ಬಜೆಟ್‌ 2025| ದುಡಿಯುವ ಜನತೆ ಮತ್ತು ನೌಕರ-ವಿರೋಧಿಯಾದ ನಿರಾಶಾದಾಯಕ ಬಜೆಟ್‌

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಯವರು ತಮ್ಮ ದಾಖಲೆಯ 16ನೇ ಆಯವ್ಯಯದಲ್ಲಿ ರೂ. 4,08,647 ಕೋಟಿ ಗಾತ್ರದ 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ. ಒಟ್ಟು ಸಾಲದ ಮೊತ್ತ ರೂ. 7.65 ಲಕ್ಷ ಕೋಟಿ ಮುಟ್ಟುವುದೆಂದು ತಿಳಿಸಲಾಗಿರುತ್ತದೆ. ಆದರೆ, ಆಯವ್ಯಯವು ದುಡಿಯುವ ಜನತೆ, ಕಾರ್ಮಿಕರು, ನಿರುದ್ಯೋಗಿ ಯುವಜನತೆ ಮತ್ತು ನೌಕರರಿಗೆ ಯಾವುದೇ ಪರಿಹಾರಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್. ಎಸ್‌. ಜೈಕುಮಾರ್‌ ಆರೋಪಿಸಿದ್ದಾರೆ. ಬಜೆಟ್

ಒಕ್ಕೂಟದ ಬಹುದಿನಗಳ ಬೇಡಿಕೆಯಂತೆ, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿರುವ 3 ಲಕ್ಷಕ್ಕೂ ಹೆಚ್ಚಿನ ನೌಕರರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆಯನ್ನು ರೂ. 5 ಲಕ್ಷ ಮಿತಿಗೊಳಪಟ್ಟು ಒದಗಿಸುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಇದು ಜಾರಿಗೆಯಾಗುವ ಕುರಿತು ನೌಕರರಿಗೆ ಅನುಮಾನವಿದೆ. ಏಕೆಂದರೆ, ಇಂತಹದೇ ನಗದು-ರಹಿತ ಆರೋಗ್ಯ ಚಿಕಿತ್ಸೆಯನ್ನು ಖಾಯಂ ನೌಕರರಿಗೆ ಬಜೆಟ್‌ ನಲ್ಲಿ ಘೋಷಿಸಿ 3 ವರ್ಷವಾದರೂ ಇನ್ನೂ ಜಾರಿಯಾಗಿಲ್ಲ! ಎಂದಿದ್ದಾರೆ.

ಇದನ್ನು ಓದಿ :“ಕಾರ್ಪೊರೇಟ್ ಸುಲಿಗೆಗೆ ಮಣೆ ಹಾಕುವ” ಕೇಂದ್ರ ಸರಕಾರದ ಮಾದರಿಯನ್ನೇ ಅನುಸರಿಸಿದ ರಾಜ್ಯದ ಬಜೆಟ್

ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2.76 ಲಕ್ಷ ಹುದ್ದೆಗಳು ಖಾಲಿಯಿವೆ. ಶಿಕ್ಷಣ ಇಲಾಖೆಯೊಂದರಲ್ಲೇ 70,727 ಹುದ್ದೆಗಳು ಖಾಲಿಯಿವೆ. ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮತ್ತು ಅಲ್ಲಿ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮೂಲಕ ಪಾರದರ್ಶಕವಾಗಿ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದು ಸ್ವಾಗತಾರ್ಹ. ಇದನ್ನು ಎಲ್ಲ ಇಲಾಖೆಗಳಲ್ಲೂ ಜಾರಿಗೊಳಿಸಿದಲ್ಲಿ ಕೆಲಮಟ್ಟಿಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು ಎಂದು ತಿಳಿಸಿದ್ದಾರೆ.

6500 ಕನ್ನಡ ಶಾಲೆಗಳನ್ನು ವಿಲೀನದ ನೆಪದಲ್ಲಿ ಮುಚ್ಚಲು ಇತ್ತೀಚೆಗಷ್ಟೇ ಸುದ್ದಿಯಾಗಿರುವುದರಿಂದ, ಏಷ್ಯಾ ಅಭಿವೃದ್ಧಿ ಬ್ಯಾಂಕಿನಿಂದ ರೂ. 2500ಕೋಟಿ ಸಾಲ ಪಡೆದು 500 ಹೊಸ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿರುವುದು ಶಾಲೆಯ ವಿಲೀನಾತಿಗೆ ಸಾಲ ನೀಡಲಾಗುತ್ತಿದೆಯೇ ಎಂಬ ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಕೇವಲ 5,267 ಶಿಕ್ಷಕರ ಹುದ್ದೆಗಳನ್ನು ಮಾತ್ರವೇ ಭರ್ತಿ ಮಾಡಿಕೊಳ್ಳುವುದಾಗಿ ತಿಳಿಸಿರುವುದನ್ನು ಗಮನಿಸಿದರೆ, ಸರ್ಕಾರಿ ಶಾಲೆಗಳಲ್ಲಿ 60,000 ಶಿಕ್ಷಕರ ಹುದ್ದೆಗಳನ್ನು ತುಂಬದೇ ಯಾವುದೇ ಶಾಲೆಗಳನ್ನು ಅತಿಥಿ ಶಿಕ್ಷಕರ ಮೂಲಕ ನಡೆಸಲು ಉತ್ತೇಜನ ನೀಡುತ್ತಿರುವುದು ರಾಜ್ಯದ ಮಕ್ಕಳ ಶಿಕ್ಷಣಕ್ಕೆ ಕುತ್ತು ತರುತ್ತಿದೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ನಿರುದ್ಯೋಗಿ ಯುವಜನತೆಗೆ ಉದ್ಯೋಗ ಸೃಜನೆಗೆ ಒತ್ತು ನೀಡದಿರುವುದು, ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಗಮನಹರಿಸದಿರುವುದು, ಪಿಪಿಪಿ ಯೋಜನೆಗಳಿಗೆ ಒತ್ತು – ಈ ಹಿನ್ನೆಲೆಯಲ್ಲಿ, ಇದೊಂದು ದುಡಿಯುವ ಜನತೆ ಮತ್ತು ನೌಕರ-ವಿರೋಧಿಯಾದ ನಿರಾಶಾದಾಯಕ ಬಜೆಟ್‌ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ :ಬೆಂಗಳೂರು| ಸಬ್-ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ ಬಜೆಟ್

 

Donate Janashakthi Media

Leave a Reply

Your email address will not be published. Required fields are marked *