗಲಿಲ್ಲ. ಕೊಪ್ಪಳದಿಂದ ಕಿನ್ನಾಳಗೆ 11 ಕಿ.ಮೀ ದೂರದ ರಸ್ತೆ ಎರಡು ವಿಧಾನಸಭೆ (ಕೊಪ್ಪಳ – ಗಙಗಾವತಿ) ಕ್ಷೇತ್ರಗಳಿಗೆ ಒಳಪಟ್ಟಿದೆ. ಹೀಗಾಗಿ ರಸ್ತೆ ದುರಸ್ತಿಗೆ ತೊಂದರೆ ಎಂಬ ಆರೋಪ ಕಿನ್ನಾಳ ನಾಗರಿಕರದು. ಆದರೆ ರಾಜಕಾರಣಿಗಳ ಇಚ್ಚಾಶಕ್ತಿ ಇಲ್ಲದಿದ್ದರೆ ಒಂದೇ ಕ್ಷೇತ್ರಕ್ಕೆ ಒಳಪಟ್ಟ ರಸ್ತೆಗಳೂ ಕೂಡ ರಿಪೇರಿ ಆಗುವುದಿಲ್ಲ. ಉದಾಹರಣೆ ಕೊಪ್ಪಳ ವಿಧಾನಸಭೆ ಕ್ಷೇತ್ರದ ರಸ್ತೆಗಳು.
ಇದನ್ನೂ ಓದಿ: ಪೊಕ್ಸೋ: ಒಂದು ಕಠಿಣವಾದ ಕಾನೂನು ನಿಜ ಆದರೂ ನ್ಯಾಯದ ದಾರಿ ಗಾವುದ ದೂರವೇ….
ಕೊಪ್ಪಳ ಟು ಕಿನ್ನಾಳನ ಹದಗೆಟ್ಟ ರಸ್ತೆಯಲ್ಲಿ ಹೆಜ್ಕೆಹೆಜ್ಜೆಗೂ ತಗ್ಗುಗಳು. ಒಂದೆಡರೆಡು ಕಿ.ಮೀ ಬೈಕ್ ನಲ್ಲಿ ಹೋಗುತ್ತಲೆ ಬೆನ್ನು ನೋವು ಗ್ಯಾರಂಟಿ. ಇಂಥ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ನಡೆದ ಅವಘಡಗಳಿಂದ ಒಂದೂವರೆ ವರ್ಷದಿಂದ 14-16 ಜನ ಮೃತಪಟ್ಟಿದ್ದಾರೆ ಎಂಬ ಆರೋಪ ಕಿನ್ನಾಳ ಗ್ರಾಮದವರದು.
ಈ ರಸ್ತೆಯ ಸುಮಾರು 7 ಕಿ.ಮೀ ಕೊಪ್ಪಳ ವಿಧಾನಸಭೆಗೆ ಒಳಪಡುತ್ತೆ. ಈ ರಸ್ತೆ ರಿಪೇರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನ ನೀಡುತ್ತೇವೆ. ಶೀಘ್ರ ಕೆಲಸ ಚಾಲೂ ಮಾಡ್ತೇವೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಫೆ.11 ರಂದು ಹೇಳಿದ್ದರು. ಹಾಗೆ ಹೇಳಿ ಈಗ 7 ತಿಂಗಳು. ರಿಪೇರಿ ಆಗಲೇ ಇಲ್ಲ. ಅಲ್ಲಲ್ಲ ರಿಪೇರಿ ಇನ್ನೂ ಚಾಲೂ ಆಗೇ ಇಲ್ಲ.
ಇನ್ನು ಸುಮಾರು 3 ಕಿ.ಮೀ ರಸ್ತೆ ಗಂಗಾವತಿ ಕ್ಷೇತ್ರಕ್ಕೆ ಒಳಪಡುತ್ತೆ. ಗಂಗಾವತಿ ಶಾಸಕ ಜನಾರ್ದನ ರಡ್ಡಿ ಕಿನ್ನಾಳನತ್ತ ಬಂದಿಲ್ಲ. ಗಂಗಾವತಿ ನಗರ ಅಭಿವೃದ್ಧಿಗೆ ಕೇಂದ್ರದಿಂದ ಹಣ ತರುವುದಾಗಿ ಹೇಳುವ ಜನಾರ್ದನ ರಡ್ಡಿ ಕಿನ್ನಾಳ – ಕೊಪ್ಪಳ ರಸ್ತೆ ಬಗ್ಗೆ ಗಮನ ಹರಿಸಿಲ್ಲ.
ರಸ್ತೆ ಸ್ಥಿತಿ ಹೀಗಿರುವಾಗ ಗಣೇಶೋತ್ಸವಕ್ಕೆ ಡಿಜೆ ತಂದರೆ ಕನಿಷ್ಠ ಎರಡು ಲಕ್ಷ ರೂಪಾಯಿ ಖರ್ಚು. ಅದೇ ಹಣ ರಸ್ತೆ ರಿಪೇರಿಗೆ ಬಳಸಲು ತೀರ್ಮಾನಿಸಿದ್ದು ಕಿನ್ನಾಳನ ಹಿಂದೂ ಮಹಾಗಣಪತಿ ಸಮಿತಿಯವರು. ಅದರಂತೆ ಇಂದು ಸೆ.10 ರಂದು ಮುಂಜಾನೆಯಿಂದ ಕೆಲಸ ಆರಂಭವಾಗಿದೆ. ಕಿನ್ನಾಳನಿಂದ ಚಿಲವಾಡಗಿವರೆಗೆ ರಸ್ತೆ ರಿಪೇರಿ ಮಾಡುವ ಉದ್ದೇಶ ಅವರದು. ಅದಕ್ಕಾಗಿ ಎರಡೂವರೆ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ.
ಇಂಥ ಉತ್ತಮ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಲಿ. ಸಾರ್ವಜನಿಕರ ಈ ಕಾರ್ಯ ಅಧಿಕಾರಸ್ಥ ರಾಜಕಾರಣಿಗಳ ಕಣ್ತೆರಸಲಿ.
ಇದನ್ನೂ ನೋಡಿ: ವಚನಾನುಭವ – 12 | ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು | ಮೀನಾಕ್ಷಿ ಬಾಳಿ Janashakthi Media