ಬೆಂಗಳೂರು: ರಾಜ್ಯ ಸರಕಾರವು ನೇಮಿಸಿದ ʻಸಂಪನ್ಮೂಲ ಕ್ರೋಡೀಕರಣ ಸಮಿತಿʼ ನೀಡಿದ ವರದಿಯಲ್ಲಿ ಭೂ ಸ್ವತ್ತು ನಗದೀಕರಿಸಿ ತೆರಿಗೆಯೇತರ ಆದಾಯ ಹೆಚ್ಚಿಸಿಕೊಳ್ಳಬಹುದೆಂದು ಸಲಹೆ ನೀಡಿದ್ದು, ಇದು ಜನ ವಿರೋಧಿಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ ಎಂದು ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಹೇಳಿದ್ದಾರೆ.
ರಾಜ್ಯ ಸರಕಾರವು ಹೊಂದಿರುವ ಭೂಮಿ ಮತ್ತು ಉದ್ದಿಮೆಗಳು ಜನರು ಸಲ್ಲಿಸಿದ ತೆರಿಗೆಯಿಂದ ನಿರ್ಮಾಣಗೊಂಡಿವೆ. ಸಂಪನ್ಮೂಲ ಕ್ರೋಡೀಕರಣದ ಹೆಸರಲ್ಲಿ ಅವುಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡುವುದು, ಜನರಿಗೆ ಮಾಡುವ ವಂಚನೆಯಾಗಿದೆ.
ಇದನ್ನೂ ಓದಿ: ಜಾಮರ್‌ಗಳಿಂದ ನ್ಯಾಯಾಲಯ ಸಂಕೀರ್ಣದಲ್ಲಿ ತೊಂದರೆ: ತಾಂತ್ರಿಕ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಅತ್ಯಂತ ಹೆಚ್ಚು ಲಾಭ ಗಳಿಸುತ್ತಿದ್ದು ಅವುಗಳಿಗೆ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಬಹುದು. ಆದರೆ ಸಾರ್ವಜನಿಕ ಸೇವೆಗಳಾದ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಇತ್ಯಾದಿ ಸೇವೆಗಳಿಗೆ ತರ್ಕಬದ್ಧ ಗೊಳಿಸುವ ಹೆಸರಲ್ಲಿ ಬಳಕೆ ಶುಲ್ಕವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಬಾರದೆಂದು ಸಿಪಿಐ(ಎಂ) ಆಗ್ರಹಿಸುತ್ತದೆ ಎಂದರು.
ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಹೆಸರಲ್ಲಿ ಆಸ್ತಿಯನ್ನು ಖಾಸಗಿ ಕಂಪೆನಿಗಳಿಗೆ ವಹಿಸಿಕೊಡುವ ವ್ಯವಸ್ಥೆಯನ್ನು ಸಿಪಿಐ(ಎಂ) ವಿರೋಧಿಸುತ್ತದೆ. ಸಮಿತಿಯು ಮಾಡಿದ ಅನೇಕ ಶಿಫಾರಸ್ಸುಗಳು ಕೇಂದ್ರ ಬಿಜೆಪಿ ಸರಕಾರ ಅನುಷ್ಠಾನಕ್ಕೆ ತರುತ್ತಿರುವ ಉದಾರೀಕರಣ ನೀತಿಗೆ ಅನುಗುಣವಾಗಿದೆ. ರಾಜ್ಯದಲ್ಲಿ ಈ ನೀತಿಯನ್ನು ಜಾರಿಗೆ ತರಬಾರದೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ಕಾರ್ಮಿಕರ ಮಕ್ಕಳ ʼಶಿಕ್ಷಾದೀಪʼ ಸಿoಘ್ವಿ ಚಾರಿಟೇಬಲ್ ಟ್ರಸ್ಟ್ Janashakthi Media
