ಬೆಂಗಳೂರು: ಜೂನ್ 27 ಶುಕ್ರುವಾರದಂದು ನಗರದ ವಿದ್ಯಾರಣ್ಯಪುರದಲ್ಲಿ ಹಾಡಹಗಲೇ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡ, ಎರಡು ಕೋಟಿ ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಕೆಂಗೇರಿಯ ಶ್ರೀಹರ್ಷ ಎಂಬುವರು ವಿದ್ಯಾರಣ್ಯಪುರದ ಎಂ. ಎಸ್. ಪಾಳ್ಯದಲ್ಲಿ ಎ.ಕೆ.ಎಂಟರ್‌ಪ್ರೈಸ್ ಶಾಪ್ ನಡೆಸುತ್ತಿದ್ದರು. ತಮ್ಮ ಹೊಸ ಕಂಪನಿಗೆ ಜಪಾನ್‌ನಿಂದ ಯಂತ್ರೋಪಕರಣ ತರಿಸಲು ನಿರ್ಧರಿಸಿ ಎರಡು ಕೋಟಿ ರೂ.ಗಳನ್ನು ಕ್ರಿಪ್ಟೋಕರೆನ್ಸಿಗೆ ಬದಲಿಸಲು ಮುಂದಾಗಿದ್ದರು. ಅಂಗಡಿ
ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಹರ್ಷ ಎಂಬಾತ ಶ್ರೀಹರ್ಷನಿಗೆ ಪರಿಚಯವಾಗಿ ಹಣ ಬದಲಾವಣೆಗೆ ಸಹಾಯ ಮಾಡುವುದಾಗಿ ತಿಳಿಸಿದ್ದ.
ಇದನ್ನೂ ಓದಿ: ಚನ್ನರಾಯಪಟ್ಟಣ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ
ದುಷ್ಕರ್ಮಿಗಳೊಂದಿಗೆ ಸ್ನೇಹಿತರು ಪರಾರಿ
ಜೂನ್ 25 ಬುಧವಾರ ಮಧ್ಯಾಹ್ನ ಎಂ.ಎಸ್. ಪಾಳ್ಯದ ಎ.ಕೆ ಎಂಟರ್‌ಪ್ರೈಸ್ ಶಾಪ್‌ನಲ್ಲಿ ಶ್ರೀ ಹರ್ಷ ಹಾಗೂ ಬೆಂಜಮಿನ್ ಹರ್ಷ ಭೇಟಿಯಾಗಿದ್ದರು. ಈ ವೇಳೆ ಬೆಂಜಮಿನ್‌ನ ಇಬ್ಬರು ಸ್ನೇಹಿತರು ಜತೆಯಲ್ಲಿದ್ದರು.
ಶಾಪ್‌ನಲ್ಲಿ ಎರಡು ಕೋಟಿ ರೂ. ಎಣಿಕೆ ಮಾಡುವಾಗ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಬೆದರಿಸಿ, ಕೊಠಡಿಯಲ್ಲಿ ಇಟ್ಟಿದ್ದ ಎರಡು ಕೋಟಿ ರೂ.ಗಳನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದೆ.
ದುಷ್ಕರ್ಮಿಗಳು ಪರಾರಿಯಾದ ಬಳಿಕ ಬೆಂಜಮಿನ್ ಹಾಗೂ ಆತನ ಸ್ನೇಹಿತರು ಕೂಡ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಘಟನೆ ಕುರಿತು ಶ್ರೀಹರ್ಷ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೆಂಜಮಿನ್ ಹರ್ಷ ಹಾಗೂ ಆತನ ಸ್ನೇಹಿತರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಈಗಾಗಲೇ ವಿಚಾರಣೆ ಆರಂಭಿಸಿದ್ದು, ಬೆಂಜಮಿನ್ ಹರ್ಷ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಹಣದೊಂದಿಗೆ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: 50 ವರ್ಷ| ಆಂತರಿಕ ತುರ್ತುಪರಿಸ್ಥಿತಿಯ ಕರಾಳ ದಿನಗಳು | 25 ಜೂನ್ 1975
